Site icon Vistara News

IPL 2023 : ಆರ್​ಆರ್​​ ತಂಡಕ್ಕೆ 4 ವಿಕೆಟ್​ ಜಯ, ಪಂಜಾಬ್​ ಕಿಂಗ್ಸ್​ ಅಭಿಯಾನ ಅಂತ್ಯ

Punjab Kings vs Rajasthan Royals, IPL 66th Match Result

#image_title

ಧರ್ಮಶಾಲಾ: ಯುವ ಬ್ಯಾಟರ್​​ಗಳಾದ​ ಯಶಸ್ವಿ ಜೈಸ್ವಾಲ್​ (50) ಹಾಗೂ ದೇವದತ್​ ಪಡಿಕ್ಕಲ್​ (51) ಅವರ ಅರ್ಧ ಶತಕಗಳ ನೆರವು ಪಡೆದ ರಾಜಸ್ಥಾನ್​ ರಾಯಲ್ಸ್​ ತಂಡ ಐಪಿಎಲ್​ 16ನೇ ಆವೃತ್ತಿಯ 66ನೇ ಪಂದ್ಯದಲ್ಲಿ (IPL 2023) ಪಂಜಾಬ್​ ಕಿಂಗ್ಸ್ ವಿರುದ್ಧ 4 ವಿಕೆಟ್​ ವಿಜಯ ಸಾಧಿಸಿತು. ಈ ಸೋಲಿನೊಂದಿಗೆ ಪಂಜಾಬ್​ ಕಿಂಗ್ಸ್​ ತಂಡ ಹಾಲಿ ಆವೃತ್ತಿಯ ಐಪಿಎಲ್​ ಅಭಿಯಾನ ಮುಗಿಸಿತು. ರಾಜಸ್ಥಾನ್​ ರಾಯಲ್ಸ್​ ಏಳು ಗೆಲುವಿನೊಂದಿಗೆ 14 ಅಂಕಗಳನ್ನು ಸಂಪಾದಿಸಿ ಪ್ಲೇಆಫ್​ ರೇಸ್​​ನಲ್ಲಿ ಉಳಿಯಿತು. ಮಂಬಯಿ ಇಂಡಿಯನ್ಸ್​ ಎಸ್​ಆರ್​ಎಚ್​ ಹಾಗೂ ಆರ್​ಸಿಬಿ ಮತ್ತು ಗುಜರಾತ್​ ಜೈಂಟ್ಸ್​ ನಡುವೆ ಭಾನುವಾರ ನಡೆಯಲಿರುವ ಪಂದ್ಯಗಳ ಬಳಿಕ ರಾಜಸ್ಥಾನ್​ ತಂಡದ ಪ್ಲೇಆಫ್​ ಭವಿಷ್ಯ ನಿರ್ಧಾರವಾಗಲಿದೆ.

ಇಲ್ಲಿನ ಹಿಮಾಚಲ ಪ್ರದೇಶ ಕ್ರಿಕೆಟ್ ಅಸೋಸಿಯೇಷನ್​ ಸ್ಟೇಡಿಯಮ್​ನಲ್ಲಿ ಆಯೋಜನೆಗೊಂಡಿರುವ ಪಂದ್ಯದಲ್ಲಿ ರಾಜಸ್ಥಾನ್​ ತಂಡದ ನಾಯಕ ಸಂಜು ಸ್ಯಾಮ್ಸನ್​ ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡರು. ಅಂತೆಯೇ ಮೊದಲು ಬ್ಯಾಟ್ ಮಾಡಿದ ಪಂಜಾಬ್​ ಕಿಂಗ್ಸ್ ತಂಡ ನಿಗದಿತ 20 ಓವರ್​​ಗಳಲ್ಲಿ 5 ವಿಕೆಟ್​ ನಷ್ಟ ಮಾಡಿಕೊಂಡು 187 ರನ್​ ಬಾರಿಸಿತು. ಪ್ರತಿಯಾಗಿ ಬ್ಯಾಟ್​ ಮಾಡಿದ ರಾಜಸ್ಥಾನ್​ ತಂಡ ಇನ್ನೂ ಎರಡು ಎಸೆತಗಳು ಬಾಕಿ ಇರುವಾಗ 6 ವಿಕೆಟ್​ ನಷ್ಟಕ್ಕೆ 189 ರನ್​ ಬಾರಿಸಿ ಗೆಲುವು ಸಾಧಿಸಿತು.

