ಬೆಂಗಳೂರು: ಭಾರತದ ಉದಯೋನ್ಮುಖ ಚೆಸ್ ತಾರೆ ಆರ್. ಪ್ರಜ್ಞಾನಂದ(R Praggnanandhaa) ಅವರು ವಿಶ್ವ ನಂ.1, ನಾರ್ವೆಯ ಮ್ಯಾಗ್ನಸ್ ಕಾರ್ಲ್‌ಸನ್(Magnus Carlsen)ಗೆ ಸೋಲುಣಿಸಿದ್ದಾರೆ. ಮೇ 29 ಬುಧವಾರ ತಡರಾತ್ರಿ ನಡೆದ ನಾರ್ವೆ ಚೆಸ್(Norway Chess) ಪಂದ್ಯಾವಳಿಯ ಮೂರನೇ ಸುತ್ತಿನಲ್ಲಿ ಪ್ರಜ್ಞಾನಂದ ಈ ಸಾಧನೆ ಮಾಡಿದರು. ಇದು ಮ್ಯಾಗ್ನಸ್ ವಿರುದ್ಧ ಪ್ರಜ್ಞಾನಂದಗೆ ಒಲಿದ ಮೊದಲ ಗೆಲುವು. 3 ಸುತ್ತುಗಳ ಬಳಿಕ ಅಂಕಪಟ್ಟಿಯಲ್ಲಿ ಪ್ರಜ್ಞಾನಂದ(5.5) ಮೊದಲ ಸ್ಥಾನ ಪಡೆದಿದ್ದರೆ, ಕಾರ್ಲ್‌ಸನ್(3) 5ನೇ ಸ್ಥಾನಿಯಾಗಿದ್ದಾರೆ.
ಮಹಿಳಾ ವಿಭಾಗದಲ್ಲಿ ಭಾರತದ ಯುವ ಆಟಗಾರ್ತಿ, ಪ್ರಜ್ಞಾನಂದ ಅವರ ಸಹೋದರಿ, ಗ್ರ್ಯಾಂಡ್‌ಮಾಸ್ಟರ್ ಆರ್.ವೈಶಾಲಿ ಕೂಡ ಮುನ್ನಡೆ ಸಾಧಿಸಿದ್ದಾರೆ. ಸ್ವದೇಶದ ಅನುಭವಿ ಆಟಗಾರ್ತಿ ಕೋನೇರು ಹಂಪಿ ಅವರನ್ನು ಸೋಲಿಸಿ ನಾರ್ವೆ ಚೆಸ್ ಟೂರ್ನಿಯ ನಂತರ ಮಹಿಳಾ ವಿಭಾಗದಲ್ಲಿ ಮಂಗಳವಾರ ಅಗ್ರಸ್ಥಾನಕ್ಕೇರಿದ್ದರು. ಆ ಬಳಿಕದ ಪಂದ್ಯದಲ್ಲಿ ಮುಜಿಚುಕ್ ಅವರೊಂದಿಗೆ ಡ್ರಾ ಸಾಧಿಸುವಲ್ಲಿ ಯಶಸ್ವಿಯಾದರು. ಸದ್ಯ ಮಹಿಳಾ ವಿಭಾಗದಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿದ್ದಾರೆ.
ಇದನ್ನೂ ಓದಿ Candidates Chess: ಪ್ರಜ್ಞಾನಂದ, ವಿದಿತ್ಗೆ ಗೆಲುವು; ವೈಶಾಲಿ, ಹಂಪಿಗೆ ಸೋಲು
ಗೆಲುವಿನ ಕುರಿತು ಮಾತನಾಡಿರುವ ಪ್ರಜ್ಞಾನಂದ, ಅತ್ಯಂತ ಪ್ರಬಲ ಆಟಗಾರನನ್ನು ಸೋಲಿಸಿದರೆ, ಅದು ಯಾವಾಗಲೂ ವಿಶೇಷವಾಗಿರುತ್ತದೆ. ಏಕೆಂದರೆ ಅವರನ್ನು ಸೋಲಿಸುವುದು ಅಷ್ಟು ಸುಲಭವಲ್ಲ. ಚೆಸ್ನಲ್ಲಿ ವಿಶ್ವ ಚಾಂಪಿಯನ್ ವಿರುದ್ಧ ಮೊದಲ ಬಾರಿಗೆ ಗೆದ್ದಿರುವುದು ಖುಷಿ ಕೊಟ್ಟಿದೆ. ಇದೇ ಪ್ರದರ್ಶನವನ್ನು ಮುಂದುವರಿಸುವ ನಂಬಿಕೆ ಇದೆ ಎಂದು ಅವರು ಹೇಳಿದರು.
