Site icon Vistara News

IPL 2023 : ಕೆಕೆಆರ್​ ತಂಡವನ್ನು 23 ರನ್​ಗಳಿಂದ ಮಣಿಸಿದ ಎಸ್​ಆರ್​ಎಚ್​ ಬಳಗ

#image_title

ಕೋಲ್ಕೊತಾ: ಹ್ಯಾರಿ ಬ್ರೂಕ್​ (ಅಜೇಯ 100 ರನ್​, 55 ಎಸೆತ, 12 ಫೋರ್​, 3 ಸಿಕ್ಸರ್​) ಅಮೋಘ ಶತಕದ ನೆರವಿನಿಂದ ಮಿಂಚಿದ ಸನ್​ ರೈಸರ್ಸ್ ಹೈದರಾಬಾದ್ ತಂಡ ಐಪಿಎಲ್​ನ 16ನೇ ಆವೃತ್ತಿಯ (IPL 2023) 19ನೇ ಪಂದ್ಯದಲ್ಲಿ ಕೋಲ್ಕೊತಾ ನೈಟ್ ರೈಡರ್ಸ್​ ತಂಡದ ವಿರುದ್ಧ 23 ರನ್​ಗಳ ವಿಜಯ ಸಾಧಿಸಿತು. ಇದರೊಂದಿಗೆ ಹಾಲಿ ಅವೃತ್ತಿಯ ಟೂರ್ನಿಯಲ್ಲಿ ಸತತ ಎರಡನೇ ವಿಜಯ ತನ್ನದಾಗಿಸಿಕೊಂಡಿತು. ಹಿಂದಿನ ಪಂದ್ಯದಲ್ಲಿ ಪಂಜಾಬ್​ ಕಿಂಗ್ಸ್ ವಿರುದ್ಧ ಎಂಟು ವಿಕೆಟ್​ಗಳ ಅಧಿಕಾರಯುತ ವಿಜಯ ಪಡೆದುಕೊಂಡಿತ್ತು ಎಸ್​ಆರ್​​ಎಚ್​. ಇದೇ ವೇಳೆ ಹಿಂದಿನ ಪಂದ್ಯದಲ್ಲಿ ಗುಜರಾತ್​ ವಿರುದ್ಧ ರೋಚಕ ಗೆಲುವು ಸಾಧಿಸಿದ್ದ ಕೆಕೆಆರ್​ ತಂಡಕ್ಕೆ ನಿರಾಸೆ ಎದುರಾಯಿತು.

ಈಡನ್​ ಗಾರ್ಡನ್ಸ್​ ಕ್ರಿಕೆಟ್​ ಸ್ಟೇಡಿಯಮ್​ನಲ್ಲಿ ನಡೆದ ಹಣಾಹಣಿಯಲ್ಲಿ ಟಾಸ್​ ಗೆದ್ದ ಕೋಲ್ಕೊತಾ ತಂಡ ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಅಂತೆಯೇ ಮೊದಲು ಬ್ಯಾಟಿಂಗ್​ಗೆ ಅವಕಾಶ ಪಡೆದ ಎಸ್​ಆರ್​ಎಚ್​ ತಂಡ ಅಬ್ಬರದ ಬ್ಯಾಟಿಂಗ್ ಪ್ರದರ್ಶನ ನೀಡಿ ನಿಗದಿತ 20 ಓವರ್​ಗಳಲ್ಲಿ 4 ವಿಕೆಟ್​ ನಷ್ಟಕ್ಕೆ 205 ರನ್ ಬಾರಿಸಿ ಸೋಲೊಪ್ಪಿಕೊಂಡಿತು. ಹೈದರಾಬಾದ್ ತಂಡದ ಪರ ನಾಯಕ ಏಡೆನ್​ ಮಾರ್ಕ್ರಮ್​ ಕೂಡ ಸ್ಫೋಟಕ ಅರ್ಧ ಶತಕ ಬಾರಿಸಿದರು.

