Site icon Vistara News

Neeraj Chopra: ಪ್ಯಾರಿಸ್​ನಲ್ಲಿಯೂ ನೀರಜ್​ ಚೋಪ್ರಾಗೆ ಚಿನ್ನ ಒಲಿಯಲಿದೆ; ಶಿರಸಿಯ ಕಾಶಿನಾಥ್ ನಾಯ್ಕ್ ವಿಶ್ವಾಸ

neeraj chopra and kashinath naik

ಬೆಂಗಳೂರು: ಹಂಗೇರಿಯ ಬುಡಾಪೆಸ್ಟ್‌ನಲ್ಲಿ ಭಾನುವಾರ ನಡೆದ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌(world athletics championships) ಫೈನಲ್​ನಲ್ಲಿ ಭಾರತದ ಸ್ಟಾರ್​ ಜಾವೆಲಿನ್​ ಎಸೆತಗಾರ, ಟೋಕಿಯೊ ಒಲಿಂಪಿಕ್ಸ್​ ಚಿನ್ನದ ಪದಕ ವಿಜೇತ ನೀರಜ್​ ಚೋಪ್ರಾ(Neeraj Chopra) 88.17 ಮೀ.​ ದೂರ ಜಾವೆಲಿನ್​ ಎಸೆದು ಭಾರತಕ್ಕೆ ಐತಿಹಾಸಿಕ ಚಿನ್ನದ ಪದಕ ತಂದುಕೊಟ್ಟಿದ್ದರು. ನೀರಜ್​ ಅವರ ಈ ಸಾಧನೆಯನ್ನು ಅವರ ಆರಂಭಿಕ ದಿನಗಳ ಕೋಚ್​ ಕಾಶಿನಾಥ್ ನಾಯ್ಕ್(Kashinath Naik) ಕೊಂಡಾಡಿದ್ದಾರೆ.

ಶಿರಸಿಯ ಕಾಶಿನಾಥ್ ನಾಯ್ಕ್

ನೀರಜ್ ಚೋಪ್ರಾ ಚಿನ್ನದ ಪದಕಕ್ಕೆ ಮುತ್ತಿಕ್ಕುವಲ್ಲಿ ಕನ್ನಡಿಗನ ಪಾತ್ರವೂ ಇದೆ. ಚೋಪ್ರಾಗೆ ತರಬೇತಿ ನೀಡಿದ್ದು ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ಕಾಶಿನಾಥ್ ನಾಯ್ಕ್. 2010 ರ ಕಾಮನ್ವೆಲ್ತ್ ನಲ್ಲಿ ಕಾಶಿನಾಥ್ ಈಟಿ ಎಸೆತದಲ್ಲಿ ಕಂಚಿನ ಪದಕ‌ಗಳಿಸಿದ್ದರು. ಅತ್ಯುತ್ತಮ ಕ್ರೀಡಾ ಸಾಧಕ ಕಾಶಿನಾಥ್ ಗರಡಿಯಲ್ಲಿ ಪಳಗಿದ ನೀರಜ್ ಸ್ವರ್ಣಪದಕ ಗೆಲ್ಲುತ್ತಲ್ಲೇ ದೇಶದ ಗೌರವವನ್ನು ಹೆಚ್ಚಿಸುತ್ತಿದ್ದಾರೆ. ಪುಣೆ ಮೂಲದ ಆರ್ಮಿ ಸ್ಪೋರ್ಟ್ಸ್ ಇನ್‌ಸ್ಟಿಟ್ಯೂಟ್​ನಲ್ಲಿ ಕಾಶಿನಾಥ್ ಅವರು ಚೋಪ್ರಾಗೆ ತರಬೇತಿ ನೀಡಿದ್ದರು.

ಪ್ಯಾರಿಸ್​ ಒಲಿಂಪಿಕ್ಸ್​ನಲ್ಲಿಯೂ ಚಿನ್ನ

ಕಾಶಿನಾಥ್ ನಾಯ್ಕ್ ಅವರು ನೀರಜ್ ಮುಂದಿನ ವರ್ಷ ಪ್ಯಾರಿಸ್​ನಲ್ಲಿ ನಡೆಯುವ ಒಲಿಂಪಿಕ್ಸ್​ನಲ್ಲಿಯೂ(neeraj chopra paris olympics) ಚಿನ್ನದ ಪದಕ ಗೆಲ್ಲಲಿದ್ದಾರೆ ಎಂದು ಆತ್ಮವಿಶ್ವಾಸದಿಂದ ಈ ಮಾತನ್ನು ಹೇಳಿದ್ದಾರೆ. ಸಂದರ್ಶನವೊಂದರಲ್ಲಿ ಮಾತನಾಡಿದ ಕಾಶಿನಾಥ್, “ನಾನು 2015 ರಿಂದ ನೀರಜ್​ ಜತೆ ಕೆಲಸ ಮಾಡುತ್ತಿದ್ದೇನೆ. ಅವರ ಛಲವನ್ನು ಮೆಚ್ಚಲೇ ಬೇಕು.​ ಸಾಧಿಸುವ ಛಲವೇ ಅವರನ್ನು ಈ ಮಟ್ಟಕ್ಕೆ ತಂದು ನಿಲ್ಲಿಸಿದೆ. ಅತ್ಯಂತ ಶಿಸ್ತಿನ ಕ್ರೀಡಾಪಟು ಕೂಡ ಆಗಿದ್ದಾರೆ. 90 ಮೀ. ದೂರ ಜಾವೆಲಿನ್​ ಎಸೆಯುವದು ಪ್ರಮುಖ ಗುರಿ ಎಂದು ನೀರಜ್​ ಈಗಾಗಲೇ ಹೇಳಿದ್ದಾರೆ. ಹೇಳಿದಂತೆ ಅವರು ಈ ದೂರವನ್ನು ಕ್ರಮಿಸುವ ವಿಶ್ವಾಸ ನನ್ನಲ್ಲಿದೆ” ಎಂದು ಹೇಳಿದರು.

