ಬೆಂಗಳೂರು: ಐಪಿಎಲ್ 15ನೇ ಆವೃತ್ತಿ ಅಂತಿಮ ಹಂತಕ್ಕೆ ತಲುಪಿದೆ. ಅಹಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಶುಕ್ರವಾರ (ಮೇ 27) ಸಂಜೆ 7.30ಕ್ಕೆ ಬೆಂಗಳೂರು ರಾಯಲ್ ಚಾಲೆಂಜರ್ಸ್ ಹಾಗೂ ರಾಜಸ್ಥಾನ್ ರಾಯಲ್ಸ್ ನಡುವೆ ಕ್ವಾಲಿಫೈಯರ್-2 ಪಂದ್ಯ ನಡೆಯಲಿದ್ದು, ಗೆದ್ದವರು ಫೈನಲ್ಗೆ ತಲುಪಲಿದ್ದಾರೆ.
ಕ್ವಾಲಿಫೈಯರ್-1ರಲ್ಲಿ ಗುಜರಾತ್ ಟೈಟನ್ಸ್ ವಿರುದ್ಧ ಸೋತ ರಾಜಸ್ಥಾನ್ ರಾಯಲ್ಸ್, ಎಲಿಮಿನೇಟರ್ ಪಂದ್ಯದಲ್ಲಿ ಲಕ್ನೋ ಸೂಪರ್ಜೈಂಟ್ಸ್ ವಿರುದ್ಧ ಗೆದ್ದ ಬೆಂಗಳೂರು ರಾಯಲ್ ಚಾಲೆಂಜರ್ಸ್ ನಡುವೆ ಈ ಮ್ಯಾಚ್ ಸೆಮಿಫೈನಲ್ನಂತಿದ್ದು, ಎರಡೂ ತಂಡಗಳು ಗೆಲುವಿಗಾಗಿ ರಣತಂತ್ರ ಹೆಣೆಯುತ್ತಿವೆ.
ಐಪಿಎಲ್ ಮೊದಲ ಆವೃತ್ತಿಯಲ್ಲಿ ಚಾಂಪಿಯನ್ ಆಗಿದ್ದ ರಾಜಸ್ಥಾನ್ ರಾಯಲ್ಸ್, ಈ ಪಂದ್ಯದಲ್ಲಿ ಗೆದ್ದರೆ 14 ವರ್ಷಗಳ ನಂತರ ಪ್ರಶಸ್ತಿ ಸುತ್ತಿಗೆ ಏರಲಿದೆ. ಹಾಗೆಯೇ ಆರ್ಸಿಬಿ ಕೂಡ ಪಂದ್ಯ ಗೆದ್ದಲ್ಲಿ ನಾಲ್ಕನೇ ಬಾರಿ ಫೈನಲ್ಗೇರಲಿದೆ. ಎರಡೂ ತಂಡಗಳಿಗೂ ಈ ಪಂದ್ಯ ನಿರ್ಣಾಯಕವಾಗಿದ್ದು, ಗೆಲುವು ಪಡೆದವರು 29ರಂದು ಫೈನಲ್ನಲ್ಲಿ ಗುಜರಾತ್ ಟೈಟನ್ಸ್ ವಿರುದ್ಧ ಸೆಣಸಲಿದ್ದಾರೆ.
ಇದುವರೆಗೆ ನಡೆದಿರುವ ಪಂದ್ಯಗಳಲ್ಲಿ ಯಾವ ತಂಡ ಪ್ರಾಬಲ್ಯ ಸಾಧಿಸಿದೆ. ಎರಡೂ ತಂಡಗಳ ಬಲ ಹಾಗೂ ದೌರ್ಬಲ್ಯಗಳ ಬಗ್ಗೆ ಈ ಕೆಳಗೆ ವಿವರಿಸಲಾಗಿದೆ.
