Site icon Vistara News

Roger Federer: ಮತ್ತೆ ಲೇವರ್ ಕಪ್ ಟೂರ್ನಿಗೆ ಬರಲಿದ್ದಾರೆ ರೋಜರ್ ಫೆಡರರ್

roger federer farewell

ಲಂಡನ್​: ಸಾರ್ವಕಾಲಿಕ ಶ್ರೇಷ್ಠ ಟೆನ್ನಿಸ್ ಆಟಗಾರರಲ್ಲಿ ಒಬ್ಬರಾದ ರೋಜರ್ ಫೆಡರರ್(Roger Federer) ಅವರು ಕಳೆದ ವರ್ಷ ತಮ್ಮ ಟೆನಿಸ್​ ವೃತ್ತಿ ಜೀವನಕ್ಕೆ ವಿದಾಯ ಘೋಷಿಸಿದ್ದರು. ಲಂಡನ್​ನಲ್ಲಿ ನಡೆದ ಲೇವರ್ ಕಪ್​ನಲ್ಲಿ(Laver Cup) ಆಡುವ ಮೂಲಕ ವಿದಾಯ ಪಂದ್ಯವನ್ನಾಡಿದ್ದರು. ಇದೀಗ ಮತ್ತೆ ಲೇವರ್ ಕಪ್​ಗೆ ಮರಳಲಿದ್ದಾರೆ.

ಕಳೆದ ವರ್ಷ ಲಂಡನ್​ನಲ್ಲಿ ನಡೆದ ಲೇವರ್ ಕಪ್​ನಲ್ಲಿ ದೀರ್ಘಕಾಲದ ಕೋರ್ಟ್ ಎದುರಾಳಿ ರಾಫೆಲ್ ನಡಾಲ್ ಜೊತೆಗೂಡಿ ಡಬಲ್ಸ್ ಆಡಿದ ರೋಜರ್ ಫೆಡರರ್ ಅಂತಿಮ ಪಂದ್ಯದಲ್ಲಿ ಸೋಲನುಭವಿಸಿ ವಿದಾಯ ಹೇಳಿದ್ದರು. ಯೂರೋಪ್ ತಂಡವನ್ನು ಪ್ರತಿನಿಧಿಸಿದ ‘ಫೆಡಲ್’ ಶುಕ್ರವಾರದ ಪಂದ್ಯದಲ್ಲಿ ಟೀಮ್ ವರ್ಲ್ಡ್​ನ ಜಾಕ್ ಸಾಕ್ ಮತ್ತು ಫ್ರಾನ್ಸಿಸ್ ಟಿಯಾಫೊ ವಿರುದ್ಧ 6-4, 6(2)-7, 9-11 ಸೆಟ್‌ಗಳಿಂದ ಸೋತಿದ್ದರು. ಪಂದ್ಯ ಸೋತರೂ. ಪೂರ್ಣ ಸ್ಟೇಡಿಯಂ ಫೆಡರರ್ ಮಯವಾಗಿತ್ತು.

ಭಾವುಕ ಸನ್ನಿವೇಶಕ್ಕೆ ಕಾರಣವಾಗಿದ್ದ ಸ್ಟೇಡಿಯಂ

ಪಂದ್ಯದ ನಂತರ ಕೆಲ ಹೊತ್ತು ಭಾವುಕ ಸನ್ನಿವೇಶಕ್ಕೆ ಅಂಕಣ ಸಾಕ್ಷಿಯಾಗಿತ್ತ. ನಡಾಲ್ ಮತ್ತು ಎದುರಾಳಿಗಳಾದ ಸಾಕ್ ಹಾಗು ಟಿಯಾಫೊ ಅವರು ಫೆಡರರ್ ಅವರನ್ನು ತಬ್ಬಿಕೊಂಡರು. ದಿಗ್ಗಜ ಆಟಗಾರರಾದ ರಾಫೆಲ್ ನಡಾಲ್, ಜೋಕೊವಿಕ್ ಕಣ್ಣಾಲಿಗಳು ತುಂಬಿ ಬಂದಿದ್ದವು. ಪ್ರೇಕ್ಷಕರು ಸ್ಟ್ಯಾಂಡ್‌ ನಿಂದ ಫೆಡರರ್​ಗೆ ಚಪ್ಪಾಳೆಗಳ ಸುರಿಮಳೆಗೈದು ಟೆನ್ನಿಸ್ ಕೂಟದ ಕ್ಲಾಸ್ ಆಟಗಾರನಿಗೆ ವಿದಾಯ ಹೇಳಿದ್ದರು. ಇದೀಗ ತಮ್ಮ ವಿದಾಯದ ಮೊದಲ ವರ್ಷದ ಸಂಭ್ರವನ್ನು ಮೆಲುಕು ಹಾಕುವ ನಿಟ್ಟಿನಲ್ಲಿ ಈ ಬಾರಿಯ ಲೇವರ್ ಕಪ್​ಗೆ ಫೆಡರರ್ ಬರಲಿದ್ದಾರೆ. ಈ ಕುರಿತು ಅವರು ಸಾಮಾಜಿ ಜಾಲತಾಣದಲ್ಲಿ ವಿಡಿಯೊ ತುಣುಕೊಂದನ್ನು ಹಾಕಿದ್ದಾರೆ.