ದೊಡ್ಡ ಗುರಿಯನ್ನು ಬೆನ್ನಟ್ಟಲು ಆರಂಭಿಸಿದ ಕೆಕೆಆರ್​ ತಂಡ ಉತ್ತಮ ಆರಂಭ ಪಡೆಯಲಿಲ್ಲ. 20 ರನ್​ಗಳಾಗುವಷ್ಟರಲ್ಲಿ 3 ವಿಕೆಟ್ ಕಳೆದುಕೊಂಡಿತು. ರಹ್ಮನುಲ್ಲಾ ಗುರ್ಬಜ್​ (0) ಹಾಗೂ ವೆಂಕಟೇಶ್​ ಅಯ್ಯರ್​ (10) ಬೇಗನೆ ವಿಕೆಟ್​ ಒಪ್ಪಿಸಿದರೆ, ಸುನೀಲ್​ ನರೈನ್​ ಕೂಡ ಶೂನ್ಯಕ್ಕೆ ಔಟಾದರು. ಈ ವೇಳೆ ಕ್ರೀಸ್​ಗೆ ಬಂದ ನಾಯಕ ನಿತೀಶ್ ರಾಣಾ (75) ಅಬ್ಬರಿಸಿದರು. ಎನ್​. ಜಗದೀಶನ್​ (36) ಉತ್ತಮ ನೆರವು ಕೊಟ್ಟರು. ಏತನ್ಮಧ್ಯೆ ಮಾರ್ಕಾಂಡೆ ಬೌಲಿಂಗ್​ಗೆ ಜಗದೀಶನ್​ ಹಾಗೂ ಆ್ಯಂಡ್ರೆ ರಸೆಲ್​ (3) ಔಟಾದರು. ಬಳಿಕ ಆಡಲು ಬಂದ ಹಿಂದಿನ ಪಂದ್ಯದ ಹೀರೋ ರಿಂಕು ಸಿಂಗ್​ 4 ಫೋರ್​ ಹಾಗೂ 4 ಸಿಕ್ಸರ್​ಗಳ ಸಮೇತ ಅಜೇಯ 58 ರನ್ ಬಾರಿಸಿದರು. ಈ ವೇಳೆ ನಿತೀಶ್ ರಾಣಾ ಅವರ ವಿಕೆಟ್ ಪಡೆಯಲು ಸಫಲಗೊಂಡು ಎಸ್​ಆರ್​ಎಚ್​ ಮೆಲುಗೈ ಸಾಧಿಸಿತು. ಶಾರ್ದೂಲ್ ಠಾಕೂರ್​ 12 ರನ್ ಕೊಡುಗೆ ಕೊಟ್ಟರು.

ಎಸ್​ಆರ್​ಎಚ್ ಬೌಲಿಂಗ್ ವಿಭಾಗದಲ್ಲಿ ಮಾರ್ಕೊ ಜೆನ್ಸನ್​ ಹಾಗೂ ಮಯಾಂಕ್ ಮಾರ್ಕಂಡೆ ತಲಾ 2 ವಿಕೆಟ್​ ಪಡೆದುಕೊಂಡರು.

ಎಸ್​ಆರ್​ಎಚ್​ ತಂಡದ ಪರವಾಗಿ ಅರಂಭಿಕರಾಗಿ ಬ್ಯಾಟ್​ ಮಾಡಲು ಇಳಿದ ಹ್ಯಾರಿ ಬ್ರೂಕ್​ ಮತ್ತು ಮಯಾಂಕ್ ಅಗರ್ವಾಲ್​ ಹೆಚ್ಚು ಹೊತ್ತು ಜತೆಯಾಟ ನೀಡಲಿಲ್ಲ. ಮತ್ತೊಂದು ಬಾರಿ ವಿಫಲ ಪ್ರದರ್ಶನ ನೀಡಿದ ಮಯಾಂಕ್​ 13 ಎಸೆತಗಳಲ್ಲಿ 9 ರನ್ ಬಾರಿಸಿ ಔಟಾದರು. ಆದರೆ, ಹ್ಯಾರಿ ಅಬ್ಬರದ ಬ್ಯಾಟಿಂಗ್ ಮಾಡಿದ ಕಾರಣ 4.1 ಓವರ್​​ಗಳಲ್ಲಿ 46 ರನ್ ಬಾರಿಸಿತ್ತು ಎಸ್ಆರ್​ಎಚ್​. ಬಳಿಕ ಬಂದ ರಾಹುಲ್ ತ್ರಿಪಾಠಿ ವೇಗದ ರನ್​ಗಳಿಕೆಗೆ ಮುಂದಾದರೂ 9 ರನ್​ ಮಾಡಿ ಔಟಾದರು. ಇವರಿಬ್ಬರ ವಿಕೆಟ್​ ಕೋಲ್ಕೊತಾ ಬೌಲರ್​ ಆ್ಯಂಡ್ರೆ ರಸೆಲ್​ ಪಾಲಾಯಿತು.

