ನವದೆಹಲಿ: ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಭಾರತಕ್ಕೆ ಏಕೈಕ ಚಿನ್ನದ ಪದಕ ನಿರೀಕ್ಷೆಯಾಗಿದ್ದ ನೀರಜ್ ಚೋಪ್ರಾ ಅವರು ಗುರುವಾರ ತಡರಾತ್ರಿ ನಡೆದ ಜಾವೆಲಿನ್ ಥ್ರೋ ಫೈನಲ್ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆಲ್ಲಲು ವಿಫಲವಾಗಿದ್ದು, ಬೆಳ್ಳಿ ಪದಕಕ್ಕೆ ತೃಪ್ತಿ ಪಟ್ಟಿದ್ದಾರೆ. ಪಾಕಿಸ್ತಾನದ ಅರ್ಷದ್ ನದೀಮ್ ಹೊಸ ಒಲಿಂಪಿಕ್ಸ್ ದಾಖಲೆಯನ್ನು ನಿರ್ಮಿಸಿ ಚಿನ್ನದ ಪದಕಕ್ಕೆ ಕೊರಳೊಡ್ಡಿದರು. ನೀರಜ್ ಚೋಪ್ರಾ ಅವರ ತಾಯಿ(neeraj chopra mother) ಮಗ ಬೆಳ್ಳಿ ಪದಕ ಗೆದ್ದ ಸಾಧನೆ ಬಗ್ಗೆ ಅತೀವ ಸಂತಸ ವ್ಯಕ್ತಪಡಿಸಿದೆ. ಜತೆಗೆ ಚಿನ್ನ ಗೆದ್ದ ಪಾಕಿಸ್ತಾನದ ಅರ್ಷದ್ ನದೀಮ್ ಕೂಡ ನನ್ನ ಮಗ ಇದ್ದಂತೆ ಎಂದು ಹೇಳುವ ಮೂಲಕ ತಾಯಿ ಮಮತೆ ತೋರಿದ್ದಾರೆ. ಸದ್ಯ ಈ ವಿಡಿಯೊ ವೈರಲ್ ಆಗಿದೆ.
ನೀರಜ್ ಬೆಳ್ಳಿ ಪದಕ ಗೆದ್ದ ಸಂತಸದಲ್ಲಿ ಎಎನ್‌ಐ ಜತೆ ಮಾತನಾಡಿದ ನೀರಜ್ ಅವರ ತಾಯಿ ಸರೋಜ್ ದೇವಿ, “ಮಗನ ಸಾಧನೆ ಬಗ್ಗೆ ಅತೀವ ಸಂತಸವಿದೆ. ಆತ ಮನೆಗೆ ಮರಳಿದ ತಕ್ಷಣ ಪ್ರಿಯವಾದ ಅಡುಗೆ ಮಾಡಿ ಬಡಿಸಲು ಕಾಯುತ್ತಿದ್ದೇನೆ” ಎಂದು ಪ್ರತಿಕ್ರಿಯಿಸಿದರು. ಇದೇ ವೇಳೆ ಅರ್ಷದ್ ನದೀಮ್ ಸಾಧನೆಯನ್ನು ಕೂಡಾ ಮುಕ್ತಕಂಠದಿಂದ ಹೊಗಳಿದ್ದಾರೆ. ನದೀಮ್ ಚಿನ್ನ ಗೆದದ್ದು ಕೂಡ ನನಗೆ ಅಪಾರ ಸಂತಸವಿದೆ. ಆತ ಕೂಡಾ ನಮ್ಮ ಮಗ ಇದ್ದಂತೆ ಎಂದು ಹೇಳುವ ಮೂಲಕ ತಾಯಿ ಮಮತೆ ತೋರಿದರು.
ಟೋಕಿಯೊನಲ್ಲಿ ಚಿನ್ನ ಗೆದ್ದಿದ್ದ ನೀರಜ್ ಮೇಲೆ ಈ ಬಾರಿಯೂ ಚಿನ್ನದ ಪದಕ ನಿರೀಕ್ಷೆ ಮಾಡಲಾಗಿತ್ತು. ಆದರೆ ಈ ನಿರೀಕ್ಷೆ ಹುಸಿಯಾಗಿದೆ. ಬೆಳ್ಳಿಗೆ ತೃಪ್ತಿಪಟ್ಟರು. ಮಂಗಳವಾರ ನಡೆದಿದ್ದ ಅರ್ಹತಾ ಸುತ್ತಿನ ‘ಬಿ’ ಗುಂಪಿನಲ್ಲಿ 89.34 ಮೀಟರ್‌ಗಳ ಬೃಹತ್ ಎಸೆತವನ್ನು ದಾಖಲಿಸಿ ಫೈನಲ್‌ಗೆ ಪ್ರವೇಶಿಸಿದ್ದರು. 2022 ರಲ್ಲಿ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ 90 ಮೀ ಮಾರ್ಕ್ ದಾಟಿದ್ದ ಅರ್ಷದ್ ನದೀಮ್ ಅತ್ಯುತ್ತಮ ಥ್ರೋ 86.59 ಮೀ ನೊಂದಿಗೆ ಫೈನಲ್‌ಗೆ ಅರ್ಹತೆ ಪಡೆದಿದ್ದರು. ಆದರೆ ಫೈನಲ್ನಲ್ಲಿ ಮೊದಲ ಎಸೆತದ ವೇಳೆ ಫೌಲ್ ಆಗಿದ್ದ ನದೀಮ್ ಎರಡನೇ ಎಸೆತದಲ್ಲಿ 92.97 ಮೀಟರ್‌ಗಳ ದೂರಕ್ಕೆ ಭರ್ಜಿ ಎಸೆದು ಹೊಸ ದಾಖಲೆ ಬರೆದರು.
