Site icon Vistara News

ಸಂಪಾದಕೀಯ: ಕಳಪೆ ಕ್ರಿಕೆಟ್ ಅಂಪೈರಿಂಗ್, ತಂತ್ರಜ್ಞಾನ ಆಧರಿತ ತೀರ್ಪಿನಲ್ಲೂ ವ್ಯತ್ಯಯ ಆಗದಿರಲಿ

Pakistan Review

ಭಾರತದ ಆತಿಥ್ಯದಲ್ಲಿ ನಡೆಯುತ್ತಿರುವ ವಿಶ್ವಕಪ್ ಕ್ರಿಕೆಟ್ ಪಂದ್ಯಗಳು ರಂಗೇರಿಸುತ್ತಿವೆ. ಭಾರತದಾದ್ಯಂತದ ವೈವಿಧ್ಯಮಯ ಪಿಚ್ ಗಳಲ್ಲಿ ನಡೆಯುತ್ತಿರುವ ವಿಶ್ವಕಪ್ ಪಂದ್ಯಗಳಲ್ಲಿ ರನ್ ಗಳ ಸುರಿಮಳೆಯೇ ಸುರಿಯುತ್ತಿದೆ. ಬಹುತೇಕ ಎಲ್ಲ ಪಂದ್ಯಗಳಲ್ಲೂ ಮುನ್ನೂರರ ಸನಿಹ ಸ್ಕೋರ್ ಗಳು ದಾಖಲಾಗುತ್ತಿವೆ. ಶನಿವಾರ ನಡೆದ ಆಸ್ಟ್ರೇಲಿಯಾ ಮತ್ತು ನ್ಯೂಜಿಲ್ಯಾಂಡ್ ನಡುವಿನ ಪಂದ್ಯದಲ್ಲಂತೂ ಒಟ್ಟು 771 ರನ್ ಗಳು ದಾಖಲಾಗಿ ಹೊಸ ದಾಖಲೆ ನಿರ್ಮಿಸಿದೆ. ವಿವಿಧ ತಂಡಗಳ ಬ್ಯಾಟರ್ ಮತ್ತು ಬೌಲರ್ ಗಳು ಹಳೆಯ ದಾಖಲೆಗಳನ್ನು ಮುರಿಯುತ್ತ, ಹೊಸ ಹೊಸ ದಾಖಲೆಗಳನ್ನು ನಿರ್ಮಿಸುತ್ತ ಕ್ರಿಕೆಟ್ ಪ್ರಿಯರಿಗೆ ರಸದೌತಣ ನೀಡುತ್ತಿದ್ದಾರೆ. ಆದರೆ ಕಳಪೆ ಅಂಪೈರಿಂಗ್ ನ ಉಪಟಳ ಈ ವಿಶ್ವಕಪ್ ಗೆ ಕಳಂಕ ತರುತ್ತಿದೆ.

