ನವ ದೆಹಲಿ: ಡಿಸ್ನಿ-ಸ್ಟಾರ್ ಸಂಸ್ಥೆಗೆ ಕೆಟ್ಟ ದಿನಗಳು ಬಂದಿವೆ. ಅವರು ಅಂದುಕೊಂಡಂತೆ ಎಲ್ಲವೂ ನಡೆದಿಲ್ಲ. ಚಂದಾದಾರರ ಸಂಖ್ಯೆ ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿದೆ. ಇದಕ್ಕೆ ಕಾರಣ ರಿಲಯನ್ಸ್ ಜಿಯೊ (Reliance Jio). ಐಪಿಎಲ್ ಹಾಗೂ ಭಾರತ ಕ್ರಿಕೆಟ್ ತಂಡದ ದ್ವಿಪಕ್ಷೀಯ ಸರಣಿಯ ಡಿಜಿಟಲ್ ಪ್ರಸಾರದ ಹಕ್ಕುಗಳನ್ನು ಜಿಯೊ ತನ್ನದಾಗಿಸಿಕೊಂಡಿದೆ. ಇದು ಹಾಟ್ಸ್ಟಾರ್ಗೆ ನಷ್ಟಗಳ ಮೇಲೆ ನಷ್ಟ ಉಂಟು ಮಾಡುತ್ತಿದೆ. ಮಾಧ್ಯಮ ವರದಿಗಳ ಪ್ರಕಾರ, ಡಿಸ್ನಿ-ಸ್ಟಾರ್ ತನ್ನ ಒಟಿಟಿ ಫ್ಲ್ಯಾಟ್ಫಾರ್ಮ್ ಆಗಿರುವ ಹಾಟ್ಸ್ಟಾರ್ ಅನ್ನು ರಿಲಯನ್ಸ್ ಸಂಸ್ಥೆಗೇ ಮಾರಾಟ ಮಾಡಲು ಮುಂದಾಗಿದೆ. ಅದಕ್ಕಾಗಿ ಜಿಯೊ ಸೇರಿದಂತೆ ಸಂಭಾವ್ಯ ಸಂಸ್ಥೆಗಳೊಂದಿಗೆ ಮಾತುಕತೆಗೆ ಮುಂದಾಗಿದೆ ಎನ್ನಲಾಗಿದೆ.
ಬ್ಲೂಮ್ಬರ್ಗ್ ಪ್ರಕಾರ, ಕಂಪನಿಯು ತನ್ನ ಪ್ರಮುಖ ಪ್ರತಿಸ್ಪರ್ಧಿ ರಿಲಯನ್ಸ್ ಜತೆ ಪ್ರಾಥಮಿಕ ಮಾತುಕತೆ ನಡೆಸಿದೆ. ರಿಲಯನ್ಸ್ ಐಪಿಎಲ್ ಮತ್ತು ಭಾರತ ಕ್ರಿಕೆಟ್ ಪಂದ್ಯಗಳ ಪ್ರಸಾರ ಗೆಲ್ಲುವಲ್ಲಿ ಡಿಸ್ನಿಯನ್ನು ಮೀರಿಸಿದ ಕಾರಣ ಅವರಿಗೆ ಮಾರಾಟ ಮಾಡಲು ಮುಂದಾಗಿದೆ. ಐಪಿಎಲ್ನಿಂದ ಹೊರಗುಳಿದ ನಂತರ, ಡಿಸ್ನಿ + ಹಾಟ್ಸ್ಟಾರ್ನಿಂದ 20 ದಶಲಕ್ಷಕ್ಕೂ ಹೆಚ್ಚು ಚಂದಾದಾರರು ಹೊರಕ್ಕೆ ಹೋಗಿದ್ದರು. ಇದು ಆ ಸಂಸ್ಥೆಗೆ ದೊಡ್ಡ ಪೆಟ್ಟು ಕೊಟ್ಟಿದೆ.
