ರಾಜಸ್ಥಾನ್: ಯವ ಬ್ಯಾಟರ್ ಯಶಸ್ವಿ ಜೈಸ್ವಾಲ್ (77) ಅವರ ಅಮೋಘ ಅರ್ಧ ಶತಕದ ಬಲದಿಂದ ಮಿಂಚಿದ ರಾಜಸ್ಥಾನ್ ರಾಯಲ್ಸ್ ತಂಡ ಐಪಿಎಲ್ 16ನೇ (IPL 2023) ಆವೃತ್ತಿಯ 37ನೇ ಪಂದ್ಯದಲ್ಲಿ ಎದುರಾಳಿ ಚೆನ್ನೈ ಸೂಪರ್ ಕಿಂಗ್ಸ್ಗೆ 203 ರನ್ಗಳ ಗೆಲುವಿನ ಗುರಿಯನ್ನು ಒಡ್ಡಿದೆ. ಚೆನ್ನೈ ಬೌಲರ್ಗಳನ್ನು ಆರಂಭದಿಂದ ಕೊನೇ ತನಕ ದಂಡಿಸಿದ ರಾಜಸ್ಥಾನ್ ಬ್ಯಾಟರ್ಗಳು ಬೃಹತ್ ಮೊತ್ತ ಪೇರಿಸಲು ನೆರವಾದರು.
ಸವಾಯ್ ಮಾನ್ ಸಿಂಗ್ ಕ್ರಿಕೆಟ್ ಸ್ಟೇಡಿಯಮ್ನಲ್ಲಿ ನಡೆದ ಹಣಾಹಣಿಯಲ್ಲಿ ಟಾಸ್ ಗೆದ್ದ ಮೊದಲು ಬ್ಯಾಟ್ ಮಾಡಿದ ರಾಜಸ್ಥಾನ್ ತಂಡ ನಿಗದಿತ 20 ಓವರ್ಗಳಲ್ಲಿ 5 ವಿಕೆಟ್ಗೆ 202 ರನ್ ಬಾರಿಸಿತು.
ಬ್ಯಾಟಿಂಗ್ ಆರಂಭಿಸಿದ ರಾಜಸ್ಥಾನ್ ತಂಡ ಉತ್ತಮ ಆರಂಭವನ್ನೇ ಪಡೆಯಿತು. ಜೋಸ್ ಬಟ್ಲರ್ ಹಾಗೂ ಯಶಸ್ವಿ ಜೈಸ್ವಾಲ್ ಮೊದಲ ವಿಕೆಟ್ಗೆ 81 ರನ್ ಗಳಿಸಿದರು. ಆದರೆ, ನಿಧಾನಗತಿಯಲ್ಲಿ ಆಡಿದ ಬಟ್ಲರ್ 21 ಎಸೆತಗಳಲ್ಲಿ 27 ರನ್ ಬಾರಿಸಿ ಔಟಾದರು. ಯುವ ಬ್ಯಾಟರ್ ಜೈಸ್ವಾಲ್ 26 ಎಸೆತಗಳಲ್ಲಿ ಅರ್ಧ ಶತಕ ಬಾರಿಸುವ ಜತೆಗೆ 43 ಎಸೆತಗಳಲ್ಲಿ 77 ರನ್ ಕಲೆ ಹಾಕಿದರು. ಆದರೆ, ತುಷಾರ್ ದೇಶಪಾಂಡೆ ಎಸೆತಕ್ಕೆ ರಹಾನೆಗೆ ಕ್ಯಾಚ್ ನೀಡಿ ಔಟಾದರು.
ನಾಯಕ ಸಂಜು ಸ್ಯಾಮ್ಸನ್ ಕೂಡ 17 ರನ್ಗಳಿಗೆ ಸೀಮಿತಗೊಂಡರು. ನಂತದ ಬಂದ ವಿಂಡೀಸ್ ಸ್ಫೋಟಕ ಬ್ಯಾಟರ್ ಶಿಮ್ರೋನ್ ಹೆಟ್ಮಾಯರ್ 8 ರನ್ಗಳಿಗೆ ವಿಕೆಟ್ ಒಪ್ಪಿಸಿದರು. ಈ ಇಬ್ಬರು ನಿಧಾನಗತಿಯಲ್ಲಿ ಆಡಿದ ಕಾರಣ ತಂಡದ ರನ್ ಗಳಿಕೆ ವೇಗ ಕಡಿಮೆಯಾಯಿತು. ಈ ವೇಳೆ ಜತೆಯಾದ ದ್ರುವ್ ಜುರೇಲ್ ಹಾಗೂ ದೇವದತ್ ಪಡಿಕ್ಕಲ್ ಸ್ಫೋಟಕ ಬ್ಯಾಟಿಂಗ್ ನಡೆಸಿದರು. ಜುರೆಲ್ 15 ಎಸೆತಗಳಲ್ಲಿ 32 ರನ್ ಗಳಿಸಿದರೆ, ಪಡಿಕ್ಕಲ್ 13 ಎಸೆತಗಳಲ್ಲಿ 27 ರನ್ ಕಲೆ ಹಾಕಿದರು.