ಇದನ್ನೂ ಓದಿ : IPL 2023 : ಬೆಂಗಳೂರಿನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಅಭ್ಯಾಸ ವೀಕ್ಷಿಸಿದ ರಿಷಭ್​ ಪಂತ್​

ನಾಲ್ಕನೇ ಕ್ರಮಾಂಕದಲ್ಲಿ ಆಡಲು ಇಳಿದ ನಾಯಕ ಏಡೆನ್ ಮಾರ್ಕ್ರಮ್​ ಬಿಡುಬೀಸಿನ ಬ್ಯಾಟಿಂಗ್ ಪ್ರದರ್ಶನ ನೀಡಿದರು. 26 ಎಸೆತಗಳಲ್ಲಿ ಅವರು 50 ರನ್ ಬಾರಿಸಿದರು. ಅವರ ಇನಿಂಗ್ಸ್​ನಲ್ಲಿ 2 ಫೋರ್​ ಹಾಗೂ 5 ಸಿಕ್ಸರ್ ಸೇರಿಕೊಂಡಿವೆ. ವರುಣ್​ ಚಕ್ರವರ್ತಿ ಏಡೆನ್​ಗೆ ಪೆವಿಲಿಯನ್ ದಾರಿ ತೋರಿದರು. ಬಳಿಕ ಆಡಲು ಇಳಿದ ಯುವ ಬ್ಯಾಟರ್ ಅಭಿಷೇಕ್​ ಶರ್ಮಾ ಕೂಡ ಸ್ಫೋಟಕ ಬ್ಯಾಟಿಂಗ್ ಮಾಡಿದರು. 17 ಎಸೆತಗಳಲ್ಲಿ 32 ರನ್ ಬಾರಿಸಿ ಮಿಂಚಿದ ಅವರು ರಸೆಲ್​ಗೆ ವಿಕೆಟ್ ಒಪ್ಪಿಸಿದರು. ಕೊನೆಯಲ್ಲಿ ಹೆನ್ರಿಚ್ ಕ್ಲಾಸೆನ್​ 6 ಎಸೆತಗಳಿಗೆ 16 ರನ್ ಬಾರಿಸಿದರು.

ಮಿಂಚಿದ ಬ್ರೂಕ್​

ಇಂಗ್ಲೆಂಡ್​ನ ಯುವ ಆಟಗಾರ ಹ್ಯಾರಿ ಬ್ರೂಕ್​ ಇನಿಂಗ್ಸ್​ ಉದ್ದಕ್ಕೂ ಮೆರೆದಾಡಿದರು. ಆರಂಭಿಕರಾಗಿ ಆಡಲು ಬಂದ ಅವರು ಕೊನೇ ತನಕ ಔಟಾಗದೇ ಉಳಿದರು. ಅವರ ಇನಿಂಗ್ಸ್​ ಕೂಡ ಕಲಾತ್ಮಕವಾಗಿತ್ತು. 32 ಎಸೆತಗಳಲ್ಲಿ ಅರ್ಧ ಶತಕ ಪೂರೈಸಿದ ಅವರು 55 ಎಸೆತಗಳಲ್ಲಿ ಶತಕ ಬಾರಿಸಿದರು. ಎಲ್ಲ ಬ್ಯಾಟರ್​ಗಳ ಜತೆ ಉತ್ತಮ ಜತೆಯಾಟ ನೀಡುವ ಜತೆಗೆ ರನ್​ ಗಳಿಕೆಗೂ ಅವರು ನೆರವಾದರು.

Exit mobile version