ಪ್ಯಾರಿಸ್: ಜಗತ್ತಿನ ಅತ್ಯಂತ ದೊಡ್ಡ ಕ್ರೀಡಾಕೂಟವಾದ ಒಲಿಂಪಿಕ್ಸ್(Paris Olympics) ಟೂರ್ನಿಯ ಆತಿಥ್ಯ ವಹಿಸಿಕೊಂಡ ‘ಬೆಳಕಿನ ನಗರಿ’ ಪ್ಯಾರಿಸ್ ಈ ಕ್ರೀಡಾ ಮಹಾಮೇಳಕ್ಕೆ ಸಿದ್ಧವಾಗಿ ನಿಂತಿದೆ. ಇನ್ನೆರಡು ದಿನಗಳು ಕಳೆದರೆ ಇಲ್ಲಿ ಒಲಿಂಪಿಕ್ಸ್ ಜ್ಯೋತಿಯು ಪ್ರಜ್ವಲಿಸಲಿದೆ. ಆದರೆ, ಈ ಮಹಾ ಕ್ರೀಡಾಕೂಟ ಆರಂಭಕ್ಕೂ ಮುನ್ನವೇ ಪ್ಯಾರಿಸ್ನಲ್ಲಿ ಅಹಿತಕರ ಘಟನೆಗಳು ನಡೆಯುತ್ತಿರುವುದು ಕ್ರೀಡಾಭಿಮಾನಿಗಳನ್ನು ಬೆಚ್ಚಿ ಬೀಳಿಸಿದೆ.
ಪ್ಯಾರಿಸ್ ಒಲಿಂಪಿಕ್ಸ್ ಕ್ರೀಡಾಕೂಟ ನೋಡಲು ಬಂದಿದ್ದ ಆಸ್ಟ್ರೇಲಿಯಾ ಮೂಲದ ಮಹಿಳೆಯ ಮೇಲೆ ಐವರು ಬರ್ಬರವಾಗಿ ಗ್ಯಾಂಗ್ ರೇಪ್ ಮಾಡಿರುವ ಆತಂಕಕಾರಿ ಘಟನೆ ತಡವಾಗಿ ನಡೆದಿದೆ. ಈ ದೃಶ್ಯಗಳು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 25 ವರ್ಷದ ಆಸ್ಟ್ರೇಲಿಯಾ ಮಹಿಳೆಯ ಮೇಲೆ ಗ್ಯಾಂಗ್ ರೇಪ್ ಮಾಡಲಾಗಿದೆ.
ಜುಲೈ 19ರ ರಾತ್ರಿ ಈ ಘಟನೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ಮೌಲಿನ್ ರೋಗ್ ಕ್ಯಾಬರ್ಟ್‌ನ ಪಬ್ ಒಂದರಲ್ಲಿ ಮದ್ಯ ಸೇವಿಸಿ, ಹೊರ ಬರುವ ಸಂದರ್ಭದಲ್ಲಿ ಆಕೆಯನ್ನು ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಗ್ಯಾಂಗ್ ರೇಪ್ ನಡೆಸಿದ್ದಾಗಿ ಮಹಿಳೆ ತನ್ನ ದೂರಿನಲ್ಲಿ ಆರೋಪಿಸಿದ್ದಾಳೆ.
ವೈರಲ್ ಆಗುತ್ತಿರುವ ವಿಡಿಯೊದಲ್ಲಿ ಆಕೆ ಹರಿದ ಬಟ್ಟೆಯಲ್ಲೇ ಸಹಾಯಕ್ಕಾಗಿ ಹತ್ತಿರದಲ್ಲೇ ಇದ್ದ ಕಬಾಬ್ ಶಾಪ್‌ಗೆ ಓಡಿ ಬಂದು ಬಂದು ರಕ್ಷಣೆ ಪಡೆದಿದ್ದಾಳೆ. ಈ ಎಲ್ಲ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಸಿಸಿಟಿವಿ ವಿಡಿಯೊ ಕಂಡ ಅನೇಕರು ಈ ಘಟನೆ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ. ಫ್ರಾನ್ಸ್ನಲ್ಲಿ ಮಹಿಳೆಯರಿಗೆ ಸರಿಯಾದ ಸುರಕ್ಷತೆ ಮತ್ತು ರಕ್ಷಣ ಇಲ್ಲ ಎಂದು ಆರೋಪಿಸಿದ್ದಾರೆ. ಸಿಸಿಟಿವಿ ವಿಡಿಯೋದಲ್ಲಿ ಆ ಮಹಿಳೆಯು ಓಡೋಡಿ ಬರುವುದು, ಭಯಭೀತರಾಗಿರುವುದು, ಸಹಾಯಕ್ಕಾಗಿ ಅಲ್ಲಿರುವ ಸಿಬ್ಬಂದಿಗಳಲ್ಲಿ ಮನವಿ ಮಾಡಿಕೊಳ್ಳುವ ದೃಶ್ಯಾವಳಿಗಳು ಸೆರೆಯಾಗಿವೆ. ಈಗಾಗಲೇ ಪ್ಯಾರಿಸ್ ನಗರದಲ್ಲಿ ಕಟ್ಟೆಚ್ಚರ ವಹಿಸಲಾಗಿದ್ದರೂ ಕೂಡ ಈ ಘಟನೆ ನಡೆದಿರುವು ನಿಜಕ್ಕೂ ಆಘಾತಕಾರಿ ಸಂಗತಿ.
