ಮುಂಬಯಿ: ಆತಿಥೇಯ ಪಾಕಿಸ್ಥಾನ ಮತ್ತು ಪ್ರವಾಸಿ ನ್ಯೂಜಿಲ್ಯಾಂಡ್ ವಿರುದ್ಧದ ಮೊದಲ ಟಿ20 ಪಂದ್ಯ ಇಂದು(ಶುಕ್ರವಾರ ಎಪ್ರಿಲ್ 14) ಆರಂಭಗೊಳ್ಳಲಿದೆ. ಆದರೆ ಇದಕ್ಕೂ ಮುನ್ನ ನ್ಯೂಜಿಲ್ಯಾಂಡ್ ತಂಡದ ಮಾಜಿ ಆಟಗಾರ ಸೈಮನ್ ಡೌಲ್(Simon Doull) ಅವರು ಪಾಕಿಸ್ತಾನದಲ್ಲಿ ಎದುರಿಸಿದ ಕರಾಳ ಘಟನೆಯೊಂದನ್ನು ಬಿಚ್ಚಿಟ್ಟಿದ್ದಾರೆ. ಪಾಕಿಸ್ತಾನದಲ್ಲಿ ವಾಸಿಸುವುದು ಜೈಲಿನಲ್ಲಿ ಕಾಲ ಕಳೆದಂತೆ ಎಂದು ಹೇಳಿಕೆ ನೀಡಿದ್ದಾರೆ. ಸದ್ಯ ಅವರ ಈ ಹೇಳಿಕೆ ಇದೀಗ ಕ್ರಿಕೆಟ್ ವಲಯದಲ್ಲಿ ಭಾರಿ ಸಂಚಲನ ಮೂಡಿಸಿದೆ.
ಐಪಿಎಲ್ ಟೂರ್ನಿಯಲ್ಲಿ ಕಾಮೆಂಟ್ರಿ ಮಾಡುತ್ತಿರುವ ಸೈಮನ್ ಡೌಲ್ ಅವರು ಸಂದರ್ಶನವೊಂದರಲ್ಲಿ ಈ ವಿಚಾರವನ್ನು ಹೇಳಿದ್ದಾರೆ. “ಪಾಕಿಸ್ತಾನ ಕ್ರಿಕೆಟ್ ತಂಡ ಉತ್ತಮ ಪ್ರದರ್ಶನ ನೀಡಬಹುದು. ಆದರೆ ಆ ದೇಶದಲ್ಲಿ ಕ್ರಿಕೆಟ್ ಆಡಬೇಕೆಂದರೆ ಒಂದು ಕ್ಷಣ ಯೋಚಿಸಬೇಕು. ಏಕೆಂದರೆ ಅಲ್ಲಿ ವಾಸಿಸುವುದು ಒಂದೇ ಜೈಲಿನಲ್ಲಿ ಕಾಲ ಕಳೆಯುವುದು ಒಂದೇ” ಎಂದು ಸೈಮನ್ ಡೌಲ್ ಹೇಳಿದ್ದಾರೆ.
“ಪಾಕಿಸ್ತಾನ ಸೂಪರ್ ಲೀಗ್‌ನಲ್ಲಿ ವೀಕ್ಷಕ ವಿವರಣೆ ಮಾಡುತ್ತಿದ್ದ ವೇಳೆ ಬಾಬರ್ ಅಜಂ ಅವರ ಸ್ಟ್ರೈಕ್ ರೇಟ್ ಕುರಿತು ಹೇಳಿಕೆಯೊಂದನ್ನು ನೀಡಿದ್ದೆ. ಇದಾದ ಬಳಿಕ ಬಾಬರ್ ಅಜಂ ಅವರ ಅಭಿಮಾನಿಗಳು ಆಕ್ರೋಶವನ್ನು ವ್ಯಕ್ತಪಡಿಸಲು ನಾನು ತಂಗಿದ್ದ ಹೋಟೆಲ್ ಹೊರಗಡೆ ಕಾಯುತ್ತಿದ್ದರು. ನನಗೆ ಹೋಟೆಲ್ನಿಂದ ಹೊರಗೆ ಹೋಗಲು ಬಿಡಲಿಲ್ಲ. ಹಲವು ದಿನ ಏನೂ ತಿನ್ನದೇ ಪಾಕಿಸ್ತಾನದಲ್ಲೇ ಇರಬೇಕಾಯಿತು. ನಾನು ಮಾನಸಿಕವಾಗಿ ತುಂಬಾ ನೊಂದಿದ್ದೆ. ಆದರೆ ಹೇಗಾದರೂ ನಾನು ಪಾಕಿಸ್ತಾನದಿಂದ ಸುರಕ್ಷಿತವಾಗಿ ಹೊರಬಂದೆ” ಎಂದು ಅವರು ಪಾಕಿಸ್ತಾನದಲ್ಲಿ ನಡೆದ ಘಟನೆಯನ್ನು ಹಂಚಿಕೊಂಡಿದ್ದಾರೆ.
