Site icon Vistara News

T20 World Cup 2024: ಎರಡನೇ ವಿಶ್ವಕಪ್‌ಗೆ ತಾಳ್ಮೆಯಿಂದ ಕಾದಂತೆ ಟ್ರಾಫಿಕ್‌ ಸಿಗ್ನಲ್‌ನಲ್ಲೂ ಕಾಯಿರಿ; ದೆಹಲಿ ಪೊಲೀಸರ ಕ್ರಿಯೇಟಿವ್​ ವಿಷ್‌

T20 World Cup 2024

T20 World Cup 2024

ನವದೆಹಲಿ: ಬಾರ್ಬಡೋಸ್​ನ ಕೆನ್ಸಿಂಗ್ಟನ್ ಓವಲ್​ನಲ್ಲಿ ಶನಿವಾರ ನಡೆದ ಟಿ20 ವಿಶ್ವಕಪ್​ 2024 (T20 World Cup 2024ಫೈನಲ್​ನಲ್ಲಿ ಟೀಮ್ ಇಂಡಿಯಾ (Team India) ದಕ್ಷಿಣ ಆಫ್ರಿಕಾವನ್ನು ಸೋಲಿಸುವ ಮೂಲಕ ಸುಮಾರು 17 ವರ್ಷಗಳ ಬಳಿಕ ಕಪ್‌ ತನ್ನದಾಗಿಸಿಕೊಂಡಿದೆ. ಈ ಸಾಧನೆ ಮಾಡಿದ ರೋಹಿತ್‌ ಶರ್ಮಾ (Rohit Sharma) ಬಳಗಕ್ಕೆ ಅಭಿನಂದನೆಗಳ ಪ್ರವಾಹವೇ ಹರಿದು ಬರುತ್ತಿದೆ. ಪ್ರಧಾನಿ ನರೇಂದ್ರ ಮೋದಿ (Narendra Modi) ಸೇರಿದಂತೆ ವಿವಿಧ ಕ್ಷೇತ್ರಗಳ ಗಣ್ಯರು ಮೆಚ್ಚುಗೆ ಸೂಚಿಸುತ್ತಿದ್ದಾರೆ. ಈ ಮಧ್ಯೆ ವಿವಿಧ ಪೊಲೀಸ್‌ ಘಟಕಗಳು ಕ್ರಿಯೇಟಿವ್ ಆಗಿ ಅಭಿನಂದನೆ ಸಲ್ಲಿಸುವ ಮೂಲಕ ಗಮನ ಸೆಳೆದಿವೆ. ಟೀಮ್‌ ಇಂಡಿಯಾಕ್ಕೆ ವಿಷ್‌ ಮಾಡುವ ಜತೆಗೆ ಟ್ರಾಫಿಕ್‌ ಜಾಗೃತಿಯನ್ನೂ ಮೂಡಿಸುತ್ತಿವೆ.

ʼʼಟೀಮ್‌ ಇಂಡಿಯಾ ಎರಡನೇ ಬಾರಿ ಟಿ20 ವಿಶ್ವಕಪ್‌ ಚಾಂಪಿಯನ್‌ ಆಗುವುದನ್ನು ನೋಡಲು ಸುಮಾರು 16 ವರ್ಷ 9 ತಿಂಗಳು ಮತ್ತು 5 ದಿನ (52,70,40,000 ಸೆಕೆಂಡ್‌) ಕಾದಿದ್ದೇವೆ. ಇದೇ ರೀತಿ ಟ್ರಾಫಿಕ್‌ ಸಿಗ್ನಲ್‌ನಲ್ಲಿಯೂ ಸ್ವಲ್ಪ ಹೊತ್ತು ತಾಳ್ಮೆಯಿಂದ ಕಾಯಿರಿ. ಉತ್ತಮ ಕ್ಷಣಕ್ಕಾಗಿ ಕಾಯುವುದರಲ್ಲಿ ಯಾವುದೇ ತಪ್ಪಿಲ್ಲ. ಏನಂತೀರಾ? ಟೀಮ್‌ ಇಂಡಿಯಾಕ್ಕೆ ಹೃತೂರ್ವಕ ಅಭಿನಂದನೆಗಳುʼʼ ಎಂದು ದೆಹಲಿ ಪೊಲೀಸ್‌ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿದೆ.