- ಐಪಿಎಲ್ ಟಿ20 ಲೀಗ್ನಲ್ಲಿ ರಾಜಸ್ಥಾನ್, ಬೆಂಗಳೂರು ತಂಡಗಳ ನಡುವೆ ಈವರೆಗೆ 26 ಪಂದ್ಯ ನಡೆದಿದ್ದು, 13ರಲ್ಲಿ ಆರ್ಸಿಬಿ ಜಯಗಳಿಸಿದ್ದರೆ, 11ರಲ್ಲಿ ಆರ್ಆರ್ ಗೆಲುವು ಪಡೆದಿದೆ. 2 ಪಂದ್ಯಗಳಲ್ಲಿ ಫಲಿತಾಂಶ ನಿರ್ಧಾರವಾಗಿಲ್ಲ. ಈ ಬಾರಿ ಆರ್ಸಿಬಿ ಹಾಗೂ ಆರ್ಆರ್ ಲೀಗ್ ಹಂತದಲ್ಲಿ ಎರಡು ಬಾರಿ ಮುಖಾಮುಖಿಯಾಗಿದ್ದು, ಎರಡೂ ತಂಡಗಳು ತಲಾ ಒಂದು ಪಂದ್ಯದಲ್ಲಿ ಗೆದ್ದಿವೆ.
- ರಾಜಸ್ಥಾನ್ ಪ್ರಧಾನ ಬಲ ಜೋಸ್ ಬಟ್ಲರ್. ಈ ಆವೃತ್ತಿಯಲ್ಲಿ ಆರ್ಆರ್ ಪ್ಲೇಆಫ್ಗೇರಲು ಇವರು ಪ್ರಮುಖ ಪಾತ್ರ ವಹಿಸಿದ್ದಾರೆ. ಬಟ್ಲರ್ 15 ಪಂದ್ಯಗಳಲ್ಲಿ 718 ರನ್ ಕಲೆ ಹಾಕಿ ಸೀಸನ್ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರರಾಗಿದ್ದಾರೆ. ಇದರಲ್ಲಿ 3 ಶತಕ, 4 ಅರ್ಧ ಶತಕ ಸೇರಿವೆ.
- ರಾಜಸ್ಥಾನ್ ಬೌಲಿಂಗ್ ಪಡೆಯಲ್ಲಿ ಯಜುವೇಂದ್ರ ಚಾಹಲ್, ಪ್ರಸಿದ್ಧ ಕೃಷ್ಣ ಪ್ರಮುಖರು. ಈ ಸೀಸನ್ನಲ್ಲಿ ಚಾಹಲ್ ಆಡಿದ 15 ಪಂದ್ಯಗಳಲ್ಲಿ 26 ವಿಕೆಟ್ ಪಡೆದು ಅತ್ಯಧಿಕ ವಿಕೆಟ್ ಗಳಿಸಿದ ಬೌಲರ್ ಆಗಿದ್ದಾರೆ. ಪ್ರಸಿದ್ಧ ಕೃಷ್ಣ 15 ಪಂದ್ಯದಲ್ಲಿ 15 ವಿಕೆಟ್ ಪಡೆದಿದ್ದಾರೆ.
- ಈ ಆವೃತ್ತಿಯ ಲೀಗ್ ಹಂತದಲ್ಲಿ 14 ಪಂದ್ಯ ಆಡಿದ ರಾಜಸ್ಥಾನ್ 6ರಲ್ಲಿ ಗೆದ್ದು 5 ರಲ್ಲಿ ಸೋತಿದೆ. ಕ್ಲಾಲಿಫೈಯರ್-1ರಲ್ಲಿ ಗುಜರಾತ್ ವಿರುದ್ಧ ಸೋತಿದೆ.
