Site icon Vistara News

Shreyas Iyer: ಐಪಿಎಲ್​ ಸೇರಿ ವಿಶ್ವ ಟೆಸ್ಟ್​ ಫೈನಲ್​ಗೂ ಶ್ರೇಯಸ್​ ಅಯ್ಯರ್​ ಅಲಭ್ಯ!

shreyas-iyer-out-of-ipl-unavailable-for-wtc-final

ಮುಂಬಯಿ: ಬೆನ್ನುನೋವಿನಿಂದ ಬಳಲುತ್ತಿರುವ ಟೀಮ್​ ಇಂಡಿಯಾದ ಮಧ್ಯಮ ಕ್ರಮಾಂಕದ ಆಟಗಾರ ಶ್ರೇಯಸ್​ ಅಯ್ಯರ್​(Shreyas Iyer) ಬೆನ್ನುನೋವಿಗೆ ಶಸ್ತ್ರಚಿಕಿತ್ಸೆಗೆ ಒಳಗಾಗುವ ಸಾಧ್ಯತೆಯಿದೆ ಎಂದು ತಿಳಿದು ಬಂದಿದೆ. ಹೀಗಾಗಿ ಅವರು ಇಂಡಿಯನ್ ಪ್ರೀಮಿಯರ್ ಲೀಗ್‌(IPL 2023) ಮತ್ತು ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ ಫೈನಲ್(Wtc Final 2023)​ ಪಂದ್ಯದಿಂದ ಹೊರಗುಳಿಯಲಿದ್ದಾರೆ ಎಂದು ವರದಿಯಾಗಿದೆ.

ಆಸ್ಟ್ರೇಲಿಯಾ ವಿರುದ್ಧದ ಬಾರ್ಡರ್-ಗವಾಸ್ಕರ್ ಟೆಸ್ಟ್​ ಟ್ರೋಫಿಯ ಅಂತಿಮ ಟೆಸ್ಟ್​ ಪಂದ್ಯದ ವೇಳೆ ಅಯ್ಯರ್​ ಬೆನ್ನುನೋವಿಗೆ ತುತ್ತಾಗಿ ಈ ಪಂದ್ಯದಿಂದ ಹೊರಗುಳಿದಿದ್ದರು. ಇದೀಗ ಅಯ್ಯರ್​ ಅವರು ಬಿಸಿಸಿಐನ ಮಾರ್ಗದರ್ಶನದಲ್ಲಿ ಲಂಡನ್‌ನಲ್ಲಿ ಅಥವಾ ಭಾರತದಲ್ಲೇ ಶಸ್ತ್ರಚಿಕಿತ್ಸೆಗೆ ಒಳಗಾಗುವ ಸಾಧ್ಯತೆ ಇದೆ ಎಂದು ಮೂಲವೊಂದು ತಿಳಿಸಿದೆ.

ಮೂಲಗಳ ಪ್ರಕಾರ, ಅಯ್ಯರ್ ಶಸ್ತ್ರಚಿಕಿತ್ಸೆಯ ಬಳಿಕ ಕನಿಷ್ಠ ಐದು ತಿಂಗಳ ಕಾಲ ಕ್ರಿಕೆಟ್​ನಿಂದ ಹೊರಗುಳಿಯುವ ಸಾಧ್ಯತೆ ಇದೆ. ಹೀಗಾಗಿ ಅವರು ಈ ಬಾರಿ ಐಪಿಎಲ್​ ಆಡುವುದು ಅನುಮಾನ ಎನ್ನಲಾಗಿದೆ. ಈಗಾಗಲೇ ಅಯ್ಯರ್​ಗೆ ಶಸ್ತ್ರಚಿಕಿತ್ಸೆ ಅಗತ್ಯವಿದೆ ಎಂದು ಮುಂಬೈ ಮೂಲದ ವೈದ್ಯರು ಸಲಹೆ ನೀಡಿದ್ದಾರೆ.

