Site icon Vistara News

ICC World Cup 2023 : ಕೊನೆಗೂ ಗೆದ್ದ ಪಾಕಿಸ್ತಾನ, ಬಾಂಗ್ಲಾ ತಂಡಕ್ಕೆ ಆರನೇ ಸೋಲು

Pakistan Crickete team

ಕೋಲ್ಕೊತಾ: ಸೋಲುಗಳಿಂದ ಕಂಗೆಟ್ಟು ವಿಶ್ವ ಕಪ್​ನಲ್ಲಿ ಲೀಗ್ ಹಂತದಲ್ಲೇ ನಿರ್ಗಮಿಸುವುದಕ್ಕೆ ತಯಾರಾಗಿರುವ ಪಾಕಿಸ್ತಾನ (ICC World Cup 2023) ತಂಡಕ್ಕೆ ಕೊನೆಗೂ ಒಂದು ಗೆಲುವು ಸಿಕ್ಕಿದೆ. ದುರ್ಬಲ ಪಾಕಿಸ್ತಾನ ತಂಡ ವಿರುದ್ಧ 7 ವಿಕೆಟ್​ಗಳ ಭರ್ಜರಿ ವಿಜಯ ದಾಖಲಿಸಿದೆ. ಇದು ಹಾಲಿ ವಿಶ್ವ ಕಪ್​ನಲ್ಲಿ ಬಾಬರ್ ಅಜಮ್ ನೇತೃತ್ವದ ತಂಡಕ್ಕೆ ಮೂರನೇ ವಿಜಯ. ಸತತ ನಾಲ್ಕು ಸೋಲುಗಳಿಂದಾಗಿ ಪಾಕ್​ ತಂಡ ಕಂಗೆಟ್ಟ ಹೊರತಾಗಿಯೂ ಮತ್ತೆ ಐದನೇ ಸ್ಥಾನಕ್ಕೆ ಬಂದು ನಿಂತಿದೆ. ಇದೇ ವೇಳೆ ಬಾಂಗ್ಲಾದೇಶ ತಂಡ ಸತತ ಆರು ಸೋಲುಗಳನ್ನು ಎದುರಿಸುವ ಮೂಲಕ ಹಾಲಿ ವಿಶ್ವ ಕಪ್​ನಲ್ಲಿ ಅತ್ಯಂತ ನಿರಾಸೆಯ ಅಭಿಯಾನ ನಡೆಸಿದ್ದು, ಸೆಮಿಫೈನಲ್ ರೇಸ್​ನಿಂದ ಹೊರಕ್ಕೆ ಬಿದ್ದಿದೆ.

ಇಲ್ಲಿನ ಈಡನ್​ ಗಾರ್ಡನ್ಸ್​ ಕ್ರಿಕೆಟ್​ ಸ್ಟೇಡಿಯಮ್​ನಲ್ಲಿ ನಡೆದ ಪಂದ್ಯದಲ್ಲಿ ಟಾಸ್​ ಗೆದ್ದ ಬಾಂಗ್ಲಾದೇಶ ತಂಡ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಆದರೆ, ನಿರ್ಧಾರ ಕ್ಕೆ ತದ್ವಿರುದ್ಧವಾಗಿ ಆಡಿ 45.1 ಓವರ್​ಗಳಲ್ಲಿ 204 ರನ್​ಗಳಿಗೆ ಆಲ್​ಔಟ್ ಆಯಿತು. ಪ್ರತಿಯಾಗಿ ಬ್ಯಾಟ್ ಮಾಡಿದ ಪಾಕಿಸ್ತಾನ ತಂಡ ಇನ್ನೂ 105 ಎಸೆತಗಳು ಬಾಕಿ ಇರುವಂತೆಯೇ 3 ವಿಕೆಟ್ ಕಳೆದುಕೊಂಡು 205 ರನ್ ಬಾರಿಸಿ ಗೆಲುವು ಸಾಧಿಸಿತು.

ಸಾಧಾರಣ ಗುರಿಯನ್ನು ಬೆನ್ನಟ್ಟಲು ಹೊರಟ ಪಾಕಿಸ್ತಾನ ತಂಡ ಉತ್ತಮ ಆರಂಭ ಪಡೆಯಿತು. ಅಬ್ದುಲ್ಲಾ ಶಫಿಕ್​ (68) ಹಾಗೂ ಫಖರ್ ಜಮಾನ್​ (81) ಮೊದಲ ವಿಕೆಟ್​ಗೆ 121 ರನ್ ಬಾರಿಸಿದರು. ಅವರಿಬ್ಬರ ಅದ್ಭುತ ಪ್ರದರ್ಶನದಿಂದಾಗಿ ಪಾಕ್​ ಬಳಗಕ್ಕೆ ಗೆಲುವಿನ ವಿಶ್ವಾಸ ದೊರೆಯಿತು. ಆದರೆ, ಮೆಹೆದಿ ಹಸನ್ ಮಿರ್ಜಾ ಬೌಲಿಂಗ್​ನಲ್ಲಿ ಅಬ್ದುಲ್ಲಾ ಶಫೀಕ್ ಔಟಾದರು. 69 ಎಸೆತ ಎದುರಿಸಿದ್ದ ಅವರು 9 ಫೋರ್ ಹಾಗೂ 2 ಸಿಕ್ಸರ್​ಗಳನ್ನು ಬಾರಿಸಿದ್ದರು.

