ಬೆಂಗಳೂರು: ರಾಜ್ಯದ ಪ್ರಥಮ ಕ್ರೀಡಾ ವಿಶ್ವವಿದ್ಯಾಲಯ ನಿರ್ಮಾಣಕ್ಕೆ ಯಲಹಂಕದಲ್ಲಿ 100 ಎಕರೆ ಜಮೀನು ಗುರುತಿಸಲಾಗಿದೆ. 65 ಎಕರೆ ಈಗಾಗಲೇ ಸರಕಾರದ ವಶಕ್ಕೆ ಪಡೆಯಲಾಗಿದೆ. ಇನ್ನೂ 35 ಎಕರೆ ಪಡೆಯಲು ಜಿಲ್ಲಾಧಿಕಾರಿಗೆ ತಿಳಿಸಲಾಗಿದೆ ಎಂದು ಯುವಸಬಲೀಕರಣ ಮತ್ತು ಕ್ರೀಡಾ ಸಚಿವ ಕೆ.ಸಿ. ನಾರಾಯಣಗೌಡ ಮಂಗಳವಾರ ತಿಳಿಸಿದರು.
ಮಲ್ಲೇಶ್ವರದಲ್ಲಿರುವ ರಾಜ್ಯ ಬಿಜೆಪಿ ಕಾರ್ಯಾಲಯ “ಜಗನ್ನಾಥ ಭವನ”ದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಜಕ್ಕೂರು ಏರೋಡ್ರೋಮ್‍ನಲ್ಲಿ 100 ಮಕ್ಕಳಿಗೆ ಪೈಲಟ್ ತರಬೇತಿ ಕೊಡಲಾಗುವುದು. 6 ಏರ್‌ಕ್ರಾಫ್ಟ್‌ಗಳಲ್ಲಿ 3 ಪೈಲಟ್‍ಗಳು ತರಬೇತಿ ಕೊಡುತ್ತಿದ್ದಾರೆ. ಹಿಂದೆ ಬಾಕಿ ಉಳಿದ 36 ಮಕ್ಕಳ ತರಬೇತಿಯನ್ನು ಈಗ ಪೂರ್ಣಗೊಳಿಸಲಾಗುತ್ತಿದೆ. ಅತಿ ಕಡಿಮೆ ವೆಚ್ಚದಲ್ಲಿ ಹಿಂದುಳಿದ ಸಮಾಜಗಳಿಗೆ ಆದ್ಯತೆ ಕೊಡಲಾಗುತ್ತಿದೆ. ರನ್‍ವೇ ರಿಪೇರಿ ಆಗಿದೆ ಎಂದರು.
ಹಳ್ಳಿ ಹಳ್ಳಿಯಲ್ಲೂ ಕ್ರೀಡಾಂಗಣ ನಿರ್ಮಾಣಕ್ಕೆ ₹ 504 ಕೋಟಿ ಅನುದಾನ ನೀಡಲಾಗಿದೆ. ಪಾಠದ ಜತೆ ಆಟ ಯಶಸ್ವಿಯಾಗಬೇಕು. ಪ್ರತಿ ಶಾಲೆಯಲ್ಲಿ 1ರಿಂದ ಒಂದೂವರೆ ಗಂಟೆ ಆಟ ಆಡಿಸಬೇಕು. 8 ಸಾವಿರ ದೈಹಿಕ ಶಿಕ್ಷಣ ಶಿಕ್ಷಕರ ಕೊರತೆ ಇದ್ದು, ಅದನ್ನು ಭರ್ತಿ ಮಾಡಲು ಚರ್ಚೆ ನಡೆದಿದೆ ಎಂದು ತಿಳಿಸಿದರು.
ಕ್ರೀಡೆಯಲ್ಲಿ ದೇಶವು ಗಮನಾರ್ಹ ಸಾಧನೆ ಮಾಡಬೇಕೆಂಬ ಪ್ರಧಾನಿಗಳಾದ ನರೇಂದ್ರ ಮೋದಿಯವರ ಕನಸು ಈಗ ನನಸಾಗುತ್ತಿದೆ. ಖೇಲೋ ಇಂಡಿಯಾ ಉದ್ಘಾಟನೆಯಾಗಿದ್ದು, ನಾಲ್ಕು ಕಡೆ ವಿವಿಗಳಲ್ಲಿ ಯಶಸ್ವಿಯಾಗಿ ನಡೆಯುತ್ತಿದೆ. ಕ್ರೀಡಾ ವಿಭಾಗಕ್ಕೆ ಮುಖ್ಯಮಂತ್ರಿಗಳೂ ಶಕ್ತಿಯನ್ನು ತುಂಬುತ್ತಿದ್ದಾರೆ ಎಂದರು.
