ಮೆಲ್ಬೋರ್ನ್: ಸರ್ಬಿಯಾದ ಟೆನಿಸ್ ಆಟಗಾರ ನೊವಾಕ್ ಜೊಕೊವಿಕ್ ಪ್ರತಿಷ್ಠಿತ ಆಸ್ಟ್ರೇಲಿಯನ್ ಓಪನ್ (Australian Open) ಟೆನಿಸ್ ಟೂರ್ನಿಯ ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ. ಅವರ ಪಾಲಿಗೆ ಇದು 22ನೇ ಗ್ರ್ಯಾನ್ಸ್ಲಾಮ್ ಪ್ರಶಸ್ತಿಯಾಗಿದ್ದು, ಇದರೊಂದಿಗೆ ಅವರು ಅಷ್ಟೇ ಪ್ರಶಸ್ತಿಗಳನ್ನು ಗೆದ್ದಿರುವ ಸ್ಪೇನ್ನ ರಾಫೆಲ್ ನಡಾಲ್ ಅವರ ಸಾಧನೆಯನ್ನು ಸರಿಗಟ್ಟಿದರು. ಜತೆಗೆ 10 ಆಸ್ಟ್ರೇಲಿಯನ್ ಓಪನ್ ಟ್ರೋಫಿ ಗೆದ್ದಿರುವ ಐತಿಹಾಸಿಕ ದಾಖಲೆಯನ್ನೂ ಸೃಷ್ಟಿಸಿದರು.
ಭಾನುವಾರ (ಜನವರಿ 29) ನಡೆದ ಫೈನಲ್ ಸ್ಪರ್ಧೆಯಲ್ಲಿ ಅವರು ಗ್ರೀಸ್ನ ಸ್ಪೆಫಾನೋಸ್ ಸಿಸಿಪಾಸ್ ವಿರುದ್ಧ 6-3, 7-6 (7-4), 7-6(7-5) ನೇರ ಸೆಟ್ಗಳಿಂದ ವಿಜಯ ಸಾಧಿಸಿ ಟ್ರೋಫಿಗೆ ಮುತ್ತಿಟ್ಟರು. ಪಂದ್ಯದ ಕೊನೇ ತನಕವೂ ಎದುರಾಳಿ ಮೇಲೆ ಪಾರಮ್ಯ ಸಾಧಿಸಿದ ಸರ್ಬಿಯಾದ ಆಟಗಾರ ಹೊಸ ದಾಖಲೆ ಬರೆದರು.
ಕಳೆದ ವರ್ಷ ಜೊಕೊವಿಕ್ಗೆ ಕೊರೊನಾ ಲಸಿಕೆ ಹಾಕಿಸಿಕೊಳ್ಳದ ಕಾರಣ ಆಸ್ಟ್ರೇಲಿಯಾ ಓಪನ್ ಟೆನಿಸ್ ಟೂರ್ನಿಯಲ್ಲಿ ಪಾಲ್ಗೊಳ್ಳಲು ಸಾಧ್ಯವಾಗಿರಲಿಲ್ಲ. ಆಡುವುದಕ್ಕಾಗಿ ಬಂದಿದ್ದ ಅವರನ್ನು ಏರ್ಪೋರ್ಟ್ನಲ್ಲಿಯೇ ತಡೆದು ವಿಚಾರಣೆ ನಡೆಸಿ ವಾಪಸ್ ತವರಿಗೆ ಕಳುಹಿಸಲಾಗಿತ್ತು. ಈ ಅವಮಾನ ಎದುರಿಸಿದ್ದ ಅವರು ಹಾಲಿ ವರ್ಷದಲ್ಲಿ ಚಾಂಪಿಯನ್ಪಟ್ಟ ಅಲಂಕರಿಸುವ ಮೂಲಕ ಉತ್ತರ ಕೊಟ್ಟರು.
ಇದನ್ನೂ ಓದಿ | Australian Open : ಬೆಲಾರಸ್ನ ಅರಿನಾ ಸಬಲೆಂಕಾ ಆಸ್ಟ್ರೇಲಿಯನ್ ಓಪನ್ ಚಾಂಪಿಯನ್
ಸಿಸಿಪಾಸ್ ಅವರು 2021ರ ಫ್ರೆಂಚ್ ಓಪನ್ ಟೂರ್ನಿಯ ಫೈನಲ್ನಲ್ಲೂ ಜೊಕೊವಿಕ್ಗೆ ಎದುರಾಗಿದ್ದರು. ಅಂದು ಕೂಡ ಸರ್ಬಿಯಾದ ಆಟಗಾರನೇ ಮೇಲುಗೈ ಸಾಧಿಸಿದ್ದರು.