ಲಖನೌ: ಐಪಿಎಲ್ 16ನೇ ಆವೃತ್ತಿಯ 21ನೇ ಪಂದ್ಯದಲ್ಲಿ ಟಾಸ್ ಗೆದ್ದಿರುವ ಪಂಜಾಬ್ ಕಿಂಗ್ಸ್ ತಂಡ ಮೊದಲು ಫಿಲ್ಡಿಂಗ್ ಆಯ್ಕೆ ಮಾಡಿಕೊಂಡಿದೆ. ಎದುರಾಳಿ ಲಖನೌ ಸೂಪರ್ ಜಯಂಟ್ಸ್ ಬಳಗ ಮೊದಲು ಬ್ಯಾಟಿಂಗ್ ಮಾಡಬೇಕಾಗಿದೆ. ಕೆ. ಎಲ್ ರಾಹುಲ್ ನೇತೃತ್ವದ ಲಖನೌ ಸೂಪರ್ ಜಯಂಟ್ಸ್ ತಂಡ ಹಿಂದಿನ ಪಂದ್ಯದಲ್ಲಿ ಆರ್ಸಿಬಿ ವಿರುದ್ಧ 1 ವಿಕೆಟ್ ರೋಚಕ ವಿಜಯ ಸಾಧಿಸಿತ್ತು. ಅದೇ ಹುಮ್ಮಸ್ಸಿನಲ್ಲಿರುವ ತಂಡ ಮತ್ತೊಂದು ಅತ್ಯುತ್ತಮ ಪ್ರದರ್ಶನ ನೀಡುವ ಗುರಿ ಹೊಂದಿದೆ. ಹಾಲಿ ಆವೃತ್ತಿಯಲ್ಲಿ ಮೊದಲೆರಡು ಪಂದ್ಯಗಳಲ್ಲಿ ವಿಜಯ ಸಾಧಿಸಿದ್ದ ಪಂಜಾಬ್ ಕಿಂಗ್ಸ್ ನಂತರದ ಎರಡೂ ಪಂದ್ಯಗಳಲ್ಲಿ ಪರಾಜಯಗೊಂಡಿದೆ. ಹೀಗಾಗಿ ಗೆಲುವಿನಿ ಹಾದಿಗೆ ಮರಳಲು ಯತ್ನಿಸಲಿದೆ.
ಪಂಜಾಬ್ ಕಿಂಗ್ಸ್ ತಂಡದ ನಾಯಕ ಶಿಖರ್ ಧವನ್ ಗಾಯದ ಸಮಸ್ಯೆಗೆ ಒಳಗಾಗಿದ್ದಾರೆ. ಹೀಗಾಗಿ ಲಖನೌ ವಿರುದ್ಧ ಅವರು ಆಡುವುದಿಲ್ಲ. ಇಂಗ್ಲೆಂಡ್ನ ಆಲ್ರೌಂಡರ್ ಸ್ಯಾಮ್ ಕರ್ರನ್ ತಂಡವನ್ನು ಮುನ್ನಡೆಸಲಿದ್ದಾರೆ. ಅದರೆ, ಧವನ್ ಅಲಭ್ಯತೆಯಿಂದಾಗಿ ತಂಡದ ಆರಂಭಿಕ ಬ್ಯಾಟಿಂಗ್ ವಿಭಾಗ ಕಳೆಗುಂದಲಿದೆ.