ಇತ್ತೀಚಿನ ವರ್ಷಗಳಲ್ಲಿ ಕ್ರಿಕೆಟ್ ಫೀಲ್ಡ್ ಅಂಪೈರ್ ಗಳ ಮೇಲಿನ ಒತ್ತಡ ಗಣನೀಯವಾಗಿ ಕಡಿಮೆಯಾಗಿದೆ. ಹಿಂದಾದರೆ ಬೌಲರ್ ಗಳ ಹೆಜ್ಜೆ, ಅವರ ಎಸೆಯುವ ಭಂಗಿ, ಚೆಂಡಿನ ಗತಿ, ಎಲ್​ಬಿಡಬ್ಲ್ಯೂ, ಸ್ಟಂಪ್ಡ್, ರನ್ ಔಟ್, ವೈಡ್, ನೋ ಬಾಲ್ ಇತ್ಯಾದಿಗಳನ್ನು ಫೀಲ್ಡ್ ಅಂಪೈರ್ ಗಳಿಬ್ಬರು ಕಣ್ಣಲ್ಲಿ ಕಣ್ಣಿಟ್ಟು ನೋಡಬೇಕಿತ್ತು. ಆದರೆ ಈಗ ಟಿವಿ ಅಂಪೈರ್, ಥರ್ಡ್ ಅಂಪೈರ್ ಗಳು ಫೀಲ್ಡ್ ಅಂಪೈರ್ ಗಳ ಮೇಲಿನ ಒತ್ತಡ ಕಡಿಮೆ ಮಾಡಿದ್ದಾರೆ. ಐಸಿಸಿ ಜಾರಿಗೆ ತಂದಿರುವ ಡಿ ಆರ್ ಎಸ್ ಸಿಸ್ಟಮ್ ತೀರ್ಪಿನ ನಿಖರತೆ ಹೆಚ್ಚುವಂತೆ ಮಾಡಿದೆ. ಡಿಆರ್​​ಎಸ್ ವ್ಯವಸ್ಥೆ ಜಾರಿಯಾಗುವ ಮೊದಲು ಅಂಪೈರ್ ಗಳ ತಪ್ಪು ನಿರ್ಧಾರದಿಂದಾಗಿ ಬ್ಯಾಟರ್ ಮತ್ತು ಬೌಲರ್ ಗಳಿಗೆ ಅನ್ಯಾಯ ಆಗುತ್ತಿತ್ತು. ಡಿ ಆರ್ ಎಸ್ ವ್ಯವಸ್ಥೆ ಸಾಕಷ್ಟು ಹಿಂದೆಯೇ ಜಾರಿಗೆ ಬಂದಿದ್ದರೆ ಸಚಿನ್ ತೆಂಡೂಲ್ಕರ್ ಇನ್ನಷ್ಟು ಶತಕದ ಸಾಧನೆ ಮಾಡುತ್ತಿದ್ದರು ಎಂಬ ಮಾತಿದೆ. ಏಕೆಂದರೆ, ಭುಜಕ್ಕೆ, ಎದೆಗೆ ಬಾಲ್ ತಾಗಿದಾಗಲೂ ಆಗಿನ ಅಂಪೈರ್ ಗಳು ಎಲ್ ಬಿ ಡಬ್ಲ್ಯೂ ಎಂದು ತೀರ್ಪು ನೀಡಿ ಸಚಿನ್ ತೆಂಡೂಲ್ಕರ್ ಅವರನ್ನು ಪೆವಿಲಿಯನ್ ಗೆ ಅಟ್ಟುತ್ತಿದ್ದರು!

ಇಂಥದ್ದೊಂದು ವಿಡಿಯೊ ಇಲ್ಲಿದೆ

ಆದರೆ ಕ್ರಿಕೆಟ್ ತೀರ್ಪಿಗೆ ತಂತ್ರಜ್ಞಾನದ ಮೊರೆ ಹೋಗುತ್ತಿದ್ದಂತೆ ಫೀಲ್ಡ್ ಅಂಪೈರ್ ಗಳು ಕ್ರಮೇಣ ಸೋಮಾರಿಗಳಾಗುತ್ತಿದ್ದಾರೆ! ಬ್ಯಾಟ್ಸ್ ಮನ್ ಕ್ರೀಸಿನೊಳಗೆ ಬಂದಿರುವುದು, ಬೌಲರ್ ಕ್ರೀಸಿನೊಳಗಿಂದಲೇ ಚೆಂಡು ಎಸೆದಿರುವುದು ಅತ್ಯಂತ ಸ್ಪಷ್ಟವಾಗಿ ಕಂಡರೂ ಥರ್ಡ್ ಅಂಪೈರ್ ಮೊರೆ ಹೋಗುತ್ತಿದ್ದಾರೆ! ಇನ್ನೊಂದೆಡೆ ಟಿವಿ ಅಂಪೈರ್ ಗಳು, ಮತ್ತೆ ಮತ್ತೆ ರೀಪ್ಲೆ ಮಾಡಿ ನೋಡಿದ ಮೇಲೂ ತಪ್ಪು ತೀರ್ಪುಗಳನ್ನು ನೀಡುತ್ತಿದ್ದಾರೆ. ಪ್ರತಿ ಪಂದ್ಯದಲ್ಲೂ ಕನಿಷ್ಠ ಎರಡು ಮೂರು ತಪ್ಪು ತೀರ್ಪುಗಳು ದಾಖಲಾಗಿ ವಿವಾದ ಎಬ್ಬಿಸುತ್ತಿವೆ. ಪ್ರತಿ ಪಂದ್ಯದಲ್ಲಿ ಉಭಯ ತಂಡಗಳಿಗೆ ನಾಲ್ಕು ಬಾರಿ ಮಾತ್ರ ಮೇಲ್ಮನವಿಗೆ ಅವಕಾಶ ಇರುವುದರಿಂದ, ಈ ಅವಕಾಶ ಮುಗಿದ ಬಳಿಕ ಬರುವ ತಪ್ಪು ತೀರ್ಪುಗಳನ್ನು ಆಟಗಾರರು ಅಸಹಾಯಕತೆಯಿಂದ ಒಪ್ಪಿಕೊಂಡು ಹೋಗಬೇಕಾಗುತ್ತದೆ.

