Site icon Vistara News

Ranji Trophy | ಕ್ವಾರ್ಟರ್‌ ಫೈನಲ್‌ನಲ್ಲಿ ಸೋತು ಟೂರ್ನಿಯಿಂದ ಹೊರಬಿದ್ದ ಕರ್ನಾಟಕ

ಬೆಂಗಳೂರು: Ranji Trophy | ಕರ್ನಾಟಕ ಹಾಗೂ ಉತ್ತರಪ್ರದೇಶ ನಡುವಿನ ರಣಜಿಯ ಕ್ವಾರ್ಟರ್‌ ಫೈನಲ್‌ ಪಂದ್ಯದಲ್ಲಿ ಕರ್ನಾಟಕವು ಸೋತು ಹೊರಬಿದ್ದಿದೆ. ಉತ್ತರಪ್ರದೇಶ ತಂಡವು 5 ವಿಕೆಟ್‌ಗಳ ರೋಚಕ ಗೆಲುವು ಸಾಧಿಸಿದೆ.

ಗೆಲುವಿನ ಭರವಸೆಯನ್ನು ಕಳೆದುಕೊಂಡಿದ್ದ ಉತ್ತರಪ್ರದೇಶ ಅಂತಿಮ ಘಟ್ಟದಲ್ಲಿ ಮ್ಯಾಚ್‌ ಅವರ ಪರ ಟರ್ನ್‌ ಮಾಡಿ ಗೆಲುವು ಪಡೆಯುವಲ್ಲಿ ಯಶಸ್ವಿಯಾಗಿದೆ. ಕರ್ನಾಟಕದ ಆಲೂರು ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಕರ್ನಾಟಕ ಗೆಲ್ಲಲು ಸಾಧ್ಯವಾಗಿಲ್ಲ. ಕರ್ನಾಟಕದವರಿಗೆ ಗೆಲ್ಲುವ ಅವಕಾಶವಿತ್ತಾದರೂ ಉತ್ತರ ಪ್ರದೇಶದ ಆಟಗಾರರು ಅದ್ಭುತ ಬ್ಯಾಟಿಂಗ್‌ ಪ್ರದರ್ಶಿಸಿ ಕರ್ನಾಟಕಕ್ಕೆ ಸೋಲುಣಿಸಿದ್ದಾರೆ. ಕ್ವಾರ್ಟರ್‌ ಫೈನಲ್‌ನಲ್ಲಿ ಗೆಲುವು ಸಾಧಿಸಿದ ಉತ್ತರ ಪ್ರದೇಶ ಮುಂದಿನ ಹಂತಕ್ಕೆ ತಲುಪಿದೆ.ಒಂದೆಡೆ ಉತ್ತರಪ್ರದೇಶ ಗೆಲುವಿನ ಸಂಭ್ರಮದಲ್ಲಿದ್ದರೆ, ಮತ್ತೊಂದೆಡೆ ಟೂರ್ನಿಯಿಂದ ಹೊರಬಿದ್ದ ಬೇಸರದಲ್ಲಿ ಕರ್ನಾಟಕವಿದೆ.

ಉತ್ತರಪ್ರದೇಶ ತಂಡವು ಟಾಸ್‌ ಗೆದ್ದು ಮೊದಲು ಬೌಲಿಂಗ್‌ ಆಯ್ಕೆಮಾಡಿಕೊಂಡಿತ್ತು. ‌ಮೊದಲ ಇನ್ನಿಂಗ್ಸ್‌ನಲ್ಲಿ ಕರ್ನಾಟಕದ ಆರಂಭಿಕ ಆಟಗಾರ ರವಿಕುಮಾರ್ 57 ರನ್‌ ಗಳಿಸಿ ತಂಡಕ್ಕೆ ಉತ್ತಮ ಆರಂಭ ನೀಡಿದರು. ಮಧ್ಯಮ ಕ್ರಮಾಂಕದ ಶ್ರೇಯಸ್‌ ಗೋಪಾಲ್‌ ಅವರು ಅಜೇಯ 56 ರನ್‌ಗಳಿಸಿ ತಂಡಕ್ಕೆ ನೆರವಾದರು. ಮೊದಲ ಇನ್ನಿಂಗ್ಸ್‌ನಲ್ಲಿ ಕರ್ನಾಟಕ 84 ಓವರ್‌ನಲ್ಲಿ 253 ರನ್‌ ಗಳಿಸಿ ಆಲ್‌ಔಟ್‌ ಆದರು. ಉತ್ತರಪ್ರದೇಶದ ಶಿವಮ್‌ ಮವಿ 3 ವಿಕೆಟ್‌ ಪಡೆದರು.