ಬಾಬರ್ ಫೇಲ್​

ಮೂರನೇ ಕ್ರಮಾಂಕದಲ್ಲಿ ಆಡಲು ಬಂದ ನಾಯಕ ಬಾಬರ್ ಅಜಮ್ ಮತ್ತೆ ವೈಫಲ್ಯ ಎದುರಿಸಿದರು. ಅವರು 16 ಎಸೆತಗಳಲ್ಲಿ 9 ರನ್ ಬಾರಿಸಿ ಔಟಾದರು. ಹೀಗಾಗಿ 160 ರನ್​ಗಳಿಗೆ ಪಾಕ್​ ತಂಡ ಮತ್ತೊಂದು ವಿಕೆಟ್​ ಕಳೆದುಕೊಂಡಿತು. ಆ ಬಳಿಕ ಬಂದ ಮೊಹಮ್ಮದ್ ರಿಜ್ವಾನ್​ 26 ರನ್​ ಹಾಗೂ ಇಫ್ತಿಕಾರ್ ಅಹಮದ್​ 17 ರನ್​ ತಂಡವನ್ನು ಗೆಲ್ಲಿಸಿದರು. ಅದಕ್ಕಿಂತ ಮೊದಲು ಫಖರ್​ ಜಮಾನ್ ಮೆಹೆದಿ ಹಸನ್ ಬೌಲಿಂಗ್​ನಲ್ಲಿ ಔಟಾದರು.

ಅದಕ್ಕಿಂತ ಮೊದಲು ಬ್ಯಾಟ್​ ಮಾಡಿದ ಬಾಂಗ್ಲಾದೇಶ ತಂಡ ಶೂನ್ಯಕ್ಕೆ ಮೊದಲ ವಿಕೆಟ್ ಕಳೆದುಕೊಂಡಿತು. ತಂಜಿದ್​ ಹಸನ್​ ಸೊನ್ನೆ ಸುತ್ತುವ ಮೂಲಕ ನಿರಾಸೆ ಮೂಡಿಸಿದರು. ಮೂರನೇ ಕ್ರಮಾಂಕದಲ್ಲಿ ಬಂದ ನಜ್ಮುಲ್ ಹೊಸೈನ್​ (4) ಹಾಗೂ ಮುಷ್ಪಿಕರ್ ರಹೀಮ್​ (5) ಕೂಡ ಬೇಗನೆ ವಿಕೆಟ್​ ಒಪ್ಪಿಸಿದರು. ಹೀಗಾಗಿ ಬಾಂಗ್ಲಾ ತಂಡ 23 ರನ್​ಗಳಿಗೆ 3 ವಿಕೆಟ್ ಕಳೆದುಕೊಂಡಿತು. ಈ ನಡುವೆ ಮತ್ತೊಮ್ಮ ಅರಂಭಿಕ ಬ್ಯಾಟರ್​ ಲಿಟನ್​ ದಾಸ್ 45 ರನ್ ಬಾರಿಸಿ ಮಿಂಚಿದರು. ಅವರಿಗೆ ಹಿರಿಯ ಬ್ಯಾಟರ್ ಮಹಮ್ಮದುಲ್ಲಾ 56 ರನ್​ ಬಾರಿಸಿ ಉತ್ತಮ ಜತೆಯಾಟ ನೀಡಿದರು. ಈ ಜೋಡಿ ತಂಡದ ಮೊತ್ತವನ್ನು 102ರ ತನಕ ಹಿಗ್ಗಿಸಿತು.

ಈ ಸುದ್ದಿಯನ್ನೂ ಓದಿ : MS Dhoni : ಬೆಂಗಾಲಿ ಭಾಷೆ ಗೊತ್ತಿದ್ದೂ ಬಾಂಗ್ಲಾ ತಂಡವನ್ನು ಮಂಗ್ಯಾ ಮಾಡಿದ್ದ ಧೋನಿ!

ನಾಲ್ಕನೇ ವಿಕೆಟ್​ ಪತನದ ಬಳಿಕ ಆಡಲು ಬಂದ ನಾಯಕ ಶಾಕಿಬ್ ಅಲ್​ ಹಸನ್ ಉಪಯುಕ್ತ 43 ರನ್ ಬಾರಿಸಿದರು. ಆದರೆ, ಆ ಬಳಿಕ ಬಾಂಗ್ಲಾ ತಂಡ ನಿರಂತರ ವಿಕೆಟ್​ಗಳನ್ನು ಕಳೆದುಕೊಂಡಿತು. ಏತನ್ಮಧ್ಯೆ ಮೆಹೆದಿ ಹಸನ್​ 25 ರನ್ ಬಾರಿಸಿದರು.

ಪಾಕಿಸ್ತಾನ ತಂಡದ ಬೌಲಿಂಗ್ ಪರ ಶಹೀನ್ ಶಾ ಅಫ್ರಿದಿ ಮೂರು ವಿಕೆಟ್ ಉರುಳಿಸಿದರೆ, ಮಹಮ್ಮದ್ ವಾಸಿಂ ಕೂಡ 3 ವಿಕೆಟ್​ ಪಡೆದರು. ಹ್ಯಾರಿಸ್​ ರವೂಫ್ ಕೂಡ 5 ವಿಕೆಟ್​ ತಮ್ಮದಾಗಿಸಿಕೊಂಡರು.

Exit mobile version