ನವ ದೆಹಲಿ: ಮುಂದಿನ ಜುಲೈ-ಆಗಸ್ಟ್‌ನಲ್ಲಿ ನಡೆಯಲಿರುವ 44ನೇ ಚೆಸ್ ಒಲಿಂಪಿಯಾಡ್‌ಗೂ ಮುನ್ನ ಇದೇ ಮೊದಲ ಬಾರಿಗೆ ಒಲಿಂಪಿಕ್ ಮಾದರಿಯ ಟಾರ್ಚ್ ರಿಲೇಯನ್ನು (ಜ್ಯೋತಿ ಯಾತ್ರೆ) ನಡೆಸಲಾಗುತ್ತಿದ್ದು, ಈ ರಿಲೇಯನ್ನು ಇಂದು ಇಂದಿರಾಗಾಂಧಿ ಸ್ಟೇಡಿಯಂನಲ್ಲಿ ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಅವರು ಚೆಸ್ ಪೇಮಿಗಳನ್ನು ಉದ್ದೇಶಿಸಿ ಮಾತನಾಡಿದರು.
ಇನ್ನು ಮುಂದೆ ಪ್ರತಿಷ್ಠಿತ ಚೆಸ್ ಒಲಿಂಪಿಯಾಡ್ ನಡೆಸುವಾಗಲೆಲ್ಲಾ ಈ ರಿಲೇ (ಜ್ಯೋತಿ ಯಾತ್ರೆ) ನಡೆಸಲಾಗುವುದು ಎಂದು ಅಂತಾರಾಷ್ಟ್ರೀಯ ಚೆಸ್ ಸಂಘಟನೆ ಎಫ್‌ಐಡಿಇ ತಿಳಿಸಿದೆ. ಚೆಸ್‌ನ ಉಗಮಸ್ಥಾನವಾದ ಭಾರತದಿಂದ ಟಾರ್ಚ್ ರಿಲೇಯು ಆರಂಭವಾಗಿ ಬೇರೆ ಬೇರೆ ದೇಶಗಳಲ್ಲಿ ಸಂಚರಿಸಿ, ಒಲಿಂಪಿಯಾಡ್ ನಡೆಯುವ ದೇಶವನ್ನು ತಲುಪಲಿದೆ ಎಂದು ಸಂಘಟನೆ ವಿವರಿಸಿದೆ.
ಈ ಬಾರಿ ಚೆಸ್ ಒಲಿಂಪಿಯಾಡ್ ಭಾರತದಲ್ಲಿ ನಡೆಯುತ್ತಿದೆ. ಹೀಗಾಗಿ ಬೇರೆ ದೇಶಕ್ಕೆ ರಿಲೇಯನ್ನು ಕೊಂಡೊಯ್ಯದೇ ನಮ್ಮ ದೇಶದೊಳಗೇ ನಡೆಸಲಾಗುತ್ತಿದೆ. ಮುಂದಿನ ೪೦ ದಿನಗಳಲ್ಲಿ ಜ್ಯೋತಿಯು ನಮ್ಮ ದೇಶದ ೭೫ ನಗರಗಳಲ್ಲಿ ಸಂಚರಿಸಲಿದೆ. ಸ್ಥಳೀಯ ಗ್ರ್ಯಾಂಡ್ ಮಾಸ್ಟರ್ ಜ್ಯೋತಿಯನ್ನು ಸ್ವಾಗತಿಸಲಿದ್ದಾರೆ.
ಎಫ್‌ಐಡಿಇ ಅಧ್ಯಕ್ಷ ಅರ್ಕಡಿ ಡ್ರೊಕೊವಿಚ್ ಜ್ಯೋತಿಯನ್ನು ಪ್ರಧಾನಿ ನರೇಂದ್ರ ಮೋದಿಯವರಿಗೆ ನೀಡಿದರು. ಅವರು ಅದನ್ನು ಗ್ರ್ಯಾಂಡ್ ಮಾಸ್ಟರ್ ವಿಶ್ವನಾಥ್ ಆನಂದ್‌ಗೆ ಹಸ್ತಾಂತರಿಸುವ ಮೂಲಕ ರಿಲೇಗೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು ಈ ಕ್ರೀಡೆಯು ತನ್ನ ಜನ್ಮ ದೇಶದಲ್ಲಿ ಆಯೋಜನೆಗೊಳ್ಳುತ್ತಿರುವುದು ಖುಷಿಯ ವಿಷಯ ಎಂದರು. ಕ್ರೀಡಾಂಗಣ ಕ್ರೀಡಾಪ್ರೇಮಿಗಳಿಂದ ತುಂಬಿ ತುಳುಕುತ್ತಿತ್ತು.
44ನೇ ಚೆಸ್ ಒಲಿಂಪಿಯಾಡ್ ಚೆನ್ನೈನಲ್ಲಿ ಜುಲೈ 28 ರಿಂದ ಆಗಸ್ಟ್ 10 ರವರೆಗೆ ನಡೆಯಲಿದೆ. 18೯ ದೇಶಗಳ ತಂಡಗಳು ಈ ಒಲಿಂಪಿಯಾಡ್‌ನಲ್ಲಿ ಭಾಗವಹಿಸಲಿವೆ. ೩೦ ವರ್ಷಗಳ ನಂತರ ಈ ಕ್ರೀಡಾಕೂಟ ಏಷ್ಯಾದಲ್ಲಿ ನಡೆಯುತ್ತಿದೆ.
ಇದನ್ನೂ ಓದಿ | Javelin Throw: ಚಿನ್ನದ ಹುಡುಗ ನೀರಜ್ ಚೋಪ್ರಾ ಕೊರಳಿಗೆ ಮತ್ತೊಂದು ಚಿನ್ನ