ವಾಷಿಂಗ್ಟನ್: ವಿಶ್ವ ಕಂಡ ಶ್ರೇಷ್ಠ ಟೆನಿಸ್ ಆಟಗಾರ್ತಿ ಸೆರೆನಾ ವಿಲಿಯಮ್ಸ್ ನಿವೃತ್ತಿ ಸುದ್ದಿಯನ್ನು ಪ್ರಕಟಿಸಿದ್ದಾರೆ. ಮುಂದಿನ ತಿಂಗಳು ೪೧ ವರ್ಷಕ್ಕೆ ಕಾಲಿಡುವ ಅವರು ತಮ್ಮ ಸುದೀರ್ಘ ವೃತ್ತಿ ಕ್ರೀಡೆಗೆ ವಿದಾಯ ಹೇಳುವುದಾಗಿ ಹೇಳಿದ್ದಾರೆ. ೨೩ ಗ್ರ್ಯಾನ್ ಸ್ಲಾಮ್ ಪ್ರಶಸ್ತಿ ವಿಜೇತರಾಗಿರುವ ಪುತ್ರಿ ಒಲಿಂಪಿಯಾಗೆ ಜನುಮ ನೀಡಿದ ಬಳಿಕ ೨೦೧೭ರಲ್ಲಿ ಟೆನಿಸ್ ಕ್ಷೇತ್ರಕ್ಕೆ ವಾಪಸಾಗಿದ್ದರು. ಆದರೆ ಆ ಬಳಿಕ ಅವರಿಗೆ ಹೆಚ್ಚಿನ ಸಾಧನೆ ಮಾಡಲು ಸಾಧ್ಯವಾಗಿಲ್ಲ.
ಆನ್‌ಲೈನ್ ಮ್ಯಾಗಜಿನ್ ಒಂದಕ್ಕೆ ಸಂದರ್ಶನ ನೀಡಿರುವ ಸೆರೆನಾ ವಿಲಿಯಮ್ಸ್ ಅವರು ತಾವು ಕ್ರೀಡೆಯಿಂದ ಮುಕ್ತಿ ಪಡೆಯಲು ಬಯಸಿದ್ದೇನೆ ಎಂದು ಹೇಳಿದ್ದಾರೆ. ಅಂತೆಯೇ ಮುಂದಿನ ಯುಎಸ್ ಓಪನ್ ಬಳಿಕ ಟೆನಿಸ್‌ನಿಂದ ದೂರ ಸರಿಯವುದಾಗಿ ಹೇಳಿದ್ದಾರೆ.
ನನಗೆ ನಿವೃತ್ತಿ ಎಂಬ ಪದ ಇಷ್ಟವಾಗುವುದಿಲ್ಲ. ಹಾಗಾಗಿ ಹೊಸ ಅಧ್ಯಾಯ ಆರಂಭಿಸುವೆ ಎಂದು ಹೇಳುತ್ತೇನೆ. ಅಂತೆಯೆ ಟೆನಿಸ್‌ನಿಂದ ಬಿಡುಗಡೆಗೊಳ್ಳುವೆ ಎಂದು ಬಳಸುತ್ತೇನೆ ಎಂದು ಹೇಳಿದ್ದಾರೆ.
ಕೆಲವು ವರ್ಷಗಳ ಹಿಂದೆ ನಾನು ವೆಂಚರ್ ಕ್ಯಾಪಿಟಲ್ ಸಂಸ್ಥೆಯನ್ನು ಆರಂಭಿಸಿದ್ದೆ. ಮುಂದೆ ನನ್ನ ಕುಟುಂಬ ಬೆಳೆಯಿತು. ಇದೀಗ ಕುಟುಂಬದೊಂದಿಗೆ ಬೆಳೆಯುತ್ತೇನೆ ಎಂದು ಸೆರೆನಾ ಹೇಳಿದ್ದಾರೆ.
ಸೆರೆನಾ ವಿಲಿಯಮ್ಸ್ ಅವರು ೭೩ ಸಿಂಗಲ್ಸ್ ಟ್ರೋಫಿಗಳನ್ನು ಗೆದ್ದಿದ್ದು, ಅದರಲ್ಲಿ ೨೩ ಗ್ರ್ಯಾನ್ ಸ್ಲಾಮ್ ಟ್ರೋಫಿಗಳೂ ಸೇರಿಕೊಂಡಿವೆ.
ಕಳೆದ ಜೂನ್‌ನಲ್ಲಿ ವಿಂಬಲ್ಡನ್‌ನಲ್ಲಿ ಅಡಿದ್ದ ಸೆರೆನಾ ಅವರು ಇದೀಗ ಟೊರೊಂಟೊ ಟೂರ್ನಿಯ ಮೊದಲ ಪಂದ್ಯದಲ್ಲಿ ಆಡಿದ್ದು, ಮೊದಲ ಸುತ್ತಿನಲ್ಲಿ ಗೆಲುವು ಸಾಧಿಸಿದ್ದಾರೆ. ಅಂತೆಯೇ ವಿಂಬಲ್ಡನ್‌ನಲ್ಲಿ ಮೊದಲ ಸುತ್ತಿನಲ್ಲಿಯೇ ಸೋತಿದ್ದರು.
ಇದನ್ನೂ ಓದಿ | Wimbeldon: ಏಳು ಬಾರಿಯ ಚಾಂಪಿಯನ್ ಮೊದಲ ಸುತ್ತಿನಲ್ಲೇ ಔಟ್