ಇದನ್ನೂ ಓದಿ IPL 2023: ಪಂಜಾಬ್ಗೆ ಸೋಲು; ಐಪಿಎಲ್ ಅಂಕಪಟ್ಟಿ ಹೇಗಿದೆ?
ಪಾಕಿಸ್ತಾನ ಸೂಪರ್ ಲೀಗ್‌ನಲ್ಲಿ ಕ್ವೆಟ್ಟಾ ಗ್ಲಾಡಿಯೇಟರ್ಸ್ ವಿರುದ್ಧದ ಪಂದ್ಯದಲ್ಲಿ ಬಾಬರ್ ಅಜಂ ಶತಕ ಬಾರಿಸಿಸಲು ನಿಧಾನವಾಗಿ ಬ್ಯಾಟಿಂಗ್ ಮಾಡಿದ್ದಾರೆ, ಬಾಬರ್ ತಂಡಕ್ಕಿಂತ ಹೆಚ್ಚಾಗಿ ವೈಯಕ್ತಿಕ ದಾಖಲೆಗಾಗಿ ಆಡುತ್ತಾರೆ ಎಂದು ಸೈಮನ್ ಡೌಲ್ ಹೇಳಿದ್ದರು. ಇದು ಬಾಬರ್ ಅವರ ಅಭಿಮಾನಿಗಳಿಗೆ ಕೆರಳಿಸುವಂತೆ ಮಾಡಿತ್ತು.
ಕೊಹ್ಲಿಯನ್ನು ಟೀಕಿಸಿದ್ದ ಸೈಮನ್ ಡೌಲ್
ಇತ್ತೀಚೆಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಲಕ್ನೋ ಸೂಪರ್ಜೈಂಟ್ಸ್ ವಿರುದ್ಧದ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಅವರ ಬ್ಯಾಟಿಂಗ್ ಬಗ್ಗೆಯೂ ಸೈಮನ್ ಡೌಲ್ ಟೀಕೆ ವ್ಯಕ್ತಪಡಿಸಿದ್ದರು. 42 ರನ್ ಗಳಿಸಿದ್ದ ಕೊಹ್ಲಿ 50 ರನ್ ಪೂರೈಸಲು 10 ಎಸೆತಗಳನ್ನು ಬಳಸಿಕೊಂಡರು. ಇದು ತಮ್ಮ ವೈಯಕ್ತಿಕ ದಾಖಲೆಗಳ ಬಗ್ಗೆ ಕಾಳಜಿ ವಹಿಸುತ್ತದೆ. ಟಿ20 ಮಾದರಿಯಲ್ಲಿ ಇದಕ್ಕೆ ಅವಕಾಶ ಇಲ್ಲ ಎಂದು ನಾನು ಭಾವಿಸುತ್ತೇನೆ” ಎಂದಿದ್ದರು. ಇದಕ್ಕೆ ಕೊಹ್ಲಿ ಅಭಿಮಾನಿಗಳು ಸ್ಪಿನ್ನರ್ಗಳಿಗೆ ಅವರು ನಿಧಾನಗತಿಯಲ್ಲಿ ಆಡುತ್ತಾರೆ, ವೈಯಕ್ತಿಕ ದಾಖಲೆಗಾಗಿ ಆಡಿಲ್ಲ ಎಂದು ತಿರುಗೇಟು ನೀಡಿದ್ದರು.