ಬಿಸಿಸಿಐ ಮುಖ್ಯಸ್ಥ ಸೌರವ್ ಗಂಗೂಲಿ ಇಂದು ʼಹೊಸ ಯೋಜನೆ ಆರಂಭಿಸಲಿದ್ದೇನೆʼ ಎಂದು ಟ್ವೀಟ್ ಮಾಡಿದ್ದಾರೆ. ಈ ಟ್ವೀಟ್ ಹಲವು ಪ್ರಶ್ನೆಗಳನ್ನು ಹುಟ್ಟು ಹಾಕಿದೆ. ಬಿಸಿಸಿಐ ಮುಖ್ಯಸ್ಥರ ಸ್ಥಾನಕ್ಕೆ ರಾಜೀನಾಮೆ ನೀಡಿ ರಾಜಕೀಯಕ್ಕೆ ಪದಾರ್ಪಣೆ ಮಾಡುತ್ತಾರೆಯೇ ಎಂಬ ಕುತೂಹಲ ಮೂಡಿಸಿದೆ.
ಸೌರವ್ ಗಂಗೂಲಿ 1992ರಲ್ಲಿ ಕ್ರಿಕೆಟ್ ಪ್ರಪಂಚಕ್ಕೆ ಕಾಲಿಟ್ಟಿದ್ದು, ಈಗ 30 ವರ್ಷಗಳನ್ನು ಪೂರೈಸಿದ್ದಾರೆ. ಈ ಹಿನ್ನೆಲೆಯಲ್ಲಿ ಟ್ವೀಟ್ ಮಾಡಿದ ಗಂಗೂಲಿ ʼಕ್ರಿಕೆಟ್ ಈವರೆಗೆ ನನಗೆ ಅನೇಕ ಕೊಡುಗೆಗಳನ್ನು ನೀಡಿದೆ. ಮುಖ್ಯವಾಗಿ ಎಲ್ಲರ ಪ್ರೀತಿ, ಪ್ರೋತ್ಸಾಹವನ್ನು ನಾನು ಗಳಿಸಿದ್ದೇನೆ. ನನ್ನ ಈ ಪಯಣದಲ್ಲಿ ಜತೆಗಾರರದ ಎಲ್ಲರಿಗೂ ನಾನು ಆಭಾರಿ. ಈ ದಿನ ನಾನು ಒಂದು ಹೊಸ ಯೋಜನೆಗೆ ಮುಂದಾಗಿದ್ದೇನೆ. ಜನೋಪಕಾರಿ ಕಾರ್ಯವನ್ನು ಮಾಡಲು ನಿರ್ಧರಿಸಿದ್ದೇನೆ. ಮುಂದೆಯೂ ನಿಮ್ಮೆಲ್ಲರ ಪ್ರೋತ್ಸಾಹ ಹೀಗೇ ಇರಲಿʼ ಎಂದು ಹೇಳಿದ್ದಾರೆ.
ಗಂಗೂಲಿ ಅವರ ಈ ಟ್ವೀಟ್ ಅವರು ಬಿಸಿಸಿಐ ಮುಖ್ಯಸ್ಥರ ಸ್ಥಾನದಿಂದ ಕೆಳಗಿಳಿದು, ರಾಜಕೀಯ ಪ್ರವೇಶ ಮಾಡಲಿದ್ದಾರೆಯೇ ಎಂಬ ಪ್ರಶ್ನೆ ಹುಟ್ಟಿಸಿತ್ತು. ಆದರೆ ಈ ಬಗ್ಗೆ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಸ್ಪಷ್ಟನೆ ನೀಡಿದ್ದಾರೆ.
ʼಸೌರವ್ ಗಂಗೂಲಿ ಬಿಸಿಸಿಐ ಮುಖ್ಯಸ್ಥರ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿಲ್ಲʼ ಎಂದು ಶಾ ತಿಳಿಸಿದ್ದಾರೆ. ಹಾಗಿದ್ದರೆ ಗಂಗೂಲಿ ಏನು ಹೊಸತು ಆರಂಭಿಸಲಿದ್ದಾರೆ ಎಂದು ಕ್ರಿಕೆಟ್ ಅಭಿಮಾನಿಗಳಿಗೆ ಕುತೂಹಲ ಕಾಡಿದೆ.
ಇದನ್ನೂ ಓದಿ: RAHUL DRAVID ಬಿಜೆಪಿ ಸೇರಿದ್ರಾ ಹೇಗೆ? ಯುವಮೋರ್ಚಾ ಕಾರ್ಯಕಾರಿಣಿಯಲ್ಲಿ ಭಾಗಿ, ನೋ ಎಂದ ಬಿಸಿಸಿಐ