ಲೌಸನ್ನೆ: ಪ್ಯಾರಿಸ್ ಒಲಂಪಿಕ್ಸ್ ಬೆಳ್ಳಿ ಪದಕ ವಿಜೇತ, ಭಾರತದ ಸ್ಟಾರ್ ಜಾವೆಲಿನ್ ಎಸೆತಗಾರ ನೀರಜ್ ಚೋಪ್ರಾ ಅವರು ಲಾಸೆನ್ ಡೈಮಂಡ್ ಲೀಗ್ನಲ್ಲಿ(Lausanne Diamond League) 89.49 ಮೀ. ಜಾವೆಲಿನ್ ಎಸೆಯುವ ಮೂಲಕ ಋತುವಿನ ಅತ್ಯುತ್ತಮ ಎಸೆತದೊಂದಿಗೆ 2 ನೇ ಸ್ಥಾನ ಪಡೆದು ಫೈನಲ್ ಪ್ರವೇಶಿಸಿದ್ದಾರೆ. ಮುಂದಿನ ತಿಂಗಳು ಸೆಪ್ಟೆಂಬರ್ 13 ಮತ್ತು 14ರಂದು ಬ್ರಸೆಲ್ಸ್‌ನಲ್ಲಿ ನಡೆಯುವ ಕೊನೆಯ ಡೈಮಂಡ್ ಲೀಗ್ನಲ್ಲಿ ಪದಕಕ್ಕಾಗಿ ಹೋರಾಟ ನಡೆಸಲಿದ್ದಾರೆ. ಪ್ಯಾರಿಸ್ ಒಲಿಂಪಿಕ್ಸ್ ಫೈನಲ್‌ನಲ್ಲಿ 89.45 ಮೀ.ದೂರಕ್ಕೆ ಜಾವೆಲಿನ್ ಎಸೆದು ಬೆಳ್ಳಿ ಪದಕ ಗೆದ್ದಿದ್ದರು. ಈ ಎಸೆತವನ್ನು ಇಲ್ಲಿ ಉತ್ತಮಪಡಿಸಿಕೊಂಡರು.
ಗುರುವಾರ ತಡರಾತ್ರಿ ನಡೆದಿದ್ದ ಈ ಟೂರ್ನಿಯಲ್ಲಿ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ಗೆದ್ದ ಗ್ರೆನಡಾದ ಆಂಡರ್ಸನ್ ಪೀಟರ್ಸ್ 90.61 ಮೀಟರ್ ದೂರ ಎಸೆದು ಪ್ರಥಮ ಸ್ಥಾನ ಪಡೆದರು. ನೀರಜ್ ಕೊನೆಯ ಪ್ರಯತ್ನದಲ್ಲಿ 89.49 ಮೀಟರ್ ದೂರವನ್ನು ಎಸೆಯುವ ಮೂಲಕ ಎರಡನೇ ಸ್ಥಾನ ಪಡೆದರು. ನೀರಜ್ ಈ ಸ್ಪರ್ಧೆಗೂ ಮುನ್ನ ಅಂಕಪಟ್ಟಿಯಲ್ಲಿ 7 ಅಂಕದೊಂದಿಗೆ 4ನೇ ಸ್ಥಾನದಲ್ಲಿದ್ದರು. ಇದೀಗ ದ್ವಿತೀಯ ಸ್ಥಾನಕ್ಕೇರಿದ್ದಾರೆ. ಫೈನಲ್‌ನಲ್ಲಿ 6 ಮಂದಿ ಕಣಕ್ಕಿಳಿಯಲಿದ್ದಾರೆ. ಪ್ಯಾರಿಸ್‌ನಲ್ಲಿ ಒಲಿಂಪಿಕ್ಸ್ ದಾಖಲೆಯೊಂದಿಗೆ ಚಿನ್ನದ ಪದಕ ಜಯಿಸಿ ಜಾಗತಿಕ ಮಟ್ಟದಲ್ಲಿ ಸಂಚಲನ ಮೂಡಿಸಿದ್ದ ಪಾಕಿಸ್ತಾನದ ಅರ್ಷದ್ ನದೀಮ್(Arshad Nadeem) ಈ ಕ್ರೀಡಾಕೂಟದಲ್ಲಿ ಭಾಗವಹಿಸಿರಲಿಲ್ಲ.
