ನವ ದೆಹಲಿ: ಭಾರತ ಮತ್ತು ದಕ್ಷಿಣ ಆಫ್ರಿಕಾ ತಂಡಗಳ ನಡುವಿನ ಎರಡನೇ ಟಿ20 ಪಂದ್ಯ ಬಾರಾಬತಿ ಕ್ರೀಡಾಂಗಣದಲ್ಲಿ ಭಾನುವಾರ ಸಂಜೆ ಏಳು ಗಂಟೆಯಿಂದ ಆರಂಭವಾಗಲಿದೆ. ಮೊದಲ ಪಂದ್ಯದಲ್ಲಿ ಸೋಲು ಕಂಡಿರುವ ಭಾರತಕ್ಕೆ ಇದು ಮಹತ್ವದ ಮಹತ್ವದ ಪಂದ್ಯವಾಗಲಿದೆ. ಐದು ಪಂದ್ಯಗಳ ಸರಣಿಯಲ್ಲಿ ದಕ್ಷಿಣ ಆಫ್ರಿಕಾ ತಂಡ 1-0 ಅಂತರದಲ್ಲಿ ಮುಂದಿದೆ. ಈ ಪಂದ್ಯ ಎಲ್ಲರಿಗಿಂತ ಮುಖ್ಯವಾಗಿರುವುದು ಆಕ್ಸಿಡೆಂಟಲ್ ಕ್ಯಾಪ್ಟನ್ ಆಗಿರುವ ರಿಷಭ್ ಪಂತ್ ಅವರಿಗೆ.
ಯಾಕೆಂದರೆ, ಕೆ.ಎಲ್. ರಾಹುಲ್ ಅವರ ಅನುಪಸ್ಥಿತಿಯಲ್ಲಿ ಚುಕ್ಕಾಣಿ ಹಿಡಿದಿರುವ ರಿಷಭ್ ಪಂತ್‌ಗೆ ಎರಡನೇ ಪಂದ್ಯದಲ್ಲಾದರೂ ತಂಡವನ್ನು ಗೆಲ್ಲಿಸುವ ದೊಡ್ಡ ಹೊಣೆಗಾರಿಕೆ ಇದೆ. ಯಾಕೆಂದರೆ, ಈಗ ಈ ಪಂದ್ಯದ ಜತೆಗೇ ಮುಂದಿನ ಪೂರ್ಣಾವಧಿ ಕ್ಯಾಪ್ಟನ್ ಯಾರು ಎಂಬ ಪ್ರಶ್ನೆಯ ಕುರಿತೂ ಚರ್ಚೆ ನಡೆಯುತ್ತಿದೆ. ಪ್ರಸಕ್ತ ರಿಷಭ್ ಪಂತ್ ಮತ್ತು ಹಾರ್ದಿಕ್ ಪಾಂಡ್ಯ ಅವರಿಬ್ಬರೂ ಈ ಸ್ಥಾನದ ರೇಸ್‌ನಲ್ಲಿದ್ದಾರೆ. ಹಾಗಾಗಿ ತನ್ನ ಶಕ್ತಿಯನ್ನು ತೋರಿಸಲು ರಿಷಭ್ ಪಂತ್ ಗೆ ಇದೊಂದು ಅವಕಾಶವಾಗಲಿದೆ.
ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಈ ಬಾರಿ ಐಪಿಎಲ್‌ನಲ್ಲಿ ಮಾಡಿದ ಮೋಡಿ ಎಲ್ಲರ ಗಮನ ಸೆಳೆದಿದೆ. ಹಾರ್ದಿಕ್ ಪಾಂಡ್ಯ ಉತ್ತಮ ನೇತೃತ್ವ ವಹಿಸಿ ಗುಜರಾತ್ ತಂಡವನ್ನು ಚಾಂಪಿಯನ್ ಆಗಿಸಿದ್ದಾರೆ. ಇದನ್ನು ಗಮನಿಸಿದಾಗ ಹಾರ್ದಿಕ್ ಪಾಂಡ್ಯ ರಿಷಭ್‌ಗೆ ಟಕ್ಕರ್ ನೀಡಲಿದ್ದಾರೆ ಎಂಬುದು ಸ್ಪಷ್ಟವಾಗುತ್ತದೆ.
