Site icon Vistara News

T20 Ind v/s Sa | 3ನೇ ಪಂದ್ಯಕ್ಕೆ ಭಾರತ ತಂಡದಲ್ಲಿ 3 ಬದಲಾವಣೆ ಸಾಧ್ಯತೆ

ನವ ದೆಹಲಿ: T20 Ind v/s Sa | ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಟಿ20 ಸರಣಿಯ ಮೂರನೇ ಪಂದ್ಯಕ್ಕೆ ವೇದಿಕೆ ಸಿದ್ಧವಾಗಿದೆ. ಮೊದಲ ಎರಡೂ ಪಂದ್ಯಗಳನ್ನು ಸೋತಿರುವ ಭಾರತ ಮೂರನೇ ಪಂದ್ಯವನ್ನು ಶತಾಯಗತಾಯ ಗೆಲ್ಲಲೇಬೇಕಾದ ಅನಿವಾರ್ಯತೆಯಲ್ಲಿದೆ. ಹೀಗಾಗಿ ಭಾರತ ತಂಡದಲ್ಲಿ ಮೂರು ಬದಲಾವಣೆಯ ನಿರೀಕ್ಷೆ ಇದೆ.

ಮೊದಲ ಪಂದ್ಯವನ್ನು ಸೋತ ಬಳಿಕ ಭಾರತದ ತಂಡದಲ್ಲಿ ಯಾವುದೇ ಬದಲಾವಣೆ ಮಾಡಿರಲಿಲ್ಲ. ಆದರೆ ಎರಡೂ ಪಂದ್ಯದಲ್ಲಿ ಸತತವಾಗಿ ಉತ್ತಮ ಆಟವನ್ನು ಪ್ರದರ್ಶಿಸುವಲ್ಲಿ ಕೆಲವರು ವಿಫಲರಾಗಿದ್ದಾರೆ. ಮಧ್ಯಮ ಕ್ರಮಾಂಕದ ಬ್ಯಾಟಿಂಗ್‌ ಮತ್ತು ಬೌಲಿಂಗ್‌ನಲ್ಲಿ ಭಾರತ ತಂಡ ಭಾರಿ ಒದ್ದಾಟವನ್ನೇ ಮಾಡುತ್ತಿದೆ. ಎರಡನೇ ಪಂದ್ಯದಲ್ಲಿ ಭುವನೇಶ್ವರ್‌ ಕುಮಾರ್‌ ನಾಲ್ಕು ಘಟಾನುಘಟಿಗಳ ವಿಕೆಟ್‌ ಪಡೆದು ಭಾರತಕ್ಕೆ ಮುನ್ನಡೆ ಒದಗಿಸಿದರೂ ಸ್ಪಿನ್ನರ್‌ಗಳು ಅದರ ಲಾಭ ಎತ್ತಲಾಗದೆ ನಿರಾಸೆ ಮೂಡಿಸಿದ್ದರು.

ನಿರಾಸೆ ಮೂಡಿಸಿದ ಋತುರಾಜ್‌
ಐಪಿಎಲ್‌ನಲ್ಲಿ ಅಷ್ಟೇನೂ ಉತ್ತಮ ಪ್ರದರ್ಶನ ತೋರಿಸದ ಇಶಾಕ್‌ ಕಿಶನ್‌ ಕಳೆದ ಎರಡೂ ಪಂದ್ಯದಲ್ಲಿ ಒಳ್ಳೆಯ ಆರಂಭವನ್ನು ನೀಡಿದ್ದಾರೆ. ಮೊದಲ ಪಂದ್ಯದಲ್ಲಿ ರೋಚಕ ಅರ್ಧಶತಕ, ಹಾಗೂ 2ನೇ ಪಂದ್ಯದಲ್ಲಿ 34 ರನ್‌ ಗಳಿಸಿ ಮಿಂಚಿದ್ದರು. ಆದರೆ, ನಿರಾಸೆ ಮೂಡಿಸಿದವರು ಋತುರಾಜ್‌ ಗಾಯಕ್ವಾಡ್‌. ಐಪಿಎಲ್‌ ಕೊನೆಯ ಕೆಲವು ಪಂದ್ಯಗಳಲ್ಲಿ ಅದ್ಭುತವಾದ ಲಯವನ್ನು ಕಂಡುಕೊಂಡಿದ್ದ ಅವರಿಂದ ತಂಡ ಉತ್ತಮ ಪ್ರದರ್ಶನವನ್ನು ನಿರೀಕ್ಷಿಸುತ್ತಿದೆ. ಮೊದಲ ಪಂದ್ಯದಲ್ಲಿ ಸ್ವಲ್ಪ ಚೆನ್ನಾಗಿ ಆಡಿದರೂ ಎರಡನೇ ಪಂದ್ಯದಲ್ಲಿ ಒಂದು ರನ್‌ ಗೆ ಔಟಾದರು. ಮೂರನೇ ಪಂದ್ಯದಲ್ಲಿ ಅವರಿಂದ ಉತ್ತಮ ಪ್ರದರ್ಶನ ನಿರೀಕ್ಷಿಸಲಾಗಿದೆ. ನಿಜವೆಂದರೆ, ಅವರನ್ನು ಬಿಟ್ಟು ಇನಿಂಗ್ಸ್‌ ಓಪನ್‌ ಮಾಡುವ ಇನ್ನೊಬ್ಬ ಆಟಗಾರ ಸದ್ಯಕ್ಕೆ ತಂಡದಲ್ಲಿಲ್ಲ!

