Site icon Vistara News

IPL 2023 : ಮುಂಬಯಿ ವಿರುದ್ಧ ಆರ್​ಸಿಬಿಗೆ 6 ವಿಕೆಟ್​ ಸೋಲು

Suryakumar Yadav

ಮುಂಬಯಿ: ಮತ್ತೊಂದು ಬಾರಿ ತನ್ನ ದೌರ್ಬಲ್ಯ ಪ್ರದರ್ಶಿಸಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಐಪಿಎಲ್​ 16ನೇ ಅವೃತ್ತಿಯ 54ನೇ ಪಂದ್ಯದಲ್ಲಿ ಮುಂಬಯಿ ಇಂಡಿಯನ್ಸ್ ವಿರುದ್ಧ 6 ವಿಕೆಟ್ ಹೀನಾಯ ಸೋಲಿಗೆ ಒಳಗಾಯಿತು. ಇದರೊಂದಿಗೆ ಹಾಲಿ ಆವೃತ್ತಿಯಲ್ಲಿ ಸತತ ಎರಡನೇ ಸೋಲಿಗೆ ಒಳಗಾಗಿ ಪ್ಲೇಆಫ್​ ಹಾದಿಯನ್ನು ಕಠಿಣ ಮಾಡಿಕೊಂಡಿತು. ಸೋಲಿನೊಂದಿಗೆ ಆರ್​ಸಿಬಿ ಐಪಿಎಲ್ ಅಂಕಪಟ್ಟಿಯಲ್ಲಿ ಏಳನೇ ಸ್ಥಾನಕ್ಕೆ ಇಳಿದರೆ, ಮುಂಬಯಿ ಇಂಡಿಯನ್ಸ್​ ಮೂರನೇ ಸ್ಥಾನಕ್ಕೆ ಏರಿತು.

ವಾಖೆಂಡೆ ಕ್ರಿಕೆಟ್ ಸ್ಟೇಡಿಯಮ್​ನಲ್ಲಿ ನಡೆದ ಹಣಾಹಣಿಯಲ್ಲಿ ಆರ್​ಸಿಬಿ ತಂಡ ಟಾಸ್ ಸೋತು ಮೊದಲು ಬ್ಯಾಟಿಂಗ್​ಗೆ ಆಹ್ವಾನ ಪಡೆಯಿತು. ಅಂತೆಯೇ ನಿಗದಿತ 20 ಓವರ್​ಗಳಲ್ಲಿ 6 ವಿಕೆಟ್​ ಕಳೆದುಕೊಂಡು 199 ರನ್​ಗಳ ಸ್ಪರ್ಧಾತ್ಮಕ ಮೊತ್ತ ಪೇರಿಸಿತು. ಪ್ರತಿಯಾಗಿ ಬ್ಯಾಟ್​ ಮಾಡಿದ ಮುಂಬಯಿ ತಂಡ 16.3 ಓವರ್​​ಗಳಲ್ಲಿ 4 ವಿಕೆಟ್​ಗೆ 200 ರನ್ ಬಾರಿಸಿ ಗೆಲುವು ಪಡೆಯಿತು.

ಇದರೊಂದಿಗೆ ಆರ್​ಸಿಬಿ ಪರ ವಫಾಫ್​ ಡು ಪ್ಲೆಸಿಸ್​ (65) ಹಾಗೂ ಗ್ಲೆನ್​ ಮ್ಯಾಕ್ಸ್​ವೆಲ್​ (68) ಬಾರಿಸಿದ್ದ ಅರ್ಧ ಶತಕಗಳು ವ್ಯರ್ಥಗೊಂಡವು. ದುರ್ಬಲ ಬೌಲಿಂಗ್ ವಿಭಾಗವೇ ಆರ್​ಸಿಬಿ ಸೋಲಿನ ನೇರ ಹೊಣೆ ಹೊತ್ತುಕೊಂಡಿತು. ಮುಂಬಯಿ ಬ್ಯಾಟರ್​​ಗಳಿಗೆ ಯಾವುದೇ ಹಂತದಲ್ಲಿ ಪ್ರತಿರೋಧ ಒಡ್ಡಲು ಆರ್​ಸಿಬಿ ಬೌಲರ್​ಗಳು ಸಾಫಲ್ಯ ಕಾಣಲಿಲ್ಲ.

ಗುರಿ ಬೆನ್ನಟ್ಟಿದ ಮುಂಬಯಿ ತಂಡ ಆರಂಭದಲ್ಲೇ ರೋಹಿತ್​ ಶರ್ಮಾ (7) ವಿಕೆಟ್ ಕಳೆದುಕೊಂಡರೂ, ಇಶಾನ್ ಕಿಶನ್ 21 ಎಸೆತಗಳಲ್ಲಿ ಬಾರಿಸಿದ 42 ರನ್​ಗಳ ಬಲದಿಂದ ಉತ್ತಮ ಆರಂಭ ಪಡೆಯಿತು. ಅದಾದ ಬಳಿಕ ಆಡಲು ಬಂದ ಸೂರ್ಯಕುಮಾರ್ ಯಾದವ್ ಅಬ್ಬರದ ಬ್ಯಾಟಿಂಗ್ ನಡೆಸಿ 35 ಎಸೆತಕ್ಕೆ 83 ರನ್​ ಬಾರಿಸಿದರು. ಯುವ ಬ್ಯಾಟರ್​ ನೇಹರ್ ವಧೇರಾ 34 ಎಸೆತಗಳಿಗೆ 52 ರನ್ ಬಾರಿಸಿ ಗೆಲುವು ತಂದುಕೊಟ್ಟರು. ಈ ಜೋಡಿ ಮೂರನೇ ವಿಕೆಟ್​ಗೆ 142 ರನ್​ ಬಾರಿಸಿ ಮುಂಬಯಿ ತಂಡದ ಜಯವನ್ನು ಸುಲಭಗೊಳಿಸಿತು.