- ಈ ಬಾರಿ ಬೆಂಗಳೂರಿಗೆ ಸ್ವಲ್ಪ ಅದೃಷ್ಟ ಒಲಿದಿದೆ. ದೆಹಲಿ ತಂಡದ ವಿರುದ್ಧ ಮುಂಬೈ ಗೆಲುವು ಪಡೆದಿದ್ದರಿಂದ ಆರ್ಸಿಬಿ ಪ್ಲೇಆಫ್ ಸೇರಲು ಸಾಧ್ಯವಾಯಿತು. ಲೀಗ್ ಹಂತದಲ್ಲಿ 14 ಪಂದ್ಯಗಳಲ್ಲಿ 8ರಲ್ಲಿ ಗೆಲುವು ಪಡೆದು 6ರಲ್ಲಿ ಸೋತಿದೆ. ಎಲಿಮಿನೇಟರ್ ಪಂದ್ಯದಲ್ಲಿ ಲಕ್ನೋ ವಿರುದ್ಧ ಗೆದ್ದು, ಕ್ವಾಲಿಫೈಯರ್-2ಗೆ ಅರ್ಹತೆ ಸಾಧಿಸಿದೆ.
- ಬೆಂಗಳೂರು ಬ್ಯಾಟಿಂಗ್ನಲ್ಲಿ ನಾಯಕ ಡುಪ್ಲೆಸಿಸ್, ವಿರಾಟ್ ಕೊಹ್ಲಿ, ದಿನೇಶ್ ಕಾರ್ತಿಕ್ ಜತೆಗೆ ಎಲಿಮಿನೇಟರ್ ಮ್ಯಾಚ್ನ ಶತಕವೀರ ರಜತ್ ಪಾಟಿದಾರ್ ಪ್ರಮುಖ ಪಾತ್ರ ವಹಿಸಲಿದ್ದಾರೆ.
- ಬೆಂಗಳೂರು ಬೌಲಿಂಗ್ನಲ್ಲಿ ವನಿಂದು ಹಸರಂಗ, ಹರ್ಷಲ್ ಪಟೇಲ್ ಪ್ರಮುಖರು. ಈ ಸೀಸನ್ನಲ್ಲಿ ಹಸರಂಗ ಈವರೆಗೆ ಆಡಿದ 15 ಪಂದ್ಯದಲ್ಲಿ 7.62 ಎಕಾನಮಿಯೊಂದಿಗೆ 25 ವಿಕೆಟ್ ಕಬಳಿಸಿ ಅತ್ಯಧಿಕ ವಿಕೆಟ್ ಪಡೆದ ಎರಡನೇ ಬೌಲರ್ ಆಗಿದ್ದಾರೆ. ಹರ್ಷಲ್ ಪಟೇಲ್ 14 ಪಂದ್ಯದಲ್ಲಿ 7.56 ಎಕಾನಮಿಯೊಂದಿಗೆ 19 ವಿಕೆಟ್ ಪಡೆದಿದ್ದಾರೆ.
- ರಾಜಸ್ಥಾನ್ ಆಟಗಾರ ಜೋಸ್ ಬಟ್ಲರ್ ಅವರನ್ನು ಆದಷ್ಟು ಬೇಗ ಪೆವಿಲಿಯನ್ಗೆ ಸೇರಿಸಿದರೆ ಬೆಂಗಳೂರಿಗೆ ವಿಜಯಾವಕಾಶ ಹೆಚ್ಚಾಗಿದೆ.
- ಒಟ್ಟಾರೆಯಾಗಿ ಪ್ರಶಸ್ತಿ ಸುತ್ತಿಗೆ ಅರ್ಹತೆ ಸಾಧಿಸಲು ನಡೆಯುವ ಕ್ವಾಲಿಫೈಯರ್-2 ಪಂದ್ಯ ರಸವತ್ತರವಾಗಿ ಸಾಗುವ ಅವಕಾಶವಿದೆ. ಎಲಿಮೀನೇಟರ್ ಪಂದ್ಯದ ಮಾದರಿಯಲ್ಲಿ ಆರ್ಸಿಬಿ ವಿಜೃಂಭಿಸಿದರೆ ಗೆಲ್ಲುವುದು ಕಷ್ಟವೇನಲ್ಲ.