ನವ ದೆಹಲಿ: T 20 Ind v/s SA | ಸತತ ಎರಡು ಪಂದ್ಯಗಳಲ್ಲಿ ಸೋಲನುಭವಿಸಿದ ನಂತರ ಈಗ ರಿಷಭ್ ಪಂತ್ ನಾಯಕತ್ವದ ಬಗ್ಗೆ ಎಲ್ಲರ ಗಮನ ಹರಿದಿದೆ. ಅದಕ್ಕೆ ಕಾರಣ, ಎರಡನೇ ಪಂದ್ಯದಲ್ಲಿ ಅವರು ತೆಗೆದುಕೊಂಡ ನಿರ್ಣಯ. ಮೊದಲ ಪಂದ್ಯ ಸೋತ ಬಳಿಕ ರಿಷಭ್ ಪಾಲಿಗೆ ಎರಡನೇ ಪಂದ್ಯ ಅಗ್ನಿ ಪರೀಕ್ಷೆಯಾಗಿತ್ತು. ಆದರೆ, ರಿಷಭ್ ಪಂತ್ ಈ ಪಂದ್ಯದಲ್ಲಿ ಒಂದು ಆಶ್ಚರ್ಯಕರ ನಿರ್ಣಯ ಕೈಗೊಂಡಿದ್ದು, ಈ ಬಗ್ಗೆ ಎಲ್ಲರೂ ಗರಂ ಆಗಿದ್ದಾರೆ.
ಹಾಗಿದ್ದರೆ ಏನು ಆ ನಿರ್ಣಯ?
ಎರಡನೇ ಪಂದ್ಯದಲ್ಲಿ ಭಾರತ ಮೊದಲು ಬ್ಯಾಟಿಂಗ್‌ಗೆ ಇಳಿಯಿತು. ಬ್ಯಾಟರ್‌ಗಳ ಮೇಲೆ ಅಪಾರ ಭರವಸೆಯಿತ್ತು. ಎಲ್ಲರೂ ಅವರಿಂದ ಉತ್ತಮ ಆಟದ ನಿರೀಕ್ಷೆಯಲ್ಲಿದ್ದರು. ಆದರೆ ಇಷಾನ್ ಕಿಶನ್ ಹಾಗೂ ಶ್ರೇಯಸ್ ಅಯ್ಯರ್ ಹೊರತುಪಡಿಸಿ ಯಾರೂ ಕ್ರೀಸ್‌ನಲ್ಲಿ ಗಟ್ಟಿಯಾಗಿ ನಿಂತು ಆಡುವಲ್ಲಿ ಸಫಲರಾಗಲಿಲ್ಲ. 40 ರನ್ ಗಳಿಸಿದ ಶ್ರೇಯಸ್ ಅಯ್ಯರ್ ಔಟಾದ ಬಳಿಕ ಹಾರ್ದಿಕ್ ಪಾಂಡ್ಯ ಅಖಾಡಕ್ಕಿಳಿದರು. ಆದರೆ, ಅವರೂ ಕೇವಲ 9 ರನ್ ಗಳಿಸಿ ಪೆವಿಲಿಯನ್‌ಗೆ ಮರಳಿದರು. ಆಗ ಭಾರತದ ಸ್ಕೋರ್ 90ಕ್ಕೆ 4 ವಿಕೆಟ್. 13 ಓವರ್ ಮುಗಿದಿತ್ತು. ಮ್ಯಾಚ್ ಮುಗಿಯಲು ಇನ್ನೂ 7 ಓವರ್ ಬಾಕಿಯಿತ್ತು.
