Site icon Vistara News

IPL 2023 : ಸಿಕಂದರ್​ ರಾಜಾ ಅರ್ಧ ಶತಕ, ಪಂಜಾಬ್​ ಕಿಂಗ್​​ ತಂಡಕ್ಕೆ ಲಕ್ನೊ ವಿರುದ್ಧ ರೋಚಕ ಜಯ

#image_title

ಲಖನೌ: ಬೌಲರ್​ಗಳ ಪರಾಕ್ರಮ ಹಾಗೂ ಸಿಕಂದರ್​ ರಾಜಾ (57) ಅವರ ಅರ್ಧ ಶತಕದ ನೆರವು ಪಡೆದ ಪಂಜಾಬ್​ ಕಿಂಗ್ಸ್​ ತಂಡ ಐಪಿಎಲ್​ನ 21ನೇ ಪಂದ್ಯದಲ್ಲಿ ಲಕ್ನೊ ಸೂಪರ್​ ಜೈಂಟ್ಸ್ ವಿರುದ್ಧ 2 ವಿಕೆಟ್ ವಿಜಯ ಸಾಧಿಸಿದೆ. ಇದರೊಂದಿಗೆ ಕಳೆದ ಎರಡು ಪಂದ್ಯಗಳ ಸೋಲಿನ ಬಳಿಕ ಪಂಜಾಬ್​ ತಂಡ ಗೆಲುವಿನ ಹಳಿಗೆ ಮರಳಿತು. ಅತ್ತ ಹಿಂದಿನ ಪಂದ್ಯದಲ್ಲಿ ಆರ್​ಸಿಬಿ ವಿರುದ್ಧ ಕೊನೇ ಎಸೆತದಲ್ಲಿ ಗೆಲುವು ಪಡೆದಿದ್ದ ಲಕ್ನೊ ತಂಡ, ತವರಿನ ಮೈದಾನದಲ್ಲಿ ಸೋಲು ನಿರಾಸೆ ಎದುರಿಸಿತು. ಕಾಯಂ ನಾಯಕ ಶಿಖರ್​ ಧವನ್​ ಅನುಪಸ್ಥಿತಿಯಲ್ಲಿ ತಂಡವನ್ನು ಮುನ್ನಡೆಸಿದ್ದ ಸ್ಯಾಮ್ ಕರ್ರನ್​ ಗೆಲುವಿನ ದಡ ಮುಟ್ಟಿಸಿ ಸಂಭ್ರಮಿಸಿದರು.

ಭಾರತರತ್ನ ಅಟಲ್​ಬಿಹಾರಿ ವಾಜಪೇಯಿ ಕ್ರಿಕೆಟ್​ ಸ್ಟೇಡಿಯಮ್​ನಲ್ಲಿ ನಡೆದ ಹಣಾಹಣಿಯಲ್ಲಿ ಟಾಸ್​ ಸೋತು ಮೊದಲು ಬ್ಯಾಟ್​ ಮಾಡಿದ ಕೆ. ಎಲ್​ ರಾಹುಲ್ ನೇತೃತ್ವದ ಲಖನೌ ಸೂಪರ್​ ಜೈಂಟ್ಸ್​ ತಂಡ ನಿಗದಿತ 20 ಓವರ್​​ಗಳಲ್ಲಿ 8 ವಿಕೆಟ್​ ಕಳೆದುಕೊಂಡು 159 ರನ್​ ಬಾರಿಸಿತು. ಪ್ರತಿಯಾಗಿ ಬ್ಯಾಟ್​ ಮಾಡಿದ ಪಂಜಾಬ್​ ಕಿಂಗ್ಸ್ ಬಳಗ 19.3 ಓವರ್​ಗಳಲ್ಲಿ 8 ವಿಕೆಟ್​ ನಷ್ಟಕ್ಕೆ 161 ರನ್​ ಬಾರಿಸಿ ಜಯ ಸಾಧಿಸಿತು.

ಸಾಧಾರಣ ಗುರಿಯನ್ನು ಬೆನ್ನಟ್ಟಲು ಹೊರಟ ಪಂಜಾಬ್​ ತಂಡ ಉತ್ತಮ ಅರಂಭ ಪಡೆಯಲಿಲ್ಲ. ಆರಂಭಿಕರಾದ ಅಥರ್ವ ಥೈಡೆ ಶೂನ್ಯಕ್ಕೆ ಔಟಾದರೆ ಪ್ರಭ್​ಸಿಮ್ರಾನ್​ ಸಿಂಗ್​ 4 ರನ್​ಗಳಿಗೆ ವಿಕೆಟ್​ ಒಪ್ಪಿಸಿದರು. ಮಧ್ಯಮ ಕ್ರಮಾಂಕದಲ್ಲಿ ಮ್ಯಾಥ್ಯೂ ಶಾರ್ಟ್ಸ್​​ (34) ಹಾಗೂ ಹರ್​ಪ್ರೀತ್​ ಸಿಂಗ್​ (22) ಸ್ವಲ್ಪ ಹೊತ್ತು ಕ್ರೀಸ್​ ಕಾಯ್ದುಕೊಂಡರು. ಬಳಿಕ ಐದನೇ ಕ್ರಮಾಂಕದಲ್ಲಿ ಆಡಲು ಬಂದ ಸಿಕಂದರ್​ ರಾಜಾ ನಿಧಾನಗತಿಯಲ್ಲಿ ಇನಿಂಗ್ಸ್​ ಕಟ್ಟಿದರು. ಅವರ 57 ರನ್​ಗಳಲ್ಲಿ 4 ಫೋರ್​ ಹಾಗೂ 3 ಸಿಕ್ಸರ್​ಗಳು ಸೇರಿಕೊಂಡಿವೆ.

