Site icon Vistara News

IPL 2023 : ಸೇಡು ತೀರಿಸಿಕೊಂಡ ಆರ್​ಸಿಬಿ, ಲಕ್ನೊ ವಿರುದ್ಧ 18 ರನ್​ ಜಯ

RCB beat Lucknow by 18 runs

#image_title

ಲಖನೌ: ಐಪಿಎಲ್​ 16ನೇ ಅವೃತ್ತಿಯ 43ನೇ ಪಂದ್ಯದಲ್ಲಿ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡದ ಲಕ್ನೊ ಸೂಪರ್​ ಜಯಂಟ್ಸ್ ವಿರುದ್ಧ 18 ರನ್​ಗಳಿಂದ ಗೆಲುವು ಸಾಧಿಸಿದೆ. ಈ ಮೂಲಕ ತವರಿನಲ್ಲಿ ಸೋಲಿಸಿದ್ದ ಸೇಡಿಗೆ ಪ್ರತ್ಯುತ್ತರ ನೀಡಿತು. ಈ ಜಯದ ಮೂಲಕ ಆಡಿರುವ 9 ಪಂದ್ಯಗಳಲ್ಲಿ ಐದು ವಿಜಯವನ್ನು ಕಾಣುವ ಮೂಲಕ ಅಂಕಪಟ್ಟಿಯಲ್ಲಿ ಐದನೇ ಸ್ಥಾನಕ್ಕೇರಿತು. ಅತ್ತ ಲಕ್ನೊ ಸೂಪರ್ ಜಯಂಟ್ಸ್​ ತಂಡ ಮೂರನೇ ಸ್ಥಾನಕ್ಕೆ ಇಳಿಯಿತು.

ಭಾರತರತ್ನ ಶ್ರೀ ಅಟಲ್​​ಬಿಹಾರಿ ವಾಜಪೇಯಿ ಕ್ರಿಕೆಟ್​ ಸ್ಟೇಡಿಯಮ್​ನಲ್ಲಿ ನಡೆದ ಹಣಾಹಣಿಯಲ್ಲಿ ಆರ್​ಸಿಬಿ ತಂಡದ ನಾಯಕ ಫಾಫ್ ಡು ಪ್ಲೆಸಿಸ್ ಟಾಸ್​ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು. ಮೊದಲು ಬ್ಯಾಟ್​ ಮಾಡಿ ದೊಡ್ಡ ಮೊತ್ತ ಪೇರಿಸಿ ಗೆಲುವು ಸಾಧಿಸುವುದು ನಾಯಕನ ಯೋಜನೆಯಾಗಿತ್ತು. ಆದರೆ, ಆರ್​ಸಿಬಿ ಬ್ಯಾಟರ್​ಗಳು ಅದಕ್ಕೆ ತದ್ವಿರುದ್ಧವಾಗಿ ಆಡಿ 20 ಓವರ್​ಗಳಲ್ಲಿ 9 ವಿಕೆಟ್​ ಕಳೆದುಕೊಂಡು 126 ರನ್​ ಬಾರಿಸಿತು. ಗುರಿ ಬೆನ್ನಟ್ಟಿದ ಲಕ್ನೊ ತಂಡ 10. ಓವರ್​​ಗಳಲ್ಲಿ 108 ರನ್​ಗಳಿಗೆ ಆಲ್​ಔಟ್​ ಆಯಿತು.

ಗುರಿ ಬೆನ್ನಟ್ಟಿ ಲಕ್ನೊ ತಂಡ ಅತ್ಯಂತ ಕಳಪೆ ಬ್ಯಾಟಿಂಗ್ ಮಾಡಿತು. 38 ರನ್​ಗಳಿಗೆ 5 ವಿಕೆಟ್​ ಕಳೆದುಕೊಂಡು ಸಂಕಷ್ಟಕ್ಕೆ ಬಿತ್ತು. ಕೊನೇ ತನಕವೂ ತಂಡ ಚೇತರಿಸಿಕೊಳ್ಳದೇ ಆಲ್​ಔಟ್​ ಆಯಿತು. ಬೌಲಿಂಗ್ ಪಿಚ್​​ನ ಲಾಭ ಪಡೆದ ಆರ್​​ಸಿಬಿ ಬೌಲರ್​ಗಳು ಸತತವಾಗಿ ವಿಕೆಟ್ ಉರುಳಿಸಿದರು. ಕೃಷ್ಣಪ್ಪ ಗೌತಮ್​ ಲಕ್ನೊ ಪರ 23 ರನ್​ ಬಾರಿಸಿ ಗರಿಷ್ಠ ಸ್ಕೋರರ್​ ಎನಿಸಿಕೊಂಡರು. ಕೃಣಾಲ್​ ಪಾಂಡ್ಯ 14 ರನ್ ಬಾರಿಸಿದರೆ, ಮಾರ್ಕ್​ ಸ್ಟೊಯ್ನಿಸ್​ 13 ರನ್​ ಗಳಿಸಿದರು. ಅಮಿತ್ ಮಿಶ್ರಾ 19 ರನ್​ ಕಲೆ ಹಾಕಿದರೆ ನವೀನ್​ ಉಲ್​ ಹಕ್​ 13 ರನ್ ಬಾರಿಸಿದರು.

