Site icon Vistara News

T20 World Cup 2024: ʼವಿಶ್ವʼ ಗೆದ್ದ ನಾಯಕ ರೋಹಿತ್‌, ಕೋಚ್‌ ದ್ರಾವಿಡ್‌, ಕೊಹ್ಲಿಗೆ ಕರೆ ಮಾಡಿ ಅಭಿನಂದಿಸಿದ ಮೋದಿ

T20 World Cup 2024

T20 World Cup 2024

ನವದೆಹಲಿ: ಬಾರ್ಬಡೋಸ್​ನ ಕೆನ್ಸಿಂಗ್ಟನ್ ಓವಲ್​ನಲ್ಲಿ ಜೂನ್ 29ರಂದು ನಡೆದ ಟಿ20 ವಿಶ್ವಕಪ್​ 2024 (T20 World Cup 2024) ಫೈನಲ್​ನಲ್ಲಿ ಟೀಮ್ ಇಂಡಿಯಾ ದಕ್ಷಿಣ ಆಫ್ರಿಕಾವನ್ನು ಏಳು ರನ್​ಗಳ ಅಂತರದಿಂದ ಸೋಲಿಸುವ ಮೂಲಕ ಚಾಂಪಿಯನ್ ಆಗಿ ಹೊರ ಹೊಮ್ಮಿದ್ದು, ಎಲ್ಲೆಡೆಯಿಂದ ಅಭಿನಂದನಾ ಪ್ರವಾಹವೇ ಹರಿದು ಬರುತ್ತಿದೆ. ಅಭಿಮಾನಿಗಳು ಸಂಭ್ರಮಾಚರಣೆಯಲ್ಲಿ ಮುಳುಗಿದ್ದಾರೆ. ಇತ್ತ ಟೀಮ್‌ ಇಂಡಿಯಾ ಜಯ ಗಳಿಸುತ್ತಿದ್ದಂತೆ ಅಭಿನಂದನೆ ತಿಳಿಸಿದ ಪ್ರಧಾನ ಮಂತ್ರಿ ನರೇಂದ್ರ ಮೋದಿ (Narendra Modi) ಅವರು ತಂಡದ ಸದಸ್ಯರಿಗೆ ಕರೆ ಮಾಡಿ ಸಂತಸ ಹಂಚಿಕೊಂಡಿದ್ದಾರೆ.

ಮೋದಿ ಹೇಳಿದ್ದೇನು?

ಮೋದಿ ಅವರು ಟೀಮ್‌ ಇಂಡಿಯಾ ನಾಯಕ ರೋಹಿತ್ ಶರ್ಮಾ ಅವರೊಂದಿಗೆ ಮಾತನಾಡಿ, ಅದ್ಭುತ ನಾಯಕತ್ವಕ್ಕಾಗಿ ಅಭಿನಂದನೆ ತಿಳಿಸಿದರು. ಅವರ ಟಿ20 ವೃತ್ತಿ ಜೀವನವನ್ನು ಶ್ಲಾಘಿಸಿದರು. ಜತೆಗೆ ಪ್ರಧಾನಿ ಫೈನಲ್‌ ಪಂದ್ಯದಲ್ಲಿ ಭಾರತವು ಸ್ಪರ್ಧಾತ್ಮಕ ಸ್ಕೋರ್ ಗಳಿಸಲು ಸಹಾಯ ಮಾಡಿದ ವಿರಾಟ್ ಕೊಹ್ಲಿ (76 ರನ್) ಅವರ ಆಟವನ್ನೂ ಮೆಚ್ಚಿಕೊಂಡರು. ಜತೆಗೆ ಭಾರತೀಯ ಕ್ರಿಕೆಟ್‌ಗೆ ಕೊಹ್ಲಿ ನೀಡಿದ ಕೊಡುಗೆಯನ್ನೂ ನೆನಪಿಸಿಕೊಂಡರು.

ಜತೆಗೆ ಭಾರತೀಯ ಜಸ್ಪ್ರೀತ್ ಬುಮ್ರಾ ಮತ್ತು ಹಾರ್ದಿಕ್ ಪಾಂಡ್ಯ ಅವರಿಗೂ ಪ್ರಧಾನಿ ಮೆಚ್ಚುಗೆ ಸೂಚಿಸಿದರು. ಮಾತ್ರವಲ್ಲ ಅದ್ಭುತ ಕ್ಯಾಚ್‌ ಹಿಡಿದು ಪಂದ್ಯದ ಗತಿಯನ್ನೇ ಬದಲಾಯಿಸಿದ ಸೂರ್ಯ ಕುಮಾರ್ ಯಾದವ್ ಅವರನ್ನು ಉಲ್ಲೇಖಿಸಲು ಪ್ರಧಾನಿ ಮರೆಯಲಿಲ್ಲ.

