ಅಹಮದಾಬಾದ್ : ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2023ರ ಫೈನಲ್ (IPL 2023) ಪಂದ್ಯ ಮೇ 27ರಂದು ನಡೆಯಲಿದ್ದು, ಚೆನ್ನೈ ಸೂಪರ್ ಕಿಂಗ್ಸ್ (CSK) ಹಾಗೂ ಗುಜರಾತ್ ಟೈಟನ್ಸ್ (GT) ತಂಡಗಳು ಪರಸ್ಪರ ಮುಖಾಮುಖಿಯಾಗಲಿವೆ. ಜಗತ್ತಿನ ಶ್ರಿಮಂತ ಕ್ರಿಕೆಟ್ ಟೂರ್ನಿಯ ಫೈನಲ್ಗೆ ಮುಂಚಿತವಾಗಿ ವಿಜೇತರು ಮತ್ತು ರನ್ನರ್ಅಪ್ ತಂಡಗಳು ಪಡೆಯಲಿರುವ ಬಹುಮಾನದ ಮೊತ್ತವನ್ನು ಬಹಿರಂಗಪಡಿಸಲಾಗಿದೆ. ಅದರ ಪ್ರಕಾರ ತಂಡಗಳು ದೊಡ್ಡ ಮೊತ್ತದ ನಗದು ಬಹುಮಾನವನ್ನು ಬಿಸಿಸಿಐ ಕಡೆಯಿಂದ ಪಡೆಯಲಿದೆ.
ಸ್ಪೋರ್ಟ್ಸ್ಸ್ಟಾರ್ ವದರಿ ಪ್ರಕಾರ, ಎಲಿಮಿನೇಟರ್ ಪಂದ್ಯದಲ್ಲಿ ಗೆದ್ದಿರುವ ಮುಂಬೈ ಇಂಡಿಯನ್ಸ್ ತಂಡ 7 ಕೋಟಿ ರೂಪಾಯಿ ಬಹುಮಾನ ಪಡೆದುಕೊಳ್ಳಲಿದೆ. ಸೋತ ಲಕ್ನೋ ಸೂಪರ್ ಜೈಂಟ್ಸ್ ಬಳಗಕ್ಕೆ 6.5 ಕೋಟಿ ರೂಪಾಯಿ ಸಿಗಲಿದೆ. ಚಾಂಪಿಯನ್ ತಂಡಕ್ಕೆ ದೊಡ್ಡ ಮೊತ್ತ ಸಿಗಲಿದ್ದು ಅವರಿಗೆ ಐಪಿಎಲ್ ಆಡಳಿತ ಮಂಡಳಿ 20 ಕೋಟಿ ರೂಪಾಯಿ ನಗದು ಬಹುಮಾನ ನೀಡಲಿದೆ. ಅದೇ ರೀತಿ ಫೈನಲ್ನಲ್ಲಿ ಸೋತು ಎರಡನೇ ಸ್ಥಾನ ಪಡೆಯುವ ತಂಡ 13 ಕೋಟಿ ರೂಪಾಯಿ ಪಡೆದುಕೊಳ್ಳಲಿದೆ.
ಫೈನಲ್ಗೆ ಲಗ್ಗೆ ಇಟ್ಟ ಗುಜರಾತ್
ಶುಕ್ರವಾರ ರಾತ್ರಿ ನಡೆದ ದ್ವಿತೀಯ ಕ್ವಾಲಿಫೈಯರ್ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಗುಜರಾತ್ ಟೈಟನ್ಸ್ ತಂಡ ಮುಂಬೈ ಇಂಡಿಯನ್ಸ್ ವಿರುದ್ಧ 62 ರನ್ಗಳ ಗೆಲುವು ದಾಖಲಿಸಿದೆ. ಈ ಗೆಲುವಿನೊಂದಿಗೆ ಹಾರ್ದಿಕ್ ಪಡೆ ಫೈನಲ್ಗೆ ಲಗ್ಗೆಯಿಟ್ಟಿದೆ. ಮೇ 28 ರಂದು ನಡೆಯುವ ಪ್ರಶಸ್ತಿ ಸಮರದಲ್ಲಿ ಚೆನ್ನೈ ತಂಡದ ಸವಾಲು ಎದುರಿಸಲಿದೆ. ಸೋಲು ಕಂಡ ಮುಂಬೈ ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತು.
ಅಹಮದಾಬಾದ್ನ ನರೇಂದ್ರ ಮೋದಿ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್ಗೆ ಇಳಿಸಲ್ಪಟ್ಟ ಹಾಲಿ ಚಾಂಪಿಯನ್ ಗುಜರಾತ್ ಟೈಟನ್ಸ್ ಶುಭಮನ್ ಗಿಲ್ ಅವರ ಅಮೋಘ ಶತಕದ ನೆರವಿನಿಂದ ನಿಗದಿತ 20 ಓವರ್ಗಳಲ್ಲಿ 3 ವಿಕೆಟ್ ನಷ್ಟಕ್ಕೆ 233 ರನ್ ಗಳಿಸಿತು. ಜವಾಬಿತ್ತ ಮುಂಬೈ ಇಂಡಿಯನ್ಸ್ 18.2 ಓವರ್ಗಳಲ್ಲಿ 171 ರನ್ ಗಳಿಸಿ ಸರ್ವಪತನ ಕಂಡಿತು.