ಶ್ರೇಯಸ್‌ ಅಯ್ಯರ್‌, ಹಾರ್ದಿಕ್‌ ಪಾಂಡ್ಯ, ರಿಷಭ್‌ ಪಂತ್: ಮಧ್ಯಮ ಕ್ರಮಾಂಕದಲ್ಲಿರುವ ಈ ಮೂವರನ್ನು ಬದಲಾಯಿಸುವುದು ಸಾಧ್ಯವಿಲ್ಲ. ಯಾಕೆಂದರೆ, ಇವರು ಬೆನ್ನೆಲುಬು. ಹಾರ್ದಿಕ್‌ ಪಾಂಡ್ಯ ಅವರು ಶ್ರೇಷ್ಠ ಆಲ್‌ ರೌಂಡರ್‌. ಆದರೆ, ಅವರಿಂದ ಉತ್ತಮ ಆಟ ಈ ಬಾರಿ ಕಂಡುಬಂದಿಲ್ಲ. ಆಡುತ್ತಾರೆ ಎಂಬ ನಿರೀಕ್ಷೆಯಷ್ಟೇ ಇದೆ.

ಹಾಗಿದ್ದರೆ ಮೂರು ಬದಲಾವಣೆ ಏನು?

ಸಾಧ್ಯತೆ ನಂ.1: ದಿನೇಶ್‌ ಕಾರ್ತಿಕ್‌ ಮುಂದೆ

ಎರಡನೇ ಪಂದ್ಯದಲ್ಲಿ ಅಕ್ಷರ್‌ ಪಟೇಲ್‌ ಅವರನ್ನು ದಿನೇಶ್‌ ಕಾರ್ತಿಕ್‌ಗಿಂತ ಮೊದಲು ಆಡಲು ಇಳಿಸಿದ್ದು ಭಾರಿ ಆಕ್ಷೇಪಕ್ಕೆ ಕಾರಣವಾಗಿತ್ತು. ದಿನೇಶ್‌ ಕಾರ್ತಿಕ್‌ ಅವರನ್ನು ಕೇವಲ ಫಿನಿಷರ್‌ ಎಂದು ಟ್ರೀಟ್‌ ಮಾಡದೆ ಉಪಯುಕ್ತ ಆಟಗಾರನಾಗಿ ಬಳಸಿಕೊಳ್ಳಬೇಕು ಎಂಬ ಬೇಡಿಕೆ ಇದೆ. ಹೀಗಾಗಿ ಅವರು ಈ ಬಾರಿ ಕ್ರಮಾಂಕದಲ್ಲಿ ಮುಂಬಡ್ತಿ ಪಡೆಯುವ ನಿರೀಕ್ಷೆ ಇದೆ. ದಿನೇಶ್‌ ಕಾರ್ತಿಕ್‌ ಒಬ್ಬ ಅದ್ಭುತ ಆಟಗಾರ ಎಂಬುದು ಸಾಬೀತು ಮಾಡುತ್ತಾ ಬಂದಿದ್ದಾರೆ. ಈಗಿರುವ ತಂಡದಲ್ಲಿ ಹೆಚ್ಚು ಅನುಭವ ಇರುವ ಆಟಗಾರ ಕೂಡ ಹೌದು. ಅನಿವಾರ್ಯ ಸಂದರ್ಭದಲ್ಲಿ ಆನ್‌ ಫೀಲ್ಡ್‌ ತೀರ್ಮಾನಗಳನ್ನು ಕೈಗೊಳ್ಳಲು ರಿಷಭ್‌ಗೆ ಸಲಹೆ ನೀಡಲು ಸಮರ್ಥರಾದವರು.

ಸಾಧ್ಯತೆ ನಂ. 2: ಸ್ಪಿನ್‌ನಲ್ಲಿ ಈ ಮೂವರಲ್ಲಿ ಒಬ್ಬರು ಯಾರು?