ಭಾರತದ ಆತಿಥ್ಯದಲ್ಲಿ ನಡೆಯುವ 2023ರ ಏಕದಿನ ವಿಶ್ವಕಪ್‌ ಟೂರ್ನಿಗೂ ಮುನ್ನ ಶ್ರೇಯಸ್‌ ಅಯ್ಯರ್‌ ಅವರು ಗುಣಮುಖರಾಗಬಹುದು ಎಂದು ನಿರೀಕ್ಷಿಸಲಾಗಿದೆ. ಆದರೆ ಈ ಬಗ್ಗೆ ಇನ್ನೂ ಯಾವುದೇ ಖಚಿತತೆ ಇಲ್ಲ. ಈಗಾಗಲೇ ಕಾರು ಅಪಘಾತದಿಂದ ಗಾಯಗೊಂಡಿರುವ ರಿಷಭ್​ ಪಂತ್​ ಅವರ ಸೇವೆಯೂ ಭಾರತ ಕಳೆದುಕೊಂಡಿದ್ದೆ. ಇನ್ನೊಂದೆಡೆ ತಂಡದ ಪ್ರಧಾನ ವೇಗಿ ಜಸ್​ಪ್ರೀತ್​ ಬುಮ್ರಾ ಅವರು ಬೆನ್ನು ನೋವಿನಿಂದಾಗಿ ಸರಿ ಸುಮಾರು ಒಂದು ವರ್ಷಗಳಿಂದ ತಂಡದಿಂದ ಹೊರಗುಳಿದಿದ್ದಾರೆ.

ಇದನ್ನೂ ಓದಿ IPL 2023: ಐಪಿಎಲ್​ ವಿದಾಯದಂಚಿನಲ್ಲಿರುವ ಮೂರು ಭಾರತೀಯ ಆಟಗಾರರ ಪಟ್ಟಿ

ಸದ್ಯ ಜಸ್‌ಪ್ರೀತ್ ಬುಮ್ರಾ ನ್ಯೂಜಿಲ್ಯಾಂಡ್​ನಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾಗಿ ಚೇತರಿಕೆ ಕಾಣುತ್ತಿದ್ದಾರೆ. ಅವರ ಚೇತರಿಕೆಗೆ ಎಷ್ಟು ಕಾಲಾವಕಾಶ ಬೇಕೆಂದು ಇನ್ನೂ ತಿಳಿದುಬಂದಿಲ್ಲ. ಒಟ್ಟಾರೆ ಭಾರತಕ್ಕೆ ಗಾಯದ ಸಮಸ್ಯೆ ಕಾಡುತ್ತಲೇ ಇದೆ.

ಶ್ರೇಯಸ್‌ ಅಯ್ಯರ್‌ ಅಲಭ್ಯತೆಯಿಂದ ಕೋಲ್ಕತಾ ನೈಟ್‌ ರೈಡರ್ಸ್‌ಗೆ(KKR) ಭಾರಿ ಹಿನ್ನಡೆಯಾಗಲಿದೆ. 2022ರ ಮೆಗಾ ಹರಾಜಿನಲ್ಲಿ ಶ್ರೇಯಸ್‌ ಅಯ್ಯರ್‌ ಅವರನ್ನು ಕೋಲ್ಕತಾ ಫ್ರಾಂಚೈಸಿ 12.25 ಕೋಟಿ ರೂ. ಗಳಿಗೆ ಖರೀದಿಸಿತ್ತು. ಆ ಮೂಲಕ ಶ್ರೇಯಸ್‌ ಅಯ್ಯರ್‌ಗೆ ಕೆಕೆಆರ್ ನಾಯಕತ್ವವನ್ನು ನೀಡಲಾಗಿತ್ತು. ಆದರೆ ಇದೀಗ ಅವರು ಟೂರ್ನಿಯಿಂದ ಹೊರಗುಳಿಯುವುದು ಬಹುತೇಕ ಖಚಿತ ಎನ್ನುವಂತಿದೆ. ಹೀಗಾಗಿ ಕೆಕೆಆರ್​ ತಂಡಕ್ಕೆ ಹಿನ್ನಡೆಯಾಗುವ ಸಾಧ್ಯತೆ ಅಧಿಕ ಎನ್ನಲಡ್ಡಿಯಿಲ್ಲ.

Exit mobile version