ಬೆಂಗಳೂರು: ಸಿಎಂ ಸಿದ್ದರಾಮಯ್ಯ ಅವರು ಫೆಬ್ರುವರಿ 16ರಂದು ಮಂಡಿಸಿರುವ ಕರ್ನಾಟಕ ರಾಜ್ಯ ಬಜೆಟ್ನಲ್ಲಿ (Karnataka Budget 2024 ) ಕ್ರೀಡಾಕ್ಷೇತ್ರಕ್ಕೆ ಹಲವು ಕೊಡುಗೆಗಳನ್ನು ನೀಡಿದ್ದಾರೆ. ಪ್ರಮುಖವಾಗಿ ಅವರು ಒಲಿಂಪಿಕ್ಸ್ನಂಥ ಅಂತಾರಾಷ್ಟ್ರೀಯ ಮಟ್ಟದ ಕೂಟದಲ್ಲಿ ಪದಕಗಳನ್ನು ಗೆಲ್ಲುವ ಕ್ರೀಡಾಪಟುಗಳಿಗೆ ದೊಡ್ಡ ಪ್ರಮಾಣದ ಬಹುಮಾನವನ್ನು ಘೋಷಿಸಿದ್ದಾರೆ.
2024ರಲ್ಲಿ ಪ್ಯಾರಿಸ್ ಒಲಿಂಪಿಕ್ಸ್ ನಡೆಯಲಿದ್ದು, ಈ ಹಿನ್ನೆಲೆಯಲ್ಲಿ ರಾಜ್ಯದ ಕ್ರೀಡಾಪಟುಗಳು ಚಿನ್ನದ ಪದಕ ಗೆದ್ದರೆ ಅವರಿಗೆ 6 ಕೋಟಿ ರೂಪಾಯಿ ಬಹುಮಾನ ನೀಡುವುದಾಗಿ ಪ್ರಕಟಿಸಿದ್ದಾರೆ. ಬೆಳ್ಳಿ ಗೆದ್ದರೆ 4 ಕೋಟಿ ರೂಪಾಯಿ ಹಾಗೂ ಕಂಚಿನ ಪದಕಧಾರಿಗಳಿಗೂ 3 ಕೋಟಿ ರೂಪಾಯಿ ನೀಡುವುದಾಗಿ ಪ್ರಕಟಿಸಿದ್ದಾರೆ.
ಅದೇ ರೀತಿ ಏಷ್ಯನ್ ಮತ್ತು ಕಾಮನ್‌ವೆಲ್ತ್ ಕ್ರೀಡಾಕೂಟಗಳಲ್ಲಿ ಚಿನ್ನದ ಪದಕ ವಿಜೇತ ಕ್ರೀಡಾಪಟುಗಳಿಗೆ 35 ಲಕ್ಷ ರೂ., ಬೆಳ್ಳಿ ಪದಕ ವಿಜೇತ ಕ್ರೀಡಾಪಟುಗಳಿಗೆ 25 ಲಕ್ಷ ರೂ. ಹಾಗೂ ಕಂಚಿನ ಪದಕ ವಿಜೇತ ಕ್ರೀಡಾಪಟುಗಳಿಗೆ 15 ಲಕ್ಷ ರೂ. ಪ್ರೋತ್ಸಾಹಧನ ನೀಡಲು ಕ್ರಮ ಕೈಗೊಳ್ಳುವುದಾಗಿ ಘೋಷಿಸಲಾಗಿದೆ.
ಇದನ್ನೂ ಓದಿ: Karnataka Budget 2024 : ಸಿದ್ದು ಬಜೆಟ್‌ನ ಘೋಷಣೆಗಳ ಸಂಪೂರ್ಣ ಪಟ್ಟಿ; ಇದನ್ನು ಓದಿದ್ರೆ ಸಾಕು!
