Site icon Vistara News

Paris Olympics 2024: ಪರ್‌ಫೆಕ್ಟ್‌ ಕ್ಲಿಕ್‌ ಎಂದರೆ ಇದು; ಭಾರಿ ಸದ್ದು ಮಾಡುತ್ತಿದೆ ಒಲಿಂಪಿಕ್ಸ್‌ನ ಈ ವೈರಲ್‌ ಫೋಟೊ

Paris Olympics 2024

ಪ್ಯಾರಿಸ್‌: ಫ್ರಾನ್ಸ್‌ನ ಪ್ಯಾರಿಸ್‌ನಲ್ಲಿ ನಡೆಯುತ್ತಿರುವ ಒಲಿಂಪಿಕ್ಸ್‌ ಈಗಾಗಲೇ ವಿಶ್ವದ ಕ್ರೀಡಾಸಕ್ತರ ಗಮನ ಸೆಳೆದಿದೆ (Paris Olympics 2024). ಈ ಬಾರಿ ಭಾರತದ ಸಾಧನೆಯೂ ಉತ್ತಮವಾಗಿದ್ದು, ಎರಡು ಕಂಚಿನ ಪದಕ ತನ್ನದಾಗಿಸಿಕೊಂಡಿದೆ. ಈ ಮಧ್ಯೆ ಸ್ಪರ್ಧೆಯ ನಡುವೆ ಎಎಫ್‌ಪಿ ಛಾಯಾಗ್ರಾಹಕ (AFP photographer) ಜೆರೋಮ್ ಬ್ರೌಲೆಟ್ (Jerome Brouillet) ಕ್ಲಿಕ್ಕಿಸಿದ ಅಪರೂಪದ ಫೋಟೊವೊಂದು ಇಂಟರ್‌ನೆಟ್‌ನಲ್ಲಿ ಸದ್ದು ಮಾಡುತ್ತಿದೆ. ಬ್ರೆಜಿಲ್‌ನ ಸರ್ಫಿಂಗ್‌ ಸ್ಪರ್ಧಿ ಗೇಬ್ರಿಯಲ್ ಮೆಡಿನಾ (Gabriel Medina) ಅವರು ಟಹೀಟಿಯಲ್ಲಿ ದಾಖಲೆಯ ಒಲಿಂಪಿಕ್ಸ್‌ ಸ್ಕೋರ್ ಗಳಿಸಿದ ನಂತರ ನೀರಿನಿಂದ ಹೊರ ಬರುತ್ತಿರುವ ಫೋಟೊ ಇದಾಗಿದ್ದು, ಗಮನ ಸೆಳೆಯುತ್ತಿದೆ (Viral News).

ಗೇಬ್ರಿಯಲ್ ಮೆಡಿನಾ ನೀರಿನ ಮೇಲೆ ಜಿಗಿದು ಗಾಳಿಯಲ್ಲಿ ತೇಲುತ್ತಿರುವ ಕ್ಷಣದಲ್ಲಿ ಸೆರೆ ಹಿಡಿದ ಫೋಟೊ ಇದಾಗಿದ್ದು, ಛಾಯಾಗ್ರಾಹಕ ಜೆರೋಮ್ ಬ್ರೌಲೆಟ್ ಅವರ ಕೌಶಲ್ಯಕ್ಕೆ, ಫರ್‌ಫೆಕ್ಟ್‌ ಟೈಮಿಂಗ್ಸ್‌ಗೆ ನೆಟ್ಟಿಗರು ಮನ ಸೋತಿದ್ದಾರೆ. ʼʼಆ ಕ್ಷಣಕ್ಕೆ ಇದು ಇಷ್ಟು ಪರಿಪೂರ್ಣವಾಗಿ ಬರುತ್ತದೆ ಎಂದುಕೊಂಡಿರಲಿಲ್ಲ. ಅಪೂರ್ವ ಕ್ಷಣವನ್ನು ಸೆರೆಹಿಡಿದಿದ್ದೇನೆ ಎನ್ನುವುದು ಗೊತ್ತಿತ್ತು. ಆದರೆ ಇಷ್ಟು ಪರಿಪೂರ್ಣವಾಗಿರುತ್ತದೆ ಎಂದುಕೊಂಡಿರಲಿಲ್ಲʼʼ ಎಂದು ಜೆರೋಮ್ ಬ್ರೌಲೆಟ್ ಪ್ರತಿಕ್ರಿಯಿಸಿದ್ದಾರೆ.

ʼʼಪರಿಸ್ಥಿತಿ ಅನುಕೂಲವಾಗಿದ್ದರಿಂದ ಇಂತಹ ಪರ್‌ಫೆಕ್ಟ್‌ ಫೋಟೊ ಕ್ಲಿಕ್ಕಿಸಲು ಸಾಧ್ಯವಾಯಿತು. ಅಂದು ನಿಜಕ್ಕೂ ಅಲೆಗಳು ನಾವು ಅಂದುಕೊಂಡದ್ದಕ್ಕಿಂತಲೂ ಎತ್ತರವಾಗಿದ್ದವು. ಆದರೂ ಫೋಟೊ ತೆಗೆಯುವುದಕ್ಕೆ ಹೆಚ್ಚು ಕಷ್ಟ ಎನಿಸಲಿಲ್ಲʼʼ ಎಂದು ನುಡಿದಿದ್ದಾರೆ.