ಚೋಪ್ರಾಗೆ ಚಿನ್ನ ಮಿಸ್ ಆದದ್ದು ಹೇಗೆ? ಕೋಚ್ ಹೇಳಿದ್ದೇನು?
ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ (Paris Olympics) ನಿನ್ನೆ ರಾತ್ರಿ ನಡೆದ ಜಾವೆಲಿನ್ ಎಸೆತ (Javelin throw) ಪಂದ್ಯದಲ್ಲಿ ಭಾರತಕ್ಕೆ ಬೆಳ್ಳಿಯ ಪದಕ (Silver medal) ಗೆದ್ದುಕೊಟ್ಟಿದ್ದಾರೆ ಬಂಗಾರದ ಹುಡುಗ ನೀರಜ್ ಚೋಪ್ರಾ (Neeraj Chopra). ಚಿನ್ನದ ಪದಕವನ್ನೇ ಗೆದ್ದು ತರುತ್ತಾರೆ ಎಂಬ ನಿರೀಕ್ಷೆಯಿತ್ತು. ಆದರೆ ಅದು ಕೈತಪ್ಪಿತು. ಯಾಕೆ ಹೀಗಾಯ್ತು? ಇದಕ್ಕೆ ನೀರಜ್ ಚೋಪ್ರಾ ಅವರ ಕೋಚ್ (Coach) ಕಾಶೀನಾಥ್ ನಾಯ್ಕ್ (Kashinath Naik) ನೀಡಿದ ಕಾರಣ ಇಲ್ಲಿದೆ.
ಭಾರತೀಯ ಸೇನೆಯಲ್ಲಿ ನಾಯ್ಕ್ ಸುಬೇದಾರ್ ಆಗಿ ಕಾರ್ಯನಿರ್ವಹಿಸುತ್ತಿರುವ ಕಾಶೀನಾಥ್ ನಾಯ್ಕ್, ಮೂಲತಃ ಕರ್ನಾಟಕದ ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಬೆಂಗಳೆ ಮೂಲದವರು. 2010ರ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಜಾವೆಲಿನ್ ಎಸೆತದಲ್ಲಿ ಕಾಶೀನಾಥ್ ನಾಯ್ಕ್ ಕಂಚಿನ ಪದಕ ಗೆದ್ದವರು.
ʼನೀರಜ್ ಚೋಪ್ರಾ ಸತತ ಎರಡನೇ ಬಾರಿ ಒಲಿಂಪಿಕ್ಸ್ ಪದಕ ಗೆಲ್ಲುತ್ತಿರೋದಕ್ಕೆ ಸಂತಸವಾಗಿದೆ. ಆದರೆ ಈ ಬಾರಿ ಚಿನ್ನ ಗೆಲ್ಲೋದಕ್ಕೆ ಸಾಧ್ಯವಾಗಿಲ್ಲ ಅನ್ನೋ ಬೇಸರವೂ ಇದೆ. ನೀರಜ್ ಚೋಪ್ರಾ ಅತ್ಯುತ್ತಮ ಎಸೆತವನ್ನೇ ಎಸೆದಿದ್ದಾರೆ. ಆದರೆ ಪಾಕಿಸ್ತಾನದ ಅರ್ಷದ್ ನದೀಮ್ ಇನ್ನಷ್ಟು ಅತ್ಯುತ್ತಮ ಎಸೆತವನ್ನು ಎಸೆದಿದ್ದಾರೆ. ನೀರಜ್ ತನ್ನ ಮೊದಲ ಎಸೆತದಲ್ಲಿ ಪೌಲ್ ಆಗಿದ್ದು ಬೆಳ್ಳಿ ಪದಕ ಬರುವುದಕ್ಕೆ ಕಾರಣವಾಯಿತುʼ ಎಂದು ಕಾಶೀನಾಥ್ ವಿವರಿಸಿದ್ದಾರೆ.