ಗುರಿ ಬೆನ್ನಟ್ಟಲು ಹೊರಟ ಆರ್​ಆರ್​ ತಂಡಕ್ಕೆ ಜೋಸ್​ ಬಟ್ಲರ್​ ಶೂನ್ಯಕ್ಕೆ ಔಟಾಗುವ ಮೂಲಕ ಆರಂಭಿಕ ಹಿನ್ನಡೆ ಉಂಟಾಯಿತು. ಈ ವೇಳೆ ಜತೆಯಾದ ಪಡಿಕ್ಕಲ್​ ಹಾಗೂ ಜೈಸ್ವಾಲ್​ ಉತ್ತಮ ಜತೆಯಾಟ ನೀಡಿದರು. ಆದರೆ, ಶತಕ ಬಾರಿಸಿದ ತಕ್ಷಣ ಪಡಿಕ್ಕಲ್​ ವಿಕೆಟ್​ ಒಪ್ಪಿಸಿದರು. ನಾಯಕ ಸಂಜು ಸ್ಯಾಮ್ಸನ್​ ಕೇವಲ 2 ರನ್​ಗೆ ಔಟಾಗುವ ಮೂಲಕ ಮತ್ತೆ ರಾಜಸ್ಥಾನ್​ ತಂಡಕ್ಕೆ ಆತಂಕ ಎದುರಾಯಿತು. ಆದರೆ, ಶಿಮ್ರೋನ್​ ಹೆಟ್ಮಾಯರ್​ ಎದುರಾಳಿ ಬೌಲರ್​​ಗಳನ್ನು ದಂಡಿಸಿ 40 ರನ್​ ಬಾರಿಸಿದರು. ಎರಡು ಭರ್ಜರಿ ಸಿಕ್ಸರ್​ಗಳ ಹೊರತಾಗಿಯೂ ರಿಯಾನ್ ಪರಾಗ್ 20 ರನ್​ಗೆ ಸೀಮಿತಗೊಂಡರು. ಕೊನೆಯಲ್ಲಿ ಧ್ರುವ್ ಜುರೇಲ್ 4 ಎಸೆತಕ್ಕೆ 10 ರನ್ ಬಾರಿಸಿ ಜಯ ತಂದುಕೊಟ್ಟರು.

ಬ್ಯಾಟಿಂಗ್ ಆರಂಭಿಸಿದ ಪಂಜಾಬ್ ತಂಡ ಮತ್ತೊಂದು ಬಾರಿ ಕಳಪೆ ಬ್ಯಾಟಿಂಗ್ ಪ್ರದರ್ಶನ ನೀಡಿತು. ಆರಂಭಿಕ ಬ್ಯಾಟರ್​ ಪ್ರಭ್​ಸಿಮ್ರಾನ್​ ಸಿಂಗ್​​ 2 ರನ್​ ಬಾರಿಸಿ ಔಟಾದರು. ಆರ್​ಆರ್​ ವೇಗದ ಬೌಲರ್​ ಟ್ರೆಂಟ್​ ಬೌಲ್ಟ್ ಹಿಡಿದ ರಿಟರ್ನ್​ ಕ್ಯಾಚ್​​ಗೆ ಅವರು ಬಲಿಯಾದರು. ನಾಯಕ ಶಿಖರ್​ ಧವನ್​ ಕೂಡ 17 ರನ್​ಗಳಿಗೆ ಸೀಮಿತಗೊಂಡರು. ನಂತರ ಆಡಲು ಬಂದ ಅಥರ್ವ ಟೈಡೆ 19 ರನ್​ ಗಳಿಸಿ ಔಟಾದರು. ಮೂರು ಫೋರ್​ ಹಾಗೂ 1 ಸಿಕ್ಸರ್ ಬಾರಿಸಿ ವಿಶ್ವಾಸ ಮೂಡಿಸಿದ್ದ ಅವರು ಹೆಚ್ಚು ಹೊತ್ತು ಕ್ರೀಸ್​ನಲ್ಲಿ ನಿಲ್ಲಲಿಲ್ಲ. ಇದರ ಪರಿಣಾಮವಾಗಿ 50 ರನ್​ಗಳಿಗೆ ನಾಲ್ಕು ವಿಕೆಟ್​ ಕಳೆದುಕೊಂಡು ಸಂಕಷ್ಟಕ್ಕೆ ಬಿತ್ತು.

ಆ ಬಳಿಕ ಕ್ರಿಸ್​ಗೆ ಬಂದ ಸ್ಯಾಮ್ ಕರ್ರನ್​ ನಿಧಾನವಾಗಿ ಬ್ಯಾಟಿಂಗ್ ಆರಂಭಿಸಿ ಕೊನೇ ಹಂತದಲ್ಲಿ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಆದರೆ, ವಿಕೆಟ್​ಕೀಪರ್​ ಬ್ಯಾಟರ್​ ಜಿತೇಶ್​ ಶರ್ಮಾ 28 ಎಸೆತಗಳಲ್ಲಿ 44 ರನ್​ ಬಾರಿಸಿ ರನ್​ ಗಳಿಕೆಗೆ ವೇಗ ಕೊಟ್ಟರು. ಆದರೆ, 14ನೇ ಓವರ್​ನ 5ನೇ ಎಸೆತದಲ್ಲಿ ಜಿತೇಶ್ ಶರ್ಮಾ ಔಟಾದರು. ಈ ವೇಳೆ ಕರ್ರನ್​ಗೆ ಜತೆಯಾದ ಶಾರುಖ್​ ಖಾನ್​ ಭರ್ಜರಿಯಾಗಿ ಬ್ಯಾಟ್​ ಬೀಸಿದರು. 23 ಎಸೆತಗಳಲ್ಲಿ 41 ರನ್ ಬಾರಿಸಿದ ಅವರು ಸವಾಲಿನ ಮೊತ್ತ ಪೇರಿಸಲು ನೆರವಾದರು.

Exit mobile version