ಯುಜ್ವೇಂದ್ರ ಚಾಹಲ್‌ಗೆ ಸಾಥ್‌ ನೀಡುವ ಮತ್ತೋರ್ವ ಸ್ಪಿನ್ನರ್ ಅಕ್ಷರ್‌ ಪಟೇಲ್. ಆದರೆ ಅಕ್ಷರ್‌ ಪಟೇಲ್‌ ಅವರಿಂದ ಎರಡೂ ಪಂದ್ಯದಲ್ಲಿ ಸಮಾಧಾನಕರ ಆಟ ಕಂಡುಬಂದಿಲ್ಲ. ಮೊದಲ ಪಂದ್ಯದಲ್ಲಿ ಕೇವಲ 1 ವಿಕೆಟ್‌ ಪಡೆದಿದ್ದರು ಹಾಗು 4 ಓವರ್‌ಗೆ 40 ರನ್‌ ನೀಡಿದ್ದರು. ಎರಡನೇ ಪಂದ್ಯದಲ್ಲಂತೂ 1 ಓವರ್‌ಗೆ 19 ರನ್‌ ನೀಡಿದ ದುಬಾರಿಯಾಗಿದ್ದರು! ಅವರ ಬದಲು ಬ್ಯಾಟಿಂಗ್‌ ಆಲ್‌ರೌಂಡರ್‌ ಆದ ದೀಪಕ್‌ ಹೂಡ ಸ್ಥಾನ ಪಡೆಯಬಹುದು. ಇಲ್ಲದಿದ್ದರೆ ಇದು ರವಿ ಬಿಶ್ನೊಯ್‌ಗೆ ಕೂಡ ಇದು ಒಂದು ಅವಕಾಶವಾಗಬಹುದು. ಇಬ್ಬರೂ ನೆಟ್‌ನಲ್ಲಿ ಪರಿಶ್ರಮ ಹಾಕುತ್ತಿರುವುದು ಕಂಡುಬಂದಿದೆ.

ಸಾಧ್ಯತೆ 3: ವೇಗಕ್ಕೆ ಉಮ್ರಾನ್‌ ಮಲ್ಲಿಕ್‌?

ಅವೇಶ್‌ ಖಾನ್ ಎರಡೂ ಪಂದ್ಯದಲ್ಲಿ ವಿಕೆಟ್‌ ಪಡೆಯಲು ವಿಫಲರಾಗಿದ್ದಾರೆ. ಅಲ್ಲದೆ, ಎರಡು ಪಂದ್ಯದಲ್ಲಿ ಒಟ್ಟು 7 ಓವರ್‌ಗೆ ಒಟ್ಟು 52 ರನ್‌ ನೀಡಿದ್ದಾರೆ. ತಂಡದಲ್ಲಿ ಹೊಸ ಪ್ರಯೋಗ ಮಾಡುವ ನಿಟ್ಟಿನಲ್ಲಿ ಅರ್ಷದೀಪ್‌ ಸಿಂಗ್‌ ಅಥವಾ ಉಮ್ರಾನ್‌ ಮಲ್ಲಿಕ್‌ ಅವಕಾಶ ಪಡೆಯಬಹುದು. ಐಪಿಎಲ್‌ನಲ್ಲಿ ಅತ್ಯಂತ ವೇಗದ ಬೌಲ್‌ ಮಾಡಿ ದಾಖಲೆ ಬರೆದ ಉಮ್ರಾನ್‌ ಮಲ್ಲಿಕ್‌ ಬಗ್ಗೆ ಹೆಚ್ಚಿನ ಭರವಸೆಯಿದೆ. ನೆಟ್‌ನಲ್ಲಿಯೂ ಅತ್ಯುತ್ತಮ ಆಟವಾಡುತ್ತಿದ್ದು, ಎಲ್ಲರ ಗಮನ ಸೆಳೆದಿದ್ದಾರೆ.

ಹಾಗಿದ್ದರೆ ಅಂತಿಮ 11 ಹೇಗಿರಬಹುದು?

ಇಷಾನ್‌ ಕಿಶನ್‌, ಋತುರಾಜ್‌ ಗಾಯಕ್ವಾಡ್‌, ಶ್ರೇಯಸ್‌ ಅಯ್ಯರ್‌, ರಿಷಭ್‌ ಪಂತ್‌, ಹಾರ್ದಿಕ್‌ ಪಾಂಡ್ಯ, ದಿನೇಶ್‌ ಕಾರ್ತಿಕ್‌, ದೀಪಕ್‌ ಹೂಡ, ಹರ್ಷಲ್‌ ಪಟೇಲ್‌, ಯುಜ್ವೇಂದ್ರ ಚಾಹಲ್‌, ಭುವನೇಶ್ವರ್‌ ಕುಮಾರ್, ಉಮ್ರಾನ್‌ ಮಲ್ಲಿಕ್.

ಇದನ್ನೂ ಓದಿ: T20 Ind v/s SA |‌ ಪಂದ್ಯ ಸೋಲಲು ಕಾರಣವೇನು? ಪಂತ್‌ ತೀರ್ಮಾನವೋ, ಬೌಲರ್ಸ್‌ ವೈಫಲ್ಯವೋ?

Exit mobile version