ಧರ್ಮಶಾಲಾ : ಕೊನೇ 12 ಎಸೆತಕ್ಕೆ 46 ಹಾಗೂ ಕೊನೇ ನಾಲ್ಕು ಓವರ್ಗಳಿಗೆ 70 ರನ್ ಬಾರಿಸುವ ಮೂಲಕ ಅಬ್ಬರಿಸಿದ ಪಂಜಾಬ್ ಕಿಂಗ್ಸ್ ತಂಡ ಐಪಿಎಲ್ 16ನೇ ಆವೃತ್ತಿಯ 66ನೇ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ತಂಡಕ್ಕೆ 188 ರನ್ಗಳ ಗೆಲುವಿನ ಗುರಿಯನ್ನೊಡ್ಡಿದೆ. ಸ್ಯಾಮ್ ಕರ್ರನ್ 49 ರನ್ ಬಾರಿಸಿದರೆ, ಜಿತೇಶ್ ಶರ್ಮಾ 44 ರನ್ಗಳ ಕೊಡುಗೆ ಕೊಟ್ಟರು. ಶಾರುಖ್ ಖಾನ್ 42 ರನ್ ಬಾರಿಸಿದರು. ಈ ಮೂರು ಬ್ಯಾಟರ್ಗಳ ಬಲದಿಂದ ತಂಡಕ್ಕೆ ಸ್ಪರ್ಧಾತ್ಮಕ ಮೊತ್ತವನ್ನು ಪೇರಿಸಲು ಸಾಧ್ಯವಾಯಿತು.
ಇಲ್ಲಿನ ಹಿಮಾಚಲ ಪ್ರದೇಶ ಕ್ರಿಕೆಟ್ ಅಸೋಸಿಯೇಷನ್ ಸ್ಟೇಡಿಯಮ್ನಲ್ಲಿ ಆಯೋಜನೆಗೊಂಡಿರುವ ಪಂದ್ಯದಲ್ಲಿ ರಾಜಸ್ಥಾನ್ ತಂಡದ ನಾಯಕ ಸಂಜು ಸ್ಯಾಮ್ಸನ್ ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡರು. ಅಂತೆಯೇ ಮೊದಲು ಬ್ಯಾಟ್ ಮಾಡಿದ ಪಂಜಾಬ್ ಕಿಂಗ್ಸ್ ತಂಡ ನಿಗದಿತ 20 ಓವರ್ಗಳಲ್ಲಿ 5 ವಿಕೆಟ್ ನಷ್ಟ ಮಾಡಿಕೊಂಡು 187 ರನ್ ಬಾರಿಸಿತು.
ಬ್ಯಾಟಿಂಗ್ ಆರಂಭಿಸಿದ ಪಂಜಾಬ್ ತಂಡ ಮತ್ತೊಂದು ಬಾರಿ ಕಳಪೆ ಬ್ಯಾಟಿಂಗ್ ಪ್ರದರ್ಶನ ನೀಡಿತು. ಆರಂಭಿಕ ಬ್ಯಾಟರ್ ಪ್ರಭ್ಸಿಮ್ರಾನ್ ಸಿಂಗ್ 2 ರನ್ ಬಾರಿಸಿ ಔಟಾದರು. ಆರ್ಆರ್ ವೇಗದ ಬೌಲರ್ ಟ್ರೆಂಟ್ ಬೌಲ್ಟ್ ಹಿಡಿದ ರಿಟರ್ನ್ ಕ್ಯಾಚ್ಗೆ ಅವರು ಬಲಿಯಾದರು. ನಾಯಕ ಶಿಖರ್ ಧವನ್ ಕೂಡ 17 ರನ್ಗಳಿಗೆ ಸೀಮಿತಗೊಂಡರು. ನಂತರ ಆಡಲು ಬಂದ ಅಥರ್ವ ಟೈಡೆ 19 ರನ್ ಗಳಿಸಿ ಔಟಾದರು. ಮೂರು ಫೋರ್ ಹಾಗೂ 1 ಸಿಕ್ಸರ್ ಬಾರಿಸಿ ವಿಶ್ವಾಸ ಮೂಡಿಸಿದ್ದ ಅವರು ಹೆಚ್ಚು ಹೊತ್ತು ಕ್ರೀಸ್ನಲ್ಲಿ ನಿಲ್ಲಲಿಲ್ಲ. ಇದರ ಪರಿಣಾಮವಾಗಿ 50 ರನ್ಗಳಿಗೆ ನಾಲ್ಕು ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಬಿತ್ತು.
ಆ ಬಳಿಕ ಕ್ರಿಸ್ಗೆ ಬಂದ ಸ್ಯಾಮ್ ಕರ್ರನ್ ನಿಧಾನವಾಗಿ ಬ್ಯಾಟಿಂಗ್ ಆರಂಭಿಸಿ ಕೊನೇ ಹಂತದಲ್ಲಿ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಆದರೆ, ವಿಕೆಟ್ಕೀಪರ್ ಬ್ಯಾಟರ್ ಜಿತೇಶ್ ಶರ್ಮಾ 28 ಎಸೆತಗಳಲ್ಲಿ 44 ರನ್ ಬಾರಿಸಿ ರನ್ ಗಳಿಕೆಗೆ ವೇಗ ಕೊಟ್ಟರು. ಆದರೆ, 14ನೇ ಓವರ್ನ 5ನೇ ಎಸೆತದಲ್ಲಿ ಜಿತೇಶ್ ಶರ್ಮಾ ಔಟಾದರು. ಈ ವೇಳೆ ಕರ್ರನ್ಗೆ ಜತೆಯಾದ ಶಾರುಖ್ ಖಾನ್ ಭರ್ಜರಿಯಾಗಿ ಬ್ಯಾಟ್ ಬೀಸಿದರು. 23 ಎಸೆತಗಳಲ್ಲಿ 41 ರನ್ ಬಾರಿಸಿದ ಅವರು ಸವಾಲಿನ ಮೊತ್ತ ಪೇರಿಸಲು ನೆರವಾದರು.