ದೋಹಾ: ಕತಾರ್ನಲ್ಲಿ ನಡೆಯುತ್ತಿರುವ ಫಿಫಾ ವಿಶ್ವ ಕಪ್ನಲ್ಲಿ (FIFA World Cup) ಅಚ್ಚರಿಯ ಫಲಿತಾಂಶಗಳ ಸರಣಿ ಮುಂದುವರಿದಿದೆ. ಶುಕ್ರವಾರ ವಿಶ್ವದ ನಂಬರ್ ಒನ್ ತಂಡ ಬ್ರೆಜಿಲ್ ತಂಡವನ್ನು ಕ್ರೊಯೇಷ್ಯಾ ತಂಡ ಮಣಿಸಿ ಉಪಾಂತ್ಯಕ್ಕೆ ಲಗ್ಗೆ ಇಟ್ಟಿದ್ದರೆ, ಶನಿವಾರ ಮತ್ತೊಂದು ಬಲಿಷ್ಠ ತಂಡ ಪೋರ್ಚುಗಲ್ಗೆ ಮೊರಾಕ್ಕೊ ತಂಡ ಆಘಾತ ನೀಡಿ ಸೆಮಿ ಫೈನಲ್ಸ್ಗೆ ಪ್ರವೇಶ ಪಡೆದುಕೊಂಡಿದೆ.
ಇಲ್ಲಿನ ತುಮಾಮಾ ಸ್ಟೇಡಿಯಮ್ನಲ್ಲಿ ಶನಿವಾರ ಸಂಜೆ ನಡೆದ ಜಿದ್ದಾಜಿದ್ದಿನ ಸ್ಪರ್ಧೆಯಲ್ಲಿ ಮೊರಾಕ್ಕೊ ತಂಡ 1-0 ಗೋಲ್ಗಳಿಂದ ಜಯ ಸಾಧಿಸಿತು. ಈ ಮೂಲಕ ಮೊರಾಕ್ಕೊ ಬಳಗ ಫಿಫಾ ವಿಶ್ವ ಕಪ್ನ ಸೆಮಿ ಫೈನಲ್ ಹಂತಕ್ಕೇರಿದ ಮೊದಲ ಆಫ್ರಿಕನ್ ದೇಶ ಎಂಬ ದಾಖಲೆ ಬರೆಯಿತು.
ಯೂಸುಫ್ ಎನ್ ನೆಸ್ರೀಸ್ 42ನೇ ನಿಮಿಷದಲ್ಲಿ ಬಾರಿಸಿದ ಗೋಲ್, ಉತ್ತರ ಆಫ್ರಿಕಾದ ದೇಶಕ್ಕೆ ವಿಶ್ವ ಕಪ್ನ ಉಪಾಂತ್ಯಕ್ಕೆ ಪ್ರವೇಶಿಸಲು ಸಾಕಾಯಿತು. ಪೋರ್ಚುಗಲ್ ತಂಡ ಆರಂಭದಲ್ಲಿ ತನ್ನ ಸ್ಟಾರ್ ಆಟಗಾರ ರೊನಾಲ್ಡೊ ಅವರನ್ನು ಬೆಂಚು ಕಾಯುವಂತೆ ಮಾಡಿತು. ಆದರೆ, ಪ್ರಥಮಾರ್ಧ ಮುಕ್ತಾಯದ ವೇಳೆಗೆ 0-1 ಹಿನ್ನಡೆ ಹೊಂದಿದ ಕಾರಣ ಅವರನ್ನು ಕಣಕ್ಕೆ ಇಳಿಸಿತು. ಆದರೆ, ಮೊರಾಕ್ಕೊ ತಂಡದ ಆಟಗಾರರು ರೊನಾಲ್ಡೊ ಎಂಟ್ರಿಯಿಂದ ಎದುರಾಳಿ ತಂಡಕ್ಕೆ ಲಾಭವಾಗದಂತೆ ನೋಡಿಕೊಂಡರು.
ಮೊರಾಕ್ಕೊ ತಂಡ ಮುಂದಿನ ಸುತ್ತಿನಲ್ಲಿ ಇಂಗ್ಲೆಂಡ್ ಹಾಗೂ ಫ್ರಾನ್ಸ್ ತಂಡಗಳ ನಡುವಿನ ಹಣಾಹಣಿಯ ವಿಜೇತರನ್ನು ಎದುರಿಸಲಿದೆ.
ಮೊರಾಕ್ಕೊ ತಂಡದ ಜಯವನ್ನು ಆಫ್ರಿಕಾ ಮತ್ತು ಅರೇಬಿಕ್ ಮಾತನಾಡುವ ಮಧ್ಯಪ್ರಾಚ್ಯದ ದೇಶಗಳಲ್ಲಿ ಜೋರಾಗಿ ಸಂಭ್ರಮಿಸಲಾಯಿತು. ಮೊರಾಕ್ಕೊ ತಂಡ ಹಾಲಿ ಆವೃತ್ತಿಯ ವಿಶ್ವ ಕಪ್ನಲ್ಲಿ ಬೆಲ್ಜಿಯಮ್ ಹಾಗೂ ಸ್ಪೇನ್ ತಂಡವನ್ನು ಮಣಿಸಿ ಮೆಚ್ಚುಗೆ ಪಡೆದಿತ್ತು. ಆದರೆ, ಪೋರ್ಚುಗಲ್ ವಿರುದ್ಧದ ಗೆಲುವು ಅವರಿಗೆ ಅವಿಸ್ಮರಣೀಯ ಎನಿಸಲಿದೆ.
ಇದನ್ನೂ ಓದಿ | Fifa World Cup| ಆಪರೇಷನ್ ಥಿಯೇಟರ್‌ನಲ್ಲೇ ಫಿಫಾ ವಿಶ್ವ ಕಪ್ ಪಂದ್ಯ ವೀಕ್ಷಿಸಿದ ರೋಗಿ!