Site icon Vistara News

World Athletics Championships | ಒಂದೇ ತಿಂಗಳಲ್ಲಿ ಎರಡು ಬೆಳ್ಳಿ ಪದಕ ಗೆದ್ದ ನೀರಜ್‌ ಚೋಪ್ರಾ

World Athletics Championships

ಬೆಂಗಳೂರು: World Athletics Championships- ೨೦೨೨ ಕೂಟದಲ್ಲಿ ರಜತ ಪದಕ ಗೆದ್ದಿರುವ ಭಾರತದ ನೀರಜ್‌ ಚೋಪ್ರಾ ಒಂದೇ ತಿಂಗಳಲ್ಲಿ ಭಾರತಕ್ಕೆ ಎರಡು ಪದಕ ತಂದುಕೊಟ್ಟಿದ್ದಾರೆ. ಜುಲೈ ೧ರಂದು ಸ್ವೀಡನ್‌ನ ಸ್ಟಾಕ್‌ಹೋಮ್‌ನಲ್ಲಿ ನಡೆದ ಡೈಮಂಡ್‌ ಲೀಗ್‌ನಲ್ಲೂ ಅವರು ಬೆಳ್ಳಿಯ ಪದಕ ಗೆದ್ದು ಬೀಗಿದ್ದರು.

ಅಮೆರಿಕದ ಒರೆಗಾನ್‌ನಲ್ಲಿ ಭಾನುವಾರ ಬೆಳಗ್ಗೆ ನಡೆದ (ಭಾರತೀಯ ಕಾಲಮಾನ) World Athletics Championships ಫೈನಲ್‌ ಸ್ಪರ್ಧೆಯಲ್ಲಿ ನೀರಜ್‌ ಚೋಪ್ರಾ ಐತಿಹಾಸಿಕ ಸಾಧನೆ ಮಾಡಿದ್ದಾರೆ. ನೀರಜ್‌ ಅವರು ತಮ್ಮ ನಾಲ್ಕನೇ ಪ್ರಯತ್ನದಲ್ಲಿ 88.13 ಮೀಟರ್‌ ದೂರಕ್ಕೆ ಎಸೆಯವ ಮೂಲಕ ಎರಡನೇ ಸ್ಥಾನ ಗಳಿಸಿ ರಜತ ಪದಕಕ್ಕೆ ಕೊರಳೊಡ್ಡಿದರು. ಕಳೆದ ಎರಡು ಬಾರಿಯ ಚಾಂಪಿಯನ್‌ ಗ್ರೆನೆಡಾ ದೇಶದ ಪೀಟರ್‌ ಆಂಡರ್ಸನ್‌ 90.54 ಮೀಟರ್‌ ಎಸೆಯುವ ಮೂಲಕ ಬಂಗಾರದ ಪದಕ ಗೆದ್ದರು.

ನೀಗಿದ ಪದಕದ ಬರ

ನೀರಜ್‌ ಚೋಪ್ರಾ ಬೆಳ್ಳಿ ಗೆಲ್ಲುವ ಮೂಲಕ World Athletics Championships ಸ್ಪರ್ಧೆಯಲ್ಲಿ ಭಾರತದ ೧೯ ವರ್ಷಗಳ ಪದಕದ ಬರವನ್ನು ನೀಗಿಸಿದರು. ೨೦೦೩ರಲ್ಲಿ ಪ್ಯಾರಿಸ್‌ನಲ್ಲಿ ನಡೆದಿದ್ದ ಅಥ್ಲೆಟಿಕ್ಸ್‌ ಚಾಂಪಿಯನ್‌ಷಿಪ್‌ನಲ್ಲಿ ಅಂಜುಬಾಬಿ ಜಾರ್ಜ್‌ ಲಾಂಗ್ ಜಂಪ್‌ನಲ್ಲಿ ಕಂಚು ಗೆದ್ದಿರುವುದು ಭಾರತದ ಪಾಲಿಗೆ ಈ ಕೂಟದಲ್ಲಿ ಇದುವರೆಗಿನ ಏಕೈಕ ಪದಕವಾಗಿತ್ತು.

೨೪ ವರ್ಷದ ಭಾರತದ ಜಾವೆಲಿನ್‌ ಪಟು ನೀರಜ್‌ ಅವರ ಮೊದಲ ಎಸೆತ ಪೌಲ್‌ ಅಯಿತು. ಎರಡನೇ ಎಸೆತ ೮೨. ೭೦ ಮೀಟರ್‌ ದೂರಕ್ಕೆ ಸಾಗುವ ಮೂಲಕ ಮತ್ತೆ ನಿರಾಸೆ ಎದುರಿಸಿದರು. ಮೂರನೇ ಎಸೆತದಲ್ಲಿ ೮೬.೩೭ ಮೀಟರ್‌ ದೂರಕ್ಕೆ ಈಟಿ ಎಸೆಯವ ಮೂಲಕ ಸುಧಾರಣೆ ಕಂಡರು. ಆದರೆ, ನಾಲ್ಕನೇ ಎಸೆತದಲ್ಲಿ 88.13 ಮೀಟರ್‌ ದೂರ ಜಾವೆಲಿನ್‌ ಎಸೆದು ಎರಡನೇ ಸ್ಥಾನ ಪಡೆದು ಭಾರತಕ್ಕೆ ಐತಿಹಾಸಿಕ ಪದಕವೊಂದನ್ನು ತಂದುಕೊಟ್ಟರು.

