Site icon Vistara News

Year Ender 2023 : ಒಂದು ವರ್ಷದ ಅವಧಿಯಲ್ಲಿ ಇಹ ಲೋಕ ತ್ಯಜಿಸಿದ ಕ್ರಿಕೆಟ್ ದಂತಕತೆಗಳು ಇವರು

Bishon Singh Bedi

ಕ್ರಿಕೆಟ್ ಜಗತ್ತು 2023 ರಲ್ಲಿ ಕೆಲವು ಖ್ಯಾತನಾಮ ಮತ್ತು ಪ್ರಸಿದ್ಧ ಕ್ರಿಕೆಟ್​ ದಂತಕತೆಗಳಿಗೆ ವಿದಾಯ ಹೇಳಿದೆ. ಕ್ರಿಕೆಟ್​ ಇತಿಹಾಸದಲ್ಲಿ ಮರೆಯಲಾಗದ ಅಧ್ಯಾಯಗಳನ್ನು ಸೃಷ್ಟಿಸಿದ್ದ ಅವರೆಲ್ಲರ ಸೇವೆಯನ್ನು ಕಳೆದುಕೊಂಡಿದೆ. ಅತ್ಯುತ್ತಮ ಕ್ರಿಕೆಟಿಗರಾಗಿ ಗಮನ ಸೆಳೆದಿದ್ದ ಎಲ್ಲರೂ ಬಳಿಕ ಮಾರ್ಗದರ್ಶಕರಾಗಿ ಆ ಮೇಲೆ ದಂತಕತೆಗಳಾಗಿ ಬದಲಾದವರು. ಅವರಲ್ಲರ ನಿರ್ಗಮನ ಕ್ರಿಕೆಟ್ ಕ್ಷೇತ್ರಕ್ಕೆ ದೊಡ್ಡ ನಷ್ಟ. ಅವರ ನಂಬಲಾಗದ ವೃತ್ತಿಜೀವನ ಮತ್ತು ಕ್ರಿಕೆಟ್ ಪರಂಪರೆ ಎಂದೆಂದಿಗೂ ಅವಿಸ್ಮರಣೀಯರು. ಹೀಗೆ ಕಳೆದ 12 ತಿಂಗಳ ಅವಧಿಯಲ್ಲಿ (Year Ender 2023) ನಿಧನ ಹೊಂದಿದ ಕ್ರಿಕೆಟ್ ಕ್ಷೇತ್ರದ ಖ್ಯಾತನಾಮರ ವಿವರ ಇಲ್ಲಿದೆ.

ಸುಧೀರ್ ನಾಯಕ್

ಮುಂಬೈ ನೆಲದ ಪ್ರತಿಭೆ ಬಲಗೈ ಬ್ಯಾಟ್ಸ್​ಮನ್​ ಸುಧೀರ್ ನಾಯಕ್ ಮಾರ್ಚ್ 24, 2023 ರಂದು ಮಹಾರಾಷ್ಟ್ರದ ಮುಂಬೈನ ತಮ್ಮ ನಿವಾಸದಲ್ಲಿ ತಮ್ಮ 78 ನೇ ವಯಸ್ಸಿನಲ್ಲಿ ನಿಧನ ಹೊಂದಿದ್ದಾರೆ. ದೇಶೀಯ ಕ್ರಿಕೆಟ್​ನಲ್ಲಿ 85 ಪ್ರಥಮ ದರ್ಜೆ ಪಂದ್ಯಗಳನ್ನಾಡಿರುವ ನಾಯಕ್ 7 ಶತಕಗಳೊಂದಿಗೆ 4376 ರನ್ ಗಳಿಸಿದ್ದಾರೆ. ರಣಜಿ ಟ್ರೋಫಿಯಲ್ಲಿ ಬಾಂಬೆ (ಈಗ ಮುಂಬೈ) ಪರ 1973-74ರಲ್ಲಿ ಬರೋಡಾ ವಿರುದ್ಧ ಅಜೇಯ 200 ರನ್ ಗಳಿಸಿದ್ದು ಅವರ ಸಾಧನೆಯಾಗಿದೆ. ಒಟ್ಟಾರೆಯಾಗಿ ಅವರು 2687 ರನ್ (40.10) ಗಳಿಸಿದ್ದಾರೆ.