ಕೆಲವು ದಿನಗಳ ಹಿಂದೆ ಹಾಟ್ಸ್ಟಾರ್ ಬಿಸಿಸಿಐ ಮಾಧ್ಯಮ ಹಕ್ಕುಗಳನ್ನು ಕಳೆದುಕೊಂಡಿದೆ. ಇದರ ಪರಿಣಾಮವಾಗಿ, ಪ್ಲಾಟ್ಫಾರ್ಮ್ನಲ್ಲಿ ಯಾವುದೇ ಭಾರತೀಯ ಕ್ರಿಕೆಟ್ ಪಂದ್ಯಗಳು ಪ್ರಸಾರವಾಗುವುದಿಲ್ಲ . ವಯಾಕಾಮ್ 18 ಹಕ್ಕುಗಳನ್ನು ಪಡೆದುಕೊಂಡಿದೆ. ವಾಸ್ತವವಾಗಿ, ಡಿಸ್ನಿ-ಸ್ಟಾರ್ ಇ-ಹರಾಜಿನಲ್ಲಿ ಬಿಡ್ ಕೂಡ ಮಾಡಲಿಲ್ಲ. ಸಂಭಾವ್ಯ ಮಾರಾಟಕ್ಕಾಗಿ ನಡೆಯುತ್ತಿರುವ ಯಾವುದೇ ಮಾತುಕತೆಗಳ ಬಗ್ಗೆ ಪ್ರತಿಕ್ರಿಯಿಸಲು ಡಿಸ್ನಿ-ಸ್ಟಾರ್ ನಿರಾಕರಿಸಿದೆ. ರಿಲಯನ್ಸ್ ಕೂಡ ಹೆಚ್ಚಿನ ವಿವರಗಳನ್ನು ಬಹಿರಂಗಪಡಿಸಲು ನಿರಾಕರಿಸಿದೆ.
ಕಂಪನಿಯ ನೀತಿಯಂತೆ ನಾವು ಮಾಧ್ಯಮ ಊಹಾಪೋಹಗಳು ಮತ್ತು ವದಂತಿಗಳ ಬಗ್ಗೆ ಪ್ರತಿಕ್ರಿಯಿಸುವುದಿಲ್ಲ. ನಮ್ಮ ಕಂಪನಿಯು ವಿವಿಧ ಅವಕಾಶಗಳನ್ನು ನಿರಂತರವಾಗಿ ಮೌಲ್ಯಮಾಪನ ಮಾಡುತ್ತದೆ ಎಂದು ರಿಲಯನ್ಸ್ ವಕ್ತಾರರು ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ.
ಡಿಸ್ನಿ-ಸ್ಟಾರ್ ಸ್ಪೋರ್ಟ್ಸ್ ಕಾರ್ಯಕ್ರಮಗಳು
- ಇಂಡಿಯನ್ ಪ್ರೀಮಿಯರ್ ಲೀಗ್ (ಟಿವಿ)
- ICC ಮಾಧ್ಯಮ ಹಕ್ಕುಗಳು (TV & ಡಿಜಿಟಲ್)
- ಆಸ್ಟ್ರೇಲಿಯಾ ಕ್ರಿಕೆಟ್ ಹಕ್ಕುಗಳು (ಟಿವಿ ಮತ್ತು ಡಿಜಿಟಲ್)
- ಏಷ್ಯಾ ಕಪ್ ಕ್ರಿಕೆಟ್
- ಪ್ರೀಮಿಯರ್ ಲೀಗ್
- ಪ್ರೊ ಕಬಡ್ಡಿ ಲೀಗ್
- ವಿಂಬಲ್ಡನ್
ಐಪಿಎಲ್ ಮತ್ತು ಭಾರತ ಕ್ರಿಕೆಟ್ ಪಂದ್ಯಗಳನ್ನು ಕಳೆದುಕೊಂಡರೂ ಡಿಸ್ನಿ + ಹಾಟ್ಸ್ಟಾರ್ ಇನ್ನೂ ಸಾಕಷ್ಟು ಕ್ರೀಡಾಕೂಟಗಳನ್ನು ಹೊಂದಿದೆ. ಐಸಿಸಿ ಈವೆಂಟ್ಗಳು ಮಾತ್ರವಲ್ಲದೆ ಬಿಗ್ ಬ್ಯಾಷ್ ಲೀಗ್ ಮತ್ತು ಆಸ್ಟ್ರೇಲಿಯಾದ ಎಲ್ಲ ಕ್ರಿಕೆಟ್ ತವರು ಪಂದ್ಯಗಳು ಡಿಸ್ನಿ + ಹಾಟ್ಸ್ಟಾರ್ನಲ್ಲಿ ಪ್ರಸಾರವಾಗುತ್ತವೆ.
