Site icon Vistara News

Chess World Cup : ಅಮ್ಮನೊಂದಿಗಿನ ಮುದ್ದಾದ ಚಿತ್ರವನ್ನು ಹಂಚಿಕೊಂಡ ಚೆಸ್ ತಾರೆ ಪ್ರಜ್ಞಾನಂದ

R Praggnanandhaa

ಚೆನ್ನೈ: ಚೆಸ್ ವಿಶ್ವಕಪ್ ಫೈನಲ್​​ನಲ್ಲಿ ಅದ್ಭುತ ಪ್ರದರ್ಶನ ನೀಡಿದ ನಂತರ ಆರ್ ಪ್ರಜ್ಞಾನಂದ ಭಾರತದ ಮನೆ ಮಾತನಾಡಿದ್ದಾರೆ. ಕ್ರೀಡಾ ಕ್ಷೇತ್ರವೇ ಅವರ ಸಾಧನೆಯನ್ನು ಕೊಂಡಾಡುತ್ತಿದೆ. ಅವರು ತೀವ್ರ ಪೈಪೋಟಿಯ ಫೈನಲ್​​ನಲ್ಲಿ ಮ್ಯಾಗ್ನಸ್ ಕಾರ್ಲ್ಸನ್ ವಿರುದ್ಧ ಸೋತು ಬೆಳ್ಳಿ ಗೆದ್ದಿದ್ದಾರೆ. ಕ್ಯಾಂಡಿಡೇಟ್ಸ್ ಈವೆಂಟ್​​ಗೆ ಅರ್ಹತೆ ಪಡೆದಿದ್ದಾರೆ. ಚೆಸ್ ವಿಶ್ವಕಪ್ ಫೈನಲ್​ನಲ್ಲಿ ಕಾಣಿಸಿಕೊಂಡ ಅತ್ಯಂತ ಕಿರಿಯ ಆಟಗಾರ ಪ್ರಜ್ಞಾನಂದ.

18 ವರ್ಷದ ಚೆಸ್​ ಆಟಗಾರ ಯಾವಾಗಲೂ ತನ್ನ ತಾಯಿ ನಾಗಲಕ್ಷ್ಮಿ ಅವರ ಜತೆಗೆ ಇರುವ ಪ್ರತಿಭೆ. ತಾಯಿಯೂ ಪ್ರತಿ ಕ್ಷಣವೂ ಮಗನ ಜತೆಗೆ ಇರುತ್ತಾರೆ. ಈ ಮೂಲಕ ಅವರು ಪುತ್ರನ ಯಶಸ್ಸಿನ ಬಲವಾದ ಆಧಾರಸ್ತಂಭ ಎನಿಸಿಕೊಂಡಿದ್ದಾರೆ. ಅವರ ತಾಯಿ ನಾಗಲಕ್ಷ್ಮಿ ಅವರು ಚೆಸ್ ವಿಶ್ವಕಪ್ ಫೈನಲ್ ಸಮಯದಲ್ಲಿ ಪೂರ್ತಿಯಾಗಿ ತಮ್ಮ ಮಗನೊಂದಿಗೆ ಕಾಣಿಸಿಕೊಂಡಿದ್ದರು. ಈ ಸಂದರ್ಭದ ಚಿತ್ರಗಳು ಸಿಕ್ಕಾಪಟ್ಟೆ ವೈರಲ್ ಆಗಿದ್ದವು. ಇದೀಗ ಯುವ ಚೆಸ್ ಆಟಗಾರ ತಾಯಿಯೊಂದಿಗೆ ಇರುವ ಮತ್ತೊಂದು ಚಿತ್ರ ವೈರಲ್​ ಆಗಿದೆ. ತಮ್ಮ ಅಧಿಕೃತ ಸಾಮಾಜಿಕ ಮಾಧ್ಯಮ ಹ್ಯಾಂಡಲ್​ನಲ್ಲಿ ಮುದ್ದಾದ ಚಿತ್ರವನ್ನು ಹಂಚಿಕೊಂಡಿದ್ದಾರೆ. ಚಿತ್ರದಲ್ಲಿ, ತಾಯಿ ಮಗ ಗೆದ್ದಿರು ಬೆಳ್ಳಿ ಧರಿಸಿ ಫೋಸ್ ಕೊಟ್ಟಿದ್ದಾರೆ. ಈ ಮೂಲಕ ಅವರು ಮಗನ ಯಶಸ್ಸನ್ನು ಸಿಕ್ಕಾಪಟ್ಟೆ ಸಂಭ್ರಮಿಸಿದ್ದಾರೆ.