ಟಾಸ್ ಗೆದ್ದ ಬಳಿಕ ಮಾತನಾಡಿದ ಪಂಜಾಬ್ ತಂಡದ ನಾಯಕ ಸ್ಯಾಮ್ ಕರ್ರನ್, ಹಾಲಿ ಆವೃತ್ತಿಯಲ್ಲಿ ನಾವು ನಾಲ್ಕು ಪಂದ್ಯಗಳಲ್ಲೂ ಮೊದಲು ಬ್ಯಾಟ್ ಮಾಡಿದ್ದೆವು. ಬದಲಾವಣೆ ಇರಲಿ ಎಂದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿದ್ದೇವೆ. ಶಿಖರ್ ಧವನ್ ಗಾಯದ ಸಮಸ್ಯೆಯಿಂದಾಗಿ ಈ ಪಂದ್ಯದಲ್ಲಿ ಆಡುತ್ತಿಲ್ಲ. ಆದರೆ, ಗಾಯದ ಗಂಭೀರತೆ ಬಗ್ಗೆ ನನಗೆ ಅರಿವಿಲ್ಲ. ಆದರೆ, ದೀರ್ಘ ಕಾಲವೇನೂ ಬೇಕಾಗಿಲ್ಲ. ಭಾರತದ ಇಬ್ಬರು ಬ್ಯಾಟರ್ಗಳು ತಂಡ ಸೇರಿಕೊಂಡಿದ್ದಾರೆ. ಜತೆಗೆ ಸಿಕಂದರ್ ರಾಜಾ ಕೂಡ ಆಡುವ 11ರ ಬಳಗದಲ್ಲಿದ್ದಾರೆ ಎಂದು ಹೇಳಿದ್ದಾರೆ.
ಇದನ್ನೂ ಓದಿ : IPL 2023: ಕನ್ನಡಿಗ ವೈಶಾಕ್ ಬೌಲಿಂಗ್ ದಾಳಿಗೆ ತತ್ತರಿಸಿದ ಡೆಲ್ಲಿ; ಆರ್ಸಿಬಿಗೆ 23 ರನ್ ಜಯ
ಕೆ. ಎಲ್ ರಾಹುಲ್ ಮಾತನಾಡಿ, ಬೇರೆ ಬೇರೆ ಪರಿಸ್ಥಿತಿಯಲ್ಲಿ ಆಡುವುದು ನಮಗೊಂದು ಸವಾಲು. ಪ್ರತಿಯೊಂದು ಪಂದ್ಯವನ್ನೂ ಯೋಜಿತ ರೂಪದಲ್ಲಿ ಆಡುತ್ತಿದ್ದೇವೆ. ನಮ್ಮ ತಂಡದ ಆಟಗಾರರೆಲ್ಲರೂ ಖುಷಿಯಲ್ಲಿದ್ದಾರೆ. ಅವಕಾಶಗಳನ್ನು ಬಳಸಿಕೊಂಡು ಚೆನ್ನಾಗಿ ಆಡುತ್ತಿದ್ದಾರೆ ಎಂದು ಅವರು ಹೇಳಿಕೊಂಡಿದ್ದಾರೆ.
ತಂಡಗಳು ಇಂತಿವೆ
ಪಂಜಾಬ್ ಕಿಂಗ್ಸ್: ಅಥರ್ವ ಟೈಡೆ, ಮ್ಯಾಥ್ಯೂ ಶಾರ್ಟ್, ಹರ್‌ಪ್ರೀತ್ ಸಿಂಗ್ ಭಾಟಿಯಾ, ಸಿಕಂದರ್ ರಾಜಾ, ಸ್ಯಾಮ್ ಕರ್ರನ್(ನಾಯಕ), ಜಿತೇಶ್ ಶರ್ಮಾ, ಶಾರುಖ್ ಖಾನ್, ಹರ್‌ಪ್ರೀತ್ ಬ್ರಾರ್, ಕಗಿಸೊ ರಬಾಡ, ರಾಹುಲ್ ಚಾಹರ್, ಅರ್ಶ್‌ದೀಪ್ ಸಿಂಗ್.
ಲಕ್ನೋ ಸೂಪರ್ ಜೈಂಟ್ಸ್ : ಕೆಎಲ್ ರಾಹುಲ್ (ನಾಯಕ), ಕೈಲ್ ಮೇಯರ್ಸ್, ದೀಪಕ್ ಹೂಡಾ, ಮಾರ್ಕಸ್ ಸ್ಟೊಯ್ನಿಸ್. ಕೃಣಾಲ್ ಪಾಂಡ್ಯ, ನಿಕೋಲಸ್ ಪೂರನ್, ಆಯುಷ್ ಬದೋನಿ, ಅವೇಶ್ ಖಾನ್, ಯುದ್ವೀರ್ ಸಿಂಗ್ ಚರಕ್, ಮಾರ್ಕ್ ವುಡ್, ರವಿ ಬಿಷ್ಣೋಯ್.