ಆರ್​ಸಿಬಿ ತಂಡ ಉತ್ತಮ ಆರಂಭವನ್ನೇ ಪಡೆದಿತ್ತು. ವಿರಾಟ್​ ಕೊಹ್ಲಿ (31) ಹಾಗೂ ಫಾಫ್​ ಡು ಪ್ಲೆಸಿಸ್​ ಮೊದಲ ವಿಕೆಟ್​ಗೆ 62 ರನ್ ಗಳಿಸಿದರು. ಈ ಮೂಲಕ ಉತ್ತಮ ಮೊತ್ತ ಪೇರಿಸುವ ಸೂಚನೆ ಸಿಕ್ಕಿತು. ಆದರೆ, ಕೊಹ್ಲಿ ವಿಕೆಟ್​ ಪತನಗೊಂಡ ಬಳಿಕ ಆರ್​ಸಿಬಿಯ ಪತನ ಆರಂಭಗೊಂಡಿತು. ಅನುಜ್​ ರಾವತ್​ (9) ಗ್ಲೆನ್ ಮ್ಯಾಕ್ಸ್​ವೆಲ್​ (4) ಸುಯಾಶ್​ ಪ್ರಭುದೇಸಾಯಿ (6) ಬೇಗೆ ವಿಕೆಟ್​ ಕಳೆದುಕೊಂಡರು. ಈ ಮೂಲಕ ಆರ್​​ಸಿಬಿಯ ದೊಡ್ಡ ಮೊತ್ತದ ಕನಸಿಗೆ ಕಲ್ಲು ಬಿತ್ತು.

ಇದನ್ನೂ ಓದಿ : Mumbai Indians vs Rajasthan Royals: ಮುಂಬಯಿ ಇಂಡಿಯನ್ಸ್ ವಿರುದ್ಧ ರಾಜಸ್ಥಾನ್​ ರಾಯಲ್ಸ್ ಐಪಿಎಲ್​ ಪಂದ್ಯಗಳಲ್ಲಿ ಬಾರಿಸಿದ ಗರಿಷ್ಠ ಸ್ಕೋರ್​​ಗಳು

ದಿನೇಶ್​ ಕಾರ್ತಿಕ್​ 16 ರನ್​ ಬಾರಿಸಿದರೂ ಮಹಿಪಾಲ್ ಲಾಮ್ರೋರ್​ 3 ರನ್​ ಬಾರಿಸಿ ಮತ್ತೆ ವೈಫಲ್ಯ ಕಂಡರು. ವಾನಿಂದು ಹಸರಂಗ 8 ರನ್​ ಬಾರಿಸಿದರೆ, ಕರಣ್​ ಶರ್ಮಾ 2 ರನ್​ಗೆ ವಿಕೆಟ್​ ಒಪ್ಪಿಸಿದರು. ಹೇಜಲ್​ವುಡ್​ 1 ರನ್​ ಬಾರಿಸಿದರೆ, ಸಿರಾಜ್​ ಶೂನ್ಯಕ್ಕೆ ಔಟಾದರು.

ಲಕ್ನೊ ತಂಡದ ಪರ ಬೌಲಿಂಗ್​ನಲ್ಲಿ ನವೀನ್​ ಉಲ್​ ಹಕ್​ 21 ರನ್​ಗಳಿಗೆ 3 ವಿಕೆಟ್​ ಉರುಳಿಸಿದರೆ ಅಮಿತ್​ ಮಿಶ್ರಾ ಹಾಗೂ ರವಿ ಬಿಷ್ಣೋಯಿ ತಲಾ 2 ವಿಕೆಟ್ ಪಡೆದರು. ಕೆ. ಗೌತಮ್​ 1 ವಿಕೆಟ್​ ತಮ್ಮದಾಗಿಸಿಕೊಂಡರು.

Exit mobile version