ಕಳೆದ ವರ್ಷ ನಡೆದಿದ್ದ ವಿಶ್ವಕಪ್ ಚೆಸ್ ಟೂರ್ನಿಯ(Chess World Cup) ಫೈನಲ್ ಪಂದ್ಯದಲ್ಲಿ ಪ್ರಜ್ಞಾನಂದ ತೀವ್ರ ಪೈಪೋಟಿ ನೀಡಿ ಸಣ್ಣ ಅಂತರದಿಂದ ಸೋಲು ಕಂಡಿದ್ದರು. ಫೈನಲ್ ಪಂದ್ಯದ ಟೈ ಬ್ರೇಕರ್ನ ಮೊದಲ ಸೆಟ್ನಲ್ಲಿ ಪ್ರಜ್ಞಾನಂದ ಹಿನ್ನಡೆ ಅನುಭವಿಸಿ, ಆ ಬಳಿಕದ ಸುತ್ತಿನಲ್ಲಿ ಡ್ರಾ ಸಾಧಿಸಿದ್ದರೂ 1-0 ಮುನ್ನಡೆ ಕಾಯ್ದುಕೊಂಡ ಮ್ಯಾಗ್ನಸ್ ಕಾರ್ಲ್‌ಸನ್ ಗೆದ್ದು ವಿಶ್ವ ಕಿರೀಟ ತಮ್ಮದಾಗಿಸಿಕೊಂಡಿದ್ದರು. ಪ್ರಜ್ಞಾನಂದ ಅವರು ವಿಶ್ವನಾಥನ್ ಆನಂದ್ ಬಳಿಕ ಚೆಸ್ ವಿಶ್ವಕಪ್‌ನಲ್ಲಿ ಫೈನಲ್ ಪ್ರವೇಶಿಸಿದ ಕೇವಲ 2ನೇ ಭಾರತೀಯ ಎನಿಸಿಕೊಂಡಿದ್ದರು.
18 ವರ್ಷದ ಚೆಸ್ ಆಟಗಾರ ಯಾವಾಗಲೂ ತನ್ನ ತಾಯಿ ನಾಗಲಕ್ಷ್ಮಿ ಅವರ ಜತೆಗೆ ಇರುವ ಪ್ರತಿಭೆ. ತಾಯಿಯೂ ಪ್ರತಿ ಕ್ಷಣವೂ ಮಗನ ಜತೆಗೆ ಇರುತ್ತಾರೆ. ಈ ಮೂಲಕ ಅವರು ಪುತ್ರನ ಯಶಸ್ಸಿನ ಬಲವಾದ ಆಧಾರಸ್ತಂಭ ಎನಿಸಿಕೊಂಡಿದ್ದಾರೆ.
3 ಸುತ್ತುಗಳ ಬಳಿಕ ಪಾಯಿಂಟ್ಸ್
ಪುರುಷರ ವಿಭಾಗ
ಆರ್ ಪ್ರಜ್ಞಾನಂದ – 5.5
ಫ್ಯಾಬಿಯೊ ಕರುವಾನಾ – 5
ಹಿಕಾರು ನಕಮುರಾ – 4
ಅಲಿರೆಜಾ ಫಿರೋಜ್ಜಾ – 3.5
ಮ್ಯಾಗ್ನಸ್ ಕಾರ್ಲ್ಸೆನ್ – 3
ಡಿಂಗ್ ಲಿರೆನ್ – 2.5
ಮಹಿಳಾ ವಿಭಾಗ
ಆರ್ ವೈಶಾಲಿ – 5.5
ಜು ವೆಂಜುನ್- 4.5
ಲೀ ಟಿಂಗ್ಜಿ- 4
ಪಿಯಾ ಕ್ರಾಮ್ಲಿಂಗ್ – 3
ಕೊನೇರು ಹಂಪಿ – 3
ಅನ್ನಾ ಮುಜಿಚುಕ್ – 3