ಕರ್ನಾಟಕ ತಂಡದವರು ಮೊದಲ ಇನ್ನಿಂಗ್ಸ್‌ನಲ್ಲಿ ಉತ್ತಮ ಬೌಲಿಂಗ್‌ ಪ್ರದರ್ಶಿಸಿ ಉತ್ತರಪ್ರದೇಶವನ್ನು 155 ರನ್‌ಗೆ ಆಲ್‌ಔಟ್‌ ಮಾಡಿದರು. ಕರ್ನಾಟಕದ ಪರ ರೊನಿತ್‌ ಮೋರೆ 3 ವಿಕೆಟ್‌ ಪಡೆದು ಮಿಂಚಿದರು.

2ನೇ ಇನ್ನಿಂಗ್ಸ್‌ ಆರಂಭದಲ್ಲಿ ಕರ್ನಾಟಕ 98 ರನ್‌ಗಳ ಲೀಡ್‌ನಲ್ಲಿತ್ತು. ಒಳ್ಳೆಯ ಟಾರ್ಗೆಟ್‌ ನೀಡುವ ಅವಕಾಶವಿತ್ತು. ಆದರೆ ಉತ್ತರಪ್ರದೇಶ ಭರ್ಜರಿ ಬೌಲಿಂಗ್‌ ದಾಳಿ ನಡೆಸಿ ಕರ್ನಾಟಕದ ಬ್ಯಾಟರ್‌ಗಳನ್ನು ಬೆಚ್ಚಿಬೀಳಿಸಿದರು. ಕರ್ನಾಟಕ ತಂಡಕ್ಕೆ 39 ಓವರ್‌ಗಳಲ್ಲಿ ಕೇವಲ 114 ರನ್‌ ಮಾತ್ರ ಗಳಿಸಲು ಸಾಧ್ಯವಾಯಿತು. ಬ್ಯಾಟರ್‌ಗಳ ಬೇಜವಾಬ್ದಾರಿ ಪ್ರದರ್ಶನ ತಂಡದ ಸೋಲಿಗೆ ಪ್ರಮುಖ ಕಾರಣವಾಯಿತು. ಉತ್ತರಪ್ರದೇಶಕ್ಕೆ 213 ರನ್‌ ಟಾರ್ಗೆಟ್!‌ ಈ ಟಾರ್ಗೆಟ್‌ನ್ನು ಬೆನ್ನಟ್ಟಿದ ಉತ್ತರಪ್ರದೇಶ ತಂಡದವರು ಅದ್ಭುತವಾಗಿ ಆಡಿದರು. ತಂಡದ ನಾಯಕ ಕರಣ್‌ ಶರ್ಮಾ ಅವರ ಅಜೇಯ 93 ರನ್‌ ಈ ಪಂದ್ಯದ ಟರ್ನಿಂಗ್‌ ಪಾಯಿಂಟ್.‌ ಪ್ರಿಯಾಮ್‌ ಗರ್ಗ್‌ 52 ರನ್‌ಗಳಿಸಿ ಉತ್ತಮ ಸಾಥ್‌ ನೀಡಿದರು.

ಇದನ್ನೂ ಓದಿ: ಕರ್ನಾಟಕ ರಣಜಿ ಟೀಮ್ ಪ್ರಕಟ; ಮನೀಷ್‌ ಪಾಂಡೆಗೆ ಕ್ಯಾಪ್ಟನ್‌ ಪಟ್ಟ

Exit mobile version