Site icon Vistara News

IPL 2023 : ಪಂಜಾಬ್​ ಕಿಂಗ್ಸ್ ತಂಡಕ್ಕೆ ಏಳು ರನ್​ ಜಯ, ರಾಣಾ ಬಳಗದ ಜಯಕ್ಕೆ ಅಡ್ಡಿಯಾದ ಮಳೆ

Punjab Kings

Punjab Kings

ಮೊಹಾಲಿ: ಮಳೆ ಪೀಡಿತ ಪಂದ್ಯದಲ್ಲಿ ಬೌಲಿಂಗ್​ ಮತ್ತು ಬ್ಯಾಟಿಂಗ್​ನಲ್ಲಿ ಸಂಘಟಿತ ಪ್ರದರ್ಶನ ತೋರಿದ ಪಂಜಾಬ್​ ಕಿಂಗ್ಸ್​ ತಂಡ ಕೋಲ್ಕೊತಾ ನೈಟ್​ ರೈಡರ್ಸ್​ ವಿರುದ್ಧ ಡಕ್ವರ್ತ್​ ಲೂಯಿಸ್​ ನಿಯಮದ ಪ್ರಕಾರ 7 ರನ್​ಗಳ ಗೆಲುವು ದಾಖಲಿಸಿದೆ. ಈ ಮೂಲಕ 16ನೇ ಆವೃತ್ತಿಯ (IPL 2023) ಐಪಿಎಲ್​ನಲ್ಲಿ ಗೆಲುವಿನ ಶುಭಾರಂಭ ಕಂಡಿದೆ. ಇಲ್ಲಿನ ಪಂಜಾಬ್​ ಕ್ರಿಕೆಟ್​ ಅಸೋಸಿಯೇಷ್​ ಕ್ರಿಕೆಟ್​ ಸ್ಟೇಡಿಯಮ್​ನಲ್ಲಿ ಶನಿವಾರ ನಡೆದ ಐಪಿಎಲ್​ನ ಡಬಲ್​ ಹೆಡರ್​ನ ಮೊದಲ ಪಂದ್ಯದಲ್ಲಿ ಟಾಸ್​ ಸೋತು ಮೊದಲು ಬ್ಯಾಟಿಂಗ್​ ನಡೆಸಿದ ಪಂಜಾಬ್​ ಕಿಂಗ್ಸ್​ ನಿಗದಿತ 20 ಓವರ್​ಗಳಲ್ಲಿ 5 ವಿಕೆಟ್​ ನಷ್ಟಕ್ಕೆ 191 ರನ್​ ಗಳಿಸಿತು. ರನ್​ ಚೇಸ್ ಮಾಡಿದ ಕೋಲ್ಕೊತಾ ತಂಡ 16 ಓವರ್​ಗಳಲ್ಲಿ 7 ವಿಕೆಟ್​ ಕಳೆದುಕೊಂಡು 146 ರನ್​ ಬಾರಿಸಿತ್ತು. ಈ ವೇಳೆ ಆರಂಭವಾದ ಮಳೆ ನಿರಂತರವಾಗಿ ಸುರಿಯಿತು. ನಿಗದಿತ ಅವಧಿಯಲ್ಲಿ ಪಂದ್ಯ ಮುಕ್ತಾಯಗೊಳ್ಳದ ಕಾರಣ ಡಕ್ವರ್ತ್​ ಲೂಯಿಸ್​ ನಿಯಮದ ಪ್ರಕಾರ ಪಂಜಾಬ್​ ತಂಡಕ್ಕೆ ಗೆಲುವು ದೊರಕಿತು.

ಗುರಿ ಬೆನ್ನಟ್ಟಿದ ಕೆಕೆಆರ್ ತಂಡಕ್ಕೆ ಎಡಗೈ ವೇಗಿ ಅರ್ಶ್​ದೀಪ್​ ಸಿಂಗ್​​ ಅವರು ಮನ್​​ದೀಪ್ ಸಿಂಗ್​(2) ಮತ್ತು ಅಂಕುಲ್​ ರಾಯ್​(4) ವಿಕೆಟ್​ ಕಿತ್ತು ಆರಂಭಿಕ ಆಘಾತ ನೀಡಿದರು. ಇದರ ಬೆನ್ನಲ್ಲೇ ರೆಹಮಾನುಲ್ಲ ಗುರ್ಬಜ್‌ ವಿಕೆಟ್​ ಕೂಡ ಪತನಗೊಂಡಿತು. ತಂಡದ ಮೊತ್ತ 30 ರನ್​ ದಾಟುವ ಮುನ್ನವೇ ಪ್ರಮುಖ ಮೂರು ವಿಕೆಟ್​ ಕಳೆದುಕೊಂಡಿತು.