ಶುಕ್ರವಾರ ನಡೆದ ಪಾಕಿಸ್ತಾನ-ದ. ಆಫ್ರಿಕಾ ಪಂದ್ಯದಲ್ಲೂ ಇಂಥ ಅವಾಂತರಗಳಾಗಿವೆ. ದಕ್ಷಿಣ ಆಫ್ರಿಕಾ ತಂಡ ಚೇಸಿಂಗ್​ ವೇಳೆ 8 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿತ್ತು. 46ನೇ ಓವರ್‌ನಲ್ಲಿ ಹ್ಯಾರಿಸ್ ರವೂಫ್ ಅವರು ಎನ್​ಗಿಡಿ ವಿಕೆಟ್​ ಕಿತ್ತು. ಪಂದ್ಯವನ್ನು ಮತ್ತಷ್ಟು ಪೈಪೋಟಿಗೆ ತಂದರು. ಅಂತಿಮ ವಿಕೆಟ್​ಗೆ ಆಡಲಿಳಿದ ತಬ್ರೇಜ್ ಶಮ್ಸಿ ಅವರು ರವೂಫ್​ ಎಸೆತದಲ್ಲಿ ಎಲ್‌ಬಿಡಬ್ಲ್ಯೂ ಆದರು. ಆದರೆ ಫೀಲ್ಡ್​ ಅಂಪೈರ್​ ಇದನ್ನು ಔಟ್​ ನೀಡಲಿಲ್ಲ. ಪಾಕ್‌ ಆಟಗಾರರು ರಿವ್ಯೂ ಪಡೆದರು. ಮೂರನೇ ಅಂಪೈರ್‌ ಇದನ್ನು ಪರೀಕ್ಷಿಸುವಾಗ ಪಿಚಿಂಗ್‌ ಔಟ್‌ಸೈಡ್‌ ಇದ್ದರೂ ಚೆಂಡು ವಿಕೆಟ್‌ಗೆ ಬಡಿದಿರುವ ಕಂಡು ಬಂತು. ಆದರೆ ಅಂಪೈರ್ಸ್ ಕಾಲ್ ಆದ ಕಾರಣ ಇದನ್ನು ನಾಟ್‌ಔಟ್‌ ಎಂದು ಪರಿಗಣಿಸಲಾಯಿತು. ಒಂದೊಮ್ಮೆ ಅಂಪೈರ್‌ ಮೊದಲೆ ಔಟ್‌ ನೀಡುತ್ತಿದ್ದರೆ, ದಕ್ಷಿಣ ಆಫ್ರಿಕಾ ತಂಡ ರಿವ್ಯೂ ಪಡೆದರೂ ಪ್ರಯೋಜನವಾಗುತ್ತಿರಲಿಲ್ಲ. ತಂಡ ಆಲೌಟ್‌ ಆಗಿ ಪಾಕಿಸ್ತಾನ ಗೆಲ್ಲುತ್ತಿತ್ತು.