ಇದನ್ನೂ ಓದಿ Neeraj Chopra:‌ 90 ಮೀಟರ್ ದೂರಕ್ಕೆ ಎಸೆಯುವುದಕ್ಕಿಂತ ಪದಕ ಗೆಲ್ಲುವುದು ಮುಖ್ಯ: ನೀರಜ್ ಚೋಪ್ರಾ

ಕಾಶಿನಾಥ್ ಮನೆ ಭೇಟಿ ನೀಡಿದ್ದ ನೀರಜ್​

ನೀರಜ್ ಪೋಲೆಂಡ್‌ನಲ್ಲಿ ನಡೆದಿದ್ದ ಜೂನಿಯರ್ ವಿಶ್ವ ಚಾಂಪಿಯನ್‌ಶಿಪ್ ಗೆದ್ದ ಬಳಿಕ 2018ರ ಕಾಮನ್‌ವೆಲ್ತ್ ಗೇಮ್ಸ್, 2018 ಇಂಡೋನೇಷ್ಯಾ ಏಷ್ಯನ್ ಗೇಮ್ಸ್, ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಮತ್ತು ಡೈಮಂಡ್ ಲೀಗ್‌ನಲ್ಲಿ ಚಿನ್ನ ಗೆದ್ದಿದ್ದರು. ವಿಶ್ವ ಚಾಂಪಿಯನ್​ಶಿಪ್​ನಲ್ಲಿ ಚೊಚ್ಚಲ ಪ್ರಯತ್ನದಲ್ಲಿ ಬೆಳ್ಳಿ ಗೆದ್ದರೂ ಈ ಬಾರಿ ಚಿನ್ನ ಗೆದ್ದು ಎಲ್ಲ ವಿಶ್ವಮಟ್ಟದ ಟೂರ್ನಿಯಲ್ಲಿಯೂ ಚಿನ್ನ ಗೆದ್ದು ತಮ್ಮ ಆಸೆಯನ್ನು ಈಡೇರಿಸಿದರು. ಜತೆಗೆ ದೇಶದ ಕೀರ್ತಿ ಪತಾಕೆಯನ್ನು ಬಹು ಎತ್ತರಕ್ಕೆ ಹಾರಿಸಿದರು. ಅವರ ಈ ಸಾಧನೆ ಹೀಗೆಯೇ ಮುಂದುವರಿಯಲಿ ಎಂದು ಕಾಶಿನಾಥ್ ಹಾರೈಸಿದರು. ಟೊಕಿಯೊದಲ್ಲಿ ಚಿನ್ನದ ಪದಕ ಗೆದ್ದವು ಭಾರತಕ್ಕೆ ಮರಳಿದ ನೀರಜ್​ ಚೋಪ್ರಾ ಅವರು ತನ್ನ ಗುರು ಕಾಶಿನಾಥ್ ಅವರ ಮನೆಗೆ ಭೇಟಿ ನೀಡಿ ತಾವು ಗೆದ್ದ ಪದಕವನ್ನು ಅವರಿಗೆ ತೋರಿಸಿದ್ದರು. ಅಲ್ಲದೆ ಅವರ ಮನೆಯಲ್ಲಿ ಭೋಜನ ಮಾಡಿ ಮುಂದಿನ ಟೂರ್ನಿಗೆ ಆಶಿರ್ವಾದ ಪಡೆದು ಹಿಂದಿರುಗಿದ್ದರು.


ನೀರಜ್​ ಜತೆ ವಿಶ್ವ ಚಾಂಪಿಯನ್​ಶಿಪ್​ ಫೈನಲ್​ ಪಂದ್ಯದಲ್ಲಿ 6ನೇ ಸ್ಥಾನ ಪಡೆದ ಡಿ.ಮನು ಅವರ ಸಾಧನೆಯ ಹಿಂದಯೂ ಕಾಶಿನಾಥ್ ನಾಯ್ಕ್ ಅವರ ಶ್ರಮವಿದೆ. ಇವರ ಮಾರ್ಗದರ್ಶನದಲ್ಲೇ ಮನು ಕೂಡ ಪಳಗಿದ್ದು. ಮನು ಅವರು ಫೈನಲ್​ನಲ್ಲಿ 84.14 ಮೀಟರ್​ ದೂರ ಜಾವೆನಿನ್​ ಎಸೆದಿದ್ದರು. ಮುಂದಿನ ಟೂರ್ನಿಗಳಲ್ಲಿ ಮನು ಕೂಟ ನೀರಜ್​ ಅವರಂತೆ ಸಾಧನೆ ಮಾಡಲಿ ಎಂಬುದು ಕಾಶಿನಾಥ್ ಅವರ ಆಶಯವಾಗಿದೆ.

Exit mobile version