ಹೈದರಾಬಾದ್: ವಿಕೆಟ್ಕೀಪರ್ ಬ್ಯಾಟರ್ ಹೆನ್ರಿಚ್ ಕ್ಲಾಸೆನ್ (104 ರನ್, 51 ಎಸೆತ, 6 ಸಿಕ್ಸರ್, 8 ಫೋರ್) ಬಾರಿಸಿದ ವಿಸ್ಫೋಟಕ ಶತಕದ ನೆರವು ಪಡೆದ ಸನ್ ರೈಸರ್ಸ್ ಹೈದರಾಬಾದ್ ತಂಡ ಐಪಿಎಲ್ 16ನೇ ಆವೃತ್ತಿಯ 65ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ 186 ರನ್ಳನ್ನು ಬಾರಿಸಿದೆ. ಸತತವಾಗಿ ಸೋಲಿನಿಂದ ಕಂಗೆಟ್ಟಿದ ಸನ್ರೈಸರ್ಸ್ ಹೈದರಾಬಾದ್ ತಂಡದ ಅಭಿಮಾನಿಗಳ ಪಾಲಿಗೆ ಈ ಶತಕವು ನೆಮ್ಮದಿ ಕೊಟ್ಟಿತು.
ಇಲ್ಲಿನ ರಾಜೀವ್ಗಾಂಧಿ ಇಂಟರ್ನ್ಯಾಷನಲ್ ಕ್ರಿಕೆಟ್ ಸ್ಟೇಡಿಯಮ್ನಲ್ಲಿ ಆಯೋಜನೆಗೊಂಡಿರುವ ಪಂದ್ಯದಲ್ಲಿ ಟಾಸ್ ಗೆದ್ದ ಆರ್ಸಿಬಿ ನಾಯಕ ಫಾಪ್ ಡು ಪ್ಲೆಸಿಸ್ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡರು. ಹೀಗಾಗಿ ಮೊದಲು ಬ್ಯಾಟ್ ಮಾಡಿದ ಸನ್ರೈಸರ್ಸ್ ಹೈದರಾಬಾದ್ ತಂಡ ನಿಗದಿತ 20 ಓವರ್ಗಳಲ್ಲಿ 5 ವಿಕೆಟ್ ನಷ್ಟ ಮಾಡಿಕೊಂಡು 186 ರನ್ ಬಾರಿಸಿತು.
ಬ್ಯಾಟಿಂಗ್ ಆರಂಭಿಸಿದ ಎಸ್ಆರ್ಎಚ್ ತಂಡ ಉತ್ತಮ ಆರಂಭ ಪಡೆಯಲಿಲ್ಲ. ಅಭಿಷೇಕ್ ಶರ್ಮಾ (11) ಹಾಗೂ ರಾಹುಲ್ ತ್ರಿಪಾಠಿ (15) ಬೇಗನೆ ವಿಕೆಟ್ ಒಪ್ಪಿಸಿದರು. ಇವರಿಬ್ಬರೂ ಸ್ಪಿನ್ನರ್ ಬ್ರೇಸ್ವೆಲ್ ಎಸೆತಕ್ಕೆ ಒಂದೇ ಓವರ್ನಲ್ಲಿ ವಿಕೆಟ್ ಒಪ್ಪಿಸಿ ಪೆವಿಲಿಯನ್ಗೆ ನಡೆದರು. ಮೂರನೇ ಕ್ರಮಾಂಕದಲ್ಲಿ ಆಡಲು ಬಂದ ನಾಯಕ ಏಡೆನ್ ಮಾರ್ಕ್ರಮ್ ಕೂಡ ಬಿರುಸಾಗಿ ಆಡಲಿಲ್ಲ. ಅವರು ಕೇವಲ 18 ರನ್ಗಳಿಗೆ ಔಟಾದರು. ಆದರೆ, ಶತಕ ವೀರ ಹೆನ್ರಿನ್ಗೆ ಉತ್ತಮ ಜತೆಯಾಟ ನೀಡಿದರು.
ಕ್ಲಾಸೆನ್ ಕ್ಲಾಸ್ ಆಟ
ಹಾಲಿ ಟೂರ್ನಿಯಲ್ಲಿ ಎಸ್ಆರ್ಎಚ್ ತಂಡದ ಪರ ಅತ್ಯುತ್ತಮ ಪ್ರದರ್ಶನ ನೀಡುತ್ತಿರುವ ಹೆನ್ರಿಚ್ ಕ್ಲಾಸೆನ್ ಆರ್ಸಿಬಿ ವಿರುದ್ಧ ಅಕ್ಷರಶಃ ಅಬ್ಬರಿಸಿದರು. ನಾಲ್ಕನೇ ಕ್ರಮಾಂಕದಲ್ಲಿ ಕ್ರಿಸ್ಗೆ ಬಂದ ಅವರು ಎಂದಿನ ಶೈಲಿಯಲ್ಲೇ ಅಬ್ಬರದ ಬ್ಯಾಟಿಂಗ್ ಆರಂಭಿಸಿದರು. ಕೇವಲ 25 ಎಸೆತಗಳಿಗೆ ತಮ್ಮ ಅರ್ಧ ಶತಕ ಪೂರೈಸಿದರು. ಒಂದು ಹಂತದಲ್ಲಿ ಮೇಲುಗೈ ಸಾಧಿಸಿದ್ದ ಆರ್ಸಿಬಿ ಬೌಲರ್ಗಳನ್ನು ಸತತವಾಗಿ ದಂಡಿಸಿದರು. ಆ ಬಳಿಕವೂ ಆಟ ಮುಂದುವರಿಸಿದ 49 ಎಸೆತಗಳಲ್ಲಿ ಶತಕ ಪೂರೈಸಿದರು. ಆದರೆ, ಹರ್ಷಲ್ ಪಟೇಲ್ ಎಸೆತಕ್ಕೆ ಕ್ಲೀನ್ ಬೌಲ್ಡ್ ಆಗಿ ಮರಳಿದರು.
ಇದನ್ನೂ ಓದಿ : IPL 2023 : ಐಪಿಎಲ್ನಲ್ಲಿ 4000 ರನ್ ಪೂರೈಸಿದ ಆರ್ಸಿಬಿ ನಾಯಕ ಫಾಫ್ ಡು ಪ್ಲೆಸಿಸ್
ಕೊನೇ ಹಂತದಲ್ಲಿ ಹ್ಯಾರಿ ಬ್ರೂಕ್ 19 ಎಸೆತಗಳಲ್ಲಿ 27 ರನ್ ಬಾರಿಸಿದರೆ ಗ್ಲೆನ್ ಫಿಲಿಫ್ಸ್ 5 ರನ್ಗಳನ್ನು ಬಾರಿಸಿ ಕೊನೇ ಎಸೆತಕ್ಕೆ ಔಟಾದರು. ಆರ್ಸಿಬಿ ಪರ ಬೌಲಿಂಗ್ನಲ್ಲಿ ಮೈಕೆಲ್ ಬ್ರಾಸ್ವೆಲ್ 13 ರನ್ಗಳಿಗೆ 2 ವಿಕೆಟ್ ಕಳೆದುಕೊಂಡರೆ ಮೊಹಮ್ಮದ್ ಸಿರಾಜ್ 1 ವಿಕೆಟ್ ತಮ್ಮದಾಗಿಸಿಕೊಂಡರು.