Site icon Vistara News

T20 Ind v/s Sa | ರೋಹಿತ್‌, ಕೊಹ್ಲಿ, ಬೂಮ್ರಾ ಅನುಪಸ್ಥಿತಿಯಲ್ಲಿ ರಾಹುಲ್‌ ಪಡೆ ರೆಡಿ, ಯಾರೆಲ್ಲ ಆಡ್ತಾರೆ?

cricket t20

ನವ ದೆಹಲಿ: ಐಪಿಎಲ್‌ ಬಳಿಕ ದೇಶದಲ್ಲಿ ಮತ್ತೊಂದು ಹಂತದ ಕ್ರಿಕೆಟ್‌ ಸಮರಕ್ಕೆ ಇನ್ನೆರಡು ದಿನದಲ್ಲಿ ಚಾಲನೆ ಸಿಗಲಿದೆ. ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವಿನ ಸರಣಿಯ ಮೊದಲ T20 ಪಂದ್ಯ (T20 Ind v/s Sa) ಗುರುವಾರ ನವ ದೆಹಲಿಯ ಅರುಣ್‌ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆಯಲಿದೆ.

ಘಟಾನುಘಟಿಗಳಾದ ರೋಹಿತ್‌ ಶರ್ಮಾ, ವಿರಾಟ್‌ ಕೊಹ್ಲಿ, ಜಸ್ಪ್ರಿತ್‌ ಬೂಮ್ರಾ ಈ ಟೂರ್ನಮೆಂಟ್‌ನಿಂದ ಬಿಡುವು ಪಡೆದುಕೊಂಡಿದ್ದಾರೆ. ಇವರುಗಳ ಅನುಪಸ್ಥಿತಿಯಲ್ಲಿ ಕನ್ನಡಿಗ ಕೆ.ಎಲ್‌. ರಾಹುಲ್‌ ನಾಯಕತ್ವದಲ್ಲಿ, ದಿಗ್ಗಜ ಕೋಚ್‌ ರಾಹುಲ್‌ ದ್ರಾವಿಡ್‌ ಮಾರ್ಗದರ್ಶನದಲ್ಲಿ ಟೀಂ ಇಂಡಿಯಾ ಹರಿಣಗಳ ಪಡೆಯನ್ನು ಹಣಿಯಲು ಸಜ್ಜಾಗುತ್ತಿದೆ.

ಪಂದ್ಯಕ್ಕೆ ಈಗಾಗಲೇ 94% ರಷ್ಟು ಟಿಕೆಟ್‌ ಸೋಲ್ಡ್‌ ಔಟ್ ಆಗಿದ್ದು, ಉಳಿದಿರುವ ಟಿಕೆಟ್‌ಗಳು ಇಂದು ಸಂಜೆಯೊಳಗೆ (ಜೂ.7) ಖಾಲಿಯಾಗೋದು ಖಚಿತ. ನವೆಂಬರ್‌ 2019ರ ಬಳಿಕ ದೆಹಲಿಯಲ್ಲಿ ನಡೆಯುತ್ತಿರುವ ಮೊದಲ ಪಂದ್ಯ ಇದಾಗಿರುವುದರಿಂದ ಕ್ರಿಕೆಟ್‌ ಪ್ರೇಮಿಗಳಿಂದ ಭರ್ಜರಿ ರೆಸ್ಪಾನ್ಸ್‌ ಸಿಕ್ಕಿದೆ. ದೆಹಲಿಯ ಅರುಣ್‌ ಜೇಟ್ಲಿ ಕ್ರೀಡಾಂಗಣದಲ್ಲಿ ಒಟ್ಟು 35,000 ಸೀಟಿಂಗ್‌ ಸಾಮರ್ಥ್ಯವಿದ್ದು, 27,000 ಟಿಕೆಟ್‌ ಸಾರ್ವಜನಿಕರಿಗೆ ಮೀಸಲಿರಿಸಲಾಗಿತ್ತು. ಈ ಪಂದ್ಯದ ವೀಕ್ಷಣೆಗೆ ಆಗಮಿಸಲಿರುವ ಹಿರಿಯ ನಾಗರಿಕರಿಗೆ ಅನುಕೂಲವಾಗುವಂತೆ ಗಾಲ್ಫ್‌ ಕಾರ್ಟ್‌ ವ್ಯವಸ್ಥೆ ಮಾಡಲಾಗಿದೆ. ಹಾಗೂ ಕೋವಿಡ್‌ ಮುನ್ನೆಚ್ಚರಿಕೆ ಕ್ರಮವಾಗಿ ಎಲ್ಲರಿಗೂ ಮಾಸ್ಕ್‌ ಧಾರಣೆ ಕಡ್ಡಾಯ ಮಾಡಲಾಗಿದೆ ಎಂದು ಡಿಡಿಸಿಎ ಜಂಟಿ ಕಾರ್ಯದರ್ಶಿ ರಾಜನ್‌ ಮಾನ್‌ಚಂದ್ ತಿಳಿಸಿದ್ದಾರೆ.