ಇದನ್ನೂ ಓದಿ Roger Federer | ವೃತ್ತಿ ಟೆನಿಸ್‌ನ ನಿವೃತ್ತಿ ಕುರಿತು ರೋಜರ್‌ ಫೆಡರರ್‌ ಹೇಳಿದ್ದೇನು?

ನಾನು ಆಟಗಾರನಾಗಿ ಲೇವರ್ ಕಪ್ ಟೂರ್ನಿಯನ್ನು ಬಹಳಷ್ಟು ಮಿಸ್​ ಮಾಡಿಕೊಳ್ಳುತ್ತಿದ್ದೇನೆ. ನನ್ನ ಗೆಳೆಯ ರಾಫಾ ಅವರೊಂದಿಗೆ ಆಡುವ ಅವಕಾಶ ಕೈತಪ್ಪಿದೆ. ಅಂದು ನಾನು ವಿದಾಯ ಹೇಳುವಾಗ ಅವರು ಸುರಿಸಿದ ಕಣ್ಣಿರಿನ ದೃಶ್ಯ ಈಗಾಗಲೂ ನನ್ನ ಕಣ್ಣ ಮುಂದಿದೆ. ಈ ಬಾರಿ ನಾನು ಆಟಗಾರ ಬದಲಾಗಿ ಈ ಟೂರ್ನಿಯ ಸಂಘಟಕರೊಂದಿಗೆ ಕಾಣಿಸಿಕೊಳ್ಳಲಿದ್ದು ಮತ್ತೊಮ್ಮೆ ಹಳೆಯ ನೆನಪುಗಳನ್ನು ಮೆಲುಕು ಹಾಕಲಿದ್ದೇನೆ ಎಂದು ಫೆಡರರ್​ ಹೇಳಿದ್ದಾರೆ.

ಗ್ರ್ಯಾಂಡ್ ಸ್ಲಾಮ್ ಪ್ರಶಸ್ತಿಗಳಲ್ಲಿ ಮೂರನೇ ಸ್ಥಾನ

20 ಗ್ರ್ಯಾಂಡ್ ಸ್ಲಾಮ್ ಪ್ರಶಸ್ತಿಗಳನ್ನು(20-time Grand Slam champion) ಗೆದ್ದ ಮೊದಲ ಪುರುಷ ಆಟಗಾರ, ಟೆನಿಸ್ ದಂತಕಥೆ ಫೆಡರರ್ ಅವರು 2003 ರಲ್ಲಿ ವಿಂಬಲ್ಡನ್ ಮೂಲಕ ಮೊದಲ ಗ್ರಾಂಡ್ ಸ್ಲಾಮ್ ಗೆದ್ದರು. ಅಂದಿನಿಂದ ಅವರು 6 ಆಸ್ಟ್ರೇಲಿಯನ್ ಓಪನ್, 1 ಫ್ರೆಂಚ್ ಓಪನ್, 8 ವಿಂಬಲ್ಡನ್ ಮತ್ತು 5 ಯುಎಸ್ ಓಪನ್ ಪ್ರಶಸ್ತಿಗಳನ್ನು ಗೆದ್ದು ಇತಿಹಾಸ ಬರೆದಿದ್ದಾರೆ.ಫೆಡರರ್ ತನ್ನ ಪ್ರಮುಖ ಪ್ರತಿಸ್ಪರ್ಧಿಗಳಾದ ರಾಫೆಲ್ ನಡಾಲ್ ಮತ್ತು ನೊವಾಕ್ ಜೊಕೊವಿಕ್ ನಂತರ ಗ್ರ್ಯಾಂಡ್ ಸ್ಲಾಮ್ ಪ್ರಶಸ್ತಿಗಳ ಪ್ರಕಾರ ಮೂರನೇ ಸ್ಥಾನದಲ್ಲಿದ್ದಾರೆ.

Exit mobile version