“ಫಿಡೆ ವಿಶ್ವಕಪ್ 2023 ರಲ್ಲಿ ಬೆಳ್ಳಿ ಪದಕ ಗೆದ್ದಿರುವುದಕ್ಕೆ ಮತ್ತು 2024 ರ ಕ್ಯಾಂಡಿಡೇಟ್ಸ್ ಈವೆಂಟ್​​ಗೆ ಅರ್ಹತೆ ಪಡೆದಿರುವುದಕ್ಕೆ ತುಂಬಾ ಸಂತೋಷವಾಗಿದೆ! ನಿಮ್ಮೆಲ್ಲರ ಪ್ರೀತಿ, ಬೆಂಬಲ ಮತ್ತು ಪ್ರಾರ್ಥನೆಗಳನ್ನು ಸ್ವೀಕರಿಸಲು ಕೃತಜ್ಞರಾಗಿರುತ್ತೇನೆ! ನಿಮ್ಮೆಲ್ಲರ ಹಾರೈಕೆಗಳಿಗೆ ಧನ್ಯವಾದಗಳು, ನನ್ನ ಸದಾ ಬೆಂಬಲ, ಸಂತೋಷ ಮತ್ತು ಹೆಮ್ಮೆಯ ಅಮ್ಮ” ಎಂದು ಪ್ರಜ್ಞಾನಂದ ಬರೆದುಕೊಂಡಿದ್ದಾರೆ.

ಇದನ್ನೂ ಓದಿ: ವಿಸ್ತಾರ ಸಂಪಾದಕೀಯ: ಭಾರತೀಯ ಚದುರಂಗ ಕಣಕ್ಕೆ ರಂಗು ತುಂಬಿದ ಪ್ರಜ್ಞಾನಂದ

ಈ ಚಿತ್ರವು ಎಕ್ಸ್ ನಲ್ಲಿ 1 ಮಿಲಿಯನ್ ಲೈಕ್​ಗಳನ್ನು ಗಳಿಸಿದೆ. ಜನರು ಪೋಸ್ಟ್ ಮೇಲೆ ಪ್ರೀತಿಯ ಮಳೆ ಸುರಿಸಿದ್ದಾರೆ.

ವೃತ್ತಿಬದುಕಿನ ಶ್ರೇಷ್ಠ ಶ್ರೇಯಾಂಕ ಪಡೆದ ಪ್ರಜ್ಞಾನಂದ

ನವದೆಹಲಿ: ಎರಡು ದಿನಗಳ ಹಿಂದಷ್ಟೇ ಚೆಸ್‌ ವಿಶ್ವಕಪ್‌ನಲ್ಲಿ(Chess World Cup) ದ್ವಿತೀಯ ಸ್ಥಾನ ಪಡೆದು ವಿಶ್ವದ ಗಮನ ಸೆಳೆದ ಭಾರತದ ಆರ್‌.ಪ್ರಜ್ಞಾನಂದ(R Praggnanandhaa) ಅವರು ನೂತನ ವಿಶ್ವ(chess world ranking) ಶ್ರೇಯಾಂಕದಲ್ಲಿ ವೃತ್ತಿಬದುಕಿನ ಶ್ರೇಷ್ಠ (2727.2) ರೇಟಿಂಗ್‌ ಅಂಕದೊಂದಿಗೆ 20ನೇ ಸ್ಥಾನ ಪಡೆದಿದ್ದಾರೆ. ಇವರ ಜತೆ ವಿಶ್ವಕಪ್‌ನಲ್ಲಿ ಕ್ವಾರ್ಟರ್‌ಫೈನಲ್‌ಗೇರಿದ್ದ ಮತ್ತೊಬ್ಬ ಭಾರತೀಯ ಚೆಸ್​ ಚತುರ 17 ವಯಸ್ಸಿನ ಡಿ.ಗುಕೇಶ್‌(Gukesh D) ಅವರು 3 ಸ್ಥಾನಗಳ ಪ್ರಗತಿ ಸಾಧಿಸಿ 2758 ರೇಟಿಂಗ್​ ಅಂಕದೊಂದಿಗೆ 8ನೇ ಸ್ಥಾನ ಪಡೆದಿದ್ದಾರೆ. 5 ಬಾರಿಯ ವಿಶ್ವ ಚಾಂಪಿಯನ್‌ ಅನುಭವಿ ವಿಶ್ವನಾಥನ್‌ ಆನಂದ್‌(viswanathan anand) 9ನೇ ಸ್ಥಾನ ಕಾಯ್ದುಕೊಂಡಿದ್ದಾರೆ.