1974-1975 ರಿಂದ ಭಾರತಕ್ಕಾಗಿ 3 ಟೆಸ್ಟ್ ಮತ್ತು 2 ಏಕದಿನ ಪಂದ್ಯಗಳನ್ನು ಆಡಿದ್ದಾರೆ. ಕ್ರಮವಾಗಿ 141 ಮತ್ತು 38 ರನ್ ಗಳಿಸಿದ್ದಾರೆ. ಅವರು ಜಹೀರ್ ಖಾನ್, ವಾಸಿಮ್ ಜಾಫರ್ ಮತ್ತು ನಿಲೇಶ್ ಕುಲಕರ್ಣಿ ಅವರಂತಹ ಆಟಗಾರರನ್ನು ಸೃಷ್ಟಿಸಿದ ರಾಷ್ಟ್ರೀಯ ಕ್ರಿಕೆಟ್ ಕ್ಲಬ್​ನ ಮಾಲೀಕ ಮತ್ತು ತರಬೇತುದಾರರಾಗಿದ್ದರು ಅವರು. ಹಲವಾರು ವರ್ಷಗಳ ಕಾಲ ವಾಂಖೆಡೆ ಕ್ರೀಡಾಂಗಣದ ಮುಖ್ಯ ಕ್ಯುರೇಟರ್ ಆಗಿದ್ದರು, ವಿಶೇಷವಾಗಿ 2011 ರ ವಿಶ್ವಕಪ್ ಫೈನಲ್ ಸಮಯದಲ್ಲಿ ಅವರೇ ಪಿಚ್ ನಿರ್ಮಿಸಿದ್ದರು.

ಇಜಾಜ್ ಬಟ್

ಆಗಸ್ಟ್ 3, 2023 ರಂದು ಲಾಹೋರ್​ನಲ್ಲಿ ನಿಧನ ಹೊಂದಿದ ಇಜಾಜ್ ಬಟ್ ಅವರಿಗೆ 85 ವರ್ಷ ವಯಸ್ಸಾಗಿತ್ತು. ಬಟ್ 1959-1962ರ ಅವಧಿಯಲ್ಲಿ ಪಾಕಿಸ್ತಾನ ಪರ 8 ಟೆಸ್ಟ್ ಪಂದ್ಯಗಳನ್ನು ಆಡಿದ್ದರು. ಅವರು ಒಂದು ಅರ್ಧಶತಕದೊಂದಿಗೆ 279 ರನ್ ಗಳಿಸಿದ್ದರು. ಅವರು 5 ಕ್ಯಾಚ್ ಗಳನ್ನು ಪಡೆದಿದ್ದಾರೆ. ನಿವೃತ್ತಿಯ ನಂತರ, ಬಟ್ ಕ್ರಿಕೆಟ್​ ಆಡಳಿತಕ್ಕೆ ಕಾಲಿಟ್ಟಿದ್ದರು. 2008 ರಲ್ಲಿ ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಮುಖ್ಯಸ್ಥರಾಗಿ ನೇಮಕಗೊಂಡಿದ್ದರು.

ಜೋ ಸೊಲೊಮನ್

ವೆಸ್ಟ್ ಇಂಡೀಸ್ ನ ಮಾಜಿ ಆಟಗಾರ ಜೊ ಸೊಲೊಮನ್​ ಡಿಸೆಂಬರ್ 10ರಂದು 93 ನೇ ನಿಧನ ಹೊಂದಿದ್ದಾರೆ. 1958 ಮತ್ತು 1965ರ ನಡುವೆ, ಅವರು ವೆಸ್ಟ್ ಇಂಡೀಸ್ ಪರ 27 ಟೆಸ್ಟ್ ಪಂದ್ಯಗಳನ್ನು ಆಡಿದ್ದಾರೆ. 34 ಸರಾಸರಿಯಲ್ಲಿ 1326 ರನ್ ಗಳಿಸಿದ್ದರೆ. ಅವರು 1958 ರಲ್ಲಿ ಭಾರತದ ವಿರುದ್ಧ ಪಾದಾರ್ಪಣೆ ಮಾಡಿದ್ದರು. ದೆಹಲಿಯಲ್ಲಿ ನಡೆದ ಪಂದ್ಯದಲ್ಲಿ ಅವರ ಚೊಚ್ಚಲ ಟೆಸ್ಟ್​ ಶತಕ ಮೂಡಿ ಬಂದಿತ್ತು.

