ನವ ದೆಹಲಿ: Ranji Trophy | ಅಬ್ಬಾ! ಮುಂಬೈ ತಂಡದ ಬೌಲಿಂಗ್ ದಾಳಿಗೆ ಉತ್ತರಾಖಂಡದ ಬ್ಯಾಟರ್‌ಗಳು ಬೆಚ್ಚಿಬಿದ್ದಿದ್ದಾರೆ. 725 ರನ್‌ಗಳ ಗೆಲುವು ಎಂದರೆ ಅದೊಂದು ಭರ್ಜರಿ ಗೆಲುವೇ ಸರಿ! ಮುಂಬೈ ಈ ಪ್ರಮಾಣದ ಅಂತರದಲ್ಲಿ ಗೆಲುವು ಸಾಧಿಸಿ ಹೊಸ ದಾಖಲೆ ಬರೆದಿದೆ. ರಣಜಿ ಟೂರ್ನಿಯಲ್ಲಿ ಮುಂಬೈ ತಂಡವು ಉತ್ತರಾಖಂಡವನ್ನು ಕೇವಲ 69 ರನ್‌ಗಳಿಗೆ ಆಲ್‌ಔಟ್ ಮಾಡಿ ಸೆಮಿಫೈನಲ್ ತಲುಪಿದೆ.
ಉತ್ತರಾಖಂಡಕ್ಕೆ 795 ರನ್ ಟಾರ್ಗೆಟ್ ನೀಡಲಾಗಿತ್ತು. ಈ ಭಾರಿ ಟಾರ್ಗೆಟ್ ನೋಡಿಯೇ ಉತ್ತರಾಖಂಡದ ಆಟಗಾರರ ಎದೆಯಲ್ಲಿ ನಡುಕ ಮೂಡಿರಬೇಕು! ಉತ್ತರಾಖಂಡ ಗೆಲ್ಲಬೇಕಾದರೆ 725 ರನ್ ಗಳಿಸಬೇಕಿತ್ತು. ಈವರೆಗೆ ಫಸ್ಟ್ ಕ್ಲಾಸ್ ಕ್ರಿಕೆಟ್‌ನಲ್ಲಿ ನೀಡಿದ ಅತಿ ಹೆಚ್ಚು ಟಾರ್ಗೆಟ್ ಇದಾಗಿದೆ. ಈ ಹಿಂದೆ ನ್ಯೂ ಸೌತ್ ವೇಲ್ಸ್ ತಂಡವು 685 ರನ್‌ಗಳ ಟಾರ್ಗೆಟ್ ನೀಡಿತ್ತು. ಮಂಬೈ ತಂಡವು ಈ ದಾಖಲೆ ಮುರಿದು ಹೊಸ ಚರಿತ್ರೆ ಬರೆದಿದೆ.
ಮೊದಲ ಇನ್ನಿಂಗ್ಸ್‌ನಲ್ಲಿ ಮುಂಬೈ ತಂಡ 8 ವಿಕೆಟ್ ನಷ್ಟಕ್ಕೆ 647 ರನ್ ಬಾರಿಸಿ ಡಿಕ್ಲೇರ್ ಮಾಡಿದ್ದರು. ಸುವೆದ್ ಪರ್ಕಾರ್ 252 ರನ್ ಗಳಿಸಿ ಎಲ್ಲರ ಗಮನ ಸೆಳೆದರೆ, ಸರ್ಫರಾಜ್ ಖಾನ್ 153 ರನ್ ಗಳಿಸಿ ಮಿಂಚಿದರು. ನಂತರ ಬ್ಯಾಟಿಂಗ್ ಮಾಡಿದ ಉತ್ತರಾಖಂಡದ ತಂಡದವರು ಈ ಬೃಹತ್ ಸ್ಕೋರ್ ತಲುಪುವ ಪ್ರಯತ್ನದಲ್ಲಿದ್ದರು. ಆದರೆ ಶಾಮ್ಸ್ ಮುಲಾನಿ ಅವರ ಭರ್ಜರಿ ಬೌಲಿಂಗ್ ದಾಳಿಯಿಂದಾಗಿ ಅದು ಸಾಧ್ಯವಾಗಲಿಲ್ಲ. ಶಾಮ್ಸ್ ಮುಲಾನಿ 5 ವಿಕೆಟ್ ಪಡೆಯುವ ಮೂಲಕ ಉತ್ತರಾಖಂಡವನ್ನು ಕೇವಲ 114 ರನ್‌ಗಳಿಗೆ ಕಟ್ಟಿಹಾಕಿದರು.
ಎರಡನೇ ಇನ್ನಿಂಗ್ಸ್‌ಗೆ ಹೆಜ್ಜೆಯಿಟ್ಟ ಮುಂಬೈ ತಂಡವು ಮತ್ತೊಮ್ಮೆ ಅದ್ಭುತ ಆಟ ಪ್ರದರ್ಶಿಸಿದರು. ನಾಯಕ ಪೃಥ್ವಿ ಶಾ ಅವರ 72 ರನ್ ಹಾಗೂ ಯಶಸ್ವಿ ಜೈಸ್ವಾಲ್ ಅವರ ರೋಚಕ ಶತಕ ಬೃಹತ್ ಟಾರ್ಗೆಟ್ ನೀಡಲು ನೆರವಾಯಿತು. 3 ವಿಕೆಟ್ ನಷ್ಟಕ್ಕೆ 261 ರನ್ ಗಳಿಸಿ ಮುಂಬಯಿ ಡಿಕ್ಲೇರ್ ಮಾಡಿತು.
ಎರಡನೇ ಇನ್ನಿಂಗ್ಸ್‌ನಲ್ಲಿ ಉತ್ತರಾಖಂಡ ಕೇವಲ 69 ರನ್‌ಗೆ ಆಲ್‌ಔಟ್ ಆಯಿತು. ಮುಂಬೈ ಪರ ಬೌಲಿಂಗ್ ಮಾಡಿದ ಧವಳ್ ಕುಲ್ಕರ್ಣಿ, ಶಾಮ್ಸ್ ಮುಲಾನಿ, ತನುಷ್ ಕೊಟ್ಯಾನ್ ತಲಾ 3 ವಿಕೆಟ್ ಪಡೆದರು. ಉತ್ತರಾಖಂಡದಲ್ಲಿ ಇಬ್ಬರೇ ಇಬ್ಬರು ಆಟಗಾರರು ಮಾತ್ರ ಎರಡು ಅಂಕಿಯ ರನ್ ಗಳಿಸಲು ಸಾಧ್ಯವಾಯಿತು. 5 ಆಟಗಾರರು ಶೂನ್ಯಕ್ಕೆ ಔಟ್ ಆದರು. ಮುಂಬೈ ತಂಡ ಈಗ ಸೆಮಿಫೈನಲ್ ತಲುಪಿದೆ.