ಪರ್ಪಲ್ ಕ್ಯಾಪ್ಗೆ ತೀವ್ರ ಮಧ್ಯೆ ಪೈಪೋಟಿ
ಈ ಬಾರಿಯ ಐಪಿಎಲ್ನಲ್ಲಿ ಪರ್ಪಲ್ ಕ್ಯಾಪ್ಗಾಗಿ ಗುಜರಾತ್ ಟೈಟನ್ಸ್ ತಂಡದ ಮೊಹಮ್ಮದ್ ಶಮಿ, ರಶೀದ್ ಖಾನ್ ಮತ್ತು ಮೋಹಿತ್ ಶರ್ಮ ಮಧ್ಯೆ ತೀವ್ರ ಪೈಪೋಟಿ ಏರ್ಪಟ್ಟಿದೆ. ರಶೀದ್ ಖಾನ್ ಮತ್ತು ಶಮಿ 16 ಪಂದ್ಯಗಳನ್ನಾಡಿ ಕ್ರಮವಾಗಿ 28 ಮತ್ತು 27 ವಿಕೆಟ್ ಕಬಳಿಸಿದ್ದಾರೆ. ಸದ್ಯದ ಮಟ್ಟಿಗೆ ಪರ್ಪಲ್ ಕ್ಯಾಪ್ ಶಮಿ ಬಳಿ ಇದೆ. ಇದೇ ತಂಡದ ಮೋಹಿತ್ ಶರ್ಮ ಕೂಡ ಈ ರೇಸ್ನಲ್ಲಿದ್ದಾರೆ ಅವರು 13 ಪಮದ್ಯಗಳನ್ನು ಆಡಿ 24 ವಿಕೆಟ್ ಕಬಳಿಸಿದ್ದಾರೆ. ಅದರಲ್ಲೂ ಕಳೆದ ಮುಂಬೈ ವಿರುದ್ಧದ ಕ್ವಾಲಿಫೈಯರ್ ಪಂದ್ಯದಲ್ಲಿ 5 ವಿಕೆಟ್ ಕಿತ್ತು ಮಿಂಚಿದ್ದರು. ಫೈನಲ್ ಪಂದ್ಯದಲ್ಲಿಯೂ ಅವರು ಇದೇ ರೀತಿಯ ಸಾಧನೆ ತೋರಿದರೆ ಶಮಿ ಮತ್ತು ರಶೀದ್ ಖಾನ್ ಹಿಂದಿಕ್ಕಿ ಪರ್ಪಲ್ ಕ್ಯಾಪ್ ಪಡೆಯುವ ಅವಕಾಶವಿದೆ. ಮೂವರು ಆಟಗಾರರಿಗೆ ಪ್ರತಿಸ್ಪರ್ಧಿಯಾಗಿದ್ದ ಪಿಯೂಷ್ ಚಾವ್ಲಾ ಕಳೆದ ಪಂದ್ಯದಲ್ಲಿ ಅವರ ತಂಡ ಮುಂಬೈ ಇಂಡಿಯನ್ಸ್ ಸೋತು ಟೂರ್ನಿಯಿಂದ ಹೊರಬಿದ್ದ ಕಾರಣ ಅವರೂ ಕೂಡ ಈ ರೇಸ್ನಿಂದ ಹೊರಬಿದ್ದಿದ್ದಾರೆ.
ಇದನ್ನೂ ಓದಿ : WTC Final 2023: ವಿಶ್ವ ಟೆಸ್ಟ್ಚಾಂಪಿಯನ್ಷಿಪ್ ಭಾರತ ಗೆದ್ದರೆ ಸಿಗುವ ಬಹುಮಾನ ಎಷ್ಟು? ಇಲ್ಲಿದೆ ಮಾಹಿತಿ
ಗಿಲ್ ಬಳಿ ಆರೆಂಜ್ ಕ್ಯಾಪ್
ಮುಂಬೈ ಇಂಡಿಯನ್ಸ್ ವಿರುದ್ಧದ ದ್ವಿತೀಯ ಕ್ವಾಲಿಫೈಯರ್ ಪಂದ್ಯದಲ್ಲಿ ಅಮೋಘ ಶತಕ ಬಾರಿಸಿ ಮಿಂಚಿದ ಶುಭಮನ್ ಗಿಲ್ ಅವರು ಈ ಬಾರಿಯ ಐಪಿಎಲ್ನ ಆರೆಂಜ್ ಕ್ಯಾಪ್ ಮುಡಿಗೇರಿಸಿಕೊಂಡಿದ್ದಾರೆ. ಈ ಮೂಲಕ 730 ರನ್ ಗಳಿಸಿ ಅಗ್ರಸ್ಥಾನದಲ್ಲಿದ್ದ ಡು ಪ್ಲೆಸಿಸ್ ಇದೀಗ ದ್ವಿತೀಯ ಸ್ಥಾನಕ್ಕೆ ಕುಸಿದಿದ್ದಾರೆ. ಸದ್ಯ ಗಿಲ್ ಅವರು 851 ರನ್ ಬಾರಿಸಿದ್ದಾರೆ. ಆರ್ಸಿಬಿ ತಂಡ ಸೋತು ಹೊರ ಬಿದ್ದ ಕಾರಣ ಡು ಪ್ಲೆಸಿಸ್ಗೆ ಇನ್ನು ಗಿಲ್ ದಾಖಲೆ ಮುರಿಯುವ ಅವಕಾಶವಿಲ್ಲ. ಸದ್ಯ ಈ ರೇಸ್ನಲ್ಲಿರುವ ಆಟಗಾರನೆಂದರೆ ಚೆನ್ನೈ ತಂಡದ ಡೆವೋನ್ ಕಾನ್ವೆ. 15 ಪಂದ್ಯ ಆಡಿರುವ ಅವರು 625 ರನ್ ಬಾರಿಸಿದ್ದಾರೆ. ಫೈನಲ್ ಪಂದ್ಯ ಬಾಕಿ ಇದ್ದರೂ ಅವರಿಗೆ ಈ ಮೊತ್ತವನ್ನು ಗಳಿಸಲು ಅಸಾಧ್ಯ.