Site icon Vistara News

IND vs SA | ನೀರಸ ಬ್ಯಾಟಿಂಗ್‌, ಕಳಪೆ ಫೀಲ್ಡಿಂಗ್‌; ದಕ್ಷಿಣ ಆಫ್ರಿಕಾ ವಿರುದ್ಧ ಭಾರತ ತಂಡಕ್ಕೆ 5 ವಿಕೆಟ್‌ ಸೋಲು

IND VS SA

ಪರ್ತ್‌: ಬ್ಯಾಟಿಂಗ್‌ ವಿಭಾಗದ ವೈಫಲ್ಯ ಹಾಗೂ ಪ್ರಮುಖ ಘಟ್ಟದಲ್ಲಿ ಕಳಪೆ ಫೀಲ್ಡಿಂಗ್‌ ಮಾಡಿದ ಭಾರತ ತಂಡ ಟಿ೨೦ ವಿಶ್ವ ಕಪ್‌ನ ಗುಂಪು ೨ರ ತನ್ನ ೩ನೇ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ (IND vs SA) ವಿರುದ್ಧ 5 ವಿಕೆಟ್‌ಗಳ ಸೋಲಿಗೆ ಒಳಗಾಯಿತು. ಈ ಮೂಲಕ ಸೂರ್ಯಕುಮಾರ್‌ ಯಾದವ್‌ ಅವರ ಏಕಾಂಗಿ ಹೋರಾಟ ವ್ಯರ್ಥಗೊಂಡಿತು. ಈ ಹಣಾಹಣಿ ಗೆದ್ದ ದಕ್ಷಿಣ ಆಫ್ರಿಕಾ ತಂಡ ಗುಂಪು ಹಂತದ ಅಂಕಪಟ್ಟಿಯಲ್ಲಿ ೫ ಅಂಕಗಳೊಂದಿಗೆ ಮೊದಲ ಸ್ಥಾನಕ್ಕೇರಿದರೆ, ಭಾರತ ೪ ಅಂಕಗಳೊಂದಿಗೆ ಅಗ್ರ ಸ್ಥಾನ ಕಳೆದುಕೊಂಡಿತು.

ಪರ್ತ್‌ ಕ್ರಿಕೆಟ್‌ ಸ್ಟೇಡಿಯಮ್‌ನಲ್ಲಿ ಭಾನುವಾರ ಸಂಜೆ (ಭಾರತೀಯ ಕಾಲಮಾನ) ನಡೆದ ಪಂದ್ಯದಲ್ಲಿ ಟಾಸ್‌ ಗೆದ್ದು ಮೊದಲು ಬ್ಯಾಟ್‌ ಮಾಡಿದ ಭಾರತ ತಂಡ ನಿಗದಿತ ೨೦ ಓವರ್‌ಗಳಲ್ಲಿ ೯ ವಿಕೆಟ್‌ ಕಳೆದುಕೊಂಡು ೧೩೩ ರನ್‌ ಬಾರಿಸಿತು. ಪ್ರತಿಯಾಗಿ ಆಡಿದ ದಕ್ಷಿಣ ಆಫ್ರಿಕಾ ಬಳಗ ೧೯.೪ ಓವರ್‌ಗಳಲ್ಲಿ ೫ ವಿಕೆಟ್‌ ಕಳೆದುಕೊಂಡು ೧೩೪ ರನ್‌ ಬಾರಿಸಿ ವಿಜಯ ಸಾಧಿಸಿತು. ದಕ್ಷಿಣ ಆಫ್ರಿಕಾ ಪರ ಏಡೆನ್‌ ಮಾರ್ಕ್ರಮ್‌ (೫೨) ಹಾಗೂ ಡೇವಿಡ್ ಮಿಲ್ಲರ್‌ (ಅಜೇಯ ೫೯) ಅರ್ಧ ಶತಕಗಳನ್ನು ಬಾರಿಸಿ ಗೆಲುವಿನ ರೂವಾರಿಗಳೆನಿಸಿಕೊಂಡರು.

