Site icon Vistara News

US Open | ಪೋಲೆಂಡ್‌ನ ಇಗಾ ಸ್ವಿಯಾಟೆಕ್‌ ಮಹಿಳೆಯರ ಸಿಂಗಲ್ಸ್ ಚಾಂಪಿಯನ್‌, ಜೇಬರ್‌ ರನ್ನರ್‌ಅಪ್‌

us open

ನ್ಯೂಯಾರ್ಕ್‌ : ವಿಶ್ವ ನಂಬರ್‌ ಒನ್‌ ಆಟಗಾರ್ತಿ ಪೋಲೆಂಡ್‌ನ ಇಗಾ ಸ್ವಿಯಾಟೆಕ್‌ ಯುಎಸ್‌ ಓಪನ್ ಗ್ರ್ಯಾನ್‌ ಸ್ಲಾಮ್ ಟೂರ್ನಿಯ ಮಹಿಳೆಯರ ಸಿಂಗಲ್ಸ್‌ನ ಚಾಂಪಿಯನ್‌ ಆಗಿ ಹೊರಹೊಮ್ಮಿದ್ದಾರೆ. ಟ್ಯುನೀಷಿಯಾದ ಒನ್ಸ್‌ ಜೇಬರ್‌ ವಿರುದ್ಧ ೬-೨, ೭-೬ (೫) ನೇರ ಸೆಟ್‌ಗಳಿಂದ ಜಯ ಸಾಧಿಸಿದ ಅವರು ಚೊಚ್ಚಲ ಯುಎಸ್ ಓಪನ್‌ ಪ್ರಶಸ್ತಿ ಗೆದ್ದರು. ಇದು ಅವರ ವೃತ್ತಿ ಜೀವನದ ಮೂರನೇ ಗ್ರ್ಯಾನ್‌ ಸ್ಲಾಮ್‌ ಟ್ರೋಫಿ.

ಟ್ಯುನೀಷಿಯಾದ ಆಟಗಾರ್ತಿ ವಿರುದ್ಧ ಮೊದಲ ಸೆಟ್‌ನಲ್ಲಿ ಸಂಪೂರ್ಣ ಪಾರಮ್ಯ ಸಾಧಿಸಿದ ಪೋಲೆಂಡ್‌ನ ೨೧ ವರ್ಷದ ಇಗಾ, ೬-೨ ಅಂಕಗಳಿಂದ ಗೆಲುವು ಸಾಧಿಸಿದರು. ಎರಡನೇ ಸೆಟ್‌ನಲ್ಲಿ ಎದುರಾಳಿಯಿಂದ ಪ್ರತಿರೋಧ ವ್ಯಕ್ತವಾದ ಹೊರತಾಗಿಯೂ ಟೈಬ್ರೇಕರ್‌ ಮೂಲಕ ೭-೬ (೫) ಅಂಕಗಳಿಂದ ಗೆಲುವು ಸಾಧಿಸಿ, ಯುಎಸ್‌ ಓಪನ್‌ ಗೆದ್ದ ಪೋಲೆಂಡ್‌ನ ಮೊದಲ ಆಟಗಾರ್ತಿ ಎಂಬ ಸಾಧನೆ ಮಾಡಿದರು.

“ಪ್ರಶಸ್ತಿಯನ್ನು ಗೆಲ್ಲುವುದೇ ನನ್ನ ಗುರಿಯಾಗಿದೆ. ಅದಕ್ಕಾಗಿ ಸಾಕಷ್ಟು ಏಕಾಗ್ರತೆಯಿಂದ ಆಡಿದೆ. ಆದರೂ ಯುಎಸ್‌ ಓಪನ್‌ ಪ್ರೇಕ್ಷಕರ ಅಬ್ಬರ ಜೋರಾಗಿತ್ತು. ಅವೆಲ್ಲವನ್ನೂ ಮೀರಿ ವಿಜಯ ಸಾಧಿಸಿದೆ,” ಎಂದು ಗೆಲುವಿನ ಸಂತಸವನ್ನು ಹಂಚಿಕೊಂಡರು ಪೋಲೆಂಡ್‌ ೨೧ರ ತರುಣಿ.

ಎರಡು ಬಾರಿ ಆವೆ ಮಣ್ಣಿನಂಗಣದ ಫ್ರೆಂಚ್‌ ಓಪನ್‌ ಗ್ರ್ಯಾನ್‌ ಸ್ಲಾಮ್‌ ಪ್ರಶಸ್ತಿ ಗೆದ್ದಿದ್ದ ಇಗಾ, ಇದೇ ಮೊದಲ ಬಾರಿಗೆ ಹಾರ್ಡ್‌ ಕೋರ್ಟ್‌ನಲ್ಲೂ ಮೊದಲ ಬಾರಿ ಚಾಂಪಿಯನ್‌ಪಟ್ಟ ಅಲಂಕರಿಸಿದರು.

ಈ ಹಿಂದೆ ವಿಂಬಲ್ಡನ್‌ ಫೈನಲ್‌ಗೇರಿ ಈ ಸಾಧನೆ ಮಾಡಿದ್ದ ಟ್ಯುನೀಷಿಯಾದ ಒನ್ಸ್‌ ಜೇಬರ್‌, ಯುಎಸ್‌ ಓಪನ್‌ ಪ್ರಶಸ್ತಿ ಸುತ್ತಿಗೇರಿದ ಮೊದಲ ದಕ್ಷಿಣ ಆಫ್ರಿಕಾದ ಮೊದಲ ಮಹಿಳೆ ಎಂಬ ಸಾಧನೆಯನ್ನು ಮಾಡಿದರು.

ಇದನ್ನೂ ಓದಿ | wimbeldon 2022 | ಪ್ರಶಸ್ತಿ ಮೇಲೆ ಹಲವರ ಕಣ್ಣು; ಜೊಕೊವಿಕ್‌, ಇಗಾ ಅಲ್ದೆ ಇನ್ಯಾರೆಲ್ಲ ಫೇವರಿಟ್‌?

Exit mobile version