ಕರಾಚಿ: ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಅಧ್ಯಕ್ಷ ಝಾಕಾ ಅಶ್ರಫ್(Zaka Ashraf) ಅವರು ಮಹಮ್ಮದ್ ಅಲಿ ಜಿನ್ನಾ ಮತ್ತು ಮಹಾತ್ಮ ಗಾಂಧಿಯವರ ಹೆಸರಿನಲ್ಲಿ ಕ್ರಿಕೆಟ್ ಟ್ರೋಫಿ(Jinnah-Gandhi Trophy) ನಡೆಸಲು ಮುಂದಾಗಿದ್ದಾರೆ. ಅಲ್ಲದೆ ಈ ಟ್ರೋಫಿ ಆಸೀಸ್ ಮತ್ತು ಇಂಗ್ಲೆಂಡ್ ನಡುವೆ ನಡೆಯುವ ಆಶ್ಯಸ್ ಸರಣಿಯಷ್ಟು ಮಹತ್ವದ ಪಡೆಯಲಿದೆ ಎಂದು ಅಶ್ರಫ್ ಹೇಳಿದ್ದಾರೆ.
ಪಾಕಿಸ್ತಾನ ತಂಡ ಭಾರತದ ನೆಲದಲ್ಲಿ ಕೊನೆಯ ಬಾರಿ ಏಕದಿನ ಮತ್ತು ಟಿ20 ಸರಣಿ ಆಡಿದ್ದು 2012-13ರಲ್ಲಿ, ಇದಾಗ ಬಳಿಕ ಉಭಯ ತಂಡಗಳು ತಮ್ಮ ತಮ್ಮ ದೇಶದಲ್ಲಿ ದ್ವಿಪಕ್ಷೀಯ ಸರಣಿ ಆಡಿಲ್ಲ. ಕೇವಲ ಐಸಿಸಿ ಟೂರ್ನಿಗಳಲ್ಲಿ ಮಾತ್ರ ಮುಖಾಮುಖಿಯಾಗುತ್ತಿವೆ. ಈ ಬಾರಿಯ ಏಷ್ಯಾ ಕಪ್(Asia Cup) ಟೂರ್ನಿಯ ವೇಳೆ ಬಿಸಿಸಿಐ ಅಧ್ಯಕ್ಷ ರೋಜರ್ ಬಿನ್ನಿ(Roger Binny) ಮತ್ತು ಉಪಾಧ್ಯಕ್ಷ ರಾಜೀವ್ ಶುಕ್ಲಾ(Rajeev Shukla) ಪಾಕಿಸ್ತಾನಕ್ಕೆ ಭೇಟಿ ನೀಡಿದ್ದರು. ಅಲ್ಲದೆ ತವರಿಗೆ ಮರಳಿದ ಬಳಿಕ ಪಾಕಿಸ್ತಾನದ ಆತಿಥ್ಯವನ್ನು ಶ್ಲಾಘಿಸಿದರು. ಈ ವೇಳೆ ಉಭಯ ದೇಶಗಳ ನಡುವೆ ಮತ್ತೆ ದ್ವಿಪಕ್ಷೀಯ ಸರಣಿ ಆರಂಭವಾಗಲಿದೆ ಎಂದು ಕೆಲವು ಮಾಧ್ಯಮಗಳು ವರದಿ ಮಾಡಿತ್ತು.
ಬಿಸಿಸಿಐಗೂ ಪ್ರಸ್ತಾವ
71ರ ಹರೆಯದ ಝಾಕಾ ಅಶ್ರಫ್ ಅವರು ವಿಶ್ವಕಪ್ ವಿಚಾರದಲ್ಲಿ ಮಾಧ್ಯಮದ ಜತೆ ಮಾತನಾಡುವ ವೇಳೆ ಜಿನ್ನಾ-ಗಾಂಧಿ ದ್ವಿಪಕ್ಷೀಯ ಸರಣಿಯ ಬಗ್ಗೆ ಮಾಹಿತಿ ನೀಡಿದರು. ಅಲ್ಲದೆ ಈ ಪ್ರಸ್ತಾವವನ್ನು ಬಿಸಿಸಿಐಗೂ ತಿಳಿಸಲಾಗಿದೆ ಎಂದರು. ಆದರೆ ಬಿಸಿಸಿಐ ಈ ಬಗ್ಗೆ ಯಾವುದೇ ಮಾಹಿತಿ ನೀಡಿಲ್ಲ. ಆದರೆ ಕಳೆದ ತಿಂಗಳು ಕೇಂದ್ರ ಕ್ರೀಡಾ ಸಚಿವ ಅನುರಾಗ್ ಠಾಕೂರ್ ಹೇಳಿದ ಹೇಳಿಕೆಯೊಂದನ್ನು ಗಮನಿಸುವಾಗ ಈಗ ಹಲವು ಪ್ರಶ್ನೆಗಳು ಹುಟ್ಟಿಕೊಂಡಿದೆ.