1960 ರಲ್ಲಿ ಗಬ್ಬಾದಲ್ಲಿ ವೆಸ್ಟ್ ಇಂಡೀಸ್ ಮತ್ತು ಆಸ್ಟ್ರೇಲಿಯಾ ನಡುವಿನ ಪಂದ್ಯ ಡ್ರಾ ಆಗಿತ್ತು. ಅದಕ್ಕೆ ಕಾರಣ ಇಯಾನ್ ಮೆಕಿಫ್ ಅವರನ್ನು ಸೊಲೊಮನ್ ಔಟ್ ಮಾಡಿದ್ದು. ಅದೆ ರೀತಿ ಮೆಲ್ಬೋರ್ನ್ ನಲ್ಲಿ ನಡೆದ ಅದೇ ಸರಣಿಯ ಎರಡನೇ ಟೆಸ್ಟ್ ನಲ್ಲಿ ಸೊಲೊಮನ್ ಅವರ ಕ್ಯಾಪ್ ಸ್ಟಂಪ್ ಗಳ ಮೇಲೆ ಬಿದ್ದ ಕಾರಣ ಅವರು ಹಿಟ್ ವಿಕೆಟ್ ಅಗಿದ್ದರು.

ಸಲೀಂ ದುರಾನಿ

ಭಾರತದ ಮಾಜಿ ಆಲ್​ರೌಂಡರ್​ ಸಲೀಮ್ ದುರಾನಿ ಏಪ್ರಿಲ್ 2, 2023 ರಂದು ಗುಜರಾತ್​ನ ಜಾಮ್​​ನಗರದಲ್ಲಿ ತಮ್ಮ 88 ನೇ ವಯಸ್ಸಿನಲ್ಲಿ ನಿಧನ ಹೊಂದಿದ್ದಾರೆ. ಕಾಬೂಲ್ ಮೂಲದ ಕ್ರಿಕೆಟಿಗ 170 ಪ್ರಥಮ ದರ್ಜೆ ಪಂದ್ಯಗಳನ್ನು ಆಡಿದ್ದು, 14 ಶತಕಗಳೊಂದಿಗೆ 137* ಸರಾಸರಿಯಲ್ಲಿ 8545 ರನ್ ಗಳಿಸಿದ್ದಾರೆ. ದೇ ರೀತಿ 484 ವಿಕೆಟ್​​ಗಳನ್ನು ಉರುಳಿಸಿದ್ದಾರೆ. ಭಾರತದ ಪರ 29 ಟೆಸ್ಟ್ ಪಂದ್ಯಗಳನ್ನಾಡಿರುವ ದುರಾನಿ 75 ವಿಕೆಟ್ ತಮ್ಮದಾಗಿಸಿಕೊಂಡಿದ್ದಾರೆ. 1962ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಸರಣಿಯಲ್ಲಿ 1202 ರನ್ ಗಳಿಸಿದ್ದರು. 104 ರನ್ ಅವರ ಗರಿಷ್ಠ ಸ್ಕೋರ್ ಆಗಿತ್ತು.