ಇದಾದ ಬಳಿಕ ಸ್ಯಾಮ್​ ಕರ್ರನ್​ (6) ಹಾಗೂ ಜಿತೇಶ್​ ಶರ್ಮಾ (2) ಬೇಗನೆ ವಿಕೆಟ್​ ಒಪ್ಪಿಸಿದ ಕಾರಣ ಮತ್ತೆ ತಂಡಕ್ಕೆ ಹಿನ್ನಡೆ ಉಂಟಾಯಿತು. ಆದರೆ, ಶಾರುಖ್​ ಖಾನ್​ ಕೊನೆ ಹಂತದಲ್ಲಿ 10 ಎಸೆತಗಳಿಗೆ 23 ರನ್ ಬಾರಿಸಿ ಗೆಲುವು ತಂದುಕೊಟ್ಟರು.

ಇನಿಂಗ್ಸ್ ಆರಂಭಿಸಿದ ಲಕ್ನೊ ತಂಡ ಮೊದಲ ವಿಕೆಟ್​ಗೆ 53 ರನ್ ಬಾರಿಸಿತು. ಕೈಲ್ ಮೇಯರ್ಸ್​ 23 ಎಸೆತಗಳಿಗೆ 29 ರನ್ ಬಾರಿಸಿ ವಿಕೆಟ್​ ಒಪ್ಪಿಸಿದರು. ಬಳಿಕ ಬಂದ ದೀಪಕ್​ ಹೂಡ 2 ರನ್​ಗಳಿಗೆ ಔಟಾದರು. ಅವರು ಜಿಂಬಾಬ್ವೆ ಆಲ್​ರೌಂಡರ್​ ಸಿಕಂದರ್ ರಾಜಾಗೆವಿಕೆಟ್ ಒಪ್ಪಿಸಿದರು. ಆಲ್​ರೌಂಡರ್ ಕೃಣಾಲ್​ ಪಾಂಡ್ಯ (18) ಕೂಡ ಹೆಚ್ಚು ಹೊತ್ತು ಕ್ರಿಸ್​ನಲ್ಲಿ ನಿಲ್ಲಲಿಲ್ಲ. ಆರ್​ಸಿಬಿ ವಿರುದ್ಧ ಅಬ್ಬರದ ಬ್ಯಾಟಿಂಗ್ ಪ್ರದರ್ಶನ ನೀಡಿದ್ದ ನಿಕೊಲಸ್ ಪೂರನ್ ಶೂನ್ಯ ಸುತ್ತಿದರು.

ರಾಹುಲ್ ಅರ್ಧ ಶತಕ

ಕಳೆದ ಕೆಲವು ತಿಂಗಳಿಂದ ಕಳಪೆ ಬ್ಯಾಟಿಂ ಪ್ರದರ್ಶನ ನೀಡುತ್ತಿದ್ದ ಕೆ. ಎಲ್ ರಾಹುಲ್ ಈ ಪಂದ್ಯದಲ್ಲಿ ಅರ್ಧ ಶತಕ ಬಾರಿಸಿ ಕೊರಗು ನೀಗಿಸಿಕೊಂಡರು. ಆರಂಭದಲ್ಲಿ ನಿಧಾನಗತಿಯಲ್ಲಿ ಆಡಿದ ಅವರು 40 ಎಸೆತಗಳನ್ನು ಎದುರಿಸಿ ಅರ್ಧ ಶತಕ ಪೂರೈಸಿದರು. ಬಳಿಕ ಸ್ವಲ್ಪ ವೇಗ ವೃದ್ಧಿಸಿಕೊಂಡು 56 ಎಸೆತಗಳಲ್ಲಿ 74 ರನ್ ಬಾರಿಸಿ ಔಟಾದರು. ಮಾರ್ಕ್​ ಸ್ಟೋಯ್ನಿಸ್​ 11 ಎಸೆತಗಳಲ್ಲಿ 15 ರನ್ ಗಳಿಸಿದರು.

ಇದನ್ನೂ ಓದಿ : IPL 2023: ಕನ್ನಡಿಗ ವೈಶಾಕ್​ ಬೌಲಿಂಗ್​ ದಾಳಿಗೆ ತತ್ತರಿಸಿದ ಡೆಲ್ಲಿ; ಆರ್​ಸಿಬಿಗೆ 23 ರನ್​ ಜಯ

ಪಂಜಾಬ್​ ತಂಡದ ಪರ ಬೌಲಿಂಗ್​ನಲ್ಲಿ ಸ್ಯಾಮ್​ ಕರ್ರನ್​ 29 ರನ್​ ನೀಡಿ 3 ವಿಕೆಟ್​ ಕಬಳಿಸಿದರು. ಕಗಿಸೊ ರಬಾಡ 34 ರನ್​ ವೆಚ್ಚದಲ್ಲಿ 2 ವಿಕೆಟ್ ಉರುಳಿಸಿದರು.

Exit mobile version