ಬಹುಮಾನವಲ್ಲದೆ ಬಜೆಟ್ನಲ್ಲಿ ಕ್ರೀಡೆ ಹಾಗೂ ಯುವ ಸಬಲೀಕರಣ ಇಲಾಖೆಗೆ ಹಲವಾರು ಯೋಜನೆಗಳನ್ನು ಪ್ರಕಟಿಸಿದ್ದಾರೆ. ವಿವಿಧ ಇಲಾಖೆಗಳ ನೇಮಕದಲ್ಲಿ ಕ್ರೀಡಾಪಟುಗಳಿಗೆ ಶೇಕಡಾ 2ರಷ್ಟು ಮೀಸಲು ನೀಡುವುದಾಗಿ ಬಜೆಟ್ನಲ್ಲಿ ಪ್ರಕಟಿಸಲಾಗಿದೆ. ಬೆಂಗಳೂರಿನ ಉತ್ತರ ತಾಲೂಕಿನ 70 ಎಕರೆ ಪ್ರದೇಶದಲ್ಲಿ ಸಾರ್ವಜನಿಕ- ಖಾಸಗಿ ಸಹಭಾಗಿತ್ವದಲ್ಲಿ ಕ್ರೀಡಾ ನಗರ (Sports City) ಸ್ಥಾಪನೆ ಹಾಗೂ ನಾಲ್ಕು ಅತ್ಯಾಧುನಿಕ ಕ್ರೀಡಾ ಸಂಕೀರ್ಣಗಳ ನಿರ್ಮಾಣ ಮಾಡುವುದಾಗಿ ಘೋಷಿಸಲಾಗಿದೆ. ರಾಜ್ಯದ ವಿವಿಧ ಕ್ರೀಡಾ ಸಂಘ ಸಂಸ್ಥೆಗಳಿಗೆ 12 ಕೋಟಿ ರೂ. ಅನುದಾನ ನೀಡುವುದಾಗಿ ಘೋಷಿಸಲಾಗಿದೆ.
ಕ್ರೀಡಾ ವಸತಿ ನಿಲಯ
ರಾಜ್ಯದ 14 ಸ್ಥಳಗಳಲ್ಲಿ ಮುಂದಿನ ಎರಡು ವರ್ಷದೊಳಗೆ 35 ಕೋಟಿ ರೂ. ವೆಚ್ಚದಲ್ಲಿ ಮಹಿಳಾ ಕ್ರೀಡಾ ವಸತಿ ನಿಲಯ, ಕೊಡಗು ಜಿಲ್ಲೆಯ ಪೊನ್ನಂಪೇಟೆಯಲ್ಲಿ 5 ಕೋಟಿ ರೂ. ವೆಚ್ಚದಲ್ಲಿ ಕ್ರೀಡಾ ವಸತಿ ನಿಲಯ ಕಟ್ಟಡ ನಿರ್ಮಾಣ ಹಾಗೂ 10 ಕೋಟಿ ರೂ. ವೆಚ್ಚದಲ್ಲಿ ಬಳ್ಳಾರಿಯಲ್ಲಿ ಕ್ರೀಡಾ ವಸತಿ ನಿಲಯದ ಉನ್ನತೀಕರಣ ಹಾಗೂ ಕ್ರೀಡಾ ಸೌಕರ್ಯಗಳ ಅಭಿವೃದ್ಧಿಗೆ ಕ್ರಮ ಕೈಗೊಳ್ಳುವುದಾಗಿ ಘೋಷಿಸಲಾಗಿದೆ.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ
ಮಹಿಳೆಯರ ಆರ್ಥಿಕ ಸ್ವಾತಂತ್ರ್ಯಕ್ಕೆ ಬೆಂಬಲ ನೀಡುವ ಮಹತ್ವಾಕಾಂಕ್ಷಿ ಯೋಜನೆ ಗೃಹಲಕ್ಷ್ಮಿ. ಈ ಯೋಜನೆಯಡಿ ಕುಟುಂಬದ ಯಜಮಾನಿ ಮಹಿಳೆಗೆ ಪ್ರತಿ ತಿಂಗಳು 2,000 ರೂ. ನೀಡಲಾಗುತ್ತಿದೆ. ಕುಟುಂಬ ದತ್ತಾಂಶದನ್ವಯ 1.33 ಕೋಟಿ APL, BPL, AAY ಪಡಿತರ ಚೀಟಿ ಹೊಂದಿರುವ ಯಜಮಾನಿ ಮಹಿಳೆಯರನ್ನು ಅರ್ಹ ಫಲಾನುಭವಿಗಳೆಂದು ಗುರುತಿಸಲಾಗಿದೆ. ಜನವರಿ ಅಂತ್ಯದವರೆಗೆ 1.17 ಕೋಟಿ ಮಹಿಳೆಯರು ಯೋಜನೆಯಡಿ ನೋಂದಾಯಿಸಿಕೊಂಡಿದ್ದು, ಈವರೆಗೆ 11,726 ಕೋಟಿ ರೂ.ಗಳನ್ನು ನೇರವಾಗಿ ಫಲಾನುಭವಿಗಳ ಖಾತೆಗೆ ವರ್ಗಾಯಿಸಲಾಗಿದೆ. 2024-25ನೇ ಸಾಲಿನಲ್ಲಿ 28,608 ಕೋಟಿ ರೂ. ಒದಗಿಸಲಾಗಿದೆ. ಇದರಿಂದ ಕುಟುಂಬ ನಿರ್ವಹಣೆಯ ಜೊತೆಗೆ ಆದಾಯೋತ್ಪನ್ನ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳಲು ಮಹಿಳೆಯರಿಗೆ ಈ ಯೋಜನೆ ಅವಕಾಶ ಕಲ್ಪಿಸಿದೆ.