ಭಾರತ ತಂಡ ಅತ್ಯಂತ ಕಳಪೆ ಫೀಲ್ಡಿಂಗ್ ಪ್ರದರ್ಶನ ನೀಡಿತು. ರೋಹಿತ್ ಶರ್ಮ ಅವರು ಸುಲಭ ರನ್‌ಔಟ್‌ ಮಾಡುವ ಅವಕಾಶ ನಷ್ಟಮಾಡಿಕೊಂಡಿದ್ದು ಸೇರಿದಂತೆ ಎದುರಾಳಿ ತಂಡದ ಬ್ಯಾಟರ್‌ಗಳು ಮೂರು ರನ್ಔಟ್‌ ಜೀವದಾನ ಪಡೆದರು. ಅಲ್ಲದೆ, ಅರ್ಧ ಶತಕ ಬಾರಿಸಿದ ಏಡೆನ್‌ ಮಾರ್ಕ್ರಮ್‌ ಅವರ ಸುಲಭ ಕ್ಯಾಚ್‌ ಅನ್ನು ವಿರಾಟ್‌ ಕೊಹ್ಲಿ ಕೈ ಚೆಲ್ಲಿದರು. ಇವೆಲ್ಲವೂ ಭಾರತದ ಸೋಲಿಗೆ ಕಾರಣಗಳಾದವು.

ಭಾರತ ನೀಡಿದ ಸಣ್ಣ ಮೊತ್ತದ ಗುರಿಯನ್ನೂ ಬೆನ್ನಟ್ಟಲು ಮುಂದಾದ ದಕ್ಷಿಣ ಆಫ್ರಿಕಾ ತಂಡದ ಆರಂಭವೂ ಉತ್ತಮವಾಗಿರಲಿಲ್ಲ. ಆರಂಭಿಕರಾದ ಕ್ವಿಂಟನ್‌ ಡಿ ಕಾಕ್‌ (೧), ತೆಂಬ ಬವುಮಾ (೧೦) ಬೇಗ ವಿಕೆಟ್‌ ಒಪ್ಪಿಸಿದರೆ, ಯುವ ಬ್ಯಾಟರ್‌ ರಿಲೀ ರೊಸ್ಸೊ ಶೂನ್ಯ ಸುತ್ತಿದರು. ಬಳಿಕ ಜತೆಯಾದ ಮಾರ್ಕ್ರಮ್‌ ಹಾಗೂ ಡೇವಿಡ್‌ ಮಿಲ್ಲರ್‌ ೭೬ ರನ್‌ಗಳ ಜತೆಯಾಟ ನೀಡಿದರು. ಭಾರತ ತಂಡದ ಬೌಲರ್‌ಗಳು ಕೊನೇ ತನಕ ಎದುರಾಳಿ ತಂಡದ ಬ್ಯಾಟರ್‌ಗಳ ನಿಯಂತ್ರಣ ಸಾಧಿಸಲು ಯತ್ನಿಸಿದರೂ ಅವರ ಪ್ರಯತ್ನಗಳು ವಿಫಲಗೊಂಡವು.