ರಿಷಭ್ ಪಂತ್ ಮೊದಲ ಟಿ20 ಪಂದ್ಯದಲ್ಲಿ ಒತ್ತಡದ ಸಮಯದಲ್ಲಿ ನಾಯಕತ್ವ ನಿಭಾಯಿಸುವ ಜಾಣ್ಮೆ ಹೊಂದಿಲ್ಲ ಎನ್ನುವುದು ಸ್ವಲ್ಪ ಮಟ್ಟಿಗೆ ಎದ್ದು ಕಂಡಿದೆ. ಪಂತ್ ಈಗ ಎರಡನೇ ಪಂದ್ಯದಲ್ಲಿ ಯಾವ ರೀತಿ ಜವಾಬ್ದಾರಿ ನಿಭಾಯಿಸುತ್ತಾರೆ ಎಂಬುದು ಈಗ ಅವರಿಗೆ ಮಾನದಂಡವಾಗಿದೆ. ರಿಷಬ್ ನಾಯಕತ್ವಕ್ಕೆ ಎಷ್ಟು ಸೂಕ್ತ ಎಂದು ಅವರೇ ಸಾಬೀತುಪಡಿಸಬೇಕಾಗಿದೆ.
ಬೌಲಿಂಗ್ ನದ್ದೇ ಸ್ವಲ್ಪ ಹಿನ್ನಡೆ
ಭಾರತದ ಬ್ಯಾಟಿಂಗ್ ಈಗ ಸದ್ಯಕ್ಕೆ ಗುಣಮಟ್ಟದ ಆಟಗಾರರಿಂದ ಸಮೃದ್ಧವಾಗಿದೆ. ಆದರೆ ಬೌಲಿಂಗ್‌ನಲ್ಲಿ ಅನೇಕ ಗೊಂದಲಗಳು ಕಾಣುತ್ತದೆ. ಅನುಭವೀ ಬೌಲರ್ ಭುವನೇಶ್ವರ್ ಕುಮಾರ್ ಕಳೆದ ಪಂದ್ಯದಲ್ಲಿ ಸಾಧಾರಣ ಎಂಬಂತೆ ಬೌಲ್ ಮಾಡಿದರು. ಅಲ್ಲದೆ, ಡೆತ್ ಓವರ್ ಸ್ಪೆಷಲಿಸ್ಟ್ ಆದ ಹರ್ಷಲ್ ಪಟೇಲ್ ಬೌಲಿಂಗ್‌ಗೆ ಕೂಡ ದಕ್ಷಿಣ ಆಫ್ರಿಕ ಬ್ಯಾಟರ್ಸ್ ಜಗ್ಗಲಿಲ್ಲ. ಯುವ ಆಟಗಾರ ಆವೇಶ್ ಖಾನ್ ಕೂಡ ಆಕರ್ಷಕ ಆಟವನ್ನು ಪ್ರದರ್ಶಿಸುವಲ್ಲಿ ವಿಫಲರಾದರು.
ನೆಟ್‌ನಲ್ಲಿ ಉಮ್ರಾನ್ ಮಲ್ಲಿಕ್ ಹಾಗೂ ಅರ್ಷದೀಪ್ ಇಬ್ಬರೂ ಶ್ರಮ ಪಡುತ್ತಿರುವುದನ್ನು ಕಂಡು ಯಾರನ್ನು ಆರಿಸಬೇಕು ಎಂಬುದೇ ರಿಷಭ್‌ಗೆ ದೊಡ್ಡ ಚಾಲೆಂಜ್ ಆಗಿದೆ. ಕ್ವಿಂಟನ್ ಡಿ ಕಾಕ್, ಡೇವಿಡ್ ಮಿಲ್ಲರ್, ವ್ಯಾನ್‌ಡರ್ ಡುಸೇನ್‌ನಂತಹ ದಿಗ್ಗಜರನ್ನು ಔಟ್ ಮಾಡಲು ಭಾರತದ ಬೌಲರ್‌ಗಳಿಂದ ಇನ್ನೂ ಹೆಚ್ಚಿನ ಗುಣಮಟ್ಟದ ಬೌಲಿಂಗ್ ನಿರೀಕ್ಷೆಯಿದೆ.
ಇದನ್ನೂ ಓದಿ: T20 Ind v/s Sa | ಡೇವಿಡ್ ಮಿಲ್ಲರ್, ಡುಸೇನ್ ರೋಚಕ ಬ್ಯಾಟಿಂಗ್, ದೊಡ್ಡ ಟಾರ್ಗೆಟ್ ನೀಡಿದರೂ ಸೋತ ಭಾರತ