ಸಿಡ್ನಿ: ಸರಿಸುಮಾರು ಒಂದೂವರೆ ದಶಕದ ಕಾಲ ವಿಶ್ವದ ಘಟಾನುಘಟಿ ಬ್ಯಾಟ್ಸ್‌ಮನ್‌ಗಳಿಗೆ ಸಿಂಹಸ್ವಪ್ನರಾಗಿ ಗೋಚರಿಸಿದ್ದ ಆಸ್ಟ್ರೇಲಿಯಾದ ಲೆಜೆಂಡ್ರಿ ಲೆಗ್‌ಸ್ಪಿನ್ನರ್ ಶೇನ್ ವಾರ್ನ್(Shane Warne) ಕಳೆದ ವರ್ಷ ದಿಢೀರನೇ ಬದುಕಿನ ಪಯಣ ಮುಗಿಸಿದ್ದರು. ಥಾಯ್ಲೆಂಡ್‌ನ ವಿಲ್ಲಾ ಒಂದರಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಕಂಡು ಬಂದಿದ್ದರು. ಅವರ ಸಾವಿಗೆ ಇದುವರೆಗೂ ನಿರ್ದಿಷ್ಟ ಕಾರಣ ತಿಳಿದು ಬಂದಿರಲಿಲ್ಲ. ಕೆಲವರು ಹೃದಯಾಘಾತ ಎಂದರೆ ಇನ್ನು ಕೆಲವರು ಅತಿಯಾದ ಡಯಟ್ ಎಂದಿದ್ದರು. ಇದೀಗ ಈ ಪಟ್ಟಿಗೆ ಹೊಸದೊಂದು ಕಾರಣ ಸೇರಿಕೊಂಡಿದೆ. ಕೋವಿಡ್ ಲಸಿಕೆಯಿಂದ ಅವರು ನಿಧನ ಹೊಂದಿದ್ದಾರೆ ಎಂಬ ವಿಚಾರವೊಂದು ಬೆಳಕಿಗೆ ಬಂದಿದೆ. ಈ ವಿಚಾರವನ್ನು ಭಾರತೀಯ ಮೂಲದ ಯುಕೆಯಲ್ಲಿ ನೆಲೆಸಿರುವ ಹೃದ್ರೋಗ ತಜ್ಞ ಮತ್ತು ಆಸ್ಟ್ರೇಲಿಯಾದ ವೈದ್ಯರೊಬ್ಬರು ಬಹಿರಂಗಪಡಿಸಿದ್ದಾರೆ.
52 ವರ್ಷದ ವಾರ್ನ್ ಸಾವಿನ ಬಗ್ಗೆ ಮಾಹಿತಿ ನೀಡಿರುವ ಡಾ ಅಸೀಮ್ ಮಲ್ಹೋತ್ರಾ ಮತ್ತು ಡಾ ಕ್ರಿಸ್ ನೀಲ್ ಅವರು ಸುಮಾರು 9 ತಿಂಗಳ ಹಿಂದೆ ತೆಗೆದುಕೊಂಡಿದ್ದ ಕೋವಿಡ್ ಎಂಆರ್‌ಎನ್‌ಎ ಲಸಿಕೆಯಿಂದ ಅವರು ಸಾವು ಸಂಭವಿಸಿರಬಹುದು ಎಂದು ಹೇಳಿದ್ದಾರೆ.
ಇದನ್ನೂ ಓದಿ Narendra Modi: ಆಸ್ಟ್ರೇಲಿಯಾದಲ್ಲಿ ಶೇನ್ ವಾರ್ನ್‌ರನ್ನು ನೆನೆದ ಮೋದಿ; ದಿಗ್ಗಜನ ಕುರಿತು ಪ್ರಧಾನಿ ಹೇಳಿದ್ದೇನು?
ಕಳೆದ ವರ್ಷ ಥಾಯ್ಲೆಂಡ್‌ಗೆ ಆಗಮಿಸಿದ್ದ ಶೇನ್ ವಾರ್ನ್ ಇಲ್ಲಿನ 2ನೇ ಅತೀ ದೊಡ್ಡ ದ್ವೀಪವಾದ ಕೋಹ್ ಸುಮುಯಿಯ ವಿಲ್ಲಾ ಒಂದರಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಕಂಡು ಬಂದಿದ್ದರು. ಆಸ್ಪತ್ರೆಗೆ ದಾಖಲಿಸಿದರೂ ಅದಾಗಲೇ ವಾರ್ನ್ ಕೊನೆಯುಸಿರೆಳೆದಿದ್ದರು. ವಾರ್ನ್ ಅವರ ಈ ಅಕಾಲಿಕ ಅಗಲಿಕೆಯಿಂದ ಕ್ರಿಕೆಟ್ ಜಗತ್ತು ಆಘಾತಕ್ಕೊಳಗಾಗಿತ್ತು. ಜತೆಗೆ ಅವರ ಈ ದಿಢೀರ್ ಸಾವನ್ನು ಯಾರೂ ನಂಬುವ ಸ್ಥಿತಿಯಲ್ಲಿರಲಿಲ್ಲ. ಶೇನ್ ವಾರ್ನ್ ಅವರ ಸಾವಿನ ಸುದ್ದಿ ಭಾರತೀಯರಿಗೆ ಮೊದಲು ತಿಳಿದದ್ದೇ ವೀರೇಂದ್ರ ಸೆಹವಾಗ್ ಅವರ ಟ್ವೀಟ್ ಮೂಲಕ. ಅಲ್ಲಿಯ ತನಕ ಆಸ್ಟ್ರೇಲಿಯದಿಂದಲೂ ಸುದ್ದಿ ಲಭಿಸಿರಲಿಲ್ಲ.
1992ರಲ್ಲಿ ಭಾರತದ ವಿರುದ್ಧ ಸಿಡ್ನಿಯಲ್ಲಿ ಟೆಸ್ಟ್ ಪದಾರ್ಪಣೆ ಮಾಡಿದ್ದ ಶೇನ್ ಕೀತ್ ವಾರ್ನ್, 2007ರಲ್ಲಿ ಸಿಡ್ನಿಯಲ್ಲೇ ಇಂಗ್ಲೆಂಡ್ ವಿರುದ್ಧ ಅಂತಿಮ ಟೆಸ್ಟ್ ಆಡಿದ್ದರು. ಈ 15 ವರ್ಷಗಳ 145 ಟೆಸ್ಟ್ ಬಾಳ್ವೆಯಲ್ಲಿ ಅವರು ವಿಶ್ವದ ಎಲ್ಲ ಖ್ಯಾತನಾಮ ಬ್ಯಾಟ್ಸ್‌ಮನ್‌ಗಳನ್ನು ತಮ್ಮ ಸ್ಪಿನ್ ಮೋಡಿಗೆ ಸಿಲುಕಿಸಿ ಮೆರೆದಿದ್ದರು.