ಆರಂಭಿಕ ಆಘಾತಕ್ಕೆ ಸಿಲುಕಿದ ತಂಡಕ್ಕೆ ವೆಂಕಟೇಶ್​ ಅಯ್ಯರ್​ ಮತ್ತು ನಾಯಕ ನಿತೀಶ್​ ರಾಣಾ ರಕ್ಷಣಾತ್ಮಕ ಆಟವಾಡುವ ಮೂಲಕ ಆಸರೆಯಾದರು. ಆದರೆ ಈ ಜೋಡಿಯೂ ದೊಡ್ಡ ಮೊತ್ತದ ಜತೆಯಾಟ ನಡೆಸುವಲ್ಲಿ ವಿಫಲವಾಯಿತು. ಇದರಲ್ಲಿ ನಿತೀಶ್​ ರಾಣಾ ಅವರ ಬ್ಯಾಟಿಂಗ್​ ಕೊಂಚ ಬಿರುಸಿನಿಂದ ಕೂಡಿತ್ತು. 17 ಎಸೆತಗಳಲ್ಲಿ 24 ರನ್​ ಬಾರಿಸಿದರು. ಸ್ಫೋಟಕ ಬ್ಯಾಟಿಂಗ್​ಗೆ ಹೆಸರುವಾಸಿಯಾದ ವೆಂಕಟೇಶ್​ ಅಯ್ಯರ್​ ಈ ಪಂದ್ಯದಲ್ಲಿ ಎಸೆತವೊಂದಕ್ಕೆ ರನ್​ ಗಳಿಸಿದರು. ವಿಂಡೀಸ್​ ಕ್ರಿಕೆಟಿಗ ಆ್ಯಂಡ್ರೆ ರಸೆಲ್​ ಒಂದು ಹಂತದಲ್ಲಿ ಸಿಕ್ಸರ್​ ಮತ್ತು ಬೌಂಡರಿ ಬಾರಿಸಿ ಡೇಂಜರಸ್​ ಆಗುವ ಸೂಚನೆ ನೀಡಿದರು. ಆದರೆ ಸ್ಯಾಮ್​ ಕರನ್​ ಅವರ ಓವರ್​ನಲ್ಲಿ ಸಿಕ್ಸರ್​ ಬಾರಿಸುವ ಪ್ರಯತ್ನದಲ್ಲಿ ಸಿಕಂದರ್​ ರಾಜಾ ಅವರಿಗೆ ಕ್ಯಾಚ್​ ನೀಡಿ ವಿಕೆಟ್​ ಕೈಚೆಲ್ಲಿದರು. ರಸೆಲ್​ 19 ಎಸೆತದಲ್ಲಿ 35 ರನ್​ ಬಾರಿಸಿದರು.

ಅರ್ಧಶತಕ ಬಾರಿಸಿದ ಭಾನುಕ ರಾಜಪಕ್ಷ

ಇದಕ್ಕೂ ಮುನ್ನ ಬ್ಯಾಟಿಂಗ್​ ನಡೆಸಿದ​ ಪಂಜಾಬ್​ ಪರ ಶ್ರೀಲಂಕಾ ಕ್ರಿಕೆಟಿಗ ಭಾನುಕ ರಾಜಪಕ್ಷ ಅವರು ಅರ್ಧಶತಕ ಬಾರಿಸಿ ಮಿಂಚಿದರು. 32 ಎಸೆತ ಎದುರಿಸಿದ ಅವರು 5 ಬೌಂಡರಿ ಮತ್ತು 2 ಸಿಕ್ಸರ್​ ನೆರವಿನಿಂದ 50 ರನ್​ಗಳಿಸಿ ಉಮೇಶ್​ ಯಾದವ್​ಗೆ ವಿಕೆಟ್​ ಒಪ್ಪಿಸಿದರು.

ಇನಿಂಗ್ಸ್​ ಆರಂಭಿಸಿದ ನಾಯಕ ಶಿಖರ್​ ಧವನ್​ ಮತ್ತು ಪ್ರಭಾಸಿಮ್ರಾನ್ ಸಿಂಗ್ ತಂಡಕ್ಕೆ ಉತ್ತಮ ಆರಂಭ ನೀಡಿದರು. ಆದರೆ ಈ ಜೋಡಿ ಹೆಚ್ಚು ಕಾಲ ಕ್ರೀಸ್​ನಲ್ಲಿ ಇರಲು ಟಿಮ್​ ಸೌಥಿ ಬಿಡಲಿಲ್ಲ 23 ರನ್​ ಗಳಿಸಿದ್ದ ಪ್ರಭಾಸಿಮ್ರಾನ್ ಸಿಂಗ್ ವಿಕೆಟ್​ ಕಿತ್ತು ಕೆಕೆಆರ್​ಗೆ ಮೊದಲ ಯಶಸ್ಸು ತಂದು ಕೊಟ್ಟರು. ವಿಶೇಷವೆಂದರೆ ತಂಡದ ಮೊದಲ ವಿಕೆಟ್​ನ 23ರನ್ ಪ್ರಭಾಸಿಮ್ರಾನ್ ಸಿಂಗ್ ಅವರೇ ಬಾರಿಸಿದರು. ಅಲ್ಲಿಯ ವರೆಗೆ ಧವನ್​ ಖಾತೆ ತೆರೆದಿರಲಿಲ್ಲ.​ ಈ ವಿಕೆಟ್​ ಪತನ ಬಳಿಕ ಆಡಲಿಳಿದ ಭಾನುಕ ರಾಜಪಕ್ಷ ಆರಂಭದಿಂದಲೇ ಬಿರುಸಿನ ಬ್ಯಾಟಿಂಗ್​ ನಡೆಸಿದರು. ಶಿಖರ್​ ಧವನ್​ ಜತೆಗೂಡಿ ಉತ್ತಮ ಇನಿಂಗ್ಸ್​ ಕಟ್ಟಿದ ಭಾನುಕ ರಾಜಪಕ್ಷ ದ್ವಿತೀಯ ವಿಕೆಟ್​ಗೆ 86 ರನ್​ಗಳ ಜತೆಯಾಟ ನಡೆಸಿದರು.