ರಾಹುಲ್‌ ದ್ರಾವಿಡ್‌ಗೆ ಧನ್ಯವಾದ ಹೇಳಿದ ಮೋದಿ

ಗೆಲುವಿಗಾಗಿ ಮುಖ್ಯ ಕೊಡುಗೆ ನೀಡಿದ ಭಾರತದ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಅವರಿಗೆ ಮೋದಿ ಧನ್ಯವಾದ ಅರ್ಪಿಸಿದರು. ಶನಿವಾರ (ಜೂನ್ 29) ತಡರಾತ್ರಿ ಭಾರತ ಪಂದ್ಯವನ್ನು ಗೆದ್ದ ನಂತರ, ಪ್ರಧಾನಿ ‘ಮೆನ್ ಇನ್ ಬ್ಲೂ’ಗೆ ಅಭಿನಂದನಾ ವಿಡಿಯೊ ಸಂದೇಶವನ್ನು ಪೋಸ್ಟ್ ಮಾಡಿ ಭಾರತೀಯ ಕ್ರಿಕೆಟಿಗರು ಕೋಟ್ಯಂತರ ಅಭಿಮಾನಿಗಳ ಹೃದಯವನ್ನು ಗೆದ್ದಿದ್ದಾರೆ ಎಂದು ಅವರು ಹೇಳಿದ್ದಾರೆ. “ಚಾಂಪಿಯನ್ಸ್! ನಮ್ಮ ತಂಡವು ಟಿ20 ವಿಶ್ವಕಪ್ ಅನ್ನು ಮನೆಗೆ ತರುತ್ತಿದೆ! ಭಾರತೀಯ ಕ್ರಿಕೆಟ್ ತಂಡದ ಬಗ್ಗೆ ನಮಗೆ ಹೆಮ್ಮೆ ಇದೆʼʼ ಎಂದು ಬರೆದುಕೊಂಡು ಅವರು ವಿಡಿಯೊವನ್ನು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಜತೆಗೆ ಭಾರತ ತಂಡವು ದಕ್ಷಿಣ ಆಫ್ರಿಕಾವನ್ನು ಬಗ್ಗು ಬಡಿದಿರುವುದು ಐತಿಹಾಸಿಕ ಎಂದು ಬಣ್ಣಿಸಿದ್ದಾರೆ. ಕಳೆದ ವರ್ಷದ ಏಕದಿನ ವಿಶ್ವಕಪ್‌ ಪಂದ್ಯದ ಫೈನಲ್‌ನಲ್ಲಿ ಭಾರತ ತಂಡ ಸೋತಾಗ ಮೋದಿ ಅವರು ಸಾಂತ್ವನ ಹೇಳಿದ್ದರು.

ರೋಚಕ ಹೋರಾಟದಲ್ಲಿ ಭಾರತಕ್ಕೆ ಗೆಲುವು

ಕಿಂಗ್ ಕೊಹ್ಲಿಯ ಅಬ್ಬರದ ಅರ್ಧ ಶತಕ (76 ರನ್​) ರನ್ ಹಾಗೂ ಆಲ್​ರೌಂಡರ್ ಅಕ್ಷರ್ ಪಟೇಲ್​ ಅವರ ಸ್ಫೋಟಕ ಬ್ಯಾಟಿಂಗ್​ (47 ರನ್​, 31 ಎಸೆತ, 4 ಸಿಕ್ಸರ್​, 1 ಫೋರ್​) ನೆರವು ಹಾಗೂ ಕೊನೇ ಕ್ಷಣದ ರೋಚಕ ಹೋರಾಟ ಫಲವಾಗಿ ಭಾರತ ತಂಡ ವಿಶ್ವ ಕಪ್​ ಗೆದ್ದುಕೊಂಡಿತು. ಫೈನಲ್​ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ 7 ರನ್​ಗಳ ರೋಚಕ ಗೆಲುವು ದಾಖಲಿಸಿ ಟ್ರೋಫಿ ಮುಡಿಗೇರಿಸಿಕೊಂಡಿತು. ಭಾರತದ ಪಾಲಿಗೆ ಇದು ಸ್ಮರಣೀಯ ಟ್ರೋಫಿ. ಹಿರಿಯ ಆಟಗಾರರಾದ ರೋಹಿತ್​ ಶರ್ಮಾ ಹಾಗೂ ವಿರಾಟ್​ ಕೊಹ್ಲಿಗೆ ಅಪೇಕ್ಷಿತ ಚಾಂಪಿಯನ್ ಪಟ್ಟ. ಅತ್ತ ದಕ್ಷಿಣ ಆಫ್ರಿಕಾ ತಂಡ ತನ್ನ ಚೋಕರ್ಸ್​ ಹಣೆಪಟ್ಟಿಯನ್ನು ಮತ್ತಷ್ಟು ದಿನ ಕಟ್ಟಿಕೊಳ್ಳುವಂತಾಯಿತು. 4 ದಶಕಗಳ ತನ್ನ ವಿಶ್ವ ಕಪ್​ ಅಭಿಯಾನದಲ್ಲಿ ಒಂದೇ ಒಂದು ಟ್ರೋಫಿ ಗೆಲ್ಲಲು ಸಾಧ್ಯವಾಗದೇ ನಿರಾಸೆ ಎದುರಿಸಿತು.

ಇದನ್ನೂ ಓದಿ: Virat Kohli : ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ವಿದಾಯ ಘೋಷಿಸಿದ ವಿರಾಟ್​​ ಕೊಹ್ಲಿ

Exit mobile version