ಹಲವು ಕಾರಣಗಳಿಂದ ಕುತೂಹಲ ಕೆರಳಿಸಿದ ಸರಣಿ

ಪ್ರಮುಖ ಆಟಗಾರರ ಅನುಪಸ್ಥಿತಿಯಲ್ಲಿ ಹಲವು ಹೊಸ ಮುಖಗಳಿಗೆ ಅವಕಾಶ ಸಿಗುವ ನಿರೀಕ್ಷೆ ಇದೆ. ಯುವ ಆಟಗಾರರಿಗೆ ತಂಡದಲ್ಲಿ ಸ್ಥಾನ ಭದ್ರಪಡಿಸಿಕೊಳ್ಳಲು ಇದು ಛಾನ್ಸ್‌. ಹಾಗಾಗಿ ಆಡುವ ಬಳಗದಲ್ಲಿ ಯಾರೆಲ್ಲ ಸ್ಥಾನ ಗಿಟ್ಟಿಸಿಕೊಳ್ಳುತ್ತಾರೆ ಎಂಬುದು ಕುತೂಹಲ ಕೆರಳಿಸಿದೆ.

ಈಗ ತಾನೆ ಐಪಿಎಲ್‌ ಗುಂಗಿನಿಂದ ಹೊರಬರುತ್ತಿರುವ ಕ್ರಿಕೆಟ್‌ ಅಭಿಮಾನಿಗಳು ಅಂತಾರಾಷ್ಟ್ರೀಯ ಟಿ20 ಸರಣಿ ನೋಡುವ ಸಂಭ್ರಮಕ್ಕೆ ಕಾಯುತ್ತಿದ್ದಾರೆ.

ಮುಂದಿನ ವರ್ಷ ಭಾರತದಲ್ಲೇ T20 ವಿಶ್ವಕಪ್‌ ನಡೆಯಲಿದೆ. ಟೀಂ ಇಂಡಿಯಾ ಇದಕ್ಕೆ ಈಗಿನಿಂದಲೇ ಸಿದ್ಧತೆ ನಡೆಸಲು ಆರಂಭಿಸಿದೆ.

ಸ್ಟಾರ್‌ ಆಟಗಾರರೇ ಇರುವ ಭಾರತ ತಂಡದಲ್ಲಿ ಸಮತೋಲನದ ಕೊರತೆ ಆಗಾಗ ಕಂಡುಬರುತ್ತದೆ. ಯುವ ಆಟಗಾರರು ಉತ್ತಮ ಪ್ರದರ್ಶನ ನೀಡಿದಲ್ಲಿ ಮುಂದಿನ ಬಾರಿಗೆ ವಿಶ್ವಕಪ್‌ ಗೆಲ್ಲಲು ಸೂಕ್ತ ಸಂಯೋಜಿತ ತಂಡ ರೂಪಿಸಲು ನೆರವಾಗಲಿದೆ.

ಕಳೆದ ಬಾರಿಯ ಟಿ 20 ವಿಶ್ವಕಪ್‌ನ ಬಳಿಕ ಇದೇ ಮೊದಲ ಬಾರಿಗೆ ದಕ್ಷಿಣ ಆಫ್ರಿಕಾ ಟಿ20 ಪಂದ್ಯ ಆಡುತ್ತಿದೆ. ಸ್ಟಾರ್‌ ಬ್ಯಾಟರ್‌ ಹಾಗೂ ವಿಕೆಟ್‌ ಕೀಪರ್ ಹೈನ್ರಿಕ್‌ ಕ್ಲಾಸೆನ್ ದಕ್ಷಿಣ ಆಫ್ರಿಕಾ‌ ತಂಡಕ್ಕೆ ಮತ್ತೊಮ್ಮೆ ಮರಳಿದ್ದಾರೆ.

ಭಾರತ ತಂಡವು ದಿನೇಶ್‌ ಕಾರ್ತಿಕ್‌ ಸ್ವಾಗತಿಸಲು ಸಿದ್ಧವಾಗಿದೆ. ದಿನೇಶ್‌ ಕಾರ್ತಿಕ್‌ 2018ರ ಬಳಿಕ ಇದೇ ಮೊದಲ ಬಾರಿಗೆ ಭಾರತದ ಪರ ಟ20 ಆಡುತ್ತಿದ್ದಾರೆ.