1973 ರಲ್ಲಿ, ಸ್ಟಾರ್ ಕ್ರಿಕೆಟಿಗ ಬಾಲಿವುಡ್​ಗೆ ಕಾಲಿಟ್ಟರು. ಪ್ರಸಿದ್ಧ ನಟಿ ಪ್ರವೀಣ್ ಬಾಬಿ ಅವರೊಂದಿಗೆ ಚರಿತ್ರ ಚಿತ್ರದಲ್ಲಿ ನಟಿಸಿದ್ದರು. ಅರ್ಜುನ ಪ್ರಶಸ್ತಿ ಪಡೆದ ಮೊದಲ ಕ್ರಿಕೆಟಿಗ ಎಂಬ ಹೆಗ್ಗಳಿಕೆಗೂ ಅವರು ಪಾತ್ರರಾಗಿದ್ದಾರೆ. ಇದಲ್ಲದೆ, ಅಫ್ಘಾನ್ ಮೂಲದ ಏಕೈಕ ಭಾರತೀಯ ಕ್ರಿಕೆಟಿಗರಾಗಿ ಅವರು ಜೂನ್ 14, 2018 ರಂದು ಐತಿಹಾಸಿಕ ಭಾರತ ಮತ್ತು ಅಫ್ಘಾನಿಸ್ತಾನ ಟೆಸ್ಟ್ ಪಂದ್ಯವನ್ನು ವೀಕ್ಷಿಸಿದ್ದರು. 2011ರಲ್ಲಿ ಬಿಸಿಸಿಐ ಅವರಿಗೆ ಸಿ.ಕೆ.ನಾಯ್ಡು ಜೀವಮಾನ ಸಾಧನೆ ಪ್ರಶಸ್ತಿಯನ್ನು ನೀಡಿ ಗೌರವಿಸಿತ್ತು.

ಹೀತ್ ಸ್ಟ್ರೀಕ್

ಜಿಂಬಾಬ್ವೆಯಿಂದ ಮೂಡಿಬಂದ ಅತ್ಯಂತ ಜನಪ್ರಿಯ ಕ್ರಿಕೆಟಿಗರಲ್ಲಿ ಒಬ್ಬರಾದ ಹೀತ್ ಸ್ಟ್ರೀಕ್ ಸೆಪ್ಟೆಂಬರ್ 3, 2023 ರಂದು ತಮ್ಮ 49 ನೇ ವಯಸ್ಸಿನಲ್ಲಿ ಕ್ಯಾನ್ಸರ್​ನಿಂದಾಗಿ ನಿಧನ ಹೊಂದಿದರು. ಟೆಸ್ಟ್ ಕ್ರಿಕೆಟ್ನಲ್ಲಿ 100 ವಿಕೆಟ್ ಹಾಗೂ ರನ್ ಪೂರೈಸಿದ ಜಿಂಬಾಬ್ವೆಯ ಏಕೈಕ ಕ್ರಿಕೆಟಿಗ ಅವರು. ಅವರು ಆ ತಂಡದ ಮಾಜಿ ನಾಯಕರಾಗಿದ್ದರು. ಏಕದಿನ ಕ್ರಿಕೆಟ್​ನಲ್ಲಿ 2000 ರನ್ ಹಾಗೂ 200 ವಿಕೆಟ್ ಪಡೆದ ಆ ದೇಶದ ಏಕೈಕ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

1993ರಿಂದ 2005 ರವರೆಗೆ ಜಿಂಬಾಬ್ವೆ ತಂಡದೊಂದಿಗಿನ ವೃತ್ತಿಜೀವನದಲ್ಲಿ, ಸ್ಟ್ರೀಕ್ 216 ಟೆಸ್ಟ್ ಮತ್ತು 239 ಏಕದಿನ ವಿಕೆಟ್​ಗಳನ್ನು ಪಡೆದಿದ್ದಾರೆ. ಸ್ಟ್ರೀಕ್ ಜಿಂಬಾಬ್ವೆ ಮತ್ತು ಬಾಂಗ್ಲಾದೇಶ ತಂಡಗಳಿಗೆ ಕೋಚಿಂಗ್ ಮಾಡಿದ್ದರು. ಐಪಿಎಲ್​ನಲ್ಲಿ ಕೋಲ್ಕತಾ ನೈಟ್ ರೈಡರ್ಸ್ ತಂಡದ ಪರವಾಗಿ ಆಡಿದ್ದರು.