ಅಮೃತ ದತ್ತು ಯೋಜನೆಯಡಿ 75 ಮಕ್ಕಳನ್ನು ಅಂತರರಾಷ್ಟ್ರೀಯ ಮಟ್ಟಕ್ಕೆ ಕಳುಹಿಸಲು ಯೋಜನೆ ಮಾಡುತ್ತಿದ್ದೇವೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಇದಕ್ಕೆ ನೆರವು ನೀಡುತ್ತಿವೆ. 25 ಗ್ರಾಮೀಣ ಮಕ್ಕಳಿಗೆ ಚೆನ್ನೈ ಮತ್ತು ಆಂಧ್ರ ಪ್ರದೇಶದಲ್ಲಿ ಕೇವಲ ಒಂದು ತಿಂಗಳ ತರಬೇತಿ ನೀಡಿದ್ದರಿಂದ ಅವರು ಸ್ವರ್ಣ ಪದಕ ಪಡೆದುದನ್ನು ಗುರುತಿಸಿದ್ದೇವೆ ಎಂದು ತಿಳಿಸಿದರು.
ಹೆಚ್ಚಿನ ಓದಿಗಾಗಿ | ಮಲ್ಲಕಂಭ, ಯೋಗಾಸನ ವಿಭಾಗ ಸೇರ್ಪಡೆ: ಭಾನುವಾರದಿಂದ ಖೇಲೊ ಇಂಡಿಯಾ ಯೂನಿವರ್ಸಿಟಿ ಗೇಮ್ಸ್
ಹಳೆ ಕುಸ್ತಿಪಟುಗಳಿಗೆ ಮಾಸಾಶನವನ್ನು ₹1 ಸಾವಿರಕ್ಕೆ ಹೆಚ್ಚಿಸಲಾಗಿದೆ. ಗ್ರಾಮೀಣ ಗರಡಿ ಮನೆಗಳ ಪುನರ್ ನಿರ್ಮಾಣಕ್ಕೆ ಮುಂದಾಗಿದ್ದೇವೆ. ಕಂಠೀರವ ಸ್ಟುಡಿಯೋದಲ್ಲಿ ಸಿಂಥೆಟಿಕ್ ಟ್ರ್ಯಾಕ್ ಹಾಳಾಗಿತ್ತು. ಅದನ್ನು ಮರುನಿರ್ಮಿಸಲು ₹5 ಕೋಟಿ ವೆಚ್ಚ ಮಾಡಲಾಗುತ್ತಿದೆ ಎಂದು ವಿವರಿಸಿದರು.
ತುಮಕೂರಿನಲ್ಲಿ ₹4.5 ಕೋಟಿ ವೆಚ್ಚದಲ್ಲಿ ದೊಡ್ಡ ಕ್ರೀಡಾ ಕಾಂಪ್ಲೆಕ್ಸ್ ನಿರ್ಮಿಸಲಾಗುತ್ತಿದೆ. ಕೇಂದ್ರ ಸರಕಾರವೂ ಇದಕ್ಕೆ ಅನುದಾನ ನೀಡಿದೆ. ಬೆಂಗಳೂರು ಹಾಗೂ ಮಂಡ್ಯದಲ್ಲಿ ಮಕ್ಕಳ ಕ್ರೀಡಾ ಸಾಮಥ್ರ್ಯ ಪರೀಕ್ಷಾ ಕೇಂದ್ರ ಆರಂಭಿಸಲಾಗುವುದು. ಎಲ್ಲ ಜಿಲ್ಲೆಯಲ್ಲಿ ಹೆಣ್ಣುಮಕ್ಕಳಿಗೆ ಪ್ರತ್ಯೇಕ ಹಾಸ್ಟೆಲ್ ಸಿದ್ಧಪಡಿಸಲಾಗುವುದು. 10- 15 ಹಾಸ್ಟೆಲ್ ಆರಂಭಗೊಂಡಿದೆ. ಈಜುಕೊಳ ನಿರ್ವಹಣೆ, ಕ್ರೀಡಾ ಸೌಲಭ್ಯ ನೀಡಲು ಖಾಸಗಿ- ಸಾರ್ವಜನಿಕ ಸಹಭಾಗಿತ್ವವನ್ನು (ಪಿಪಿಪಿ) ಬಳಸಿಕೊಳ್ಳಲಾಗುವುದು. ಸ್ಥಳೀಯ ಸಂಸ್ಥೆಗಳ ಸಹಕಾರದಡಿ ಇದು ನಡೆಯಲಿದೆ. ಕ್ರೀಡೆಗೆ ಹೆಚ್ಚಿನ ಶಕ್ತಿ ತುಂಬಿ ರಾಜ್ಯವನ್ನು ದೇಶದ ಮೊದಲ ಸ್ಥಾನಕ್ಕೆ ಒಯ್ಯಲಾಗುವುದು ಎಂದು ತಿಳಿಸಿದರು.