ಮೊದಲು ಭಯೋತ್ಪಾದನೆಗೆ ಬ್ರೇಕ್ ಹಾಕಿ
ಗಡಿಯಾಚೆಗಿನ ಭಯೋತ್ಪಾದನೆ(Terrorism) ಮತ್ತು ಭಾರತ ಅಕ್ರಮ ಗಡಿ ಒಳನುಸುಳುವಿಕೆಯನ್ನು ನಿಲ್ಲಿಸುವವರೆಗೆ ಪಾಕಿಸ್ತಾನದೊಂದಿಗೆ ಯಾವುದೇ ದ್ವಿಪಕ್ಷೀಯ(IND vs PAK) ಕ್ರಿಕೆಟ್ ಇರುವುದಿಲ್ಲ ಎಂದು (Anurag Thakur) ಹೇಳಿದ್ದರು.
“ಕ್ರೀಡೆಗೆ ಸಂಬಂಧಿಸಿದಂತೆ, ಒಳನುಸುಳುವಿಕೆ ಮತ್ತು ಗಡಿಯಾಚೆಗಿನ ಭಯೋತ್ಪಾದನೆಯನ್ನು ನಿಲ್ಲಿಸುವವರೆಗೆ ಪಾಕಿಸ್ತಾನದೊಂದಿಗೆ ದ್ವಿಪಕ್ಷೀಯ ಪಂದ್ಯಗಳನ್ನು ನಡೆಸುವುದಿಲ್ಲ ಎಂದು ಬಿಸಿಸಿಐ ಬಹಳ ಹಿಂದೆಯೇ ನಿರ್ಧರಿಸಿತ್ತು. ಇದು ಈ ದೇಶದ ಪ್ರತಿಯೊಬ್ಬ ಸಾಮಾನ್ಯ ನಾಗರಿಕನ ಭಾವನೆ ಎಂದು ನಾನು ಭಾವಿಸುತ್ತೇನೆ” ಎಂದು ಹೇಳಿದ್ದರು.
ಇದನ್ನೂ ಓದಿ ind vs pak : ಒಂದೇ ದಿನ, ಪಾಕಿಸ್ತಾನವನ್ನು ಮೂರು ಕ್ರೀಡೆಗಳಲ್ಲಿ ಬಗ್ಗುಬಡಿದ ಭಾರತ
2008ರಲ್ಲಿ ಪಾಕ್ಗೆ ತೆರಳಿದ್ದ ಭಾರತ
2008ರ ಮುಂಬೈ ದಾಳಿಯ ಬಳಿಕ ಭಾರತ ಮತ್ತು ಪಾಕಿಸ್ತಾನ ನಡುವೆ ದ್ವಿಪಕ್ಷೀಯ ಕ್ರಿಕೆಟ್ ಪಂದ್ಯಾಟಗಳು ನಡೆದಿಲ್ಲ. ಭಾರತ ತಂಡ 2008ರಲ್ಲಿ ಕೊನೆಯ ಬಾರಿ ಏಷ್ಯಾ ಕಪ್ ಟೂರ್ನಿ ಆಡಲು ಪಾಕಿಸ್ತಾನಕ್ಕೆ ಪ್ರವಾಸ ಕೈಗೊಂಡಿತ್ತು ಹಾಗೂ 2006ರಲ್ಲಿ ಪಾಕಿಸ್ತಾನಲ್ಲಿ ಉಭಯ ತಂಡಗಳು ಕೊನೆಯ ಬಾರಿ ದ್ವಿಪಕ್ಷೀಯ ಸರಣಿಯಲ್ಲಿ ಕಾದಾಟ ನಡೆಸಿದ್ದವು. 2016ರ ಟಿ20 ವಿಶ್ವ ಕಪ್ ಟೂರ್ನಿ ಆಡಲು ಪಾಕಿಸ್ತಾನ ಕೊನೆಯ ಬಾರಿ ಭಾರತಕ್ಕೆ ಆಗಮಿಸಿತ್ತು. ಇದೀಗ 7 ವರ್ಷಗಳ ಬಳಿಕ ಏಕದಿನ ವಿಶ್ವಕಪ್ ಟೂರ್ನಿ ಆಡುವ ಸಲುವಾಗಿ ಪಾಕ್ ತಂಡ ಭಾರತಕ್ಕೆ ಬಂದಿದೆ.