Site icon Vistara News

Rohit Sharma: ವಿಶ್ವಕಪ್​ ಗೆದ್ದ ನಾಯಕ ರೋಹಿತ್​ಗೆ ಆಶೀರ್ವಾದ ಮಾಡಿದ ಕಾಂತಾರದ ‘ಪಂಜುರ್ಲಿ’ ದೈವ!

Rohit Sharma: Let the celebration begin in kantara style

ಬಾರ್ಬಡೋಸ್​: ಭಾರತೀಯ ಕ್ರಿಕೆಟ್​ ಅಭಿಮಾನಿಗಳು ಕಳೆದ 13 ವರ್ಷಗಳಿಂದ ಶಬರಿ ರಾಮನಿಗೆ ಕಾದಂತೆ ಕಾಯುತ್ತಿದ್ದ ಐಸಿಸಿ ಟ್ರೋಫಿ ಕನಸು ಕೊನೆಗೂ ನನಸಾಗಿದೆ. ಶನಿವಾರ ಬ್ರಿಜ್‌ಟೌನ್‌ನ ಕೆನ್ಸಿಂಗ್ಟನ್‌ ಓವಲ್​ನಲ್ಲಿ ನಡೆದಿದ್ದ ಟಿ20 ವಿಶ್ವಕಪ್​ ಫೈನಲ್(T20 World Cup 2024)​ ಪಂದ್ಯದಲ್ಲಿ ಭಾರತ ತಂಡ ದಕ್ಷಿಣ ಆಫ್ರಿಕಾವನ್ನು(South Africa vs India) ಮಣಿಸಿ 17 ವರ್ಷಗಳ ಬಳಿಕ ಮತ್ತೊಂದು ಟಿ20 ವಿಶ್ವಕಪ್​ ಗೆದ್ದ ಸಾಧನೆ ಮಾಡಿತು. ಈ ಸಾಧನೆಗೆ ತಂಡದ ನಾಯಕ ರೋಹಿತ್​ ಶರ್ಮಗೆ(Rohit Sharma) ಕನ್ನಡದ ಕಾಂತಾರ(kantara) ಸಿನಿಮಾದ ಪಂಜುರ್ಲಿ ದೈವ(kantara panjurli) ಆಶೀರ್ವಾದ ಮಾಡಿದೆ ಎಂಬ ಪೋಸ್ಟ್‌ಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗುತ್ತಿವೆ.

ಹೌದು, ಕಾಂತಾರ ಸಿನಿಮಾದಲ್ಲಿ ಪಂಜುರ್ಲಿ ದೈವಾವೇಷದ ದೈವನರ್ತನ ಪಾತ್ರವು ಭಾರಿ ಗಮನ ಸೆಳೆದಿತ್ತು. ಇದೇ ದೈವ ನರ್ತಕನು, 17 ವರ್ಷಗಳ ಬಳಿಕ ಟಿ20 ವಿಶ್ವಕಪ್​ ಗೆಲ್ಲಿಸಿಕೊಟ್ಟ ಸಂಭ್ರಮದಲ್ಲಿ ಮೈದಾನದಲ್ಲೇ ಮಲಗಿದ ನಾಯಕ ರೋಹಿತ್​ ಶರ್ಮ ಅವರಿಗೆ ಆಶೀರ್ವಾದ ಮಾಡುವ, ಸ್ಫೂರ್ತಿ ತುಂಬಿ ಬಡಿದೆಬ್ಬಿಸುವ ರೀತಿಯ ಫೋಟೊಗಳನ್ನು ನೆಟ್ಟಿಗರು ಹಂಚಿಕೊಂಡಿದ್ದಾರೆ. “ಕಾಂತಾರದ ಪಂಜುರ್ಲಿ ದೈವವು ಭಾರತ ತಂಡದ ಗೆಲುವಿಗೆ ಮತ್ತು ರೋಹಿತ್​ ಅವರ ಕನಸಿನ ವಿಶ್ವಕಪ್​ ಗೆಲ್ಲುವಲ್ಲಿ ನೆರವಾಯಿತು” ಎಂದೆಲ್ಲ ನೆಟ್ಟಿಗರು ಬರೆದುಕೊಂಡಿದ್ದಾರೆ. ಈ ಫೋಟೊಗಳು ಹಾಗೂ ಪೋಸ್ಟ್‌ಗಳು ಭಾರಿ ವೈರಲ್‌ ಆಗಿವೆ.