ಬಿಷನ್ ಸಿಂಗ್ ಬೇಡಿ

ಭಾರತದ ಲೆಜೆಂಡರಿ ಸ್ಪಿನ್ನರ್ ಮತ್ತು ಮಾಜಿ ನಾಯಕ ಬಿಷನ್ ಸಿಂಗ್ ಬೇಡಿ ಅಕ್ಟೋಬರ್ 23, 2023 ರಂದು ನಿಧನರಾದರು. ಅವರಿಗೆ ಅಂಗದ್ ಬೇಡಿ, ನೇಹಾ ಬೇಡಿ, ಗವಾಸಿಂದರ್ ಬೇಡಿ ಮತ್ತು ಗಿಲ್ಲಿಂದರ್ ಬೇಡಿ ಎಂಬ ನಾಲ್ವರು ಮಕ್ಕಳಿದ್ದಾರೆ. ಬಿಷನ್ ಬೇಡಿ 25 ಸೆಪ್ಟೆಂಬರ್ 1946 ರಂದು ಅಮೃತಸರದಲ್ಲಿ ಜನಿಸಿದರು. ಅವರು ಭಾರತೀಯ ದೇಶೀಯ ಕ್ರಿಕೆಟ್​ನಲ್ಲಿ ಪಂಜಾಬ್ ಮತ್ತು ದೆಹಲಿಗಾಗಿ ಆಡಿದ್ದರು.

ಇದನ್ನೂ ಓದಿ: Year Ender 2023: ಈ ವರ್ಷ ಅತ್ಯಧಿಕ ರನ್​ ಗಳಿಸಿದ ಟಾಪ್​ 10 ಸಾಧಕರಿವರು…

ಬೇಡಿ 1967 ರಲ್ಲಿ ಕೋಲ್ಕತ್ತಾದಲ್ಲಿ ನಡೆದ ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್ ನಲ್ಲಿ ಪಾದಾರ್ಪಣೆ ಮಾಡಿದ್ದರು. ಅವರು 67 ಟೆಸ್ಟ್ ಪಂದ್ಯಗಳಲ್ಲಿ 266 ವಿಕೆಟ್​ಗಳನ್ನು ಪಡೆದಿದ್ದಾರೆ. ಬೇಡಿ 1960 ಮತ್ತು 1970 ರ ದಶಕಗಳಲ್ಲಿ, ಲೆಗ್ ಸ್ಪಿನ್ನರ್ ಭಗವತ್ ಚಂದ್ರಶೇಖರ್ ಮತ್ತು ಆಫ್-ಸ್ಪಿನ್ನರ್​ಗಳಾದ ಎರಪಲ್ಲಿ ಪ್ರಸನ್ನ ಮತ್ತು ಶ್ರೀನಿವಾಸ್ ವೆಂಕಟರಾಘವನ್ ಅವರನ್ನು ಒಳಗೊಂಡಿದ್ದ ಭಾರತದ ಮಾರಕ ಸ್ಪಿನ್ ಬಳಗದ ಭಾಗವಾಗಿದ್ದರು.

ಬೇಡಿ 370 ಪ್ರಥಮ ದರ್ಜೆ ಪಂದ್ಯಗಳಲ್ಲಿ ಕಾಣಿಸಿಕೊಂಡಿದ್ದಾರೆ. ಇಂಗ್ಲಿಷ್ ಕೌಂಟಿ ಕ್ರಿಕೆಟ್​ನಲ್ಲಿ ನಾರ್ಥಾಂಪ್ಟನ್​ಶೈರ್​ ಪರ ದೀರ್ಘಕಾಲ ಆಡಿದ್ದು, 1560 ವಿಕೆಟ್​ ಉರುಳಿಸಿದ್ದಾರೆ. ಟೆಸ್ಟ್ ಹೊರತಾಗಿ,ಬೇಡಿ 10 ಏಕದಿನ ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ಕಾಣಿಸಿಕೊಂಡಿದ್ದಾರೆ. 7 ವಿಕೆಟ್​ ಉರುಳಿಸಿದ್ದಾರೆ. 1975 ರ ವಿಶ್ವಕಪ್​ನ ಪೂರ್ವ ಆಫ್ರಿಕಾ ವಿರುದ್ಧ ಭಾರತದ ಮೊದಲ ಏಕದಿನ ವಿಜಯದಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದರು.

Exit mobile version