ಆರ್‌.ಪ್ರಜ್ಞಾನಂದ ಅವರನ್ನು ಮಣಿಸಿ ವಿಶ್ವಕಪ್‌ ಗೆದ್ದ ನಾರ್ವೆಯ ಮ್ಯಾಗ್ನಸ್‌ ಕಾರ್ಲ್‌ಸನ್‌(Magnus Carlsen) ತಮ್ಮ ಅಗ್ರಸ್ಥಾನವನ್ನ ಉಳಿಸಿಕೊಂಡಿದ್ದಾರೆ. ಅಮೆರಿಕದ ಫ್ಯಾಬಿಯಾನೋ ಕರುವಾನಾ(Fabiano Caruana) ಮತ್ತೆ 2ನೇ ಸ್ಥಾನಕ್ಕೇರಿದ್ದಾರೆ. ಕರುವಾನಾ ಅವರು ಸೆಮಿಫೈನಲ್‌ ಟೈ ಬ್ರೇಕರ್‌ ಪಂದ್ಯದಲ್ಲಿ ಆರ್‌.ಪ್ರಜ್ಞಾನಂದ ವಿರುದ್ಧ ಸೋತು ನಿರಾಸೆ ಕಂಡಿದ್ದರು.

ಟೈ ಬ್ರೇಕರ್​ನಲ್ಲಿ ಎಡವಿದ ಪ್ರಜ್ಞಾನಂದ

ಗುರುವಾರ ನಡೆದ ಫೈನಲ್​ ಪಂದ್ಯ ಟೈ ಬ್ರೇಕರ್​ನ ಮೊದಲ ಸೆಟ್​ನಲ್ಲಿ ಪ್ರಜ್ಞಾನಂದ ಹಿನ್ನಡೆ ಅನುಭವಿಸಿ, ಆ ಬಳಿಕದ ಸುತ್ತಿನಲ್ಲಿ ಡ್ರಾ ಸಾಧಿಸಿದ್ದರೂ 1-0 ಮುನ್ನಡೆ ಕಾಯ್ದುಕೊಂಡ ಮ್ಯಾಗ್ನಸ್‌ ಕಾರ್ಲ್‌ಸನ್‌ ಗೆದ್ದು ವಿಶ್ವ ಕಿರೀಟ ತಮ್ಮದಾಗಿಸಿಕೊಂಡರು. ಪ್ರಜ್ಞಾನಂದ ಅವರು ವಿಶ್ವನಾಥನ್‌ ಆನಂದ್‌ ಬಳಿಕ ಚೆಸ್‌ ವಿಶ್ವಕಪ್‌ನಲ್ಲಿ ಫೈನಲ್​ ಪ್ರವೇಶಿಸಿದ ಕೇವಲ 2ನೇ ಭಾರತೀಯ ಎನಿಸಿಕೊಂಡಿದ್ದಾರೆ. 2000 ಹಾಗೂ 2002ರಲ್ಲಿ ವಿಶ್ವನಾಥನ್‌ ಆನಂದ್‌ ಭಾರತಕ್ಕೆ ವಿಶ್ವಕಪ್​ ಗೆದ್ದಿದ್ದರು. ಆದರೆ ಪ್ರಜ್ಞಾನಂದ ಅವರು ದ್ವಿತೀಯ ಸ್ಥಾನಕ್ಕೆ ತೃಪ್ತಿಪಟ್ಟರು.