ವಿದಾಯ ಹೇಳಿದ ರೋಹಿತ್​


ನಾಯಕನಾಗಿ ಮತ್ತು ಆಟಗಾರನಾಗಿ 2 ಟಿ20 ವಿಶ್ವಕಪ್​ ಗೆದ್ದ ರೋಹಿತ್​ ಗೆಲುವಿನ ಬಳಿಕ ಟಿ20 ಕ್ರಿಕೆಟ್​ಗೆ ನಿವೃತ್ತಿ ಘೋಷಿಸಿದರು. ಈ ಮೂಲಕ ಸ್ಮರಣೀಯ ವಿದಾಯ ಪಡೆದರು. ಪಂದ್ಯದ ಬಳಿಕ ಮಾತನಾಡಿದ ರೋಹಿತ್​, “ಇದು ನನ್ನ ಕೊನೆಯ ಅಂತಾರಾಷ್ಟ್ರೀಯ ಟಿ20 ಪಂದ್ಯ. ಚುಟುಕು ಮಾದರಿಯ ಕ್ರಿಕೆಟ್​ಗೆ ವಿದಾಯ ಹೇಳಲು ಇದಕ್ಕಿಂತ ಸಕಾಲ ಇನ್ನೊಂದಿಲ್ಲ. ನಾನು ಮೊದಲು ಭಾರತ ತಂಡಕ್ಕೆ ಪದಾರ್ಪಣೆ ಮಾಡಿದ್ದೇ ಟಿ20 ಆಡುವ ಮೂಲಕ. ನಾಕಯನಾಗಿ ನಾನು ಕಪ್ ಗೆಲ್ಲಬೇಕೆಂದು ಬಯಸಿದ್ದೆ. ಇದು ಸಾಕಾರಗೊಂಡಿದೆ” ಎಂದು ಹೇಳುವ ಮೂಲಕ ವಿದಾಯ ಹೇಳಿದರು. ಟಿ20ಯಲ್ಲಿ 159 ಪಂದ್ಯಗಳನ್ನು ಆಡಿರುವ ರೋಹಿತ್‌, 4231 ರನ್‌ ಗಳಿಸಿದ್ದು, 5 ಶತಕ ಹಾಗೂ 37 ಅರ್ಧಶತಕಗಳನ್ನು ಬಾರಿಸಿದ್ದಾರೆ.

ಈ ಗೆಲುವಿನ ಸವಿ ನೆನಪಿಗಾಗಿ ರೋಹಿತ್​ ಕೆನ್ಸಿಂಗ್ಟನ್‌ ಓವಲ್​ ಪಿಚ್​ನಿಂದ ಒಂದು ಚಿಟಿಕೆ ಮಣ್ಣು ಬಾಯಿಗೆ ಹಾಕಿದ್ದಾರೆ. ಗೆಲುವಿಗೆ ನೆರವಾದ ಈ ಮೈದಾನದ ಋಣವನ್ನು ತೀರಿಸಿದ್ದಾರೆ. ಈ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಭಾರತ, ವಿರಾಟ್ ಕೊಹ್ಲಿ ಮತ್ತು ಅಕ್ಷರ್ ಪಟೇಲ್ ಅವರ ಜವಾಬ್ದಾರಿಯುತ ಆಟದ ನೆರವಿನಿಂದ 7 ವಿಕೆಟ್ ನಷ್ಟಕ್ಕೆ 176 ರನ್ ಗಳಿಸಿತು. ಈ ಮೊತ್ತವನ್ನು ಒಂದು ಹಂತದ ವರೆಗೆ ದಿಟ್ಟವಾಗಿ ಬೆನ್ನಟ್ಟಿಕೊಂಡು ಬಂದ ದಕ್ಷಿಣ ಆಫ್ರಿಕಾ 8 ವಿಕೆಟ್​ಗೆ 169 ರನ್​ ಗಳಿಸಲಷ್ಟೇ ಶಕ್ತವಾಯಿತು.

Exit mobile version