ಲಖನೌ: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಹಾಲಿ ಆವೃತ್ತಿಯ ಐಪಿಎಲ್ನಲ್ಲಿ ಮತ್ತೊಂದು ಬಾರಿ ಬ್ಯಾಟಿಂಗ್ ವೈಫಲ್ಯ ಪ್ರದರ್ಶಿಸಿತು. ಲಕ್ನೊ ಸೂಪರ್ ಜಯಂಟ್ಸ್ ವಿರುದ್ಧದ ಪಂದ್ಯದಲ್ಲಿ ಕೇವಲ 126 ರನ್ ಪೇರಿಸಿ ಇನಿಂಗ್ಸ್ ಮುಗಿಸಿತು. ಇದರೊಂದಿಗೆ ಆತಿಥೇಯ ತಂಡದ ಗೆಲುವಿಗೆ 127 ರನ್ಗಳ ಸಣ್ಣ ಮೊತ್ತ ಎದುರಾಗಿದೆ.
ಭಾರತರತ್ನ ಶ್ರೀ ಅಟಲ್ಬಿಹಾರಿ ವಾಜಪೇಯಿ ಕ್ರಿಕೆಟ್ ಸ್ಟೇಡಿಯಮ್ನಲ್ಲಿ ನಡೆದ ಹಣಾಹಣಿಯಲ್ಲಿ ಆರ್ಸಿಬಿ ತಂಡದ ನಾಯಕ ಫಾಫ್ ಡು ಪ್ಲೆಸಿಸ್ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು. ಮೊದಲು ಬ್ಯಾಟ್ ಮಾಡಿ ದೊಡ್ಡ ಮೊತ್ತ ಪೇರಿಸಿ ಗೆಲುವು ಸಾಧಿಸುವುದು ನಾಯಕನ ಯೋಜನೆಯಾಗಿತ್ತು. ಆದರೆ, ಆರ್ಸಿಬಿ ಬ್ಯಾಟರ್ಗಳು ಅದಕ್ಕೆ ತದ್ವಿರುದ್ಧವಾಗಿ ಆಡಿ 20 ಓವರ್ಗಳಲ್ಲಿ 9 ವಿಕೆಟ್ ಕಳೆದುಕೊಂಡು 126 ರನ್ ಬಾರಿಸಿತು.
ಆರ್ಸಿಬಿ ತಂಡ ಉತ್ತಮ ಆರಂಭವನ್ನೇ ಪಡೆದಿತ್ತು. ವಿರಾಟ್ ಕೊಹ್ಲಿ (31) ಹಾಗೂ ಫಾಫ್ ಡು ಪ್ಲೆಸಿಸ್ ಮೊದಲ ವಿಕೆಟ್ಗೆ 62 ರನ್ ಗಳಿಸಿದರು. ಈ ಮೂಲಕ ಉತ್ತಮ ಮೊತ್ತ ಪೇರಿಸುವ ಸೂಚನೆ ಸಿಕ್ಕಿತು. ಆದರೆ, ಕೊಹ್ಲಿ ವಿಕೆಟ್ ಪತನಗೊಂಡ ಬಳಿಕ ಆರ್ಸಿಬಿಯ ಪತನ ಆರಂಭಗೊಂಡಿತು. ಅನುಜ್ ರಾವತ್ (9) ಗ್ಲೆನ್ ಮ್ಯಾಕ್ಸ್ವೆಲ್ (4) ಸುಯಾಶ್ ಪ್ರಭುದೇಸಾಯಿ (6) ಬೇಗೆ ವಿಕೆಟ್ ಕಳೆದುಕೊಂಡರು. ಈ ಮೂಲಕ ಆರ್ಸಿಬಿಯ ದೊಡ್ಡ ಮೊತ್ತದ ಕನಸಿಗೆ ಕಲ್ಲು ಬಿತ್ತು.
ದಿನೇಶ್ ಕಾರ್ತಿಕ್ 16 ರನ್ ಬಾರಿಸಿದರೂ ಮಹಿಪಾಲ್ ಲಾಮ್ರೋರ್ 3 ರನ್ ಬಾರಿಸಿ ಮತ್ತೆ ವೈಫಲ್ಯ ಕಂಡರು. ವಾನಿಂದು ಹಸರಂಗ 8 ರನ್ ಬಾರಿಸಿದರೆ, ಕರಣ್ ಶರ್ಮಾ 2 ರನ್ಗೆ ವಿಕೆಟ್ ಒಪ್ಪಿಸಿದರು. ಹೇಜಲ್ವುಡ್ 1 ರನ್ ಬಾರಿಸಿದರೆ, ಸಿರಾಜ್ ಶೂನ್ಯಕ್ಕೆ ಔಟಾದರು.
ಲಕ್ನೊ ತಂಡದ ಪರ ಬೌಲಿಂಗ್ನಲ್ಲಿ ನವೀನ್ ಉಲ್ ಹಕ್ 21 ರನ್ಗಳಿಗೆ 3 ವಿಕೆಟ್ ಉರುಳಿಸಿದರೆ ಅಮಿತ್ ಮಿಶ್ರಾ ಹಾಗೂ ರವಿ ಬಿಷ್ಣೋಯಿ ತಲಾ 2 ವಿಕೆಟ್ ಪಡೆದರು. ಕೆ. ಗೌತಮ್ 1 ವಿಕೆಟ್ ತಮ್ಮದಾಗಿಸಿಕೊಂಡರು.