ಮೊದಲ ಸುತ್ತಿನ ಫಸ್ಟ್ ಗೇಮ್​ನ 16 ಚಲನೆಗಳ ನಂತರ, ಕಾರ್ಲ್‌ಸೆನ್‌ನ ‘ಬಿಷಪ್’ ಗಾಗಿ ಪ್ರಜ್ಞಾನಂದ ತನ್ನ ‘ನೈಟ್’ (ಹೋರ್ಸ್ ಹೆಡ್) ತ್ಯಾಗ ಮಾಡಿದರು. ಇದರ ಬೆನ್ನಲ್ಲೇ ಇಬ್ಬರು ತಮ್ಮ ರಾಣಿಯನ್ನೂ ಕೂಡ ಕಳೆದುಕೊಂಡರು. ಆದರೆ 21ನೇ ನಡೆಯ ವೇಳೆಗೆ ಕಾರ್ಲ್​ಸೆನ್ ಪಂದ್ಯದ ಮೇಲೆ ಹಿಡಿತ ಸಾಧಿಸಿದ್ದರು. 34 ನಡೆಗಳ ವೇಳೆಗೆ ಇಬ್ಬರು ರೂಕ್ ಕಾಯಿಕೆಯನ್ನು ಕಳೆದುಕೊಂಡಿದ್ದರು. 47 ಚಲನೆಯ ಬಳಿಕ ಟೈಬ್ರೇಕ್​ನ ಮೊದಲ ಗೇಮ್​ನಲ್ಲಿ ಜಯ ಸಾಧಿಸುವಲ್ಲಿ ಯಶಸ್ವಿಯಾದ ಕಾರ್ಲ್‌ಸೆನ್ 1-0 ಮುನ್ನಡೆ ಸಾಧಿಸಿ ಪಂದ್ಯವನ್ನು ತಮ್ಮದಾಗಿಸಿಕೊಂಡಿದ್ದರು.

ನೀರಜ್​ ಚೋಪ್ರಾ ಅಭಿನಂದನೆ

ಬುಡಾಪೆಸ್ಟ್​ನಲ್ಲಿ ನಡೆಯುತ್ತಿರುವ ವಿಶ್ವ ಚಾಂಪಿಯನ್‌ಶಿಪ್‌ ಟೂರ್ನಿಯಲ್ಲಿ ಶುಕ್ರವಾರ ನಡೆದ ಜಾವೆಲಿನ್​ ಸ್ಪರ್ಧೆಯಲ್ಲಿ ಫೈನಲ್​ ಪ್ರವೇಶಿಸಿ ಮುಂದಿನ ವರ್ಷ ಪ್ಯಾರಿಸ್​ನಲ್ಲಿ ನಡೆಯುವ ಒಲಿಂಪಿಕ್ಸ್​ಗೆ ಅರ್ಹತೆ ಪಡೆದ ಚಿನ್ನದ ಹುಡುಗ ನೀರಜ್​ ಚೋಪ್ರಾ, ಪ್ರಜ್ಞಾನಂದ ಸಾಧನೆಯನ್ನು ಕೊಂಡಾಡಿದ್ದಾರೆ. ಫೈನಲ್​ ಪ್ರವೇಶದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ನೀರಜ್​, ಚೆಸ್‌ ವಿಶ್ವಕಪ್‌ನ ಫೈನಲ್‌ನಲ್ಲಿ ಆಡಿದ ಪ್ರಜ್ಞಾನಂದ ಕೂಡ ನನಗೆ ಸ್ಫೂರ್ತಿ ನೀಡಿದ್ದಾರೆ. ಫೈನಲ್‌ನಲ್ಲಿ ಅವರು ಬಹಳ ಚೆನ್ನಾಗಿ ಆಡಿದ್ದಾರೆ. ಅವರ ಸಾಧನೆಗೆ ನನ್ನ ಕಡೆಯಿಂದಲೂ ಅಭಿನಂಧನೆಗಳು” ಎಂದರು. ನೀರಜ್​ ಅವರು ಭಾನುವಾರ ನಡೆಯುವ ಫೈನಲ್​ನಲ್ಲಿಯೂ ಶ್ರೇಷ್ಠ ಸಾಧನೆ ತೋರಿ ಪದಕ ಗೆಲ್ಲುವ ವಿಶ್ವಾಸದಲ್ಲಿದ್ದಾರೆ. ಕಳೆದ ವರ್ಷ ಅವರು ಈ ಕೂಟದಲ್ಲಿ ಬೆಳ್ಳಿ ಪದಕ ಗೆದ್ದಿದ್ದರು. ಈ ಬಾರಿ ಚಿನ್ನಕ್ಕೆ ಗುರಿ ಇಡುವ ಹಂಬಲದಲ್ಲಿದ್ದಾರೆ.

Exit mobile version