ಟಾಸ್​ ಗೆದ್ದು ಮೊದಲು ಬ್ಯಾಟ್​ ಮಾಡಿದ ಆರ್​ಸಿಬಿ ತಂಡಕ್ಕೆ ವಿರಾಟ್​ ಕೊಹ್ಲಿ 1 ರನ್​ಗೆ ಔಟಾಗುವ ಮೂಲಕ ಆರಂಭಿಕ ಹಿನ್ನಡೆ ಉಂಟಾಯಿತು. ಬಳಿಕ ಆಡಲು ಬಂದ ಅನುಜ್​ ರಾವತ್ 6 ರನ್​ಗೆ ವಿಕೆಟ್​ ಒಪ್ಪಿಸಿ ಮತ್ತೊಮ್ಮೆ ಹಿನ್ನಡೆಗೆ ಒಳಗಾದರು. ಈ ವೇಳೆ ಜತೆಯಾದ ನಾಯಕ ಫಾಫ್​ ಡು ಪ್ಲೆಸಿಸ್ (65) ಹಾಗೂ ಗ್ಲೆನ್ ಮ್ಯಾಕ್​ವೆಲ್ ಅಬ್ಬರದ ಆಟ ಪ್ರದರ್ಶಿಸಿದರು. ಈ ಜೋಡಿ ಅಬ್ಬರದ ಹೊಡೆತಗಳ ಮೂಲಕ ಮೂರನೇ ವಿಕೆಟ್​ಗೆ 120 ರನ್ ಪೇರಿಸಿತು. ಪ್ಲೆಸಿಸ್​ 30 ಎಸೆತಗಳಲ್ಲಿ ಅರ್ಧ ಶತಕ ಪೂರೈಸಿದಲ್ಲದೆ, 41 ಎಸೆತಗಳಲ್ಲಿ 3 ಸಿಕ್ಸರ್​ ಹಾಗೂ 5 ಫೋರ್ ಸಮೇತ 65 ರನ್ ಬಾರಿಸಿದರು. ಮ್ಯಾಕ್ಸ್​ವೆಲ್ 25 ಎಸೆತಗಳನ್ನು ಬಳಸಿಕೊಂಡು ಅರ್ಧ ಶತಕ ಬಾರಿಸಿದಲ್ಲದೆ, 33 ಎಸೆತಗಳಲ್ಲಿ 4 ಸಿಕ್ಸರ್​ ಹಾಗೂ 8 ಫೋರ್​ಗಳ ಸಮೇತ 68 ರನ್ ಬಾರಿಸಿದರು.

ಇದನ್ನೂ ಓದಿ : Virat kohli : ರನ್​ಗಳಿಸಲು ವಿರಾಟ್ ಕೊಹ್ಲಿಗೆ ಹೊಸ ತಂತ್ರ ಹೇಳಿಕೊಟ್ಟ ರವಿ ಶಾಸ್ತ್ರಿ

ಸತತ ವಿಕೆಟ್​ ಪತನ

ಮ್ಯಾಕ್ಸ್​ವೆಲ್​ ಹಾಗೂ ಪ್ಲೆಸಿಸ್​ ಕ್ರೀಸ್​ನಲ್ಲಿ ಇರುವ ತನಕ ಗೆಲುವಿಗೆ ಅನಿವಾರ್ಯವಾಗಿರುವ 220 ಪ್ಲಸ್​ ರನ್​ ದಾಖಲಾಗುವ ಸೂಚನೆ ಇತ್ತು. ಆದರೆ ಅವರಿಬ್ಬರು ಔಟಾದ ಬಳಿಕ ಆರ್​ಸಿಬಿ ತನ್ನ ಚಾಳಿ ಮುಂದುವರಿಸಿತು. ಇಂಪ್ಯಾಕ್ಟ್​ ಪ್ಲೇಯರ್​ ರೂಪದಲ್ಲಿ ಆಡಲು ಬಂದಿದ್ದ ಅವರು 1 ರನ್​ ಬಾರಿಸಿ ನಿರಾಸೆಯಿಂದ ಪೆವಿಲಿಯನ್​ಗೆ ಮರಳಿದರು. ದಿನೇಶ್ ಕಾರ್ತಿಕ್​ ಒಂದು ಜೀವದಾನ ಪಡದುಕೊಂಡು 18 ಎಸೆತಗಳಿಗೆ 30 ರನ್​ ಬಾರಿಸಿದರೂ, ಕೇದಾರ್ ಜಾಧವ್​ ಹಾಗೂ ವಾನಿಂದು ಹಸರಂತ ತಲಾ 12 ರನ್​ ಬಾರಿಸಿದರು.

ಮುಂಬಯಿ ಪರ ಜೇಸನ್​ ಬೆಹ್ರೆನ್​ಡಾರ್ಫ್​ 3 ವಿಕೆಟ್ ಉರುಳಿಸಿದರೆ, ಕ್ಯಾಮೆರಾನ್​ ಗ್ರೀನ್, ಕ್ರಿಸ್ ಜೊರ್ಡಾನ್​ ಹಾಗೂ ಕುಮಾರ್ ಕಾರ್ತಿಕೇಯ ತಲಾ ಒಂದು ವಿಕೆಟ್​ ಗೆದ್ದರು.

Exit mobile version