ಇದನ್ನೂ ಓದಿ : ವಿಸ್ತಾರ ಸಂಪಾದಕೀಯ: ಜನರ ಸಂಕಟ ಆಲಿಸದೆ ದೌಲತ್ತು ತೋರಿಸುವ ಅಧಿಕಾರಿಗಳನ್ನು ಮನೆಗೆ ಕಳಿಸಿ

ಪಂದ್ಯದಲ್ಲಿ ಇದೊಂದೆ ತಪ್ಪು ನಡೆದಿರುವುದಲ್ಲ, ಹಲವು ತಪ್ಪುಗಳು ನಡೆದಿವೆ. ಶಮ್ಸಿ ವಿಕೆಟ್ ಘಟನೆಗೂ ಮುನ್ನ ದಕ್ಷಿಣ ಆಫ್ರಿಕಾದ ಬ್ಯಾಟ್ಸ್‌ಮನ್ ರಾಸ್ಸಿ ವ್ಯಾನ್ ಡರ್ ಡಸ್ಸೆನ್ ಅವರು ಕೂಡ ಅಂಪೈರ್ ತಪ್ಪು ತೀರ್ಪಿನಿಂದ ವಿಕೆಟ್ ಒಪ್ಪಿಸಬೇಕಾಯಿತು. ಇಲ್ಲಿ ಡಿ ಆರ್ ಎಸ್ ಬಾಲ್ ಟ್ರಾಕಿಂಗ್ ವಿಡಿಯೊ ಒಮ್ಮೆ ನಾಟೌಟ್ ಎಂದೂ, ಇನ್ನೊಮ್ಮೆ ಔಟ್ ಎಂದೂ ತೋರಿಸಿತ್ತು! ನ್ಯೂಜಿಲ್ಯಾಂಡ್-ನೆದರ್ ಲ್ಯಾಂಡ್ ಪಂದ್ಯದಲ್ಲಿ ನೆದರ್ ಲ್ಯಾಂಡ್ ಬ್ಯಾಟರ್ ಸ್ಟಂಪ್ಡ್ ಔಟ್ ಎಂದು ಅಂಪೈರ್ ತೀರ್ಪು ನೀಡಿದರು. ಬ್ಯಾಟರ್ ಇನ್ನೇನು ಬೌಂಡರಿ ಗೆರೆ ದಾಟಿ ಪೆವಿಲಿಯನ್ ಗೆ ಹೋಗಬೇಕು ಎನ್ನುವಷ್ಟರಲ್ಲಿ ನಾಟೌಟ್ ತೀರ್ಪು ಬಂತು! ಹೀಗೆ ಅಂಪೈರಿಂಗ್ ಅವಾಂತರಗಳು ನಡೆಯುತ್ತಲೇ ಇವೆ.

ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ ಐಸಿಸಿ ಇದನ್ನು ಗಂಭೀರವಾಗಿ ಪರಿಗಣಿಸಬೇಕು. ಕಳಪೆ ಅಂಪೈರಿಂಗ್ ನಿಂದ ಆಟಗಾರರಿಗೆ ಅನ್ಯಾಯ ಆಗುವುದನ್ನು, ಅಂತಿಮ ಫಲಿತಾಂಶವೇ ಏರುಪೇರಾಗುವುದನ್ನು ತಡೆಯಬೇಕು. ಕೇವಲ ಟಿವಿ ಅಂಪೈರಿಂಗ್ ಅನ್ನೇ ನೆಚ್ಚಿಕೊಂಡು ಸೋಮಾರಿತನ ತೋರುವ ಫೀಲ್ಡ್ ಅಂಪೈರ್ ಗಳ ಮೇಲೆ ಶಿಸ್ತು ಕ್ರಮ ಕೈಗೊಳ್ಳಬೇಕು. ಎಲ್ಲಕ್ಕಿಂತ ಮುಖ್ಯವಾಗಿ, ಆಧುನಿಕ ತಂತ್ರಜ್ಞಾನವನ್ನು ಬಳಸಿಕೊಳ್ಳುತ್ತಿರುವ ಡಿ ಆರ್ ಎಸ್ ತೀರ್ಪಿನಲ್ಲೂ ವ್ಯತ್ಯಯವಾಗುವುದು ಅವಮಾನಕಾರಿ. ಕ್ರಿಕೆಟ್ ಪಂದ್ಯದಲ್ಲಿನ ತೀರ್ಪು ಮತ್ತಷ್ಟು ನಿಖರತೆಯಿಂದ ಕೂಡಿರಲಿ.

Exit mobile version