ನೀರಜ್ ಆರಂಭದಲ್ಲಿ ನೀರಸ ಪ್ರದರ್ಶನ ನೀಡಿದ್ದರು. ಮೊದಲ ಐದು ಪ್ರಯತ್ನಗಳಲ್ಲಿ ನೀರಜ್ ಕ್ರಮವಾಗಿ 82.10, 83.21, 83.13, 82.34 ಮತ್ತು 85.58 ಮೀ. ದೂರ ಎಸೆದರು. ಆದರೆ ಆರನೇ ಹಾಹೂ ಅಂತಿಮ ಪ್ರಯತ್ನದಲ್ಲಿ 89.49 ಮೀಟರ್ ದೂರ ಎಸೆಯುವ ಮೂಲಕ ಎರಡನೇ ಸ್ಥಾನಕ್ಕೆ ಏರಿದರು. ನೀರಜ್ರ ಇದುವರೆಗಿನ ಶ್ರೇಷ್ಠ ನಿರ್ವಹಣೆ 89.94 ಮೀ. ದೂರ ಎಸೆದಿರುವುದು. ಈ ಎಸೆತವನ್ನು 2022ರ ಸ್ಟಾಕ್ಹೋಮ್ ಡೈಮಂಡ್ ಲೀಗ್ನಲ್ಲಿ ಎಸೆದಿದ್ದರು. ಇದೇ ಆವೃತ್ತಿಯಲ್ಲಿ ಅವರು ಚಿನ್ನದ ಪದಕ ಜಯಿಸಿದ್ದರು.
ತೊಡೆಸಂಧು ನೋವಿನಿಂದ ಬಳಲುತ್ತಿರುವ ನೀರಜ್ ಡೈಮಂಡ್ ಲೀಗ್ ಫೈನಲ್ ಬಳಿಕ ವೈದ್ಯರನ್ನು ಸಂಪರ್ಕಿಸಿ ಶಸ್ತ್ರಚಿಕಿತ್ಸೆ ಮಾಡಿಕೊಳ್ಳಲಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ Paris Olympics: “ಇಂಡಿಯಾ ಹೌಸ್”ನಲ್ಲಿ ನೀರಜ್ ಚೋಪ್ರಾ ಸೇರಿ ಪದಕ ವಿಜೇತರನ್ನು ಗೌರವಿಸಿದ ನೀತಾ ಅಂಬಾನಿ
ಬ್ರ್ಯಾಂಡ್ ಮೌಲ್ಯ ಹೆಚ್ಚಿಸಿಕೊಂಡ ನೀರಜ್
ನೀರಜ್ ಚೋಪ್ರಾ(Neeraj Chopra) ಅವರ ಬ್ರಾಂಡ್ ಮೌಲ್ಯ ಬರೋಬ್ಬರಿ 330 ಕೋಟಿ ರೂ.ಗೆ ಜಿಗಿತ ಕಂಡಿದೆ ಎಂದು ಎಕನಾಮಿಕ್ ಟೈಮ್ಸ್ ವರದಿ ಮಾಡಿದೆ. ಅಂಕಿಅಂಶಗಳ ವರದಿಯ ಪ್ರಕಾರ ನೀರಜ್ ಚೋಪ್ರಾ ಅವರ ಬ್ರ್ಯಾಂಡ್ ಮೌಲ್ಯ 29.6 ದಶಲಕ್ಷ ಡಾಲರ್ ನಿಂದ 40 ದಶಲಕ್ಷ ಡಾಲರ್ಗೆ ಏರಿಕೆಯಾಗಿದೆ. ಅಂದರೆ ಭಾರತೀಯ ರೂಪಾಯಿ ಪ್ರಕಾರ ಅವರ ಬ್ರ್ಯಾಂಡ್ ಮೌಲ್ಯ 330 ಕೋಟಿ ರೂ. ಆಗಿದೆ. ಇದು ಭಾರತೀಯ ಕ್ರಿಕೆಟಿಗ ಹಾರ್ದಿಕ್ ಪಾಂಡ್ಯ(hardik pandya) ಬ್ರ್ಯಾಂಡ್ ಮೌಲ್ಯಕ್ಕಿಂತ ಹೆಚ್ಚಾಗಿದೆ. ನೀರಜ್ ಭಾರತೀಯ ಕ್ರೀಡಾಪಟುಗಳಲ್ಲಿ ಅತ್ಯುನ್ನತ ಮೌಲ್ಯಯುತ ಕ್ರಿಕೆಟಿಗರಲ್ಲದ ಕ್ರೀಡಾಪಟು ಎನಿಸಿಕೊಂಡಿದ್ದಾರೆ.
ನೀರಜ್ ಪ್ರಸ್ತುತ 24 ವಿವಿಧ ವರ್ಗಗಳಲ್ಲಿ 21 ಬ್ರ್ಯಾಂಡ್‌ಗಳನ್ನು ಅನುಮೋದಿಸಿದ್ದಾರೆ. ಮನಿ ಕಂಟ್ರೋಲ್ ವರದಿಯ ಪ್ರಕಾರ, ಹಾರ್ದಿಕ್ ಪಾಂಡ್ಯ 20 ಬ್ರಾಂಡ್‌ಗಳನ್ನು ಮಾತ್ರ ಹೊಂದಿದ್ದಾರೆ ಎನ್ನಲಾಗಿದೆ. ಪಾಂಡ್ಯಗಿಂತ ಶೇ.50ರಷ್ಟು ಬ್ರ್ಯಾಂಡ್ ಮೌಲ್ಯ ಹೆಚ್ಚಳವಾಗಿದೆ ಎಂದು ವರದಿಯಾಗಿದೆ.