ನೂತನ ಯುವ ನೀತಿ
ಡಾ. ಬಾಲಸುಬ್ರಹ್ಮಣ್ಯ ಅವರ ನೇತೃತ್ವದಲ್ಲಿ ರಾಜ್ಯದಲ್ಲಿ ಯುವ ನೀತಿಯನ್ನು ಮೊದಲ ಬಾರಿಗೆ ಜಾರಿಗೊಳಿಸಲಾಗುತ್ತಿದೆ. ಗ್ರಾಮೀಣ ಪ್ರದೇಶದಲ್ಲಿ ಯುವಜನತೆ ದಾರಿ ತಪ್ಪದಂತೆ ನೋಡಿಕೊಳ್ಳಲಾಗುವುದು. ಉದ್ಯೋಗ ಮಾರ್ಗದರ್ಶನ, ಕೃಷಿ ಸಂಬಂಧಿತ ಉತ್ಪನ್ನಗಳ ಸಂಬಂಧ ತಿಳಿವಳಿಕೆ ನೀಡಲು 2.5 ಲಕ್ಷ ಕೌನ್ಸೆಲರ್‍ಗಳು ಸಿದ್ಧರಾಗಿದ್ದಾರೆ. ಶಿಕ್ಷಣ ಪಡೆದ ರೈತರ ಮಕ್ಕಳು ಮತ್ತು ಗ್ರಾಮೀಣ ವಿದ್ಯಾವಂತ ಯುವಕರಿಗೆ ತರಬೇತಿ ಮತ್ತು ಪ್ರೋತ್ಸಾಹ ನೀಡಲು ಉದ್ದೇಶಿಸಿದೆ ಎಂದು ತಿಳಿಸಿದರು. ರೈತರ ಮಕ್ಕಳು ನೇರವಾಗಿ ಸೊಸೈಟಿಗಳಿಗೆ ಉತ್ಪನ್ನ ಮಾರಾಟ ಮಾಡುವಂತಾಗಿದೆ ಎಂದರು.
ರೇಷ್ಮೆ ಗೂಡಿನ ದರ ಕೋವಿಡ್ ಹಾಗೂ ಲಾಕ್ ಡೌನ್ ವೇಳೆ 100ರಿಂದ 150ಕ್ಕೆ ಕುಸಿದಿತ್ತು. ಸಾಮಾನ್ಯವಾಗಿ 350 ರೂಪಾಯಿ ಇದ್ದ ಗೂಡಿನ ದರ ಈಗ 800 ರೂಪಾಯಿಗೆ ಏರಿದೆ. ಇವತ್ತು ರೀಲ್ ದರ ಹೆಚ್ಚಾಗಿದ್ದು, 5ರಿಂದ 5.5 ಸಾವಿರ ರೂಪಾಯಿ ಇದೆ ಎಂದು ತಿಳಿಸಿದರಲ್ಲದೆ, ರೀಲರ್‍ಗೆ ಅನ್ಯಾಯ ಆಗಲು ಬಿಡುವುದಿಲ್ಲ ಎಂದು ಸ್ಪಷ್ಟಪಡಿಸಿದರು. ಹೈದರಾಬಾದ್, ವಾರಣಸಿ, ಚೆನ್ನೈನಲ್ಲಿ ಮಾರಾಟಕ್ಕೂ ಪರ್ಯಾಯ ವ್ಯವಸ್ಥೆ ಮಾಡಿಕೊಂಡಿದ್ದೇವೆ ಎಂದರು.
ರಾಮನಗರ ಚನ್ನಪಟ್ಟಣದಲ್ಲಿ ರೇಷ್ಮೆಗೆ ಸಂಬಂಧಿಸಿ ಹೈಟೆಕ್ ಮಾರುಕಟ್ಟೆ ನಿರ್ಮಿಸಲು 141 ಕೋಟಿ ವ್ಯಯಿಸಲಾಗುತ್ತಿದೆ. 75 ಕೋಟಿ ಅನುದಾನ ಕೇಂದ್ರ ಸರಕಾರದಿಂದ ಬಂದಿದೆ. ವಾಸ್ತವ್ಯ, ಲಾಕರ್ ವ್ಯವಸ್ಥೆ, ಬಾತ್‍ರೂಂ ವ್ಯವಸ್ಥೆಯನ್ನು ಕೊಡಲು ಉದ್ದೇಶಿಸಲಾಗಿದೆ. ಶಿಡ್ಲಘಟ್ಟ, ಹರಿಹರ, ಹಾವೇರಿ ಹಾಗೂ ಕಲಬುರ್ಗಿಯಲ್ಲೂ ಆಧುನಿಕ ರೇಷ್ಮೆ ಮಾರುಕಟ್ಟೆ ನಿರ್ಮಾಣ ನಡೆಯಲಿದೆ ಎಂದರು. ಕಲಬುರ್ಗಿಯಲ್ಲಿ 30 ಕೋಟಿ ವೆಚ್ಚದಲ್ಲಿ ಮಾರ್ಕೆಟ್ ನಿರ್ಮಿಸಲಾಗುತ್ತದೆ ಎಂದು ತಿಳಿಸಿದರು.
ಪಕ್ಷದ ರಾಜ್ಯ ಮುಖ್ಯ ವಕ್ತಾರರಾದ ಎಂ.ಜಿ. ಮಹೇಶ್ ಅವರು ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿದ್ದರು.
ಇದನ್ನೂ ಓದಿ | ಗಲಭೆ ನಡೆಸಿ ಅಧಿಕಾರಕ್ಕೇರಲು ಕಾಂಗ್ರೆಸ್ ಪ್ರಯತ್ನ: ನಳಿನ್ ಕುಮಾರ್ ಕಟೀಲ್ ಆರೋಪ