ಶಿಖರ್​ ಧವನ್​ 29 ಎಸೆತ ಎದುರಿಸಿ 40 ರನ್​ ಬಾರಿಸಿದರು. ಜಿತೇಶ್​ ಶರ್ಮಾ 21 ರನ್​ಗೆ ಆಟ ಮುಗಿಸಿದರು. ಧವನ್​ ಮತ್ತು ರಾಜಪಕ್ಷ ವಿಕೆಟ್​ ಪತನದ ಬಳಿಕ ಒಂದು ಹಂತದಲ್ಲಿ ಪಂಜಾಬ್​ ತಂಡದ ಸ್ಕೋರ್​ ವೇಗ ಕುಂಟಿತಗೊಂಡಿತು. ಆದರೆ ಅಂತಿಮ ಕ್ಷಣದಲ್ಲಿ ಬಿಸರುಸಿನ ಬ್ಯಾಟ್​ ಬೀಸಿದ ಇಂಗ್ಲೆಂಡ್​ ಟಿ20 ವಿಶ್ವ ಕಪ್​ ತಂಡದ ಹೀರೊ ಸ್ಯಾಮ್​ ಕರನ್​ ಮತ್ತು ಜಿಂಬಾಬ್ವೆ ತಂಡದ ಅನುಭವಿ ಆಟಗಾರ ಸಿಕಂದರ್ ರಾಜಾ ತಂಡದ​ ಮೊತ್ತವನ್ನು ಹಿಗ್ಗಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು. ಸಿಕಂದರ್​ ರಾಜಾ ತಲಾ ಒಂದು ಬೌಂಡರಿ ಮತ್ತು ಸಿಕ್ಸರ್​ ಬಾರಿಸಿ 19 ರನ್​ ಬಾರಿಸಿದರು. ಇದು ಅವರ ಐಪಿಎಲ್​ ಪದಾರ್ಪಣ ಪಂದ್ಯವಾಗಿದೆ. ಸ್ಯಾಮ್​ ಕರನ್​ 17 ಎಸೆತ ಎದುರಿಸಿ 26 ರನ್​ ಗಳಿಸಿ ಅಜೇಯರಾಗಿ ಉಳಿದರು.

ಇದನ್ನೂ ಓದಿ IPL 2023: ಧೋನಿ ಗಾಯದ ಬಗ್ಗೆ ಮಾಹಿತಿ ನೀಡಿದ ತಂಡದ ಕೋಚ್​ ಸ್ಟೀಫ‌ನ್‌ ಫ್ಲೆಮಿಂಗ್‌

ಕೆಕೆಆರ್​ ಪರ ಉಮೇಶ್​ ಯಾದವ್​ ಒಂದು ವಿಕೆಟ್​ ಕಿತ್ತರೂ 27 ರನ್​ ಬಿಟ್ಟುಕೊಟ್ಟರು. ವರುಣ್​ ಚಕ್ರವರ್ತಿ ಮತ್ತು ಸುನೀಲ್ ನಾರಾಯಣ್​ ತಲಾ ಒಂದು ವಿಕೆಟ್​ ಪಡೆದರು. ಟಿಮ್ ಸೌಥಿ 2 ವಿಕೆಟ್​ ಕಲೆಹಾಕಿದರು. ಆದರೆ 54 ರನ್​ ಬಿಟ್ಟುಕೊಟ್ಟು ದುಬಾರಿಯಾಗಿ ಕಂಡುಬಂದರು.

ಸಂಕ್ಷಿಪ್ತ ಸ್ಕೋರ್​: ಪಂಜಾಬ್​ ಕಿಂಗ್ಸ್​: 20 ಓವರ್​ಗಳಲ್ಲಿ 5 ವಿಕೆಟ್​ಗೆ 191 (ಶಿಖರ್ ಧವನ್ 40, ಭಾನುಕ ರಾಜಪ್ಷ 50, ಸ್ಯಾಮ್​ ಕರನ್ ಅಜೇಯ 26, ಟಿಮ್​ ಸೌಥಿ 54ಕ್ಕೆ 2, ಉಮೇಶ್​ ಯಾದವ್​ 27ಕ್ಕೆ 1)​

Exit mobile version