ಇನ್ನು ಉತ್ತರ ಪ್ರದೇಶ ಪೊಲೀಸರೂ ತಾವೇನು ಕಮ್ಮಿ ಇಲ್ಲ ಎನ್ನುವಂತೆ ಮಜವಾದ ಪೋಸ್ಟ್‌ ಶೇರ್‌ ಮಾಡಿದ್ದಾರೆ. ಭಾರತೀಯ ಬೌಲರ್‌ಗಳ ಪ್ರದರ್ಶನವನ್ನು ಕ್ರಿಮಿನಲ್ ಕೃತ್ಯಕ್ಕೆ ಹೋಲಿಸುವ ತಮ್ಮ ಹಾಸ್ಯ ಪ್ರಜ್ಞೆಯನ್ನು ಮೆರೆದಿದ್ದಾರೆ. ʼʼಬ್ರೇಕಿಂಗ್‌ ನ್ಯೂಸ್‌: ದಕ್ಷಿಣ ಆಫ್ರಿಕನ್ನರ ಹೃದಯ ಚೂರು ಮಾಡಿದ ಭಾರತೀಯ ಬೌಲರ್‌ಗಳು ತಪ್ಪಿತಸ್ಥರು ಎಂದು ಸಾಬೀತಾಗಿದೆ. ಇದಕ್ಕಿರುವ ಶಿಕ್ಷೆ: ಕೋಟ್ಯಂತರ ಅಭಿಮಾನಿಗಳಿಂದ ಜೀವಮಾನದ ಪ್ರೀತಿʼʼ ಎಂದು ಬರೆದುಕೊಂಡಿದ್ದಾರೆ.

ಮುಂಬೈ ಟ್ರಾಫಿಕ್‌ ಪೊಲೀಸರು ಒಂದು ಹೆಜ್ಜೆ ಮುಂದೆ ಹೋಗಿ ತಮ್ಮ ಕ್ರಿಯಾತ್ಮಕತೆಯನ್ನು ಪ್ರದರ್ಶಿಸಿದ್ದಾರೆ. ʼʼIND 29 June 2024ʼʼ ನಂಬರ್‌ ಪ್ಲೇಟ್‌ ಹೊಂದಿರುವ ಕಾರನ್ನು ಟೀಮ್‌ ಇಂಡಿಯಾ ನಾಯಕ ರೋಹಿತ್‌ ಶರ್ಮಾ ಚಲಾಯಿಸುತ್ತಿರುವಂತೆ ಫೋಟೊ ಎಡಿಟ್‌ ಮಾಡಿ ಹಂಚಿಕೊಂಡಿದ್ದಾರೆ. ʼʼನಂಬರ್‌ ಪ್ಲೇಟ್‌ನ ಕನಸು ನನಸಾಗಿದೆʼʼ ಎಂದು ಕ್ಯಾಪ್ಶನ್‌ ನೀಡಿದ್ದಾರೆ. ಒಟ್ಟಿನಲ್ಲಿ ಟೀಮ್‌ ಇಂಡಿಯಾಕ್ಕೆ ವಿಧ ವಿಧ ಮೀಮ್ಸ್‌, ವಿಡಿಯೊ ಮೂಲಕ ಅಭಿನಂದನೆ ಸಲ್ಲಿಸಲಾಗುತ್ತಿದೆ.

ಭಾರತ ಕಪ್‌ ಜಯಶಾಲಿಯಾಗುತ್ತಿದ್ದಂತೆ ಭಾರತದ ಎಲ್ಲೆಡೆ ಸಡಗರ ಮನೆ ಮಾಡಿತು. ಪಟಾಕಿ ಸಿಡಿಸಿ, ಸಿಹಿ ಹಂಚಿ ಅಭಿಮಾನಿಗಳು ಭಾರತದ ಗೆಲುವನ್ನು ಕೊಂಡಾಡಿದರು. ಬೆಂಗಳೂರು, ಪಾಟ್ನಾ, ಪುಣೆ, ಮುಂಬೈ, ಹೈದರಾಬಾದ್‌, ಜಮ್ಮು ಮತ್ತು ಕಾಶ್ಮೀರ ಮುಂತಾದೆಡೆ ಮಧ್ಯರಾತ್ರಿಯನ್ನೂ ಲೆಕ್ಕಿಸದೆ ಅಭಿಮಾನಿಗಳು ಬೀದಿಗಿಳಿದು ಕುಣಿದು ಕುಪ್ಪಳಿಸಿದರು. ಕೆಲವೆಡೆ ರಸ್ತೆ ತೆರವುಗೊಳಿಸಲು ಪೊಲೀಸರು ಮಧ್ಯೆ ಪ್ರವೇಶಿಸಬೇಕಾಯಿತು.

ಭಾರತ ಮಾತ್ರವಲ್ಲ ವಿದೇಶದಲ್ಲಿಯೂ ಸಂಭ್ರಮಾಚರಣೆ ಕಂಡು ಬಂತು. ಅಮೆರಿಕ, ಇಂಗ್ಲೆಂಡ್‌ ಮುಂತಾದೆಡೆಗಳ ಭಾರತೀಯರು ಒಟ್ಟು ಸೇರಿ ಟೀಮ್‌ ಇಂಡಿಯಾ ಗೆಲುವಿಗೆ ಹರ್ಷಾಚರಣೆ ನಡೆಸಿದರು.

ಇದನ್ನೂ ಓದಿ: T20 World Cup 2024: ಸಂಭ್ರಮಾಚರಣೆ ವೇಳೆ ದುರಂತ: ಧ್ವಜ ಹಾರಿಸಲು ಹೋಗಿ ಬಿದ್ದ ಅಭಿಮಾನಿ; ವೈರಲ್‌ ವಿಡಿಯೊ ಇಲ್ಲಿದೆ

Exit mobile version