ಬೆಂಗಳೂರು: ಪ್ರತಿ ವ್ಯಕ್ತಿ ಮಾನಸಿಕವಾಗಿ ಹಾಗೂ ದೈಹಿಕವಾಗಿ ಆರೋಗ್ಯವಾಗಿರಲು ಯಾವುದಾದರೂ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ(CM Siddaramaiah) ತಿಳಿಸಿದರು.
ಅವರು ಇಂದು(ಶನಿವಾರ) ವಿಶ್ವವಾಣಿ(Vishwavani) ಕನ್ನಡ ಪತ್ರಿಕೆಯ 9 ನೇ ವಾರ್ಷಿಕೋತ್ಸವ ಪ್ರಯುಕ್ತ ಆಯೋಜಿಸಿದ್ದ ಅಂತರ್ ಮುದ್ರಣ ಮಾಧ್ಯಮ ವಿ ವಿ ಕಪ್ 2024(VV Cup) ಪಂದ್ಯಾವಳಿ ಉದ್ಘಾಟಿಸಿ ಮಾತನಾಡಿ, ಹೆಚ್ಚು ಜನಪ್ರಿಯವಾದ ಪಂದ್ಯ ಹಾಗೂ ಹೆಚ್ಚು ಶ್ರೀಮಂತ ಪಂದ್ಯವೆಂದು ಕ್ರಿಕೆಟ್ ಖ್ಯಾತಿ ಪಡೆದಿದೆ. ಆರೋಗ್ಯ ಕಾಪಾಡಿಕೊಳ್ಳಲು ದೈಹಿಕ ಚಟುವಟಿಕೆ ಅಗತ್ಯ ಬೊಜ್ಜು ಬೆಳೆಸಿಕೊಳ್ಳಬೇಡಿ ಎಂದು ಈ ವೇಳೆ ಮುಖ್ಯಮಂತ್ರಿಗಳು ಸಲಹೆ ನೀಡಿದರು.
ಸೋಲು ಗೆಲುವು ಸಹಜ
ಸೋಲು ಗೆಲುವು ಯಾವುದೇ ಪಂದ್ಯದಲ್ಲಿ ಸಹಜ. ಗೆದ್ದವರಿಗೂ, ಸೋತವರಿಗೂ ಶುಭಾಶಯ ಹೇಳಬೇಕು. ಪಂದ್ಯಾವಳಿಯಲ್ಲಿ ಭಾಗವಹಿಸಿದ ಆರು ತಂಡಗಳಿಗೂ ಅಭಿನಂದಿಸಿದರು. ಪಂದ್ಯಾವಳಿ ಆರಂಭಕ್ಕೂ ಮೊದಲು ಸಿದ್ದರಾಮಯ್ಯ ಅವರು ಒಂದೆಡರು ಎಸೆತಗಳಿಗೆ ಬ್ಯಾಟ್ ಬೀಸುವ ಜತೆಗೆ ಪ್ರದೀಪ್ ಈಶ್ವರ್ ಅವರಿಗೆ ಬೌಲಿಂಗ್ ಕೂಡ ಮಾಡಿ ಗಮನಸೆಳೆದರು.
ಕ್ರಿಕೆಟ್ ವೀಕ್ಷಕ
ನಾನು ಕ್ರಿಕೆಟ್ ಆಡುವುದಿಲ್ಲ. ಆದರೆ ಕ್ರಿಕೆಟ್ ವೀಕ್ಷಕ. ಟೆಸ್ಟ್ ಪಂದ್ಯಾವಳಿಯನ್ನು ನೋಡಿ ಅಭ್ಯಾಸವಿದೆ ಎಂದರು. ಸಮಯವಿದ್ದರೆ ಬೆಂಗಳೂರಿನಲ್ಲಿ ಕ್ರಿಕೆಟ್ ನೋಡುತ್ತೇನೆ ಎಂದರು. ವಿಶ್ವೇಶ್ವರ ಭಟ್ ಅವರು ಸ್ವಂತ ಪತ್ರಿಕೆ ಪ್ರಾರಂಭಿಸಿ ಒಂಭತ್ತು ವರ್ಷಗಳಾಗಿವೆ. ಅದರ ಭಾಗವಾಗಿ ಕ್ರಿಕೆಟ್ ಪಂದ್ಯಾವಳಿ ಏರ್ಪಡಿಸಿದ್ದು, ಇದನ್ನು ಉದ್ಘಾಟಿಸಲು ಆಹ್ವಾನ ನೀಡಿದ್ದಕ್ಕಾಗಿ ಧನ್ಯವಾದಗಳನ್ನು ಹೇಳಿದರು.
ಇದನ್ನೂ ಓದಿ Republic Day: ಸಂವಿಧಾನ ಬದಲಾವಣೆ ಕೂಗನ್ನು ಖಂಡಿಸಿ, ನಾನೂ ಧ್ವನಿಗೂಡಿಸುವೆ: ಸಿದ್ದರಾಮಯ್ಯ ಕರೆ
ಈ ಕ್ರಿಕೆಟ್ ಪಂದ್ಯಾಕೂಟದಲ್ಲಿ ವಿಶ್ವವಾಣಿ ಪತ್ರಿಕೆ ಸಂಪಾದಕ, ವಿಶ್ವೇಶ್ವರ ಭಟ್, ಶಾಸಕ ಪ್ರದೀಪ್ ಈಶ್ವರ್, ಪಿ.ಇ. ಎಸ್ ವಿದ್ಯಾಸಂಸ್ಥೆಯ ಕುಲಪತಿ ಸೂರ್ಯಪ್ರಸಾದ್, ಮೊದಲಾದವರು ಉಪಸ್ಥಿತರಿದ್ದರು.