ಕೋಲ್ಕೊತಾ: ಹ್ಯಾರಿ ಬ್ರೂಕ್ (ಅಜೇಯ 100 ರನ್, 55 ಎಸೆತ, 12 ಫೋರ್, 3 ಸಿಕ್ಸರ್) ಅಮೋಘ ಶತಕದ ನೆರವಿನಿಂದ ಮಿಂಚಿದ ಸನ್ ರೈಸರ್ಸ್ ಹೈದರಾಬಾದ್ ತಂಡ ಐಪಿಎಲ್ನ 16ನೇ ಆವೃತ್ತಿಯ 19ನೇ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿ 228 ರನ್ಗಳ ಬೃಹತ್ ಮೊತ್ತ ಪೇರಿಸಿದೆ. ಇದರೊಂದಿಗೆ ಆತಿಥೇಯ ಕೋಲ್ಕೊತಾ ತಂಡದ ಗೆಲುವಿಗೆ 229 ರನ್ಗಳು ಬೇಕಾಗಿವೆ. ನಾಯಕ ಏಡೆನ್ ಮಾರ್ಕ್ರಮ್ (50) ಕೂಡ ಅಬ್ಬರದ ಅರ್ಧ ಶತಕ ಬಾರಿಸಿ ಮಿಂಚಿದರು.
ಈಡನ್ ಗಾರ್ಡನ್ಸ್ ಕ್ರಿಕೆಟ್ ಸ್ಟೇಡಿಯಮ್ನಲ್ಲಿ ನಡೆದ ಹಣಾಹಣಿಯಲ್ಲಿ ಟಾಸ್ ಗೆದ್ದ ಕೋಲ್ಕೊತಾ ತಂಡ ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಅಂತೆಯೇ ಮೊದಲು ಬ್ಯಾಟಿಂಗ್ಗೆ ಅವಕಾಶ ಪಡೆದ ಎಸ್ಆರ್ಎಚ್ ತಂಡ ಅಬ್ಬರದ ಬ್ಯಾಟಿಂಗ್ ಪ್ರದರ್ಶನ ನೀಡಿ ಎದುರಾಳಿ ತಂಡದ ಲೆಕ್ಕಾಚಾರವನ್ನು ಬುಡಮೇಲು ಮಾಡಿದರು.
ಎಸ್ಆರ್ಎಚ್ ತಂಡದ ಪರವಾಗಿ ಅರಂಭಿಕರಾಗಿ ಬ್ಯಾಟ್ ಮಾಡಲು ಇಳಿದ ಹ್ಯಾರಿ ಬ್ರೂಕ್ ಮತ್ತು ಮಯಾಂಕ್ ಅಗರ್ವಾಲ್ ಹೆಚ್ಚು ಹೊತ್ತು ಜತೆಯಾಟ ನೀಡಲಿಲ್ಲ. ಮತ್ತೊಂದು ಬಾರಿ ವಿಫಲ ಪ್ರದರ್ಶನ ನೀಡಿದ ಮಯಾಂಕ್ 13 ಎಸೆತಗಳಲ್ಲಿ 9 ರನ್ ಬಾರಿಸಿ ಔಟಾದರು. ಆದರೆ, ಹ್ಯಾರಿ ಅಬ್ಬರದ ಬ್ಯಾಟಿಂಗ್ ಮಾಡಿದ ಕಾರಣ 4.1 ಓವರ್ಗಳಲ್ಲಿ 46 ರನ್ ಬಾರಿಸಿತ್ತು ಎಸ್ಆರ್ಎಚ್. ಬಳಿಕ ಬಂದ ರಾಹುಲ್ ತ್ರಿಪಾಠಿ ವೇಗದ ರನ್ಗಳಿಕೆಗೆ ಮುಂದಾದರೂ 9 ರನ್ ಮಾಡಿ ಔಟಾದರು. ಇವರಿಬ್ಬರ ವಿಕೆಟ್ ಕೋಲ್ಕೊತಾ ಬೌಲರ್ ಆ್ಯಂಡ್ರೆ ರಸೆಲ್ ಪಾಲಾಯಿತು.
ಇದನ್ನೂ ಓದಿ : IPL 2023 : ಬೆಂಗಳೂರಿನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಅಭ್ಯಾಸ ವೀಕ್ಷಿಸಿದ ರಿಷಭ್ ಪಂತ್
ನಾಲ್ಕನೇ ಕ್ರಮಾಂಕದಲ್ಲಿ ಆಡಲು ಇಳಿದ ನಾಯಕ ಏಡೆನ್ ಮಾರ್ಕ್ರಮ್ ಬಿಡುಬೀಸಿನ ಬ್ಯಾಟಿಂಗ್ ಪ್ರದರ್ಶನ ನೀಡಿದರು. 26 ಎಸೆತಗಳಲ್ಲಿ ಅವರು 50 ರನ್ ಬಾರಿಸಿದರು. ಅವರ ಇನಿಂಗ್ಸ್ನಲ್ಲಿ 2 ಫೋರ್ ಹಾಗೂ 5 ಸಿಕ್ಸರ್ ಸೇರಿಕೊಂಡಿವೆ. ವರುಣ್ ಚಕ್ರವರ್ತಿ ಏಡೆನ್ಗೆ ಪೆವಿಲಿಯನ್ ದಾರಿ ತೋರಿದರು. ಬಳಿಕ ಆಡಲು ಇಳಿದ ಯುವ ಬ್ಯಾಟರ್ ಅಭಿಷೇಕ್ ಶರ್ಮಾ ಕೂಡ ಸ್ಫೋಟಕ ಬ್ಯಾಟಿಂಗ್ ಮಾಡಿದರು. 17 ಎಸೆತಗಳಲ್ಲಿ 32 ರನ್ ಬಾರಿಸಿ ಮಿಂಚಿದ ಅವರು ರಸೆಲ್ಗೆ ವಿಕೆಟ್ ಒಪ್ಪಿಸಿದರು. ಕೊನೆಯಲ್ಲಿ ಹೆನ್ರಿಚ್ ಕ್ಲಾಸೆನ್ 6 ಎಸೆತಗಳಿಗೆ 16 ರನ್ ಬಾರಿಸಿದರು.
ಮಿಂಚಿದ ಬ್ರೂಕ್
ಇಂಗ್ಲೆಂಡ್ನ ಯುವ ಆಟಗಾರ ಹ್ಯಾರಿ ಬ್ರೂಕ್ ಇನಿಂಗ್ಸ್ ಉದ್ದಕ್ಕೂ ಮೆರೆದಾಡಿದರು. ಆರಂಭಿಕರಾಗಿ ಆಡಲು ಬಂದ ಅವರು ಕೊನೇ ತನಕ ಔಟಾಗದೇ ಉಳಿದರು. ಅವರ ಇನಿಂಗ್ಸ್ ಕೂಡ ಕಲಾತ್ಮಕವಾಗಿತ್ತು. 32 ಎಸೆತಗಳಲ್ಲಿ ಅರ್ಧ ಶತಕ ಪೂರೈಸಿದ ಅವರು 55 ಎಸೆತಗಳಲ್ಲಿ ಶತಕ ಬಾರಿಸಿದರು. ಎಲ್ಲ ಬ್ಯಾಟರ್ಗಳ ಜತೆ ಉತ್ತಮ ಜತೆಯಾಟ ನೀಡುವ ಜತೆಗೆ ರನ್ ಗಳಿಕೆಗೂ ಅವರು ನೆರವಾದರು.