ಹಾರ್ದಿಕ್‌ ಪಾಂಡ್ಯ ಅದ್ಭುತ ಫಾರ್ಮ್‌ನಲ್ಲಿದ್ದು ಭರವಸೆ ಹೆಚ್ಚಿಸಿದ್ದಾರೆ. ಈ ಬಾರಿ ಐಪಿಎಲ್‌ನಲ್ಲ ಗುಜರಾತ್‌ ತಂಡದ ನೇತೃತ್ವವವನ್ನು ವಹಿಸಿ ಕಪ್‌ ಗೆಲ್ಲಿಸಿದ್ದಾರೆ. ಅಲ್ಲದೆ, ಬೌಲಿಂಗ್‌ನಲ್ಲಿಯೂ ಮೋಡಿ ಮಾಡಿರುವುದು ಅವರಿಂದ ಉತ್ತಮ ಆಲ್‌-ರೌಂಡರ್‌ ಆಟದ ನಿರೀಕ್ಷೆಯಿದೆ.

ಭಾರತದ ಅತಿವೇಗದ ಬೌಲರ್‌, ಕಾಶ್ಮೀರ ಎಕ್ಸ್‌ಪ್ರೆಸ್‌ ಉಮ್ರಾನ್‌ ಮಲಿಕ್‌ ಟೀಂನಲ್ಲಿದ್ದಾರೆ. ಇವರ ಮೇಲೆ ಎಲ್ಲರ ಕಣ್ಣು ನೆಟ್ಟಿದೆ.

ಸ್ಕ್ವಾಡ್‌ ಹೇಗಿದೆ?

ಭಾರತ ತಂಡ: ಕೆ.ಎಲ್‌ ರಾಹುಲ್‌(ನಾಯಕ), ರುತುರಾಜ್‌ ಗಾಯಕ್‌ವಾಡ್‌, ಇಶಾನ್‌ ಕಿಶನ್‌, ದೀಪಕ್‌ ಹೂಡಾ, ಶ್ರೇಯಸ್‌ ಅಯ್ಯರ್‌, ರಿಷಭ್‌ ಪಂತ್(ವಿಕೆಟ್‌ ಕೀಪರ್‌), ದಿನೇಶ್‌ ಕಾರ್ತಿಕ್(ವಿಕೆಟ್‌ ಕೀಪರ್‌), ಹಾರ್ದಿಕ್‌ ಪಾಂಡ್ಯ, ವೆಂಕಟೇಶ್‌ ಅಯ್ಯರ್‌, ಯುಜುವೇಂದ್ರ ಚಾಹಲ್‌, ಕುಲ್ದೀಪ್‌ ಯಾದವ್‌, ಅಕ್ಸರ್‌ ಪಟೇಲ್‌, ರವಿ ಬಿಶ್ನೊಯ್‌, ಭುವನೇಶ್ವರ್‌ ಕುಮಾರ್‌, ಹರ್ಷಲ್‌ ಪಟೇಲ್‌, ಆವೆಶ್‌ ಖಾನ್‌, ಅರ್ಶದೀಪ್‌ ಸಿಂಗ್‌, ಉಮ್ರಾನ್‌ ಮಲ್ಲಿಕ್.‌

ದಕ್ಷಿಣ ಆಫ್ರಿಕಾ ತಂಡ: ತೆಂಬಾ ಬವುಮಾ(ನಾಯಕ), ಕ್ವಿಂಟನ್‌ ಡಿ ಕಾಕ್‌, ರೀಝಾ ಹೆಂಡ್ರಿಕ್ಸ್‌, ಹೈನ್ರಿಕ್‌ ಕ್ಲಾಸೆನ್‌, ಕೇಶವ್‌ ಮಹಾರಾಜ್‌, ಐಡನ್‌ ಮಾರ್ಕರಂ, ಡೇವಿಡ್‌ ಮಿಲ್ಲರ್‌, ಲುಂಗಿ ಎನ್‌ಗಿಡಿ, ಅನ್ರಿಕ್‌ ನೊಕಿಯೆ, ವೇನ್‌ ಪಾರ್ನೆಲ್‌, ಡ್ವೈನ್‌ ಪ್ರೆಟೊರಿಯಸ್‌, ಕಗಿಸೊ ರಬಾಡಾ, ತಬ್ರೈಝ್‌ ಶಮ್ಸಿ, ತ್ರಿಸ್ತಾನ್‌ ಸ್ಟಬ್ಸ್‌, ವ್ಯಾನ್‌ ಡರ್‌ ಡುಸ್ಸೆನ್‌, ಮಾರ್ಕೊ ಜೆನ್ಸನ್‌

ಇದನ್ನೂ ಓದಿ: T20 Series | ದಕ್ಷಿಣ ಆಫ್ರಿಕಾ ವಿರುದ್ಧ ಭಾರತ ವಿಶ್ವ ದಾಖಲೆ ಬರೆಯುತ್ತಾ?

Exit mobile version