ʼʼಗೇಬ್ರಿಯಲ್ ಮೆಡಿನಾ ಅವರು ಗಾಳಿಯಲ್ಲಿ ತೇಲುತ್ತಿರುವಾಗ ನಾಲ್ಕು ಬಾರಿ ಕ್ಯಾಮೆರಾ ಕ್ಲಿಕ್‌ ಮಾಡಿದ್ದೆ. ಈ ನಾಲ್ಕು ಶಾಟ್‌ಗಳಲ್ಲಿ ಪೈಕಿ ಇದೂ ಒಂದುʼʼ ಎಂದು ಅವರು ತಿಳಿಸಿದ್ದಾರೆ. ಸದ್ಯ ಈ ಫೋಟೊಕ್ಕೆ ಪ್ರಪಂಚದ ವಿವಿಧ ಮೂಲೆಗಳಿಂದ ಮೆಚ್ಚುಗೆ ವ್ಯಕ್ತವಾಗುತ್ತಿದ್ದು, ಆನ್‌ಲೈನ್‌ನಲ್ಲಿ ಲಕ್ಷಾಂತರ ಬಾರಿ ಶೇರ್‌ ಆಗಿದೆ. ಕೋಟ್ಯಾಂತರ ಮಂದಿ ಲೈಕ್‌ ಬಟನ್‌ ಒತ್ತಿದ್ದಾರೆ. ಸ್ವತಃ ಗೇಬ್ರಿಯಲ್ ಮೆಡಿನಾ ಅವರು ತಮ್ಮ ಇನ್‌ಸ್ಟಗ್ರಾಮ್‌ ಖಾತೆಯಲ್ಲಿ ಚಿತ್ರವನ್ನು ಪೋಸ್ಟ್ ಮಾಡಿದ್ದು 24 ಲಕ್ಷಕ್ಕೂ ಅಧಿಕ ಲೈಕ್ಸ್‌ ಬಂದಿದೆ.

ಯಾರು ಏನಂದ್ರು?

“ಇದು ಸಾರ್ವಕಾಲಿಕ ಶ್ರೇಷ್ಠ ಕ್ರೀಡಾ ಫೋಟೊಗಳಲ್ಲಿ ಒಂದು” ಎಂದು ಆಸ್ಟ್ರೇಲಿಯಾದ ಮಾಧ್ಯಮ ಸಂಸ್ಥೆ News.com.au ತನ್ನ ಫೇಸ್‌ಬುಕ್‌ ಪುಟದಲ್ಲಿ ಪೋಸ್ಟ್ ಮಾಡಿದೆ. ಟೈಮ್ ನಿಯತಕಾಲಿಕವು ಇದನ್ನು “2024ರ ಒಲಿಂಪಿಕ್ಸ್‌ನ ಅದ್ಭುತ ಫೋಟೊ” ಎಂದು ಬಣ್ಣಿಸಿದೆ.

“ಅದ್ಭುತ ಎಂದರೇನು ಎಂದು ಯಾರಾದರು ಕೇಳಿದಾಗ ಈ ಫೋಟೊವನ್ನು ಅವರಿಗೆ ತೋರಿಸಿ” ಎಂದು ಒಬ್ಬರು ಹೇಳಿದ್ದಾರೆ. ” ಜೆರೋಮ್ ಬ್ರೌಲೆಟ್ ಅವರ ಜೀವನದ ಅತ್ಯುತ್ತಮ ಫೋಟೊ ಇದಾಗಿರಲಿದೆ” ಎಂದು ಮತ್ತೊಬ್ಬರು ಶ್ಲಾಘಿಸಿದ್ದಾರೆ. ʼʼನನ್ನ ಕಣ್ಣನ್ನು ನನಗೇ ಸಂಬಲು ಸಾಧ್ಯವಾಗುತ್ತಿಲ್ಲʼʼ ಎಂದು ನೆಟ್ಟಿಗರೊಬ್ಬರು ಕಮೆಂಟ್‌ ಮಾಡಿದ್ದಾರೆ. ʼʼಆ ಕ್ಯಾಮೆರಾಮ್ಯಾನ್‌ಗೆ ವೇತನ ಹೆಚ್ಚಳದ ಅಗತ್ಯವಿದೆ. ನಂಬಲಾಗದ ಚಿತ್ರ” ಎಂದು ಮಗದೊಬ್ಬರು ತಿಳಿಸಿದ್ದಾರೆ. “ಗೇಬ್ರಿಯಲ್ ಮೆಡಿನಾ ಗಾಳಿಯಲ್ಲಿ ಹೊರಬಂದಂತೆ ಕಾಣುತ್ತಿದೆ” ಎಂದು ಹಲವರು ಹೇಳಿದ್ದಾರೆ.

ಇದನ್ನೂ ಓದಿ: Manu Bhaker: ಒಂದೇ ಆವೃತ್ತಿಯಲ್ಲಿ 2 ಪದಕ ಗೆದ್ದು ಐತಿಹಾಸಿಕ ಸಾಧನೆ ಮಾಡಿದ ಮನು ಭಾಕರ್

Exit mobile version