ಆರಂಭಿಕರ ವೈಫಲ್ಯ

ಅದಕ್ಕಿಂತ ಮೊದಲು ಬ್ಯಾಟ್‌ ಮಾಡಿದ ಭಾರತ ತಂಡದ ಬಹುತೇಕ ಬ್ಯಾಟರ್‌ಗಳು ಈ ಪಂದ್ಯದಲ್ಲಿ ವೈಫಲ್ಯ ಕಂಡರು. ಕೆ. ಎಲ್‌ ರಾಹುಲ್‌ (೯) ಮತ್ತೊಮ್ಮೆ ನಿರಾಶಾದಾಯಕ ಪ್ರದರ್ಶನ ನೀಡಿದರೆ, ರೋಹಿತ್ ಶರ್ಮ ೧೫ ರನ್‌ಗಳಿಗೆ ಸೀಮಿತಗೊಂಡರು. ಸ್ಟಾರ್‌ ಬ್ಯಾಟರ್‌ ವಿರಾಟ್‌ ಕೊಹ್ಲಿ ೧೨ ರನ್‌ಗಳಿಗೆ ಔಟಾಗಿ ಮರಳಿದರು. ಹಾಲಿ ವಿಶ್ವ ಕಪ್‌ನಲ್ಲಿ ಮೊದಲ ಅವಕಾಶ ಪಡೆದ ದೀಪಕ್‌ ಹೂಡ ಶೂನ್ಯ ಸುತ್ತಿದರು.

ಸತತವಾಗಿ ವಿಕೆಟ್‌ ಉರುಳಿದ ಹೊರತಾಗಿಯೂ ಸೂರ್ಯಕುಮಾರ್‌ ಯಾದವ್‌ ಎದುರಾಳಿ ತಂಡದ ಬೌಲರ್‌ಗಳನ್ನು ನಿರಂತರವಾಗಿ ದಂಡಿದರು. ೩೦ ಎಸೆತಗಳಿಗೆ ೫೦ ರನ್ ಬಾರಿಸಿದ ಅವರು ೬೮ ರನ್‌ಗಳಿಗೆ ಪಾರ್ನೆಲ್‌ ಎಸೆತದಲ್ಲಿ ಕೇಶವ್‌ ಮಹಾರಾಜಾಗೆ ಕ್ಯಾಚ್‌ ನೀಡಿ ವಿಕೆಟ್ ಒಪ್ಪಿಸಿದರು. ಹಾರ್ದಿಕ್‌ ಪಾಂಡ್ಯ (೨), ದಿನೇಶ್‌ ಕಾರ್ತಿಕ್‌ (೬), ರವಿಚಂದ್ರನ್‌ ಅಶ್ವಿನ್‌ (೭) ಕೂಡ ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ನಿಲ್ಲುವ ಪ್ರಯತ್ನ ಮಾಡಲಿಲ್ಲ.

ಸ್ಕೋರ್‌ ವಿವರ

ಭಾರತ: ೨೦ ಓವರ್‌ಗಳಲ್ಲಿ ೯ ವಿಕೆಟ್‌ಗೆ ೧೩೩ (ಸೂರ್ಯಕುಮಾರ್‌ ಯಾದವ್‌ ೬೮, ರೋಹಿತ್‌ ಶರ್ಮ ೧೫; ಲುಂಗಿ ಎನ್‌ಗಿಡಿ ೨೯ಕ್ಕೆ೪; ವೇಯ್ನ್‌ ಪಾರ್ನೆಲ್‌ ೧೫ಕ್ಕೆ೩).

ದಕ್ಷಿಣ ಆಫ್ರಿಕಾ: ೧೯.೪ ಓವರ್‌ಗಳಲ್ಲಿ ೫ ವಿಕೆಟ್‌ಗೆ ೧೩೪ (ಏಡೆನ್‌ ಮಾರ್ಕ್ರಮ್‌ ೫೨, ಡೇವಿಡ್‌ ಮಿಲ್ಲರ್‌ ೫೯*; ಅರ್ಶ್‌ದೀಪ್‌ ಸಿಂಗ್ ೨೫ಕ್ಕೆ೨).

ಇದನ್ನೂ ಓದಿ | IND vs PAK | ಭಾರತದ ವಿರುದ್ಧದ ಸೋಲನ್ನು ಅರಗಿಸಿಕೊಳ್ಳಲು ಆಗುತ್ತಿಲ್ಲ ಎಂದ ಪಾಕ್‌ ಬ್ಯಾಟರ್‌

Exit mobile version