ಆ ಸಂದರ್ಭದಲ್ಲಿ ಅನುಭವಿ ಬ್ಯಾಟರ್ ದಿನೇಶ್ ಕಾರ್ತಿಕ್ ಬ್ಯಾಟಿಂಗ್ ಮಾಡಲು ಬರುತ್ತಾರೆ ಎಂಬ ನಿರೀಕ್ಷೆಯಿತ್ತು. ಆದರೆ ಅಕ್ಷರ್ ಪಟೇಲ್ ಅವರು ಕ್ರೀಸ್‌ಗೆ ಬಂದಿದ್ದು ಅಚ್ಚರಿ ಮೂಡಿಸಿತು. ರಿಷಭ್ ಪಂತ್ ಯಾಕೆ ಈ ನಿರ್ಣಯ ಕೈಗೊಂಡರು ಎಂಬ ಪ್ರಶ್ನೆಗೆ ಕಾಡಿತು. ದಿನೇಶ್ ಕಾರ್ತಿಕ್ ಉತ್ತಮ ಬ್ಯಾಟ್ಸ್‌ಮನ್ ಎಂದು ಎಲ್ಲರೂ ತಿಳಿದಿದ್ದಾರೆ. ಎಂತಹ ಸಂಕಷ್ಟ ಪರಿಸ್ಥಿತಿಯಲ್ಲೂ ತಂಡಕ್ಕೆ ಸ್ಕೋರ್ ಮಾಡುವಲ್ಲಿ ಸಮರ್ಥರು ಎಂದು ದಿನೇಶ್ ಸಾಬೀತುಮಾಡಿದ್ದಾರೆ. ಹೀಗಿರುವಾಗ ಅವರಿಗಿಂತ ಮುನ್ನ ಅಕ್ಷರ್ ಪಟೇಲ್ ಅವರನ್ನು ಕ್ರೀಸ್‌ಗೆ ಕಳುಹಿಸಿ ರಿಷಭ್ ತಪ್ಪು ಮಾಡಿದರು ಎಂಬ ಭಾವನೆ ಹುಟ್ಟಿಹಾಕಿತು.
ದಿನೇಶ್ ಕಾರ್ತಿಕ್ ಅವರನ್ನು ಕೇವಲ ʼಫಿನಿಷರ್ʼ ಎಂದು ಪರಿಗಣಿಸಲಾಗಿದೆಯೇ? ಫಿನಿಷರ್ ಎಂಬ ಕಾರಣಕ್ಕೆ ಅವರು ಕೊನೆಯ 4 ಓವರ್ ಇರುವಾಗ ಮಾತ್ರ ಬ್ಯಾಟಿಂಗ್ ಮಾಡಲು ಬರಬೇಕೇ? ವಿಕೆಟ್ ಪತನಗೊಂಡು ಇನ್ಯಾವ ಬ್ಯಾಟರ್ ಬಾಕಿ ಇಲ್ಲದಿದ್ದಾಗ ಅಕ್ಷರ್ ಪಟೇಲ್ ಬದಲು ದಿನೇಶ್ ಅವರನ್ನು ಬ್ಯಾಟ್ ಮಾಡಲು ಕಳುಹಿಸಬೇಕಿತ್ತು. ಯಾಕೆ ಎಂಬುದನ್ನು ಅವರು ಇದೇ ಪಂದ್ಯದಲ್ಲಿ ಸಾಬೀತುಪಡಿಸಿದರು.
ಬೌಲಿಂಗ್ ಆಲ್ ರೌಂಡರ್ ಆದ ಅಕ್ಷರ್ ಪಟೇಲ್ ಕೇವಲ 10 ರನ್ ಗಳಿಸಿ ಔಟಾದರು. ಆ ಬಳಿಕ ಬಂದ ದಿನೇಶ್ ಕಾರ್ತಿಕ್ ಕೇವಲ 21 ಬಾಲ್‌ಗೆ ಅಜೇಯ 30 ರನ್ ಗಳಿಸಿದ್ದಕ್ಕೆ ತಂಡದ ಸ್ಕೋರ್ 147ಕ್ಕೆ ತಲುಪಲು ಸಾಧ್ಯವಾಯಿತು. ಅದೇ ಅವರು 14ನೇ ಓವರ್‌ನಲ್ಲಿ ಬ್ಯಾಟ್ ಮಾಡಲು ಬಂದಿದ್ದರೆ ತಂಡದ ಸ್ಕೋರ್ ಇನ್ನೂ ಹೆಚ್ಚಾಗಬಹುದಿತ್ತು. ಸುಮಾರು 160 ರನ್‌ಗಿಂತ ಹೆಚ್ಚು ಟಾರ್ಗೆಟ್ ನೀಡಬಹುದಿತ್ತು. ಹಾಗಾಗಿ ನಾಯಕನಾಗಿ ರಿಷಭ್ ಪಂತ್ ಉತಮ ನಿರ್ಧಾರವನ್ನು ಕೈಗೊಳ್ಳುವಲ್ಲಿ ವಿಫಲರಾಗಿದ್ದಾರೆ ಎಂದು ವ್ಯಾಖ್ಯಾನಿಸಲಾಗುತ್ತಿದೆ.