ಸ್ಟಾಕ್‌ಹೋಮ್‌ನಲ್ಲಿಯೇ ಮುನ್ಸೂಚನೆ

ಸ್ವೀಡನ್‌ನ ಸ್ಟಾಕ್‌ಹೋಮ್‌ನಲ್ಲಿ ನಡೆದ ಪ್ರತಿಷ್ಠಿತ ಡೈಮಂಡ್‌ ಲೀಗ್‌ನಲ್ಲಿ 89.94 ಮೀಟರ್‌ ದೂರ ಜಾವೆಲಿನ್ ಎಸೆದು ತಮ್ಮದೇ ರಾಷ್ಟ್ರೀಯ ದಾಖಲೆ ಮುರಿದಿದ್ದ ನೀರಜ್‌ ಅವರು ಹಾಲಿ World Athletics Championships ಕೂಟದಲ್ಲಿ ಪದಕವೊಂದನ್ನು ಗೆಲ್ಲುವ ಸೂಚನೆಯನ್ನು ಆಗಲೇ ಕೊಟ್ಟಿದ್ದರು. ಅದರೆ, ಭಾನುವಾರದ ಅವರ ಎಸೆತ ಹಳೆಯ ದಾಖಲೆಯ ಸಮೀಪಕ್ಕೆ ಹೋಗಲಿಲ್ಲ. ಆದಾಗ್ಯೂ ಅವರಿಗೆ ಎರಡನೇ ಸ್ಥಾನ ಲಭಿಸಿತು. ಈ ಕೂಟದಲ್ಲೂ ಪೀಟರ್‌ ಆಂಡರ್ಸನ್‌ ಅವರೇ ಚಾಂಪಿಯನ್ ಆಗಿದ್ದರು.

ರಾಷ್ಟ್ರಿಯ ದಾಖಲೆ ಮುರಿದಿದ್ದರು

ಡೈಮಂಡ್‌ ಲೀಗ್‌ ಸ್ಪರ್ಧೆಯ ಮೊದಲ ಪ್ರಯತ್ನದಲ್ಲೇ 89.94 ದೂರ ಜಾವೆಲಿನ್‌ ಎಸೆದ ಬಂಗಾರದ ಹುಡುಗ ಚೋಪ್ರಾ, ಜೂನ್‌ ೧೪ರಂದು ಫಿನ್ಲೆಂಡ್‌ನ ಟುರ್ಕುನಲ್ಲಿ ನಡೆದ ಪಾವೊ ನುರ್ಮಿ ಗೇಮ್ಸ್‌ನಲ್ಲಿ ತಾವೇ ಸೃಷ್ಟಿಸಿದ್ದ 89.30 ದೂರದ ರಾಷ್ಟ್ರೀಯ ದಾಖಲೆಯನ್ನು ಅಳಿಸಿದ್ದರು. ಅಲ್ಲದೆ ಅವರು ೬ ಸೆಂಟಿಮೀಟರ್‌ ಹಿನ್ನಡೆಯೊಂದಿಗೆ ೯೦ ದೂರ ಎಸೆದು ದಾಖಲೆ ಸೃಷ್ಟಿಸುವ ಅವಕಾಶ ಕಳೆದುಕೊಂಡಿದ್ದರು.

ವಿಶ್ವ ಚಾಂಪಿಯನ್‌ ಆಂಡರ್ಸನ್‌ ಪೀಟರ್‌ 90.31 ಮೀಟರ್‌ ದೂರ ಎಸೆಯುವ ಮೂಲಕ ಸ್ಪರ್ಧೆಯಲ್ಲಿ ಮೊದಲ ಸ್ಥಾನ ಪಡೆದುಕೊಂಡರು. ಜರ್ಮನಿಯ ಜೂಲಿಯನ್‌ ವೆಬರ್‌ ೮೯.೦೯ ಮೀಟರ್‌ ದೂರಕ್ಕೆ ಎಸೆದು ಮೂರನೇ ಸ್ಥಾನ ಪಡೆದುಕೊಂಡರೆ, ಟೋಕಿಯೊ ಒಲಿಂಪಿಕ್ಸ್‌ ಬೆಳ್ಳಿ ಪದಕ ವಿಜೇತ ಜೆಕ್‌ ಗಣರಾಜ್ಯದ ಜಾವೆಲಿನ್‌ ಎಸೆತಗಾರ ಜಾಕುಬ್‌ ವಾದ್ಲೆ (88.59 ಮೀಟರ್‌) ನಾಲ್ಕನೇ ಸ್ಥಾನ ಪಡೆದುಕೊಂಡಿದ್ದರು.

Exit mobile version