ಇದನ್ನೂ ಓದಿ Paris Olympics: ಒಲಿಂಪಿಕ್ಸ್ ಶೂಟಿಂಗ್; ಪದಕ ಗೆಲ್ಲುವ ವಿಶ್ವಾಸದಲ್ಲಿ ಬಿಜೆಪಿ ಶಾಸಕಿ
ಬೆದರಿಕೆ ಹಾಕಿದ ಹಮಾಸ್ ಉಗ್ರರು
ಈಗಾಗಲೇ ಈ ಕ್ರೀಡಾಕೂಟಕ್ಕೆ ಉಗ್ರರ ದಾಳಿಯ ಭೀತಿ ಎದುರಾಗಿದ್ದ ಕಾರಣ ಪ್ಯಾರಿಸ್ನಲ್ಲಿ ಹಿಂದೆಂದೂ ಕಾಣದ ಭಾರೀ ಭದ್ರತೆ ಕೈಗೊಳ್ಳಲಾಗಿದೆ. ಹೆಚ್ಚುವರಿ ಭದ್ರತೆಗಾಗಿ ಫ್ರಾನ್ಸ್ನೊಂದಿಗೆ ಭಾರತದ ಯೋಧರು ಕೂಡ ಕೈಜೋಡಿಸಿದ್ದಾರೆ. ಇದೀಗ ಹಮಾಸ್(Hamas) ಭಯೋತ್ಪಾದಕರಿಂದ(hamas terrorist) ಭೀಕರ ದಾಳಿಯ ಬೆದರಿಕೆ ಬಂದಿದೆ.
ಮುಸುಕುಧಾರಿ ವ್ಯಕ್ತಿಯೊಬ್ಬ ಅರೇಬಿಕ್ ಭಾಷೆಯಲ್ಲಿ ಬೆದರಿಕೆ ಹಾಕಿರುವ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಈ ವಿಡಿಯೊದಲ್ಲಿ ಮುಸುಕುಧಾರಿ ಒಲಿಂಪಿಕ್ಸ್ ವೇಳೆ ಫ್ರಾನ್ಸ್ ಅಧ್ಯಕ್ಷರನ್ನು ಹತ್ಯೆ ಮಾಡುವುದಾಗಿ ಮತ್ತು ಫ್ರಾನ್ಸ್ನಲ್ಲಿ ರಕ್ತದೋಕುಳಿ ಹರಿಸುವುದಾಗಿ ಎಚ್ಚರಿಕೆ ನೀಡಿದ್ದಾನೆ.
ಈ ವಿಡಿಯೊ ವೈರಲ್ ಆಗುತ್ತಿದ್ದಂತೆ ಫ್ರಾನ್ಸ್ನಲ್ಲಿ ಮತ್ತಷ್ಟು ಭದ್ರತೆ ಕೈಗೊಳ್ಳಲಾಗಿದೆ. ಪ್ಯಾರಿಸ್ನ ಕ್ರೀಡಾ ಗ್ರಾಮದ ವಿವಿಧ ಸ್ಥಳಗಳಲ್ಲಿ ಹೆಚ್ಚಿನ ಭದ್ರತೆ ಒದಗಿಸಲು ಸಂಘಟಕರು ನಿರ್ಧರಿಸಿದ್ದಾರೆ. ಪ್ಯಾರಿಸ್ ಪೊಲೀಸ್ ಮುಖ್ಯಸ್ಥ ಲಾರೆಂಟ್ ನುನೆಜ್ ಅವರು ಸುದ್ದಿಗೋಷ್ಠಿಯಲ್ಲಿ ಕ್ರೀಡಾಕೂಟಕ್ಕೆ ಸಂಬಂಧಿಸಿ ಮಾತನಾಡಿದ್ದು, ನಾವು ಉಗ್ರರ ಬೆದರಿಕೆಯ ಬಗ್ಗೆ ಕಳವಳ ಹೊಂದಿದ್ದೇವೆ. ವಿಶೇಷವಾಗಿ ಇಸ್ಲಾಮಿಕ್ ಉಗ್ರವಾದಿಗಳು, ಪ್ಯಾಲೆಸ್ಟೀನಿಯನ್ ಪರ ಚಳವಳಿಯಿಂದ ಕಡಿಮೆ-ತೀವ್ರತೆಯ ಬೆದರಿಕೆಯ ಬಗ್ಗೆಯೂ ನಾವು ವಿಶೇಷ ಕಾಳಜಿ ವಹಿಸುತ್ತೇವೆ. ಕ್ರೀಡಾಪಟುಗಳು ಆತಂಕಪಡಬೇಕಿಲ್ಲ ಎಂದು ಹೇಳಿದ್ದಾರೆ.