ಮ್ಯಾಚ್ ಸೋಲಲು ಸ್ಪಿನ್ನರ್ಸ್ ಕೂಡ ಕಾರಣ!
ಪಂದ್ಯದ ಸೋಲಿನ ಬಗ್ಗೆ ಮಾತನಾಡಿದ ರಿಷಭ್ ಪಂತ್, ತಂಡದ ಬೌಲಿಂಗ್ ಇನ್ನೂ ಹೆಚ್ಚು ಭದ್ರವಾಗಬೇಕು ಎಂದು ಹೇಳಿದರು. ಎರಡನೇ ಪಂದ್ಯದಲ್ಲಿ ವೇಗಿ ಬೌಲರ್‌ಗಳು ಈ ಬಾರಿ ಉತ್ತಮ ಪ್ರದರ್ಶನ ನೀಡಿದ್ದಾರೆ. ಭುವನೇಶ್ವರ್ ಕುಮಾರ್ ನಾಲ್ಕು ವಿಕೆಟ್ ಕಬಳಿಸಿದರೆ, ಹರ್ಷಲ್ ಪಟೇಲ್ ಹಾಗೂ ಅವೇಶ್ ಖಾನ್ ಕೂಡ ಒಳ್ಳೆಯ ಬೌಲಿಂಗ್ ಮಾಡಿದ್ದಾರೆ. ಸ್ಪಿನ್ ಮಾಂತ್ರಿಕ ಯುಜ್ವೇಂದ್ರ ಚಾಹಲ್ ಈ ಬಾರಿ ಆಕರ್ಷಕ ಬೌಲಿಂಗ್ ಮಾಡಿಲ್ಲ. ಅಕ್ಷರ್ ಪಟೇಲ್ ಕೂಡ ಅತಿ ಹೆಚ್ಚು ರನ್ ನೀಡಿದ ಬೌಲರ್. ಚಾಹಲ್ 4 ಓವರ್‌ಗಳಲ್ಲಿ 43 ರನ್ ನೀಡಿದರೆ, ಅಕ್ಷರ್ ಪಟೇಲ್ ಒಂದು ಓವರ್ ಬೌಲಿಂಗ್ ಮಾಡಿ 19 ರನ್ ನೀಡಿದರು. ಇದು ತಂಡಕ್ಕೆ ಭಾರಿ ಪ್ರಮಾಣದಲ್ಲಿ ಪೆಟ್ಟು ನೀಡಿತು.
ʼಮುಂದಿನ ಪಂದ್ಯಗಳಲ್ಲಿ ಸ್ಪಿನ್ನರ್ಸ್ ಇನ್ನೂ ಹೆಚ್ಚಿನ ಗುಣಮಟ್ಟದ ಬೌಲಿಂಗ್ ಮಾಡಬೇಕುʼ ಎಂದು ರಿಷಭ್ ಪಂತ್ ತಿಳಿಸಿದರು.
ಈ ಸರಣಿಯನ್ನು ಗೆಲ್ಲಲು ಭಾರತ ಈಗ ಮುಂದಿನ ಮೂರೂ ಪಂದ್ಯಗಳನ್ನು ಗೆಲ್ಲಬೇಕಿದೆ. ರಿಷಭ್ ಪಂತ್ ನಾಯಕತ್ವಕ್ಕೆ ಇದೊಂದು ಸವಾಲಾಗಿದೆ.
ಇದನ್ನೂ ಓದಿ: T20 Ind v/s Sa | ಕ್ಲಾಸೀನ್ ಕ್ಲಾಸಿಕ್ ಆಟ, ಭಾರತಕ್ಕೆ ಸತತ 2ನೇ ಸೋಲುಣಿಸಿದ ಬವುಮ ಪಡೆ