ಡಿಸ್ನಿ-ಸ್ಟಾರ್ 2023 ರ ಏಷ್ಯಾ ಕಪ್ ಅನ್ನು ಪ್ರಸಾರ ಮಾಡಿತ್ತು. 2 ಕೋಟಿಗೂ ಹೆಚ್ಚು ವೀಕ್ಷಕರು ಭಾರತ ಕ್ರಿಕೆಟ್ ಪಂದ್ಯಗಳನ್ನು ವೀಕ್ಷಿಸಿದ್ದರು. ವಿಶ್ವಕಪ್ 2023 ಸಹ ಡಿಸ್ನಿ-ಸ್ಟಾರ್ನಲ್ಲಿ ಲಭ್ಯವಿರುವುದರಿಂದ, ಮೊಬೈಲ್ ಬಳಕೆದಾರರಿಗೆ ಉಚಿತವಾಗಿ ಲಭಿಸಲಿದೆ. ಇದು ಉತ್ತಮ ವೀಕ್ಷಕರನ್ನು ಗಳಿಸಲು ಸಜ್ಜಾಗಿದೆ.
ಇದನ್ನೂ ಓದಿ: World Cup 2023 : ಸಂಜು, ಅಶ್ವಿನ್ಗೆ ನೋ ಚಾನ್ಸ್; ನಾಯಕ ರೋಹಿತ್ ಸಮರ್ಥನೆ ಹೀಗಿತ್ತು!
ಹಾಟ್ಸ್ಟಾರ್ ಮಾರಾಟ ಕಷ್ಟವೇ?
ಡಿಸ್ನಿ-ಸ್ಟಾರ್ ಈಗಾಗಲೇ ಮುಂದಿನ ನಾಲ್ಕು ವರ್ಷಗಳ ಐಸಿಸಿ ಕಾರ್ಯಕ್ರಮಗಳಿಗಾಗಿ ಜೀ ಜೊತೆ ಒಪ್ಪಂದ ಮಾಡಿಕೊಂಡಿದೆ (ಟಿವಿ ಮಾತ್ರ). ಮತ್ತು ಡಿಸ್ನಿ ಹಾಟ್ಸ್ಟಾರ್ ಅನ್ನು ಮಾರಲು ಎದುರು ನೋಡುತ್ತಿದ್ದರೂ, ಅದು ಸುಲಭವಲ್ಲ. . ವಯಾಕಾಮ್ 18 ನೊಂದಿಗೆ ವಿಲೀನವು ಆಟವನ್ನು ಬದಲಾಯಿಸಬಹುದು. ಆದರೆ ಕುಸಿಯುತ್ತಿರುವ ಡಿಜಿಟಲ್ ವ್ಯವಹಾರ ಮತ್ತು 4 ಬಿಲಿಯನ್ ಡಾಲರ್ ಮೌಲ್ಯದ ಕ್ರೀಡಾ ಹಕ್ಕುಗಳ ಹೊಣೆಗಾರಿಕೆಗಳು ಯಾವುದೇ ಸಂಭಾವ್ಯ ಒಪ್ಪಂದದೊಂದಿಗೆ ಹಳಿ ತಪ್ಪಬಹುದು ಎಂದು ಹೇಳಲಾಗಿದೆ.
ಹಾಟ್ಸ್ಟಾರ್ ಪ್ರಸ್ತುತ ಕ್ರೀಡೆ ಮತ್ತು ಮನರಂಜನಾ ಒಪ್ಪಂದಗಳೊಂದಿಗೆ ದುಬಾರಿ ಆಸ್ತಿಯಾಗಿದೆ. ಆದ್ದರಿಂದ, ರಿಲಯನ್ಸ್ ಬೆಂಬಲಿತ ವಯಾಕಾಮ್ 18 ಹೊರತುಪಡಿಸಿ, ಅನೇಕರು ಖರೀದಿ ಮಾಡಲು ಸಾಧ್ಯವಿಲ್ಲ.